ಕುಶಾಲನಗರದ ಗಣಪತಿ ರಥೋತ್ಸವಕ್ಕೆ ಸಾಕ್ಷಿಯಾದ ಜನಸಾಗರ

Reading Time: 3 minutes

ಕುಶಾಲನಗರ: ಜಿಲ್ಲೆಯ ಐತಿಹಾಸಿಕ ರಥೋತ್ಸವ ಎಂದೇ ಹೆಸರಾಗಿರುವ ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಶ್ರೀ ಗಣಪತಿ ದೇವಾಲಯದ ರಥೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಜರುಗಿತು.
ಕಾರ್ತಿಕ ಬಹುಳ ತೃತೀಯ ದಿನವಾದ ಶುಕ್ರವಾರ ಮುಂಜಾನೆಯಿಂದಲೇ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥ ಪೂಜೆ ಹಾಗೂ ರಥಬಲಿ ಸೇರಿದಂತೆ ವಿವಿಧ ಪೂಜಾ ವಿಧಾನಗಳೊಂದಿಗೆ ಮಧ್ಯಾಹ್ನ ೧ ಗಂಟೆಗೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದಕ್ಷಿಣ ಭಾರತದಲ್ಲಿ ಎಲ್ಲಿಯೂ ಶ್ರೀ ಗಣಪತಿಗೆ ರಥೋತ್ಸವ ನಡೆದಿರುವ ಇತಿಹಾಸವಿಲ್ಲ. ಕೇವಲ ಕುಶಾಲನಗರದಲ್ಲಿ ಮಾತ್ರ ಈ ಗಣಪತಿ ರಥೋತ್ಸವ ಅದ್ದೂರಿಯಾಗಿ ವರ್ಷ ವರ್ಷ ನಡೆಯುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹರಿದು ಬಂದ ಜನಸಾಗರ: ರಥೋತ್ಸವದ ಸಮಯದ ಸಂದರ್ಭಕ್ಕೆ ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲು ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಹೆಚ್ಚಾಗಿ ಆಗಮಿಸಿದ್ದರಿಂದ ಉತ್ಸವಕ್ಕೆ ಜನಸಾಗರವೇ ಹರಿದು ಬಂದಂತಿತ್ತು.

ಅಯ್ಯಪ್ಪ ವ್ರತದಾರಿಗಳ ಹರ್ಷೊದ್ಗಾರ: ಉತ್ಸವಕ್ಕೆ ರಥವು ತಯಾರಾಗುತ್ತಿದ್ದಂತೆ ಸುತ್ತಮುತ್ತಲ ಊರುಗಳಿಂದ ಆಗಮಿಸಿದ್ದ ಅಯ್ಯಪ್ಪಸ್ವಾಮಿಯ ಸಾವಿರಾರು ವ್ರತದಾರಿಗಳು ಕರ್ಪೂರದಿಂದ ದೇವಾಲಯದ ಮುಂಭಾಗದಲ್ಲಿ ಓಂಕಾರ, ಸ್ವಸ್ತಿಕ್ ಚಿತ್ರಗಳನ್ನು ಕರ್ಪೂರದಿಂದ ಸಿಂಗರಿಸಿ, ಕರ್ಪೂರ ಜ್ಯೋತಿ ಬೆಳಗಿಸುವುದರ ಮುಖಾಂತರ ಹರ್ಷೋದ್ಗಾರ ವ್ಯಕ್ತಪಡಿಸಿದರು.

ತೆಂಗಿನಕಾಯಿ, ಈಡೂಗಾಯಿ: ವಾಡಿಕೆಯಂತೆ ಹರಕೆ ಹೊತ್ತ ಕಾಯಿಗಳಲ್ಲಿ ೫ ತೆಂಗಿನ ಕಾಯಿಗಳನ್ನು ಸಾಂಕೇತಿಕವಾಗಿ ಒಡೆದು, ಉಳಿದ ತೆಂಗಿನ ಕಾಯಿ ಅಥವಾ ಹಣವನ್ನು ಅನ್ನದಾನಕ್ಕೆ ನೀಡಲು ಭಕ್ತಾಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಸಹ ಮನವಿಗೆ ಮಣಿಯದ ಈಡೂಗಾಯಿ ಹರಕೆ ಹೊತ್ತ ಭಕ್ತಾಧಿಗಳು ಭಕ್ತಿಯಿಂದ ಉತ್ಸವ ಮೂರ್ತಿಯ ರಥ ಹೊರಡುತ್ತಿದಂತೆ ಒಂದು ಬದಿಯಲ್ಲಿ ಭಕ್ತಾಧಿಗಳು ತಮ್ಮ ಹರಕೆಯಂತೆ ಸಾವಿರಾರು ತೆಂಗಿನ ಕಾಯಿಗಳನ್ನು ಈಡೂಗಾಯಿ ಹೊಡೆಯುವ ಮುಖಾಂತರ ತಮ್ಮ ಹರಕೆ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಭಕ್ತಿಯಿಂದ ಒಡೆದ ತೆಂಗಿನಕಾಯಿಗಳನ್ನು ಕೆಲವರು ಬಾಚಿಕೊಳ್ಳುತ್ತಿದ್ದಾರಾದರು, ಜನಸಂದಣಿ ಹೆಚ್ಚಾಗುತ್ತಿದಂತೆ ತೆಂಗಿನ ಕಾಯಿಯನ್ನು ಚಪ್ಪಲಿ ಹಾಕಿಯೇ ತುಳಿಯುತ್ತಿದ್ದ ದೃಶ್ಯ ಕಂಡುಬಂದಿತು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತಾಧಿಗಳು ಬಾಳೆಹಣ್ಣು ರಥದ ಮೇಲೆ ಎಸೆದು ಭಕ್ತಿ ಮೆರೆದರು.
ಪೊಲೀಸ್ ಸಿಬ್ಬಂದಿಗಳು ಜನದಟ್ಟಣಿಯನ್ನು ನಿಯಂತ್ರಿಸುವಲ್ಲಿ ಸಫಲರಾದರು. ರಥೋತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮೀಸಲು ಸಶಸ್ತ್ರ ಪೊಲೀಸ್ ಪಡೆ ಎಚ್ಚರವಹಿಸಿದ್ದರು.

ಉತ್ಸವಕ್ಕೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ: ರಥೋತ್ಸವದ ನಂತರ ಊರಿನ ಎಲ್ಲಾ ಭಕ್ತಾಧಿಗಳು ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಸ್ಥಳೀಯ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಅನ್ನದಾನಕ್ಕೆ ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ಸರದಿ ಸಾಲಿ ನಿಂತ ಮಹಿಳೆಯರು ಮಕ್ಕಳು ಹಾಗೂ ರಥಬೀದಿಯ ವಾಸವಿ ಮಹಲ್‌ನಿಂದ ಗಾಯಿತ್ರಿ ಕಲ್ಯಾಣ ಮಂಟಪದವರೆಗೆ ನಿಂತ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ರಥೋತ್ಸವ ಕಾರ್ಯಕ್ರಮಗಳನ್ನು ದೇವಾಸ್ಥಾನ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತ್‌ಕುಮಾರ್, ವ್ಯವಸ್ಥಾಪಕರು ಶ್ರೀನಿವಾಸ್‌ರಾಯ್, ಕಾರ್ಯದರ್ಶಿ ಮುತ್ತಣ್ಣ ನಿರ್ದೇಶಕರು, ದೇವಾಲಯದ ವಿವಿಧ ಸಮಿತಿಗಳ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ: ಅಶ್ವತ್ ಕುಮಾರ್ ಎನ್.ಎ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments