ಸಮುದಾಯ ಜೊತೆಯಲ್ಲಿದ್ದರೆ ಸಮಾಜದ ಸಮಸ್ಯೆ ಬಗೆಹರಿಸಲು ಸಾಧ್ಯ – ಶಾಸಕ ಮಂತರ್ ಗೌಡ
ನಾಪೋಕ್ಲು: ಸಮುದಾಯ ಜೊತೆಯಲ್ಲಿದ್ದಾಗ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಇಂದು ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ.ಯುವಜನರ ತಪ್ಪುಗಳನ್ನು ಪತ್ತೆ ಹಚ್ಚಿ ತಿದ್ದುವ ಕೆಲಸವನ್ನು ಹಿರಿಯರು ಮಾಡಬೇಕು. ಸಮುದಾಯದಲ್ಲಿ ಆಯೋಜಿಸಲಾಗುವ ಕ್ರೀಡಾಕೂಟಗಳು ಸಾಮರಸ್ಯವನ್ನು ಬೆಸೆಯುತ್ತವೆ. ಸೋಲು ಗೆಲುವು ಜೀವನದ ಭಾಗ. ಒಮ್ಮೆ ಗೆದ್ದವರು ಮತ್ತೊಮ್ಮೆ ಸೋಲಬಹುದು. ಸಾರ್ವಜನಿಕ ಸೇವೆಯಲ್ಲಿಯೂ ಏಳು ಬೀಳುಗಳು ಸಾಮಾನ್ಯ, ಶಾಸಕನಾಗಿ ನಾನು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು. ಸರ್ಕಾರ ರೈತರಿಗೆ 3 ಲಕ್ಷದಿಂದ ಐದು ಲಕ್ಷ ರೂಪಾಯಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪರ್ಧಾ ಸ್ಪಂದಿಸುವುದಾಗಿ ಹೇಳಿದರು.
ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ ಯುವಜನತೆ ದಾರಿ ತಪ್ಪುವುದನ್ನು ತಡೆಗಟ್ಟಲು ಪ್ರಮಾಣಿಕ ಪ್ರಯತ್ನ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ. ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಜಿಲ್ಲೆಯಲ್ಲಿ ಈಗಾಗಲೇ 20 ಮಂದಿ ಮಾದಕ ವಸ್ತು ಮಾರಾಟಗಾರರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದರು.
ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮಹಿಳಾ ಸಂಘಟನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ನಿವೃತ್ತ ಸುಬೇದಾರ್ ಬಾಳೆಯಡ ಅಪ್ಪಣ್ಣ, ಟ್ರೋಫಿ ದಾನಿ ಕೋಟೆರ ಪುಷ್ಪ ಚಂಗಪ್ಪ, ಮಣವಟ್ಟೀರ ಕಮಲ ಬೆಳ್ಯಪ್ಪ,ಕಟ್ಟಿ ಬೋಪಣ್ಣ, ಮುಕ್ಕಾಟಿರ ಶ್ವೇತಾ ರಾಜಪ್ಪ ಉಪಸ್ಥಿತರಿದ್ದರು. ಮಣವಟ್ಟೀರ ಜಾನ್ಸಿ ತಿಮ್ಮಯ್ಯ ಪ್ರಾರ್ಥಿಸಿದರು. ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಸಿ ಸೋಮಣ್ಣ ಸ್ವಾಗತಿಸಿ, ಮೀರಾ ವಂದಿಸಿದರು.
ಸ್ಪರ್ಧೆಯ ವಿಜೇತರು
0.22 ವಿಭಾಗದಲ್ಲಿ
ಪುತ್ತರಿರ ನಂಜಪ್ಪ ಪ್ರಥಮ,
ಚೆಪ್ಪುಡಿರ ದರ್ಶನ್ ಬೆಳ್ಯಪ್ಪ ದ್ವಿತೀಯ,
ಪಟ್ಟಮಾಡ ವಿಪಿನ್ ತೃತೀಯ,
12 ಬೋರ್ ವಿಭಾಗದಲ್ಲಿ
ಮಾಳೆಯಂಡ ಸುಬ್ಬಯ್ಯ ಪ್ರಥಮ,
ಅಜ್ಜಿಕುಟ್ಟೀರ ಗೌತಮ್ ದ್ವಿತೀಯ,
ಚೀಯಕಪೂವಂಡ ಸುಜಾ ತೃತೀಯ,
ಏರ್ ಗನ್ ವಿಭಾಗದಲ್ಲಿ
ಚೋನಿರ ಸಜನ್ ಪ್ರಥಮ,
ನೆಲ್ಲಿರ ಆರ್ಯನ್ ದ್ವಿತೀಯ,
ಪುಗ್ಗೇರ ರಾಜೇಶ್ ದ್ವಿತೀಯ,
ಮೂರು ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನ 15,000 ರೂ. ದ್ವಿತೀಯ ಬಹುಮಾನ 10,000 ರೂ.ಹಾಗೂ ದ್ವಿತೀಯ ಬಹುಮಾನ 7,000 ರೂ.ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ ಅವರನ್ನು ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಝಕರಿಯ ನಾಪೋಕ್ಲು