ಕುಶಾಲನಗರ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ನೇತಾ, ಪಕ್ಷ ಮತ್ತು ಅಭ್ಯರ್ಥಿಯನ್ನು ಗಮನದಲ್ಲಿಡಬೇಕೆಂದು ಗುಜರಾತ್ ಬಿಜೆಪಿ ಶಾಸಕ ಡಾ. ಪ್ರದ್ಯುಮನ್ ವಾಜಾ ಹೇಳಿದ್ದಾರೆ.
ಪಟ್ಟಣದ ಕೂಡ್ಲುರು ವೃತ್ತದ ಬಳಿ ಮಂಗಳವಾರ ಮದ್ಯಾಹ್ನ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪ್ರಚಾರ ಸಭೆಯಲ್ಲಿ ಮಾತಾನಾಡಿದ ಶಾಸಕ ಪ್ರದ್ಯುಮನ್ ಪ್ರಸ್ತುತ ಬಿಜೆಪಿ ಮಾತ್ರ ಅತ್ಯುತ್ತಮ ನೇತಾ, ಪಕ್ಷ, ಮತ್ತು ಉಮೇದುವಾರರನ್ನು ಒದಗಿಸುತ್ತಿರುವ ರಾಜಕೀಯ ಸಂಘಟನೆ ಎಂದು ಹೇಳಿದರು. ಬಿಜೆಪಿ ನಾಯಕ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅತ್ಯುತ್ತಮ ಜನನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದಲ್ಲಿ ಇಂದು ಮೋದಿಯವರಿಗೆ ಇದಿರಾಗಿ ಮತ್ತೋರ್ವ ನಾಯಕರು ಕಂಡುಬರುತ್ತಿಲ್ಲ. ಭಾರತವನ್ನು ವಿಶ್ವಗುರುವನ್ನಾಗಿಸಿರುವ ಮೋದಿಯವರು ದೇಶ ಇದುವರೆಗೆ ಕಂಡಿರುವ ಅತ್ಯುತ್ತಮ ನಾಯಕ ಎಂದರು.
ಭಾರತೀಯ ಜನತಾ ಪಕ್ಷ ಮಾತ್ರ ರಾಜಕೀಯವಾಗಿ ಸರಿಯಾದ ತತ್ವ -ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿರುವ, ಅವುಗಳಿಗೆ ಬದ್ಧವಾಗಿರುವ ಪಕ್ಷ ಎಂದರು. ಇಂತಹ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರಿಸಬೇಕು ಎಂದರು.
ಇದೀಗ ಆರನೇ ಬಾರಿ ಸ್ಪರ್ಧೆ ಮಾಡುತ್ತಿರುವ ಅಪ್ಪಚ್ಚು ರಂಜನ್ ಕಳೆದ ಐದು ಬಾರಿ ಗೆದ್ದಿರುವ ರೀತಿಯೇ ಅವರ ಜನಪರ ನಿಲುವಿಗೆ ಸಾಕ್ಷಿ ಎಂದರು. ಬಿಜೆಪಿ ಯಾವ ರೀತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎನ್ನುವುದಕ್ಕೆ ಅಪ್ಪಚ್ಚು ರಂಜನ್ ಸಾಕ್ಷಿ ಎಂದ ಪ್ರದ್ಯುಮನ್ ರಂಜನ್ ರವರನ್ನು ಮತ್ತೆ ಅತ್ಯಧಿಕ ಬಹುಮತದಿಂದ ಗೆಲ್ಲಿಸುವುದು ಮಡಿಕೇರಿ ಕ್ಷೇತ್ರದ ಜನತೆಯ ಮೇಲಿರುವ ಜವಾಬ್ದಾರಿ ಎಂದರು.