ಮಡಿಕೇರಿ: ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ ಸಿಗಬೇಕಾದರೆ ಬಾಲಗೋಕುಲ ಶಿಕ್ಷಣ ಅನಿವಾರ್ಯವಾಗಿದೆ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ಕೊಡುಗೆಯಾಗಿ ರೂಪಿಸಲು ಬಾಲಗೋಕುಲ ಶಿಕ್ಷಣದಿಂದ ಪ್ರೇರಣೆ ಲಭಿಸಲಿ ಎಂದು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಕೊಡಗು ಜಿಲ್ಲಾ ಪ್ರಮುಖರಾದ ರವಿ ಕುಶಾಲಪ್ಪನವರು ಹೇಳಿದರು.
ಅವರು ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಬಾಲ ಗೋಕುಲ ಮಡಿಕೇರಿ, ಕೊಡಗು ವತಿಯಿಂದ ಭಾರತೀಯ ವಿದ್ಯಾ ಭವನದಲ್ಲಿ 09-09-2023ರ ಶನಿವಾರದಂದು ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ರಾಧೆ ಛದ್ಮವೇಷ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಇವರು, ಹೆಜ್ಜೆ ಹೆಜ್ಜೆಗೂ ದೈವಿಕ ಚೈತನ್ಯದಿಂದ ಜೀವನವನ್ನು ನಡೆಸುವವರು. ಹಿರಿಯರು ಕೊಟ್ಟಿರುವ ಉತ್ತಮ ಸಂಪ್ರದಾಯ, ಜೀವನ ಪದ್ಧತಿಗಳು ಸ್ವಂತಕ್ಕೆ ಅಲ್ಲ. ಬದಲು ಲೋಕದ ಸಮಸ್ತ ಚರಾಚರಕ್ಕೆ ಸಮರ್ಪಿತ ಎಂದು ಅರಿತು, ಸಶಕ್ತ ಸಮಾಜದ ಮೂಲಾಧಾರವು ಪ್ರೀತಿ ಮತ್ತು ಸೇವೆಯಾಗಿದೆ ಎಂದರು. ನೈತಿಕ ವೌಲ್ಯ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಅಧ:ಪತನ ಉಂಟಾಗುತ್ತಿದ್ದು, ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣ, ಇದನ್ನು ಬೋಧಿಸುವ ವ್ಯವಸ್ಥೆಯೇ ಬಾಲಗೋಕುಲಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಮತ್ತಮ್ಮನವರು ಶ್ರೀ ಕೃಷ್ಣ ರಾಧೆ ಛದ್ಮವೇಷ ಸಮಾಗಮದಂತಹ ಕಾರ್ಯಕ್ರಮವು ನಮ್ಮ ಭಾರತೀಯ ಸಂಸ್ಕೃತಿಯನ್ನು ಜಾಗೃತಾವಸ್ಥೆಯಲ್ಲಿ ಇಡಲು ಒಂದು ಉತ್ತಮವಾದ ಕಾರ್ಯವಾಗಿದೆ. ಚಾರಿತ್ರ್ಯಕ್ಕೆ ಮಹತ್ವ ಕೊಡುವ ದೇಶಭಕ್ತರನ್ನು ರೂಪಿಸುವ, ಆಧ್ಯಾತ್ಮಿಕ, ಸಾಂಸ್ಕೃತಿಕ ಆದರ್ಶವನ್ನು ಮೈಗೂಡಿಸುವ ಶಿಕ್ಷಣವಿಂದು ಭಾರತಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲಗೋಕುಲದ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಂಗವಾಗಿ ಸರಿ ಸುಮಾರು 50 ಕಿಂತಲೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ರಾಧೆ ಛದ್ಮವೇಷದಾರಿಗಳಾಗಿ ಜೊತೆಗೆ 50 ಕ್ಕೂ ಹೆಚ್ಚು ಮಾತೆಯಂದಿರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಸಂಶನ ಪತ್ರ ಹಾಗೂ ಉಡುಗೊರೆಯನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕ ಭಕ್ತಿ ಗೀತೆ ಹಾಗೂ ಭಜನೆ ಗೀತಗಾಯನ ಕೂಡ ಏರ್ಪಡಿಸಲಾಗಿತ್ತು.