ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಮತ್ತು ರಸ್ತೆಯ ವ್ಯವಸ್ಥೆ ಶೇ.100% ಮಾಡಬೇಕೆಂಬ ಕನಸಿದೆ; ತಾತೇರ ಉಷಾ ಪೊನ್ನಪ್ಪ

ತಾತೇರ ಉಷಾ ಪೊನ್ನಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹರದೂರು

ಹರದೂರು ಗ್ರಾಮ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದಲ್ಲಿದ್ದು, ತಾಲ್ಲೂಕು ಕೇಂದ್ರ ಸ್ಥಾನದಿಂದ 24 ಕಿ.ಮೀ.ದೂರದಲ್ಲಿದೆ.

ಹರದೂರು ಗ್ರಾಮ ಪಂಚಾಯಿತಿಯು 2 ಕಂದಾಯ ಗ್ರಾಮಗಳನ್ನು ಹೊಂದಿದ್ದು, 2 ಉಪ ಗ್ರಾಮಗಳನ್ನು ಹೊಂದಿದೆ. ಕಂದಾಯ ಗ್ರಾಮಗಳು 1) ಗರಗಂದೂರು 2) ಅಂಜನಗೇರಿ ಬೆಟ್ಟಗೇರಿ. ಉಪಗ್ರಾಮಗಳು 1) ಗರಗಂದೂರು ಬಿ 2)ಹರದೂರು. ಹರದೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಮಂದಿ ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿದೆ. ಪಂಚಾಯಿತಿಯ ಪೂರ್ವಕ್ಕೆ ಐಗೂರು, ಪಶ್ಚಿಮಕ್ಕೆ ಸುಂಟಿಕೊಪ್ಪ, ಉತ್ತರಕ್ಕೆ ಮಾದಾಪುರ, ದಕ್ಷಿಣಕ್ಕೆ ನಾಕೂರು-ಶಿರಂಗಾಲ ಗ್ರಾಮ ಹರದೂರು ಗ್ರಾಮ ವ್ಯಾಪ್ತಿಯನ್ನು ಹೊಂದಿದೆ.

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಕಾಫಿ, ಏಲಕ್ಕಿ ,ಕಾಳುಮೆಣಸು, ಶುಂಠಿ ಹಾಗೂ ಭತ್ತ. ಹರದೂರು ಗ್ರಾಮ ವ್ಯಾಪ್ತಿಯಲ್ಲಿ ಕಾಫಿತೋಟ, ಭತ್ತದ ಗದ್ದ, ಹಾರಂಗಿ ಜಲಾಶಯದ ಹಿನ್ನೀರು ಹಾಗೂ ಅರಣ್ಯದಿಂದ ಕೂಡಿದೆ. ಇಲ್ಲಿ ಜನರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದಾರೆ. ಇಲ್ಲಿ ಹೆಚ್ಚಿನ ಭಾಗ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ, ರಸ್ತೆ ಸಂಪರ್ಕವನ್ನು ಹೊಂದಿದೆ. ಹರದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ತಾತೇರ ಉಷಾ ಪೊನ್ನಪ್ಪರವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ತಾತೇರ ಉಷಾ ಪೊನ್ನಪ್ಪರವರು, ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಕಾರಣವೇನೆಂದರೆ ನನಗೆ ಸಣ್ಣ ವಯಸ್ಸಿನಿಂದಲೇ ರಾಜಕೀಯ ಹಾಗೂ ಸಾಮಾಜಿಕ ಸೇವೆಯ ಬಗ್ಗೆ ಆಸಕ್ತಿ ಇತ್ತು. ನನ್ನ 23ನೇ ವರ್ಷದಲ್ಲೇ ಬಿ.ಜೆ.ಪಿ. ಯ ಕಾರ್ಯಕರ್ತೆ ಯಾಗಿ ಸೇರ್ಪಡೆಗೊಂಡು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಅಂದರೆ ಸುಮಾರು 40 ವರ್ಷಗಳಿಂದ ಬಿ.ಜೆ.ಪಿ.ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ತದನಂತರ ಹರದೂರು ಬಿ.ಜೆ.ಪಿ. ಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಮುಂದುವರೆದು ಸೋಮವಾರಪೇಟೆ ತಾಲೂಕು ಮಹಿಳಾ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದೇನೆ.

ಜನಪ್ರತಿನಿಧಿಯಾಗಿ 2020 ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗರಗಂದೂರು ʼಎʼ ವಾರ್ಡ್ ನಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿ ಹರದೂರು ಗ್ರಾಮ ಪಂಚಾಯಿತಿ ಆಡಳಿತದ ಮೊದಲ ಅವಧಿಯ ಅಂದರೆ 2020-2023 ರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಎರಡನೇ ಅವಧಿಯಲ್ಲಿ 2023 ರಿಂದ ಅಧ್ಯಕ್ಷೆಯಾಗಿ ಅಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ನನ್ನ ಗ್ರಾಮದ ಅಭಿವೃದ್ಧಿಯ ಬಗ್ಗೆ ಹೇಳಬೇಕಾದರೆ ನಮ್ಮ ಗ್ರಾಮದ ಬಹುಪಾಲು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ನಿಕಟಪೂರ್ವ ಶಾಸಕರಾದ ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ಮೊರಾರ್ಜಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ.

ನಮ್ಮ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಗ್ರಾಮಗಳಿದ್ದು, ಅವುಗಳೆಂದರೆ ಹರದೂರು, ಗರಗಂದೂರು 1, ಗರಗಂದೂರು 2, ಹಾಗೂ ಗರಗಂದೂರು 3. ನಮ್ಮ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯಗಳ ನಿರ್ಮಾಣವು ಪೂರ್ಣವಾಗಿದ್ದು, ಬೀದಿ ದೀಪಗಳ ವ್ಯವಸ್ತೆಯನ್ನು ಈ ಬಾರಿ ಪೂರ್ಣಗೊಳಿಸಲಾಗುವುದು ಅದಕ್ಕಾಗಿ 15ನೇ ಹಣಕಾಸಿನ ಯೋಚನೆಯಲ್ಲಿ ಸೋಲಾರ್ ಬೀದಿ ದೀಪದ ಅಳವಡಿಕೆಗೆ ಅನುದಾನ ಬಿಡುಗಡೆಯಾಗಿದೆ.

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ನ ಅಮೃತ ಸರೋವರ ಯೋಜನೆ ಅಡಿಯಲ್ಲಿ ಚಿನ್ನಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಈ ಬಾರಿಯ 77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣವನ್ನು ಚಿನ್ನಳ್ಳಿ ಕೆರೆಯ ಆವರಣದಲ್ಲಿ ಮಾಡಲಾಗಿದೆ. ಈ ಯೋಜನೆಯ ಪ್ರಯುಕ್ತ ಮುಂದಿನ ದಿನಗಳಲ್ಲಿ ಕೆರೆಯ ಸುತ್ತಮುತ್ತ ಉದ್ಯಾನವನ ಹಾಗೂ ಔಷಧಿ ಗಿಡಗಳನ್ನು ನೆಡಲಾಗುವುದು.

ನಮ್ಮ ಪಂಚಾಯಿತಿಗೆ ಪ್ರಮುಖವಾದ ಆದಾಯ ಎಂದರೆ ಪಂಚಾಯಿತಿ ವ್ಯಾಪ್ತಿಯಲ್ಲಿನ ರೆಸಾರ್ಟ್ ಗಳಿಂದ ದೊರೆಯುತ್ತಿದೆ.

ಹರದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಒಣ ಕಸದ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದ್ದು, ಕಸ ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕೂಡ ಇದೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನ ರಹಿತ ಜನರಿದ್ದು ಅವರಿಗಾಗಿ ವಸತಿ ಮತ್ತು ನಿವೇಶನವನ್ನು ಇದರೊಂದಿಗೆ ಸಂಜೀವಿನಿ ಒಕ್ಕೂಟಕ್ಕೂ ಜಾಗವನ್ನು ಗುರುತಿಸಲಾಗಿದ್ದು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿಯನ್ನು ನೀಡಲಾಗಿದೆ. ಅವರಿಂದ ಉತ್ತಮವಾದ ಸ್ಪಂದನೆಯು ದೊರೆತಿದ್ದು. ಅದಕ್ಕೆ ಸಂಬಂಧಪಟ್ಟ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಶೀಘ್ರವಾಗಿ ಯೋಜನೆಯನ್ನು ಅನುಷ್ಟಾನ ಗೊಳಿಸಿ ಕೊಡಬೇಕಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ಹಾಗೂ ಮಾನ್ಯ ಶಾಸಕರಾದ ಮಂತರ್ ಗೌಡ ಅವರ ಬಳಿ ನಾನು ವೈಯುಕ್ತಿಕವಾಗಿ ಹಾಗೂ ಪಂಚಾಯಿತಿಯ ವತಿಯಿಂದ ಕೇಳಿಕೊಂಡಿದ್ದೇನೆ.

ಗ್ರಾಮದ ಜನರಿಗೆ ಪಡಿತರ ಚೀಟಿ, ವೃದ್ಧಾಪ್ಯ ವೇತನ ಮುಂತಾದ ಯೋಜನೆಗಳನ್ನು ತಲುಪಿಸಲು ನಾನು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ನನ್ನಅಧಿಕಾರದ ಅವಧಿಯಲ್ಲಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಮತ್ತು ರಸ್ತೆಯ ವ್ಯವಸ್ಥೆ ಶೇ.100% ಮಾಡಬೇಕೆಂಬ ಕನಸಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಹಾಡಿ ಇದ್ದು, ಅದರ ಮೂಲಭೂತ ಸೌಕರ್ಯ ಸೇರಿದಂತೆ ನೀರು, ಶೌಚಾಲಯದ ಅಭಿವೃದ್ಧಿ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿಯವರೆಗೆ ನಿಕಟಪೂರ್ವ ಶಾಸಕರಾದ ಮಂಡೇಪಂಡ ಅಪ್ಪಚ್ಚು ರಂಜನ್‌ರವರ ಬೆಂಬಲವು ಉತ್ತಮವಾಗಿ ದೊರೆತಿದ್ದು, ನಮ್ಮ ಪಂಚಾಯಿತಿಯ, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಗ್ರಾಮಸ್ಥರ ಸಹಕಾರ ಸಕಾರಾತ್ಮಕವಾಗಿ ದೊರಕುತ್ತಿದ್ದೆ.

ಸಹಕಾರ ಕ್ಷೇತ್ರದಲ್ಲಿ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಳಾ ಗಿದ್ದೇನೆ
ಅಲ್ಲದೆ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಲೆಕ್ಕಿಗರಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ಸಾಮಾಜಿಕವಾಗಿ ಆನ್ವಿ ಸ್ವಸಾಯ ಸಂಘದ ಒಂದನೇ ಪ್ರತಿನಿಧಿಯಾಗಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಾಗೂ ಮಡಿಕೇರಿ ಮಹಿಳಾ ಸಮಾಜದ ಸದಸ್ಯಳಾಗಿದ್ದೇನೆ. ಧಾರ್ಮಿಕ ಕ್ಷೇತ್ರದಲ್ಲಿ ಈ ಮೊದಲು ಶ್ರೀ ಕೊಪ್ಪಲು ಬಸವೇಶ್ವರ ದೇವಸ್ಥಾನದ ಕಾರ್ಯದರ್ಶಿಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ಜೊತೆಗೆ ಮಾದಾಪುರ ಅಯ್ಯಪ್ಪ ದೇವಾಲಯ ಸಮಿತಿ ಸದಸ್ಯಳಾಗಿ ಕಾರ್ಯ ನಿರ್ವಹಿಸಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಾದಾಪುರದ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಪಂಚಾಯಿತಿಯ ವತಿಯಿಂದ ನಾಮ ನಿರ್ದೇಶಕ ಸದಸ್ಯರಾಗಿದ್ದೇನೆ.

ತಾತೇರ ಉಷಾ ಪೊನ್ನಪ್ಪ ಅವರ ಕುಟುಂಬ ಪರಿಚಯ: ತಂದೆ : ದಿವಂಗತ ನಾಯಮಡ ರಘು ರಾಮು. ತಾಯಿ : ದಿವಂಗತ ಬೊಳ್ಳಮ್ಮ. ಪತಿ : ತಾತೇರ ಪೊನ್ನಪ್ಪ (ಕೃಷಿಕರು). ಹಿರಿಯ ಪುತ್ರ: ಟಿ.ಪಿ. ಅಶೋಕ, ಸೊಸೆ: ನಿರ್ಮಲ, ಮೊಮ್ಮಗಳು: ವಿವಿಕ್ತ. ಕಿರಿಯ ಪುತ್ರ: ಟಿ.ಪಿ. ರಂಜನ್. ಪುತ್ರಿ : ರಾಜೇಶ್ವರಿ, ಅಳಿಯ: ಸಚಿನ್, ಮೊಮ್ಮಗಳು: ಪುಷ್ಟಿ.

ಮೂಲತಃ ಕೃಷಿಕರಾಗಿರುವ ತಾತೇರ ಉಷಾ ಪೊನ್ನಪ್ಪ ನವರು ಪ್ರಸ್ತುತ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗರಗಂದೂರು ʼಎʼ ವಾರ್ಡ್ ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.
ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.

ಸಂದರ್ಶನ ದಿನಾಂಕ: 16-08-2023