ನಾಪೋಕ್ಲು :ಎಮ್ಮೆಮಾಡು ವಿನಿಂದ ಕೂರುಳಿ ಪರಂಬು ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಗೆ ಶಾಸಕರ ತುರ್ತು ನಿಧಿಯಿಂದ 10.ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಆದೇಶದಂತೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಇಸ್ಮಾಯಿಲ್ ಕಳೆದ ಹಲವು ವರ್ಷಗಳಿಂದ ಎಮ್ಮೆಮಾಡುವಿನಿಂದ ಕೂರುಳಿ ಪರಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಶಾಲಾ ವಾಹನ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಕಷ್ಟಕರವಾಗಿತ್ತು. ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಮಾನ್ಯ ಶಾಸಕರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿ ಶಾಸಕರ ತುರ್ತುನಿಧಿ ಅನುದಾನದಲ್ಲಿ 10ಲಕ್ಷ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಮುಂದೆ ಗ್ರಾಮದ ಅಭಿವೃದ್ಧಿಗೆ ಶಾಸಕರು ಕೈಜೋಡಿಸಲಿದ್ದು ಗ್ರಾಮಸ್ಥರು ಎಲ್ಲಾ ರೀತಿಯಲ್ಲಿ ಅವರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ರಸ್ತೆಯನ್ನು ದುರಸ್ತಿ ಪಡಿಸಲು ಶಾಸಕರಲ್ಲಿ ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಟ್ಟು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ ಶಾಸಕ ಪೊನ್ನಣ್ಣ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಇಸ್ಮಾಯಿಲ್, ಯೂಸುಫ್, ಕನ್ನಡಿಯಂಡ ಮಾಹಿನ್, ಪ್ರಮುಖರಾದ ಚಕ್ಕೇರ ಇಬ್ರಾಹಿಂ ಹಾಜಿ,ಖಾದರ್ ಹಾಜಿ, ಅಶ್ರಫ್, ಕಾಳೇರ ಉಮ್ಮರ್,ಮೊಯ್ದುಕುಂಞಿ,ಆಲಿ ಹಾಜಿ,ಮೊಯ್ದು ಕುಟ್ಟಿ,ಆಜೀಜ್ ನೆರೂಟ್, ಖಾದರ್, ಹಂಝ ಸೇರಿದಂತೆ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು