ಗ್ರಾಮೀಣ ನೈರ್ಮಲ್ಯ, ಆರ್ಥಿಕ ಸುಧಾರಣೆ, ಸಾಮಾಜಿಕ ಬದಲಾವಣೆ ಮತ್ತು ಆರೋಗ್ಯ ಮುಂತಾದವುಗಳ ಮೂಲಕ ಗ್ರಾಮ ಸರ್ವಾಂಗೀಣ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ;
ಬಿ.ಟಿ.ಜಯಣ್ಣ
ಕಡಗದಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಬಿ.ಟಿ. ಜಯಣ್ಣನವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹಾಗೂ ಇಂದಿನ ಪ್ರಧಾನಿ ಮೋದಿಜೀ ಯವರ ಆದರ್ಶ ಮತ್ತು ಕಾರ್ಯವೈಖರಿಗಳಿಂದ ಪ್ರೇರಿತನಾಗಿ ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ನನ್ನಿಂದ ಏನಾದರೂ ಕೊಡುಗೆ ನೀಡಬೇಕೆಂಬ ಮನಸ್ಸಿನಿಂದ ಮೊದಲ ಬಾರಿಗೆ ಗ್ರಾಮ ಪಂಚಾಯತಿಯ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದ ಜಯಣ್ಣನವರು, ಗ್ರಾಮಸ್ಥರ ಒತ್ತಾಸೆಯ ಮೇರೆಗೆ 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಇಬ್ನಿವಲವಾಡಿ ಗ್ರಾಮದ ಬೋಯಿಕೇರಿ ವಾರ್ಡಿನಿಂದ ಸ್ಪರ್ಧಿಸಿದಾಗ ಗ್ರಾಮಸ್ಥರು ನನ್ನ ಮೇಲೆ ನಂಬಿಯಿಟ್ಟು ಕಡಗದಾಳು ಗ್ರಾಮ ಪಂಚಾಯಿತಿ ಆಡಳಿತ ನಡೆಸಲು ಅಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದಾರೆ, ಆ ನಿಟ್ಟಿನಲ್ಲಿ ನಾನು ಅವರಿಗೆ ಚಿರಋಣಿಯಾಗಿದ್ದೇನೆ ಎಂದರು.
ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲಿಗೆ ಪಂಚಾಯತಿ ಆಡಳಿತ ಕಚೇರಿ ವ್ಯವಸ್ಥೆಯು ಹದಗೆಟ್ಟಿತ್ತು. ಅದನ್ನು ಸರಿಪಡಿಸಿ ಕಚೇರಿ ಸಿಬ್ಬಂದಿ ವರ್ಗದವರಿಗೂ ಹಾಗೂ ಕಛೇರಿಗೆ ಬರುವ ಜನರಿಗೆ ಸುಗಮ ವ್ಯವಸ್ಥೆ ಮಾಡಲಾಗಿದೆ ಎಂದ ಜಯಣ್ಣನವರು, ಪಂಚಾಯಿತಿಯ ಆಡಳಿತ ಕಛೇರಿಯು ಹಳೆಯ ಕಟ್ಟಡವಾಗಿರುವುದರಿಂದ ಸಭಾಂಗಣವಿರಲಿಲ್ಲ ಅದನ್ನು ಪಂಚಾಯತಿಯ ಸ್ವಂತ ಬಂಡವಾಳದಿಂದ ಸಭಾಂಗಣ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ವ್ಯವಸ್ಥೆಯ ಬಗ್ಗೆ ಮಾತನಾಡಿದ ಜಯಣ್ಣನವರು, ಬೀದಿ ದೀಪದ ವ್ಯವಸ್ಥೆಯನ್ನು ದುರಸ್ತಿಗೊಳಿಸಲಾಗಿದೆ. ಹಾಗೆ ಅಲ್ಲಲ್ಲಿ ಸೋಲಾರ್ ಬೀದಿ ದೀಪದ ವ್ಯವಸ್ಥೆಯನ್ನು ದುರಸ್ತಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಲ ಜೀವನದ ಮಿಷನ್ ನಿಂದಾಗಿ ನೈಸರ್ಗಿಕ ಹಾಗೂ ಪಂಪ್‌ನಿಂದ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡಗದಾಳು ಗ್ರಾಮದಲ್ಲಿ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಇವರು, ಮುಂದಿನ ದಿನಗಳಲ್ಲಿ ಇಬ್ನಿವಳವಾಡಿ ಗ್ರಾಮಕ್ಕೂ ನೀರಿನ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ನಿಂದ ಎಲ್ಲ ಮನೆ ಮನೆಗಳಿಗೂ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದ ಜಯಣ್ಣನವರು, ಪಂಚಾಯಿತಿ ಕಛೇರಿ ಬಳಿ ಒಂದು ಸಾರ್ವಜನಿಕ ಶೌಚಾಲಯ ಹಾಗೂ ಕತ್ತಲೆಕಾಡು ಗ್ರಾಮದ ಕ್ಲೋಸ್ ಬರ್ನ್ ಪೈಸಾರಿ ಬಳಿ ಒಂದು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬೋಯಿಕೇರಿಯಲ್ಲಿ ಒಂದು ಸಾರ್ವಜನಿಕ ಶೌಚಾಲಯದ ಕಾಮಗಾರಿಯು ಪ್ರಗತಿಯ ಅಂತದಲ್ಲಿದೆ ಎಂದ ಇವರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಉತ್ತಮವಾಗಿದೆ ಎಂದರು.
ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡಿದ ಜಯಣ್ಣನವರು, ಪಂಚಾಯಿತಿಯ ಕಛೇರಿ ಬಳಿ ಸುಮಾರು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವು ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ದಗೊಂಡಿದೆ ಎಂದರು. ನಾಲ್ಕು ವರ್ಷದಿಂದ ಸಾರ್ವಜನಿಕರ ಕೆಲವೊಂದು ವಿರೋಧದ ನಡುವೆ ನೆನೆಗುದಿಗೆ ಬಿದ್ದಿದ್ದ ಕಸವಿಲೇವಾರಿ ಘಟಕ ಸ್ಥಾಪನೆ ಕಾರ್ಯವನ್ನು ಸಾರ್ವಜನಿಕರೊಂದಿಗೆ ಮಾತುಕತೆ ಮಾಡುವ ಮೂಲಕ ಕಸವಿಲೇವಾರಿ ಘಟಕ ಸ್ಥಾಪನೆಯನ್ನು ಆರು ತಿಂಗಳಲ್ಲಿ ಪೂರ್ಣ ಮಾಡುವ ಮೂಲಕ ಉದ್ಘಾಟನೆಗೆ ಸಿದ್ದಗೊಳಿಸಿರುವುದು ಜಯಣ್ಣನವರ ಅಧಿಕಾರದ ಕ್ರೀಯಾಶಿಲತೆಯನ್ನು ಎತ್ತಿ ತೋರಿಸುತ್ತದೆ.
ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡಗದಾಳು ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣಗೊಂಡಿದ್ದು ಉದ್ಘಾಟನೆಗೆ ಸಿದ್ದಗೊಂಡಿದೆ ಎಂದು ತಿಳಿಸಿದ ಜಯಣ್ಣನವರು, ಬೋಯಿಕೇರಿ ಹಾಗೂ ಕ್ಲೋಸ್ ಬರ್ನ್ ಶಾಲೆಗಳ ಬಳಿ ಸಾರ್ವಜನಿಕ ಉದ್ಯಾನವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಬಗ್ಗೆ ಮಾತನಾಡಿದ ಜಯಣ್ಣನವರು, ಗ್ರಾಮೀಣ ರಸ್ತೆಗಳು ಬಹುಪಾಲು ಪೂರ್ಣಗೊಂಡಿದ್ದು ಇನ್ನು ಅಂದರೆ ಶೇಕಡ 20%ರಷ್ಟು ಕೆಲಸ ಮಾತ್ರ ಬಾಕಿ ಉಳಿದಿದೆ ಮುಂದಿನ ದಿನಗಳಲ್ಲಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಪೂರ್ಣಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಪಡಿತರ ಚೀಟಿ ವ್ಯವಸ್ಥೆ, ಇ-ಶ್ರಮ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮುಂತಾದವುಗಳ ವ್ಯವಸ್ಥೆಯ ಗ್ರಾಮ ಒನ್ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
50 ವರ್ಷಕ್ಕೂ ಹಳೆಯದಾದ ಪಂಚಾಯಿತಿ ಆಡಳಿತ ಕಚೇರಿಯನ್ನು ಜೀರ್ಣೋದ್ಧಾರಗೊಳಿಸಿ ಸುಸಜ್ಜಿತವಾದ ನೂತನ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಿಸಲಾಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದ ಜಯಣ್ಣನವರು, ಕಡಗದಾಳು ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಮಾಡುವ ನಿಟ್ಟಿನಲ್ಲಿ ಆರೋಗ್ಯ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ಅಂಚೆ ಮತ್ತು ಬ್ಯಾಂಕಿಂಗ್, ಡಿಜಿಟಲ್ ವ್ಯವಸ್ಥೆ, ಇದಕ್ಕೆ ಪೂರಕವಾಗಿ ಇಂಟರ್ನೆಟ್ ಸೌಲಭ್ಯ ಸುಲಭವಾಗಿ ಗ್ರಾಮದಲ್ಲಿ ದೊರೆಯುವಂತೆ ಮಾಡಲು ಪ್ರಯತ್ನ ಸಾಗಿದೆ. ಹಿಂದಿನ ಮತ್ತು ಪ್ರಸ್ತುತ ಗ್ರಾ.ಪಂ ಸದಸ್ಯರ ಹಾಗೂ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಹಕಾರದಿಂದ ಗ್ರಾಮೀಣ ನೈರ್ಮಲ್ಯ, ಆರ್ಥಿಕ ಸುಧಾರಣೆ, ಸಾಮಾಜಿಕ ಬದಲಾವಣೆ ಮತ್ತು ಆರೋಗ್ಯ ಮುಂತಾದವುಗಳ ಮೂಲಕ ಗ್ರಾಮ ಸರ್ವಾಂಗೀಣ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಎಂದು ತಿಳಿಸಿದರು.
ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಶಾಲೆಗಳನ್ನು ಉನ್ನತೀಕರಣ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದ್ದು, ಇದರ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಪಂಚಾಯತಿ ವತಿಯಿಂದ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ ಜಯಣ್ಣನವರು, ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಸ್ವಾವಲಂಬನೆಯಾಗಿ ಜೀವನ ಸಾಗಿಸುವ ನಿಟ್ಟಿನಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರಿಗೆ ಸ್ವ-ಉದ್ಯೋಗ ತರಬೇತಿ ನೀಡಿ ಹಣಕಾಸಿನ ವ್ಯವಸ್ಥೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಬೋಯಿಕೇರಿಯ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಸ್ಥಾಪಕರಾದ ಗಣೇಶ್, ಅಧ್ಯಕ್ಷರಾದ ಕೃಷ್ಣಪ್ಪ ,ಕಾರ್ಯದರ್ಶಿಗಳಾದ ದಿನೇಶ್ ಹಾಗೂ ಅಸೋಸಿಯೇಷನ್‌ನ ಸರ್ವ ಸದಸ್ಯರೊಡಗೂಡಿ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಸ್ವಯಂ ಸೇವಕರಾಗಿದ್ದಾರೆ. ನೆಹರು ಯುವ ಕೇಂದ್ರದ ಕೊಡಗು ಜಿಲ್ಲಾ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಬೋಯಿಕೇರಿಯ ಸಿದ್ಧಿ-ಬುದ್ಧಿ ವಿನಾಯಕ ದೇವಾಲಯ ಇದರ ಸದಸ್ಯರಾಗಿಯೂ, ಕೆದಕಲ್ ಭದ್ರಕಾಳೇಶ್ವರಿ ದೇವಾಲಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ಮೂಲತಃ ಕೃಷಿಕರಾಗಿರುವ ಬಿ.ಟಿ. ಜಯಣ್ಣನವರ ತಂದೆ ದಿವಂಗತ ಬಿ.ಎಸ್. ತಿಮ್ಮಣ್ಣ, ತಾಯಿ ಬಿ.ಎಸ್ ಶಿವಮ್ಮ ದಂಪತಿಯ ಮಗನಾಗಿದ್ದಾರೆ. ಪತ್ನಿ ಕೆ.ಎಲ್. ಕಾವ್ಯ ಗೃಹಿಣಿಯಾಗಿದ್ದು, ಮಕ್ಕಳಾದ ತೀಕ್ಷ್ಣ ಹಾಗೂ ಲಕ್ಷ್ಯ ವ್ಯಾಸಂಗ ನಿರತರಾಗಿದ್ದಾರೆ. ಇವರ ಸಹೋದರರಾದ ಬಿ.ಎಸ್. ಕಿಶೋರ್‌ರವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಣ್ಣನವರು ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋಯಿಕೇರಿ ಗ್ರಾಮದಲ್ಲಿ ನೆಲೆಸಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು ಸುಖಕರವಾಗಿರಲಿ ಎಂದು ಹಾರೈಸುತ್ತಾ, ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.