ಚಳಿ ಇದೆ ಎಂದು ಹೊದ್ದು ಮಲಗುವಂತಿಲ್ಲ, ಮಳೆ ಬಂತೆಂದು ತಡ ಮಾಡುವಂತಿಲ್ಲ, ಮುಂಜಾನೆ ಬೀಳುವ ಸವಿಗನಸಿನ ಮಾತೇ ಇಲ್ಲ….

Reading Time: 8 minutes

(Photo by: Fran Stoppelman via Pinterest)

190 ನೇ ವರ್ಷದ ಪತ್ರಿಕಾ ವಿತರಕರ ದಿನಾಚರಣೆ 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

(ಸೆಪ್ಟೆಂಬರ್‌ 4 ಪತ್ರಿಕಾ ವಿತರಕರ ದಿನ ಈ ನಿಮಿತ ವಿಶೇಷ ಸಂಪಾದಕೀಯ)

ಆಗಲೇ ಮುಂಜಾನೆ 6.30 ಗಂಟೆ. ತಾಜಾ ಕೊಡಗಿನ ಕಾಫಿಯು ಅಡುಗೆಮನೆಯಲ್ಲಿ ಕುದಿಯುತಿರುತ್ತದೆ. ಆದರೆ ನಿಮ್ಮ ಕೈಯಲ್ಲಿ ಪತ್ರಿಕೆಯಿಲ್ಲದೆ ಕಾಫಿಯನ್ನು ಹೀರುವುದಿಲ್ಲ ಎಂಬ ಸಂಕಲ್ಪ ನಿಮ್ಮಲ್ಲಿದೆ. ನೀವು ತಡರಾತ್ರಿಯವರೆಗೂ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಚರ್ಚೆಗಳನ್ನು ವೀಕ್ಷಿಸಿರಬಹುದು, ಸುದ್ದಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಬ್ರೌಸ್ ಮಾಡಿರಬಹುದು, ಆದರೆ ಪ್ರಮುಖ ಅಂಶವಾಗಿ ದಿನಪತ್ರಿಕೆ ಯಾವಾಗಲೂ ನಿಮ್ಮ ಕಾಫಿಯೊಂದಿಗೆ ಇದ್ದರೆ ಆ ದಿನವು ಹೆಚ್ಚು ಹರ್ಷಚಿತ್ತದಿಂದ ಕೂಡಿರುತ್ತದೆ.

ವೃತ್ತಪತ್ರಿಕೆಯನ್ನು ಪತ್ರಿಕಾ ವಿತರಕರು  ತಡವಾಗಿ ತಲುಪಿಸಿದ್ದಕ್ಕಾಗಿ  ಸಹಜವಾಗಿ ನಾವು ಅವರನ್ನು ಗದರಿಸುತ್ತಿದ್ದೆವು. ಆದರೆ ನಾವು ಹಾಸಿಗೆಯಿಂದ ಎದ್ದೇಳುವ ಮೊದಲು ಅವರು ಅನೇಕ ಬಾರಿ ಪತ್ರಿಕೆಯನ್ನು ಮನೆಗೆ ವಿತರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಮರೆತುಬಿಡುತ್ತೇವೆ.

ಪ್ರತಿ ವರ್ಷ ಸೆಪ್ಟೆಂಬರ್ 4 ಅನ್ನು ಪತ್ರಿಕಾ ವಿತರಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಪತ್ರಿಕಾ ವಿತರಕರಿಗೆ ಧನ್ಯವಾದಗಳನ್ನು ಅರ್ಪಿಸುವ ದಿನವಾಗಿದೆ. ಅಂತಹ ಹತ್ತಾರು ವಿತರಕರು ಬೆಳಿಗ್ಗೆ ಮನೆಯಿಂದ ಹೊರಟು ಒಂದು ಸ್ಥಳದಲ್ಲಿ ಪತ್ರಿಕೆಗಳನ್ನು ಸಂಗ್ರಹಿಸಿ  ಜೋಡಿಸಿಕೊಂಡು ವಿತರಣೆಗಾಗಿ ನಿಖರವಾಗಿ ಯೋಜನೆಯನ್ನು ರೂಪಿಸುತ್ತಾರೆ. ಕೆಲವರು ತಮ್ಮ ದ್ವಿಚಕ್ರವಾಹನಗಳಲ್ಲಿ, ಹೆಚ್ಚಿನವರು ತಮ್ಮ ಸೈಕಲ್‌ಗಳಲ್ಲಿ ಪತ್ರಿಕೆಗಳ ಬಂಡಲ್‌ಗಳನ್ನು ಹೊತ್ತುಕೊಂಡು ನಮ್ಮ ಬೆಳಗಿನ ಸಮಯವನ್ನು ಉತ್ತಮಗೊಳಿಸಲು ತಮ್ಮ ಸುಖ ನಿದ್ರೆಯನ್ನು ಬದಿಗೊತ್ತಿ ಅವರು ಹೊಂದಿರುವ ಉತ್ಸಾಹವು ಹೆಚ್ಚು ಮೌಲ್ಯಯುತವಾಗಿದೆ. ವಾರದ ವಿರಾಮವನ್ನು ತೆಗೆದುಕೊಳ್ಳದೆ ಪ್ರತಿದಿನವೂ ಬೆಳಿಗ್ಗೆ ಬೇಗನೆ ಏಳುವ ಅವರ ಕರ್ಮಯೋಗದ ಸಾರವು ಶ್ಲಾಘನೀಯವಾಗಿದೆ. ಪತ್ರಿಕಾ ವಿತರಕರು ತಾವು ಅನುಭವಿಸುತ್ತಿರುವ ಬಡತನಕ್ಕಾಗಿ ವೃತ್ತಿಗೆ ಬರುತ್ತಾರೆ ಎಂದು ಹಲವರು ಅಭಿಪ್ರಾಯಪಟ್ಟರೂ, ಬಡತನದಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಅನೇಕ ಇತರ ವೃತ್ತಿಗಳಿವೆ. ಹಾಗಾಗಿ ಇವರು ಬೆಳಿಗ್ಗೆ 4:30 ಕ್ಕೆ  ಎದ್ದೇಳುವ ಅವಶ್ಯಕತೆಯಿಲ್ಲ.   ಪತ್ರಿಕಾ ವಿತರಣೆ ಅವರ ಪಾಲಿಗೆ ವೃತ್ತಿಯಲ್ಲದೆ  ಸೇವೆಯಾಗಿರುವುದು.

ಕೈಯ್ಯಲ್ಲಿ ಮೊಬೈಲ್ ಇದ್ದರೆ, ಮನೆಯಲ್ಲಿ ಟಿವಿ ಇದ್ದರೂ ಬೆಳಿಗ್ಗೆ ಪತ್ರಿಕೆ ಓದದಿದ್ದರೆ ಬಹುಪಾಲು ಜನಕ್ಕೆ ಇಂದಿಗೂ ಸಮಾಧಾನವಿರುವುದಿಲ್ಲ. ತುಸು ತಡವಾದರೂ ಯಾಕಪ್ಪಾ ಲೇಟು? ಎಂದು ಪತ್ರಿಕೆ ಹಾಕುವವನ್ನು ಕೇಳುವಷ್ಟು ಪತ್ರಿಕೆ ಓದುವ ಗೀಳು.  ಆದರೆ, ಅಷ್ಟೇ ಪ್ರಾಮಾಣಿಕ ಕೆಲಸ ಈ ಪತ್ರಿಕಾ ವಿತರಕರದ್ದು. ಬೆಳಿಗ್ಗೆ 4 ಗಂಟೆಯೊಳಗೆ ಕನಸಿನ ನಿದ್ರೆಗೆ ಬ್ರೇಕ್ ಹಾಕಿ ಹೊರಡಬೇಕು. ಪತ್ರಿಕೆಗಳನ್ನು ಜೋಡಿಸಿಕೊಂಡು ಸೈಕಲ್ ಅಥವಾ ಬೈಕ್‌ನಲ್ಲಿಟ್ಟುಕೊಂಡು ಓದುಗನಿಗೆ ತುಸು ತಡವಾಗದಂತೆ ಕೈ ಮುಟ್ಟಿಸುವ ಕಾಯಕವಿದು.

ಒಬ್ಬ ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ. ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಮುಂಜಾನೆಯ ಸವಿಗನಸು ಕಾಣುತ್ತಾ ಎಲ್ಲರೂ ಸಿಹಿ ನಿದ್ದೆಯಲ್ಲಿರುವಾಗ ಪತ್ರಿಕೆ ವಿತರಕರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಚಳಿ, ಮಳೆ, ಗಾಳಿ ಯಾವುದೂ ಇವರ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಹಬ್ಬ, ಉತ್ಸವ ಏನೇ ಇದ್ದರೂ ಈ ಕಾಯಕ ಮಾತ್ರ ತಪ್ಪಿಸುವಂತಿಲ್ಲ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸವ ಕಾರ್ಯ ಮಾಡುತ್ತಾರೆ. 

“ಮಳೆ ಬಂದು ಪತ್ರಿಕೆ ಒದ್ದೆಯಾದರೆ, ತಡವಾದರೆ ಕೆಲವರು ಬೈಯ್ಯುತ್ತಾರೆ. ಕೆಲವರು ಇರ್ಲಿ ಬಿಡಿ ಅನ್ನುತ್ತಾರೆ. ಗ್ರಾಹಕರ ನಿರೀಕ್ಷೆಗೆ ತಕ್ಕ ಕೆಲಸ ಮಾಡುತ್ತೇವೆ. ಒಂದು ದಿನವೂ ತಪ್ಪದಂತೆ ಪತ್ರಿಕೆ ಮುಟ್ಟಿಸುತ್ತೇವೆ. ಆದರೆ, ಬೇಸರದ ಸಂಗತಿ ಎಂದರೆ ತಿಂಗಳಿಗೊಮ್ಮೆ ಪತ್ರಿಕೆಯ ದುಡ್ಡು ನೀಡಲು ಕೆಲವರು ಸತಾಯಿಸುತ್ತಾರೆ. ಮತ್ತೆ ಬನ್ನಿ, ನಾಳೆ ಬನ್ನಿ ಎಂದು ಹಿಂದಕ್ಕೆ ಕಳುಹಿಸುವವರು ಇದ್ದಾರೆ. ದಯವಿಟ್ಟು ಈ ರೀತಿ ಇನ್ನುಮುಂದೆ ಸತಾಯಿಸಬೇಡಿ”  ಎಂಬ ಕಳಕಳಿ ಪತ್ರಿಕಾ ವಿತರಕರದು.

ಕೆಲವು ಪತ್ರಿಕಾ ವಿತರಕರು ಹಲವಾರು ವರ್ಷಗಳಿಂದ ಈ ವೃತ್ತಿ ನಡೆಸಿಕೊಂಡು ಬಂದಿದ್ದಾರೆ. ಕುಟುಂಬದವರು ಅನಾರೋಗ್ಯ ಪೀಡಿತರಾದರೂ, ಶುಭ ಕಾರ್ಯವಿದ್ದರೂ ಇವರು ತಮ್ಮ ಕಾಯಕ ಬಿಡುವಂತಿಲ್ಲ.  ಅಂದ ಹಾಗೆ ಇವರಿಗೆ ಸಿಗುವುದು ವರ್ಷದಲ್ಲಿ ನಾಲ್ಕು ರಜೆಗಳು ಮಾತ್ರ. ಯುಗಾದಿ, ಗಣೇಶನ ಹಬ್ಬ, ದಸರಾ ಹಾಗೂ ದೀಪಾವಳಿಯಲ್ಲಿ ಮಾತ್ರ ಇವರಿಗೆ ರಜೆ. ‘ವರದಿಗಾರರಿಗೆ, ಸಂಪಾದಕರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚು ಹತ್ತಿರ ಸಂಪರ್ಕವಿರುತ್ತಾರೆ. ಆದರೆ ಪತ್ರಿಕಾ ವಿತರಕರಿಗೆ ಮಾತ್ರ ಬಹು ದೂರದ  ಸಂಪರ್ಕ.

ಕೋವಿಡ್ ಸಮಯದಲ್ಲಿಯೂ ಮನೆ ಮನೆಗೆ ಪತ್ರಿಕೆ ಬರುವುದು ನಿಲ್ಲಲಿಲ್ಲ. ತಮ್ಮ ಜೀವವನ್ನೂ ಲೆಕ್ಕಿಸದೇ ಮನೆಮನೆಗೂ ಪತ್ರಿಕೆ ಮುಟ್ಟಿಸಿದ್ದು ಪತ್ರಿಕಾ ವಿತರಕರ ವೃತ್ತಿ ಬದ್ಧತೆಗೆ ಸಾಕ್ಷಿಯಾಗಿದೆ. ಕೊರೋನಾ ಸಂಕಷ್ಟದಲ್ಲೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಸೋಂಕು ಹರಡುತ್ತದೆ ಎಂಬ ವದಂತಿಗಳು ಹರಡಿದರೂ ಎದೆಗುಂದದೆ ಪತ್ರಿಕೆ ಹಂಚಿ ವದಂತಿಗಳು ಸುಳ್ಳು ಎಂಬುದನ್ನು ತೋರಿಸಿಕೊಟ್ಟರು. ಮಾಧ್ಯಮಗಳು ಮತ್ತು ಜನರ ನಡುವಿನ ಸೇತುವೆಯಾಗಿರುವ ಪತ್ರಿಕಾ ವಿತರಕರು ಸದಾ ಸ್ಮರಣೀಯರು. ಬಹಳ ರಿಸ್ಕ್ ತೆಗೆದುಕೊಂಡು ಮನೆ ಮನೆಗೂ ಬೆಳಗ್ಗೆಯೇ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯ. 

ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸಾಮಾನ್ಯವಾಗಿ ಜನರು ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುತ್ತಾರೆ. ಅದು ಬದಲಾವಣೆಯಾಗಬೇಕು. ಸಾಮಾಜಿಕವಾಗಿ ವೃತ್ತಿ ತಾರತಮ್ಯ ಇರಬಾರದು. ಮನೆ ಮನೆಗೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನು ನಾವು ಮುಖ್ಯವಾಹಿನಿಯಲ್ಲಿ ಗುರುತಿಸಬೇಕು.  ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವ ಇರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು.

ಚಳಿ ಇದೆ ಎಂದು ಹೊದ್ದು ಮಲಗುವಂತಿಲ್ಲ, ಮಳೆ ಬಂತೆಂದು ತಡ ಮಾಡುವಂತಿಲ್ಲ, ಮುಂಜಾನೆ ಬೀಳುವ ಸವಿಗನಸಿನ ಮಾತೇ ಇಲ್ಲ. ಸುದ್ದಿಗಾರರು ಸುದ್ದಿ ಬರೆದರೂ ಜಾಹೀರಾತುದಾರರು ಜಾಹೀರಾತು ತಂದರೂ, ಪ್ರಿಂಟಿಂಗ್‌ನವರು ಮುದ್ರಿಸಿದರೂ ಪತ್ರಿಕೆಯ ಯಶಸ್ಸು ನಿಂತಿರುವುದು ಪತ್ರಿಕೆ ಜನರಿಗೆ ತಲುಪಿದಾಗ ಮಾತ್ರ. ಹಾಗಾಗಿಯೇ ಪತ್ರಿಕಾ ವಿತರಕರನ್ನು ಗೌರವಿಸುವ ಸಲುವಾಗಿ  ವರ್ಷಕ್ಕೆ ಒಮ್ಮೆ ಸೆಪ್ಟೆಂಬರ್‌ 4ರಂದು ಪತ್ರಿಕೆ ವಿತರಕರ ದಿನವನ್ನು ಆಚರಿಸಲಾಗುತ್ತದೆ. 

ನ್ಯೂಯಾರ್ಕ್ ನಗರದ ಮ್ಯೂಸಿಯಂ ಬಿಡುಗಡೆ ಮಾಡಿದ ಶೀರ್ಷಿಕೆಯ ಫೋಟೋ ಪ್ರಕಾರ, 1833 ರಲ್ಲಿ ನ್ಯೂಯಾರ್ಕ್ ನಗರದದಿಂದ ಪ್ರಕಟಗೊಳ್ಳುತ್ತಿದ್ದ “ದಿ ಸನ್”‌ ಪತ್ರಿಕೆಯ ಪ್ರಕಾಶಕರಾದ ಬೆಂಜಮಿನ್ ಡೇ ರವರು “ ಈ ಪತ್ರಿಕೆಯನ್ನು ಮಾರಾಟ ಮಾಡುವ ಮೂಲಕ ಹಲವರು ಪುರುಷರು ತಮ್ಮ ಸ್ಥಿರವಾದ ಉದ್ಯೋಗವನ್ನು ಕಂಡು ಕೊಳ್ಳಬಹುದು. ಹಾಗೆ ಪತ್ರಿಕೆ ಮಾರಾಟದೊಂದಿಗೆ ಉದಾರ ರಿಯಾಯಿತಿಯನ್ನು ನೀಡಲಾಗುವುದು” ಎಂದು ತಮ್ಮ ಪತ್ರಿಕೆಯಲ್ಲಿ ಒಂದು ಜಾಹೀರಾತನ್ನು ಪ್ರಕಟಿಸುತ್ತಾರೆ. ಸೆಪ್ಟೆಂಬರ್ ದಿನದ ಆ ಜಾಹೀರಾತಿಗೆ ಮೊದಲು ಪ್ರತ್ಯುತ್ತರ ನೀಡಿದಾತ 10 ವರ್ಷ ವಯಸ್ಸಿನ ಬಾರ್ನೆ ಫ್ಲಾಹೆರ್ಟಿ ಎಂಬ ಬಾಲಕ. ಆ ದಿನ ಬೆಂಜಮಿನ್ ಡೇ ರವರು ಹುಡುಗನ ಪ್ರಾಮಾಣಿಕತೆಯಿಂದ ಪ್ರಭಾವಿತರಾಗಿ ಅವರು ಅವನಿಗೆ ಕೆಲಸವನ್ನು ಕೊಟ್ಟರು. ದಿ ಸನ್ ಪತ್ರಿಕೆಯ  ಪ್ರಕಾಶಕ ಬೆಂಜಮಿನ್ ಡೇ ಸೆಪ್ಟೆಂಬರ್ 4, 1833 ರಂದು ಮೊದಲ ಪೇಪರ್‌ಬಾಯ್  ಆಗಿ 10 ವರ್ಷ ವಯಸ್ಸಿನ ಬಾಲಕ ಬಾರ್ನೆ ಫ್ಲಾಹೆರ್ಟಿ  ಅನ್ನು ನೇಮಿಸಿಕೊಂಡರು. ಫ್ಲಾಹರ್ಟಿ ಅವರ ಪತ್ರಿಕೆ ಮಾರಾಟದ ಶೈಲಿಯಿಂದ ನ್ಯೂಯಾರ್ಕ್ ನಗರದ ಜನರು ಪ್ರಭಾವಿತರಾಗಿ ಪತ್ರಿಕೆಯನ್ನು ಉತ್ಸಾಹದಿಂದ ಕೊಂಡು ಓದುತ್ತಿದ್ದರು.

ಬಾರ್ನೆ ಫ್ಲಾಹೆರ್ಟಿಯ ಪತ್ರಿಕಾ ವಿತರಣೆಯ ವಿನಮ್ರ ಆರಂಭದಿಂದ ಇತಿಹಾಸದಲ್ಲಿ ಎಷ್ಟು ಮಹಾನ್ ವ್ಯಕ್ತಿಗಳು ರೂಪುಗೊಂಡರು ಎಂಬುದು ಗಮನಾರ್ಹವಾಗಿದೆ.  ಆಲ್ಬರ್ಟ್ ಐನ್‌ಸ್ಟೈನ್, ಜೇಮ್ಸ್ ಕಾಗ್ನಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಐಸಾಕ್ ಅಸಿಮೊವ್ ಅವರು ಪತ್ರಿಕಾ ವಿತರಕರಾಗಿ ತಮ್ಮ ಬದುಕನ್ನು ಆರಂಭಿಸಿದರು.  ಅವರೊಂದಿಗೆ ಮಾಜಿ ರಾಷ್ಟ್ರಪತಿ ಭಾರತರತ್ನ ಎ.ಪಿ.ಜೆ. ಅಬ್ದುಲ್‌ ಕಲಾಂರವರು ಕೂಡ ತಮ್ಮ ಬದುಕಿನ ಆರಂಭದಲ್ಲಿ ಪತ್ರಿಕೆ ವಿತರಣೆ ಮಾಡುವ ಮೂಲಕ ಜಗತ್‌ವಿಖ್ಯಾತರಾದರು. ಅಂದಿನಿಂದ, ಅಸಂಖ್ಯಾತ ಮಹತ್ವಾಕಾಂಕ್ಷಿಗಳು  ಬಾರ್ನೆ ಫ್ಲಾಹೆರ್ಟಿ  ಅವರ ಹೆಜ್ಜೆಗಳನ್ನು ಜಗತ್ತಿನಲ್ಲಿ ಅನುಸರಿಸಿದ್ದಾರೆ. ಸೆಪ್ಟೆಂಬರ್ 4, 1833 ರಂದು ಬಾರ್ನೆ ಫ್ಲಾಹೆರ್ಟಿ ಕೆಲಸಕ್ಕೆ ಇಳಿದ ದಿನದ ಸ್ಮರಣೆಯಾಗಿ ಇಂದಿಗೆ 190 ವರ್ಷಗಳು ಸಂದಿವೆ. ಆ ನಿಟ್ಟಿನಲ್ಲಿ ಪತ್ರಿಕಾ ವಿತರಕರ ದಿನಾಚರಣೆಯ ಮೂಲಕ ಅವರನ್ನು ಗೌರವ ಪೂರ್ವಕವಾಗಿ ಜಗತ್ತಿನಾದ್ಯಾಂತ ಸ್ಮರಿಸಲಾಗುತ್ತಿದೆ.

✍️…. ಅರುಣ್‌ ಕೂರ್ಗ್‌ 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments