History Gonikoppalu Dasara

ದಕ್ಷಿಣ ಭಾರತದ ಜೀವನದಿ ಶ್ರೀ ಕಾವೇರಿ ಮಾತೆಯ ಹೆಸರಿನಲ್ಲಿ ನವರಾತ್ರಿ ಉತ್ಸವದೊಂದಿಗೆ ಸರ್ವ ಜನರ ಭಾವೈಕ್ಯದ ದಸರಾ ನಾಡಹಬ್ಬವನ್ನು 1979 ರಲ್ಲಿ ಗೋಣಿಕೊಪ್ಪಲಿನ ಎಂ.ಜಿ.ಪದ್ಮನಾಭ ಕಾಮತ್ ಮತ್ತು ಕೆಲವು ಸ್ನೇಹಿತರು ಸೇರಿ “ಶ್ರೀ ಕಾವೇರಿ ದಸರಾ ಸಮಿತಿ” ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಲಾಯಿತು. ಅಂದಿನ ಸಮಿತಿಯಲ್ಲಿ ಪದ್ಮನಾಭ ಕಾಮತ್‍ರವರ ಅಧ್ಯಕ್ಷತೆಯೊಂದಿಗೆ ಕೆ.ರಾಮಾಚಾರ್, ಬಿ.ಎಲ್.ರಾಮನಾಥ, ಕೊಂಗಂಡ ಗಣೇಶ್, ಬಿ.ಡಿ.ಮುಕುಂದ, ಎಂ.ಜಿ.ಮೋಹನ್, ಕೊಂಗಂಡ ಪೊನ್ನಪ್ಪ, ಬಿ.ಎಸ್.ಪ್ರಭಾಕರ ಶೇಟ್, ಆತ್ಮಾರಾಂ ಸಿಂಗ್, ಕೆ.ಸಿ.ಬೆಳ್ಯಪ್ಪ, ವಿ.ಕೆ.ವಸಂತ್, ಎನ್.ಎಸ್.ಪೂವಯ್ಯ, ಲಕ್ಷ್ಮಣ ವೈದ್ಯರು, ಡಿ.ಆರ್.ತಿರುಮಲು, ಹೆಚ್.ಜಿ.ಶಾಂತರಾಜು, ಬಿ.ಬಿ.ಅಣ್ಣಪ್ಪ ಗೋಣಿಕೊಪ್ಪಲು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಿದರು. ಗೋಣಿಕೊಪ್ಪಲಿನ ಪುರಸಭೆಯ ಸಭಾಂಗಣದಲ್ಲಿ ಶ್ರೀ ಶಾರದಾಂಬೆಯ ಸ್ಥಾಪನೆಯೊಂದಿಗೆ ಮೊದಲ ವರ್ಷದ ದಸರಾ ಮಹೋತ್ಸವವನ್ನು ಆಚರಿಸಲಾಯಿತು. 7 ದಿನಗಳ ಕಾಲ ಭಾಗಮಂಡಲದ ಎದುರ್ಕಳ ಶಂಕರನಾರಾಯಣ ಭಟ್ಟರಿಂದ ಗೀತಾಯಜÐ, ಒಂದು ದಿನ ಹರಿಕಥೆ ಮತ್ತು ಒಂದು ದಿನ ಗೋಣಿಕೊಪ್ಪಲು ಕಲಾವೃಂದದವರಿಂದ ನೃತ್ಯವನ್ನು ಏರ್ಪಡಿಸಿ ಉತ್ಸವವನ್ನು ಪ್ರಾರಂಭಿಸಿದರು. ನಂತರದ 4 ವರ್ಷಗಳವರೆಗೆ (1979 ರಿಂದ 1982 ರವರಗೆ) ಇದೇ ಸಮಿತಿಯು ಮುಂದುವರೆಯಿತು.

5ನೇ ವರ್ಷದಲ್ಲಿ ಚೆಪ್ಪುಡಿರ ಪ್ರೇಮ್ ಗಣಪತಿ 9ನೇ ವರ್ಷದವರೆಗೆ (1983 ರಿಂದ 1987 ರವರಗೆ) ಯಶಸ್ವಿಯಾಗಿ ಉತ್ಸವವನ್ನು ನಡೆಸಿದರು. 10ನೇ ವರ್ಷ (1988 ರಲ್ಲಿ)ದಲ್ಲಿ ಪೊನ್ನಿಮಾಡ ಕೆ.ಬೋಜಪ್ಪರವರು ಅಧ್ಯಕ್ಷರಾಗಿದ್ದರು. ಅದೇ ವರ್ಷ ಮೊದಲ ಸ್ಥಬ್ಧ ಚಿತ್ರ ಮೆರವಣಿಗೆ, ಜಂಬೂ ಸವಾರಿ ಅಂದಿನ ನಿರ್ದೇಶಕರು ಆಗಿದ್ದ ಸಿ.ಎ.ಮೊಹಮ್ಮದ್ ರಫಿರವರ ನೇತೃತ್ವದಲ್ಲಿ ಪ್ರಾರಂಭವಾಯಿತು. 11ನೇ ವರ್ಷದಲ್ಲಿ ಅಂದಿನ ಪುರಸಭಾಧ್ಯಕ್ಷರಾಗಿದ್ದ ಬಿ.ಡಿ.ಮುಕುಂದರವರ ನೇತೃತ್ವದಲ್ಲಿ ದಸರಾ ನಡೆಯಿತು. ಈ ಸಮಿತಿಯು 11ರಿಂದ 12ನೇ ವರ್ಷದವರಗೆ (1989ರಿಂದ 1990ರವರಗೆ) ಮುಂದುವರೆಯಿತು. 13ನೇ ವರ್ಷದಲ್ಲಿ ಮನೆಯಪಂಡ ಜಿ.ಅಚ್ಚಪ್ಪರವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದರು. 14ನೇ ವರ್ಷದಲ್ಲಿ ಶ್ರೀಯುತ ಎಂ.ಕೆ.ನಂಜಪ್ಪನವರು ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ದಸರಾ ನಾಡಹಬ್ಬವನ್ನು ಯಶಸ್ವಿ ಉತ್ಸವವನ್ನಾಗಿಸಿದ್ದರು. (1992ರಿಂದ 2003ರವರಗೆ ಹನ್ನೆರಡು ವರ್ಷಗಳ ಅವಧಿಯವರಗೆ).
ಗೋಣಿಕೊಪ್ಪಲು ದಸರಾ ನಾಡಹಬ್ಬವನ್ನು ದಕ್ಷಿಣ ಕೊಡಗಿನ ಪ್ರತಿಷ್ಠೆಯ ಉತ್ಸವವನ್ನಾಗಿಸಲು ಈ ಹಿಂದಿನ ಎಲ್ಲಾ ಸಮಿತಿಗಳು, ಅಧ್ಯಕ್ಷ-ಪದಾಧಿಕಾರಿಗಳು ತಮ್ಮ ಸೇವೆಯನ್ನು ನಿಷ್ಠೆಯಿಂದ ಸಲ್ಲಿಸಿದ್ದಾರೆ.
1996-97 ರಲ್ಲಿ “ಶ್ರೀ ಕಾವೇರಿ ದಸರಾ ಸಮಿತಿ” ಯನ್ನು ಶ್ರೀ ಎಂ.ಕೆ.ನಂಜಪ್ಪನವರ ಅಧ್ಯಕ್ಷತೆಯಲ್ಲಿ ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲಾಯಿತು.
2003ರಲ್ಲಿ ಗೋಣಿಕೊಪ್ಪಲು ದಸರಾ ನಾಡಹಬ್ಬವು ತನ್ನ ಬೆಳ್ಳಿಹಬ್ಬವನ್ನು ಆಚರಿಸಿತ್ತು. ಶ್ರೀ ಕಾವೇರಿ ದಸರಾ ಸಮಿತಿಯು ಈವರೆಗೆ ದಕ್ಷಿಣ ಕೊಡಗಿನ ಅಸಂಖ್ಯಾತ ಭಕ್ತಾದಿಗಳಿಗೆ ಹಾಗೂ ಕಲಾರಸಿಕರಿಗೆ ಜಿಲ್ಲೆಯ, ರಾಜ್ಯದ, ರಾಷ್ಟ್ರದ ಖ್ಯಾತಿವೆತ್ತ ಕಲಾವಿದರನ್ನು ಕರೆಸಿ ಅತ್ಯುತ್ತಮ ಸೇವೆ ಸಲ್ಲಿಸಿದೆ.
ಕ್ರೀಡಾಲೋಕದಲ್ಲಿ ಸೇವೆ ಸಲ್ಲಿಸುವಲ್ಲಿ ಈ ಸಂಸ್ಥೆ ಹಿಂದೆ ಬಿದ್ದಿಲ್ಲ. ಗೋಣಿಕೊಪ್ಪಲಿನಲ್ಲಿ ಮೊದಲ ಮೋಟೋಕ್ರಾಸ್ ಸ್ಪರ್ಧೆ ನಡೆಸಿದ ಖ್ಯಾತಿ ಈ ಸಮಿತಿಯದ್ದು.
ದಸರಾ ಉತ್ಸವವನ್ನು ಆಕರ್ಷಣೀಯವನ್ನಾಗಿಸಿ ಗೋಣಿಕೊಪ್ಪಲು ದಸರಾ ನಾಡಹಬ್ಬವನ್ನು ದಕ್ಷಿಣ ಕೊಡಗಿನ ಪ್ರತಿಷ್ಟಿತ ಉತ್ಸವವನ್ನಾಗಿಸುವಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯೊಂದಿಗೆ ಈವರೆಗೆ ಇತರ 9 ಸಮಿತಿಗಳು ಕೈ ಜೋಡಿಸಿದ್ದು, ಅವುಗಳ ಸಹಕಾರವಿಲ್ಲದಿದ್ದಲ್ಲಿ ಈ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿರಲಿಲ್ಲ.
ಶ್ರೀ ಕಾವೇರಿ ದಸರಾ ಸಮಿತಿಯ ಹತ್ತನೇ ವರ್ಷದ ಆಚರಣೆಯ ಸಂದರ್ಭ ಇನ್ನೆರಡು ದಸರಾ ಸಮಿತಿಗಳನ್ನು ಸ್ಥಾಪಿಲಾಗಿತ್ತು. ಗೋಣಿಕೊಪ್ಪಲಿನ ಮೊದಲನೇ ವಿಭಾಗದ ಹಲವು ಸ್ನೇಹಿತರು ಬಿ.ಎ.ಗಣಪತಿಯವರ ನೇತೃತ್ವದಲ್ಲಿ ದಸರಾ ನಾಡಹಬ್ಬ ಸಮಿತಿ ಎಂಬ ಹೆಸರಿನ ಸಂಸ್ಥೆಯನ್ನು 1989ರಲ್ಲಿ ಹುಟ್ಟು ಹಾಕುವುದರೊಂದಿಗೆ ದಸರಾ ಸಮಿತಿಗಳನ್ನು ಹೆಚ್ಚಿಸುವಲ್ಲಿ ಹೆಜ್ಜೆ ಹಾಕಿದರು.
ದಸರಾ ಹಬ್ಬ ನಾಡಹಬ್ಬ
ಭೇಧಬಾವ ಮರೆವ ಹಬ್ಬ
ಸ್ನೇಹ ಪ್ರೀತಿ ಮೆರವ ಹಬ್ಬ
ದಸರಾ ಹಬ್ಬ ನಾಡಹಬ್ಬ
ಎನ್ನುವ ಧ್ಯೇಯದೊಂದಿಗೆ ಮೊದಲನೇ ವಿಭಾಗದ ಎಸ್.ವಿ.ನಾರಾಯಣ್, ಎಂ.ಜೆ.ಮೈಕಲ್, ಕೆ.ಬಿ.ವೇಣು, ಎಂ.ಪಿ.ಕೇಶವ ಕಾಮತ್, ಪ್ರಭಾಕರ ನೆಲ್ಲಿತ್ತಾಯ, ಸಿ.ಪಿ. ಮುತ್ತಪ್ಪ, ಇಲಿಯಾಸ್, ಇಬ್ರಾಹಿಂ, ಬೇಬಿ ಹಾಗೂ ಇತರ ಹಲವು ಸ್ನೇಹಿತರು ಹಾಕಿದ ಹೆಜ್ಜೆ ಮುಂದಿನ ಹಲವು ವರ್ಷಗಳಲ್ಲಿ 9 ಸಮಿತಿಗಳನ್ನು ಹುಟ್ಟು ಹಾಕಲು ಕಾರಣವಾಯಿತೆಂದರೆ ಅತಿಶಯೋಕ್ತಿ ಆಗಲಾರದು.
ಗೋಣಿಕೊಪ್ಪಲು ಪುರಸಭಾ ಸಭಾಂಗಣದಲ್ಲಿ ಪ್ರಾರಂಭಿಸಲಾದ ಕಾವೇರಿ ದಸರಾ ಉತ್ಸವವನ್ನು ನಂತರದ ವರ್ಷಗಳಲ್ಲಿ ಶ್ರೀ ಉಮಾಮಹೇಶ್ವರಿ ದೇವಾಲಯದ ಅಂಗಳದಲ್ಲಿ ನಂತರ ಬಸ್ ನಿಲ್ದಾಣದಲ್ಲಿ ಆಚರಿಸಿಕೊಂಡು ಬಂದಿದ್ದು ಇದೀಗ ಹಲವು ವರ್ಷಗಳಿಂದ ಬೃಹತ್ ಮಂಟಪದೊಂದಿಗೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯುತ್ತಿದೆ. ಒಂದು ವಿಶೇಷವಾದ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ಶ್ರೀ ಎಂ.ಜಿ. ಲಕ್ಷ್ಮಣ ಕಾಮತ್‍ರವರು ವಿಗ್ರಹ ದಾನ ನೀಡಿದ್ದು, ಇದೀಗ ಹಲವು ವರ್ಷಗಳಿಂದ ಸ್ಥಾಪಕ ಆಧ್ಯಕ್ಷ ಎಂ.ಜಿ.ಪದ್ಮನಾಭ ಕಾಮತ್ ರವರ ಪುತ್ರರಾದ ಕೇಶವ ಕಾಮತ್ ಮತ್ತು ಪ್ರಮೋದ್ ಕಾಮತ್ ನೀಡುತ್ತಿದ್ದಾರೆ.
ರಜತ ಮಹೋತ್ಸವದ ಕಾರ್ಯಕ್ರಮಗಳನ್ನು ನಡೆಸಲು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ರಾಜ್ಯದ ಉತ್ತಮ ಕಾರ್ಯಕ್ರಮ ಆಯೋಜಕರಾದ ಮೂಡಬಿದರೆಯ ಡಾ. ಮೋಹನ್ ಆಳ್ವ ಮತ್ತು ಆರ್.ಕೆ.ಭಟ್‍ರವರಿಂದ ಬೃಹತ್ ರಂಗಮಂದಿರವನ್ನು ನಿರ್ಮಿಸಿದ್ದು, ಪೇಜಾವರ ಅಧೋಕ್ಷಜ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿರುತ್ತಾರೆ. ಈ ಬಾರಿ ದಸರಾ ಸಮಿತಿಗಳ ಎಲ್ಲಾ ಅಧ್ಯಕ್ಷರುಗಳನ್ನು, ಶ್ರೀ ಕಾವೇರಿ ದಸರಾ ಸಮಿತಿಯ ಹಿಂದಿನ ಅಧ್ಯಕ್ಷರುಗಳನ್ನು ಹಾಗೂ ಸ್ಥಾಪಕ ಅಧ್ಯಕ್ಷರ ಪತ್ನಿ ಶ್ರೀ ಮೀರಾ ಕಾಮತ್‍ರವರನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಅಲ್ಲದೇ ಶ್ರೀ ಕಾವೇರಿ ದಸರಾ ಸಮಿತಿಯ ಏಳಿಗೆಗಾಗಿ ದುಡಿದ ಊರಿನ ಹಲವರನ್ನು ನಾನು ಇಲ್ಲಿ ಜ್ಞಾಪಿಸಿಕೊಳ್ಳದಿದ್ದಲ್ಲಿ ಅವರ ಸೇವೆಯನ್ನು ಶ್ಲಾಘಿಸಿದಂತಾಗುವುದಿಲ್ಲ. ಸಿ.ಟಿ.ದೇವಯ್ಯ, ಕೆ.ಸಿ.ದೇವಯ್ಯ, ಜೆ.ಎ.ರಾಜಾ ಉತ್ತಪ್ಪ, ವಿ.ಎ.ಚಂದ್ರಶೇಖರ್, ಕೆ.ಬಿ.ವೇಣು, ಬಿ.ಎಲ್.ಶ್ರೀಧರ್, ಕೊಂಗಂಡ ಗಣೇಶ್, ಕೊಂಗಂಡ ಬಬ್ಬು, ಕಾಡ್ಯಮಾಡ ಬೆಳ್ಳಿಕಟ್ಟಿ ಇತರರು.
ಪ್ರಸ್ತುತ ಕುಲ್ಲಚಂಡ ಪ್ರಮೋದ್ ಗಣಪತಿಯವರ ಅಧ್ಯಕ್ಷತೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ಗೋಣಿಕೊಪ್ಪಲು ನಾಡಹಬ್ಬ ದಸರಾ ಉತ್ಸವವು 2017ಕ್ಕೆ 39ನೇ ವರ್ಷದ ಆಚರಣೆಯ ಸಂಭ್ರಮದಲ್ಲಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

admin

0 0 votes
Article Rating
Subscribe
Notify of
guest
0 Comments
Inline Feedbacks
View all comments