ಅಂತರಾಷ್ಟ್ರೀಯ ಕಾಫಿ ಸಂಸ್ಥೆಯು ಕಾಫಿ ಉದ್ಯಮಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಗೆ ಒಮ್ಮೆ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನವನ್ನು ಕಾಫಿ ಬೆಳೆಯುವ ವಿವಿಧ ದೇಶಗಳಲ್ಲಿ ನಡೆಸುತ್ತದೆ. ಅದೇ ರೀತಿ ಈ ವರ್ಷದಲ್ಲಿ ಅಂತರಾಷ್ಟ್ರೀಯ ಕಾಫಿ ಸಂಸ್ಥೆಯು ‘5 ನೇ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನ’ವನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದ್ದು, ಸದರಿ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನವನ್ನು ಅಂತರಾಷ್ಟ್ರೀಯ ಕಾಫಿ ಸಂಸ್ಥೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ಭಾರತೀಯ ಕಾಫಿ ಮಂಡಳಿ ಸಹಯೋಗದೊಂದಿಗೆ, ಬೆಂಗಳೂರು ಅರಮನೆ ಮೈದಾನದಲ್ಲಿ (ಪ್ಯಾಲೇಸ್ ಗ್ರೌಂಡ್) 2023 ನೇ ಸೆಪ್ಟಂಬರ್ ತಿಂಗಳ ದಿನಾಂಕ 25 ರಿಂದ 28 ರವರೆಗೆ ನಡೆಸಲಾಗುತ್ತಿದೆ.
“ಸರ್ವತೋಮುಖ ಆರ್ಥಿಕತೆ ಹಾಗೂ ಪುನಃಶ್ಚೇತನ ಕೃಷಿ ಮೂಲಕ ಸುಸ್ಥಿರತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರ ರಾಷ್ಟ್ರೀಯ ಕಾಫಿ ಸಂಸ್ಥೆಯ 75 ಸದಸ್ಯ ರಾಷ್ಟ್ರಗಳು, ಕಾಫಿ ಬೆಳೆಗಾರರು, ಸರಕಾರಿ ಪ್ರತಿನಿಧಿಗಳು ಸೇರಿದಂತೆ, ದೇಶ ವಿದೇಶಗಳ ಉನ್ನತ ಮಟ್ಟದ ತಜ್ಮರು, ಖಾಸಗಿ ವಲಯದ ಅಭಿವೃದ್ಧಿ ಪಾಲುದಾರರು, ಹೂಡಿಕೆದಾರರು, ನಾಗರಿಕ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳು, ಪ್ರಮುಖ ಕಾಫಿ ಉದ್ಯಮಿಗಳು ಹಾಗೂ ನೀತಿ ನಿರೂಪಕರು ಕಾಫಿ ಮಾರುಕಟ್ಟೆ, ತಂತ್ರಜ್ಞಾನ ಮತ್ತು ಪುನರುತ್ಪಾದಕ ಕೃಷಿ, ಕಾಫಿ ಸುಸ್ಥಿರತೆ ಮುಂತಾದ ವಿಚಾರಗಳನ್ನು ಚರ್ಚಿಸಲು ಸೇರುತ್ತಿದ್ದಾರೆ. ಈ ಸಮ್ಮೇಳನದಲ್ಲಿ B2B, ಗ್ಲೋಬಲ್ ಸಿಇಒ ಕಾಂಕ್ಲೇವ್, ಗ್ರೋಯರ್ಸ್ ಕಾಂಕ್ಲೇವ್, ಕಾಫಿ ಕೃಷಿ ಹಾಗೂ ಉದ್ದಿಮೆಯ ಕಾರ್ಯಾಗಾರಗಳು, ಪ್ರದರ್ಶನ ಮಳಿಗೆಗಳು, ದೇಶದ ಕಾಫಿ ಪ್ರದೇಶಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ಇದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕಾಫಿ ಪ್ರಿಯರು ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಈ ‘5 ನೇ ವಿಶ್ವ ಕಾಫಿ ಸಮ್ಮೇಳನ ಹಾಗೂ ಪ್ರದರ್ಶನ” ದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಕಾಫಿ ಮಂಡಳಿಯ ಮೂಲಕ ಅಥವಾ https://www.wccindia2023 ವೆಬ್ ಸೈಟ್ ಮೂಲಕ ನಿಗಧಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ರಿಯಾಯಿತಿ ದರದ ನೋಂದಣಿಗಾಗಿ ಕಾಫಿ ಬೆಳೆಗಾರರು ಹತ್ತಿರದ ಕಾಫಿ ಮಂಡಳಿ ಕಛೇರಿಯನ್ನು ಸಂಪರ್ಕಿಸುವುದು.
ಮುಖಾರಿಬ್ ಡಿ.ಎಸ್.
ಸಂಪರ್ಕ ಅಧಿಕಾರಿ
ಕಾಫಿ ಮಂಡಳಿ , ಗೋಣಿಕೊಪ್ಪಲು
ಮೊ: 9449063057