ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಅಕ್ಟೋಬರ್ 17 ಹಾಗೂ 18ರಂದು ನಡೆಯುವ ತುಲಾ ಸಂಕ್ರಮಣದ ಕಾವೇರಿ ತೀರ್ಥೋದ್ಭವ ಕ್ಷಣ ಅತ್ಯಂತ ಪವಿತ್ರವಾದದ್ದು ಹಾಗೂ ಸ್ಥಳೀಯವಾಗಿ ಇದು ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬ ಕೂಡ ಎನ್ನುವುದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಮರೆತು ಹೋದತಿದ್ದು ಇದೇ ದಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದ್ದು ಕೊಡಗು ಜಿಲ್ಲೆಯ ಹಳ್ಳಿಗಟ್ಟುವಿನಲ್ಲಿರುವ ಸಿಐಟಿ ಕಾಲೇಜು ಸೇರಿದಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರವಲ್ಲದೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಮತ್ತು ಪೋಷಕರಿಗೂ ಕಿರಿಕಿರಿ ಉಂಟಾಗಿದ್ದು ಈ ಕೂಡಲೇ ಈ ಎರಡು ದಿನಗಳ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸಬೇಕು ಎಂದು ಅಖಿಲ ಕೊಡವ ಸಮಾಜ ಹಾಗೂ ಅಂಗಸಂಸ್ಥೆಗಳು ಸಂಬಂಧಪಟ್ಟವರಿಗೆ ಪತ್ರ ಬರೆಯುವ ಮೂಲಕ ಎಚ್ಚರಿಸಿದ್ದು ಸ್ಥಳೀಯ ಸಿಐಟಿ ಕಾಲೇಜಿನ ಪ್ರಮುಖರ ಗಮನಕ್ಕೂ ತಂದಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ನಡೆಯನ್ನು ಖಂಡಿಸಿರುವುದಲ್ಲದೆ ಈ ಕೂಡಲೇ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸದಬೇಕು ಎಂದು ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವೇ ತೀರ್ಥೋದ್ಭವದ ಎರಡು ದಿವಸ ಅಂದರೆ ಅಕ್ಟೋಬರ್ 17 ಹಾಗೂ 18ರಂದು ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸುವ ಮೂಲಕ ಕಾವೇರಿ ಮಾತೆಗೆ ಕನಿಷ್ಟ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಸಿಐಟಿ ಕಾಲೇಜು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುತಿದ್ದು ಈಗಾಗಲೇ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹಾಗೂ ರಿಜಿಸ್ಟ್ರಾರ್’ಗೆ ಪತ್ರ ಬರೆದು ಮನವರಿಕೆ ಮಾಡಿಕೊಡುವ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ. ಅದರ ಪ್ರತಿಯನ್ನು ಸ್ಥಳೀಯ ಸಿಐಟಿ ಕಾಲೇಜಿಗೂ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಕಾವೇರಿ ನದಿ ನೀರಿನ ವಿಷಯ ಬಂದಾಗ ಕಾವೇರಿ ನಮ್ಮದು ಎಂದು ಬಾಯಿಬಾಯಿ ಬಡಿದುಕೊಳ್ಳುವ ಹಲವಾರು ಹೋರಾಟಗಾರರಿಗೆ ಕಾವೇರಿಯ ಮೂಲ ಸ್ಥಾನ ತಲಕಾವೇರಿಯ ಬಗ್ಗೆ ಹಾಗೂ ಅದರ ಪಾವಿತ್ರ್ಯತೆ ಬಗ್ಗೆ ಮತ್ತು ತೀರ್ಥೋದ್ಭವ ಬಗ್ಗೆ ದ್ವನಿ ಎತ್ತುವ ಕನಿಷ್ಟ ಸೌಜನ್ಯ ಇಲ್ಲದಿರುವುದು ವಿಷಾದನೀಯ. ನದಿ ನೀರಿನ ವಿಷಯ ಬಂದಾಗ ಮಾತ್ರ ಕಾವೇರಿಯ ಬಗ್ಗೆ ಎಲ್ಲಿಲ್ಲದ ಪ್ರೀತಿ ಉಕ್ಕಿಹರಿಯುವ ಇವರಿಗೆ ಕಾವೇರಿಯ ಮೂಲಸ್ಥಾನದ ಬಗ್ಗೆ ಇಲ್ಲಿ ನಡೆಯುತ್ತಿರುವ ಅಚಾತುರ್ಯ, ಅನಚಾರ, ಅವಮಾನಗಳ ಬಗ್ಗೆ ಎಂದಾದರೂ ದ್ವನಿ ಎತ್ತಿದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ತಲಕಾವೇರಿಯ ಬಗ್ಗೆ ಹಾಗೂ ಕೊಡಗಿನ ಬಗ್ಗೆ ಇಷ್ಟೊಂದು ಅಸಡ್ಡೆ ಸರಿಯಲ್ಲ ಈ ಕೂಡಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಬಹುತೇಕ ಶಾಲಾಕಾಲೇಜುಗಳಲ್ಲಿ ದಸರಾ ರಜೆ, ಕ್ರಿಸ್ಮಸ್ ರಜೆ ಸೇರಿದಂತೆ ಹಲವಾರು ರಜೆಗಳನ್ನು ವಿದ್ಯಾರ್ಥಿಗಳಿಗೆ ವಾರಗಟ್ಟಲೇ ತಿಂಗಳೂ ಗಟ್ಟಲೇ ನೀಡಲಾಗುತ್ತಿದೆ, ಆದರೆ ಕೊಡಗಿನ ವಿಷಯಕ್ಕೆ ಬಂದಾಗ ನಮ್ಮ ಹಬ್ಬಗಳಿಗೆ ರಜೆಗಾಗಿ ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಹಾಗೂ ಹೋರಾಟದ ಹಾದಿ ಹಿಡಿದು ರಜೆ ಪಡೆಯಬೇಕಾಗಿರುವುದು ದುರಂತ. ದಸರಾ ಕೊಡಗಿನ ನಾಡಹಬ್ಬ ಅಲ್ಲದಿದ್ದರೂ ಕೂಡ ಅದಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಅದನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ, ಇದಕ್ಕೆ ನಮ್ಮ ಯಾವುದೇ ತಂಟೆ ತಕರಾರು ಇಲ್ಲದೆ ಸ್ಪಂದಿಸುತ್ತಿದ್ದೇವೆ, ನಾವೇ ಮುಂದೆ ನಿಂತು ಆಚರಿಸುತ್ತೇವೆ. ಆದರೆ ಕೊಡಗು ಜಿಲ್ಲೆಯಲ್ಲಿ ಇಲ್ಲಿ ಹುಟ್ಟಿಬೆಳೆದ ಮೂಲ ನಿವಾಸಿಗಳ ಪ್ರಮುಖ ಹಬ್ಬವಾದ ಕಾವೇರಿ ಚಂಗ್ರಾಂದಿ, ಪುತ್ತರಿ, ಕೈ ಪೊಳ್ದ್’ಗಳಿಗೆ ಕೇವಲ ಒಂದು ದಿನ ಸಾರ್ವತ್ರಿಕ ರಜೆ ನೀಡಿ ಕೈ ತೋಳೆದುಕೊಳ್ಳುತ್ತಿರುವುದು ಸರಿ ಅಲ್ಲಾ. ಪ್ರಸ್ತುತ ವರ್ಷದಿಂದಲೇ ಅಕ್ಟೋಬರ್ 17 ಹಾಗೂ 18ರಂದು ನಡೆಯುವ ತುಲಾ ಸಂಕ್ರಮಣಕ್ಕೆ ಸರ್ಕಾರಿ ರಜೆ ನೀಡುವ ಮೂಲಕ ಮುಂದಿನ ಕ್ಯಾಲೆಂಡರ್ ವರ್ಷದಲ್ಲಿ ಶಾಶ್ವತವಾಗಿ ಈ ಹಬ್ಬ ಸೇರಿದಂತೆ ಕೊಡಗಿನ ಮೂರು ಪ್ರಮುಖ ಹಬ್ಬಗಳಿಗೂ ಎರಡೆರಡು ದಿವಸ ಸರಕಾರಿ ರಜೆ ನೀಡುವಂತಾಗಬೇಕು. ನಮಗೆ ಸಾರ್ವತ್ರಿಕ ರಜೆಯ ಅವಶ್ಯಕತೆ ಇಲ್ಲ, ಕಾವೇರಿ ನದಿ ನೀರನ್ನು ನಾವು ಸಾರ್ವತ್ರಿಕವಾಗಿ ಬಳಸುತ್ತಿಲ್ಲ ಕರ್ನಾಟಕ ಕೇರಳ ತಮಿಳುನಾಡು ಈ ಮೂರು ರಾಜ್ಯಗಳು ಕೂಡ ಕಾವೇರಿ ನದಿ ನೀರಿನ ಉಪಯೋಗವನ್ನು ಪಡೆದುಕೊಳ್ಳುತ್ತಿದೆ. ಒಂದು ರೀತಿಯಲ್ಲಿ ಇದಕ್ಕೆ ಕೇಂದ್ರ ಸರ್ಕಾರವೇ ರಜೆ ಘೋಷಿಸಬೆಕು. ಕನಿಷ್ಟ ರಾಜ್ಯ ಸರಕಾರವಾದರೂ ರಾಜ್ಯಾದ್ಯಂತ ರಜೆ ಘೋಷಿಸುವ ಮೂಲಕ ಕಾವೇರಿ ಮಾತೆಗೆ ಗೌರವ ನೀಡಬೇಕಿದೆ ಹಾಗೂ ಕಾವೇರಿ ನದಿ ನೀರಿನ ಋಣವನ್ನು ತೀರಿಸಲು ಮುಂದಾಗಬೇಕಿದೆ, ಈ ನಿಟ್ಟಿನಲ್ಲಿ ನಮ್ಮ ಶಾಸಕರುಗಳು ಸ್ಪಂದಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.