ಅಯೋಧ್ಯೆ ಶ್ರೀ ರಾಮಮಂದಿರದ ಪುರಾಣ-ಇತಿಹಾಸ ಹಾಗೂ ಪ್ರಸ್ತುತ ಚಿತ್ರಣಗಳು

Reading Time: 17 minutes

ಅಯೋಧ್ಯೆ ಶ್ರೀ ರಾಮಮಂದಿರದ ಪುರಾಣ-ಇತಿಹಾಸ ಹಾಗೂ ಪ್ರಸ್ತುತ ಚಿತ್ರಣಗಳು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ತ್ರೇತಾಯುಗದಲ್ಲಿ ದಶರಥ ಮಹರಾಜ ಹಾಗೂ ರಾಣಿ ಕೌಸಲ್ಯಯ ಮಗನಾಗಿ ವಿಷ್ಣುವಿನ 7ನೇ ಅವತಾರವಾಗಿ ಶ್ರೀ ರಾಮಚಂದ್ರನು ಜನಿಸಿದನು. ಜನಕ ಮಹರಾಜ ಹಾಗೂ ರಾಣಿ ಸುನೈದಾರ ಮಗಳಾದ ಸೀತಾದೇವಿಯನ್ನು ಪ್ರಭು ಶ್ರೀರಾಮಚಂದ್ರನು ವರಿಸಿದನು. ಸೀತಾ ರಾಮರ ಮಕ್ಕಳಾಗಿ ಲವ-ಕುಶರೆಂಬ ಅವಳಿ ಮಕ್ಕಳು ಜನ್ಮ ತಾಳಿದರು. ಅಯೋದ್ಯಪತಿ, ಮರ್ಯಾದಾ ಪುರುಷೋತ್ತಮನಾದ ತನ್ನ ತಂದೆಯ ಹೆಸರಿನಲ್ಲಿ ಶ್ರೀರಾಮ ಮಂದಿರವನ್ನು ಕುಶನು ನಿರ್ಮಿಸಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ.

ಕಾಲಾ ನಂತರದಲ್ಲಿ ಶಿಥಿಲಗೊಂಡಿದ್ದ ಶ್ರೀರಾಮ ಮಂದಿರವನ್ನು ಉಜ್ಜಯನಿಯ ರಾಜ ವಿಕ್ರಮಾಧಿತ್ಯ ಆನಂತರ ರಾಣಿ ಅಹಲ್ಯಬಾಯಿ ಹೋಳ್ಳರ್‌ರಿಂದ ನವೀಕರಣಗೊಂಡಿತ್ತು. ಆ ನಂತರದಲ್ಲಿ ವಿದೇಶಿ ಧಾಳಿಕೋರರು ಭಾರತದ ಮೇಲೆ ಧಾಳಿ ನಡೆಸಿ ಭಾರತದಲ್ಲಿದ್ದ ಅಪಾರ ಸಂಪತ್ತನ್ನು ಲೂಟಿ ಮಾಡುತ್ತಿದ್ದರು.

ಅಂತೆಯೇ ಕ್ರಿ.ಶ. 1528 ರಲ್ಲಿ ವಿದೇಶಿ ಮೊಘಲ್ ಧಾಳಿಕೋರ ಬಾಬರನ ಸೇನಾಧಿಪತಿಯಾಗಿದ್ದ ಮೀರ್ ಬಾಕಿಯು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಮತಾಂಧ ಬಾಬರನ ಮಸೀದಿಯನ್ನು ನಿರ್ಮಿಸಿದ್ದನು.

ನಂತರ 1853 ರಲ್ಲಿ ಅಂದಿನ ಬ್ರಿಟೀಷ್ ಆಡಳಿತವು ಮುಸಲ್ಮಾನರಿಗೆ ಮಸೀದಿಯ ಒಳಭಾಗದಲ್ಲಿ ಹಿಂದುಗಳಿಗೆ ಮಸೀದಿಯ ಹೊರಭಾಗದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು.

1949 ರಲ್ಲಿ ವಿವಾದಿತ ಕಟ್ಟಡದೊಳಗೆ ಶ್ರೀರಾಮನ ಮೂರ್ತಿ ಪ್ರತ್ಯಕ್ಷವಾಯಿತು. ಆ ಸಂದರ್ಭ ಉತ್ತರ ಭಾರತ ಭಾಗಗಳಲ್ಲಿ ಸಾಧು-ಸಂತರು, ರಾಮಭಕ್ತರು ಅದೇ ಸ್ಥಳದಲ್ಲಿ ನಿತ್ಯಪೂಜೆ ಸಲ್ಲಿಸಲು ಹಾಗೂ ರಾಮಮಂದಿರ ನಿರ್ಮಿಸಲು ಬಲವಾದ ಒತ್ತಡ ಹೇರಿದರು. ಆದರೆ ಅಂದಿನ ಪ್ರಧಾನಿ ಜವಹರ್‌ಲಾಲ್ ನೆಹರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ್ ವಲ್ಲಬ್ ಪಂಥ್ ರವರು ಈ ಬೇಡಿಕೆಯನ್ನು ಬಲವಾಗಿ ತಿರಸ್ಕರಿಸಿದರು. ಮುಸ್ಲಿಂ ಓಟ್‌ ಬ್ಯಾಂಕ್‌ನ ಒಲೈಕೆಗಾಗಿಯೇ ಅಂದು ಬಹುಸಂಖ್ಯಾತರ ಬೇಡಿಕೆಗಳಿಗೆ ಆಡಳಿತರೂಢ ರಾಜಕಾರಣಿಗಳು ವಿರೋಧಿಸಿದರೆಂದು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.

ಪ್ರಧಾನಿ ನೆಹರು ಹಾಗೂ ಮುಖ್ಯಮಂತ್ರಿ ಗೋವಿಂದ್ ವಲ್ಲಬ್ ಪಂತ್ ರವರು ಸ್ಥಳೀಯ ಫಾಜಿಯಾಬಾದ್ (ಅಯೋದ್ಯ) ಜಿಲ್ಲಾಧಿಕಾರಿಯಾಗಿದ್ದ ಕೆ.ಕೆ. ನಾಯರ್ ರವರ ಮೇಲೆ ಒತ್ತಡ ಹೇರಿ ಕೂಡಲೇ ವಿವಾದಿತ ಕಟ್ಟಡದೊಳಗಿರುವ ಶ್ರೀರಾಮನ ವಿಗ್ರಹ ಹಾಗೂ ಸುತ್ತಮುತ್ತಲಿನ ಹಿಂದುಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು. ಆದರೆ ಯಾವುದೇ ಒತ್ತಡಗಳಿಗೆ ಮಣಿಯದೆ ಅಂದಿನ ದಕ್ಷ ಜಿಲ್ಲಾಧಿಕಾರಿ ಕೆ.ಕೆ. ನಾಯರ್ ರವರು ಸರಕಾರಿ ವೆಚ್ಚದಲ್ಲಿಯೇ ಶ್ರೀರಾಮನಿಗೆ ಅದೇ ಸ್ಥಳದಲ್ಲಿ ನಿತ್ಯ ಪೂಜೆ ಸಲ್ಲಿಸುವಂತೆ ಸರಕಾರಿ ಆದೇಶವನ್ನು ಹೊರಡಿಸಿದರು. ಇದರಿಂದ ಕೆಂಡಾಮಂಡಲರಾದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಕೆ.ಕೆ. ನಾಯ‌ರ್ ರವರನ್ನು ಸರಕಾರಿ ಸೇವೆಯಿಂದಲೇ ವಜಾಗೊಳಿಸಿದರು.

ಆದರೆ ಕೆ.ಕೆ.ನಾಯರ್ ರವರು ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಾಲಯದ ಆದೇಶ ಪಡೆದು ಅದೇ ಸ್ಥಳದಲ್ಲಿ ಕರ್ತವ್ಯಕ್ಕೆ ಬಂದರಲ್ಲದೇ ಪ್ರಧಾನಿ ನೆಹರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋವಿಂದ್ ವಲ್ಲಬ್ ಪಂತ್‌ರವರಿಗೆ ತೀವ್ರ ಮುಖಭಂಗವಾಗುವಂತೆ ಮಾಡಿದರು. ನಂತರ ಆಡಳಿತರೂಢ ಪಕ್ಷದ ರಾಜಕಾರಣಿಗಳು ಕೆ.ಕೆ. ನಾಯರ್ ರವರಿಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡಲಾರಂಭಿಸಿದಾಗ ಬೇಸತ್ತ ಕೆ.ಕೆ. ನಾಯರ್ ಕರ್ತವ್ಯಕ್ಕೆ ರಾಜಿನಾಮೆ ನೀಡಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದರು.

ಈ ಸಂದರ್ಭ ಸರಕಾರದ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿತು. 1952 ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರೇ ಕೆ.ಕೆ.ನಾಯರ್ ರವರ ಪತ್ನಿ ಶಕುಂತಲಾ ರವರನ್ನು ಚುನಾವಣೆಗೆ ನಿಲ್ಲಿಸಿ ಬಹುಮತದೊಂದಿಗೆ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. 1962 ರ ಲೋಕಸಭಾ ಚುನಾವಣೆಯಲ್ಲಿ ಕೆ.ಕೆ. ನಾಯರ್ ಮತ್ತು ಪತ್ನಿ ಶಕುಂತಲಾ ರವರನ್ನು ಸ್ಥಳೀಯರೇ ಚುನಾವಣೆಗೆ ನಿಲ್ಲಿಸಿ ಪ್ರಚಂಡ ಬಹುಮತದೊಂದಿಗೆ ಪತಿ- ಪತ್ನಿಯರಿಬ್ಬರನ್ನು ಲೋಕಸಭೆಗೆ ಗೆಲ್ಲಿಸಿ ಕಳುಹಿಸಿದ್ದರು. ಮಾತ್ರವಲ್ಲದೇ ಕೆ.ಕೆ.ನಾಯರ್ ರವರ ಕಾರು ಚಾಲಕನನ್ನು ವಿಧಾನಸಭೆಗೆ ಗೆಲ್ಲಿಸಿ ಕಳುಹಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದರು. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ನಾಯರ್ ದಂಪತಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಸ್ಥಳೀಯ ಜನಾಕ್ರೋಶಕ್ಕೆ ಮಣಿದ ರಾಜ್ಯ ಸರಕಾರ ಕೂಡಲೇ ದಂಪತಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿತು.

1977 ಸೆಪ್ಟೆಂಬರ್ 7 ರಂದು ಕೆ.ಕೆ. ನಾಯರ್ ನಿಧನರಾದರು. ನಿಧನದ ಸುದ್ದಿ ತಿಳಿದು ಇಡೀ ಅಯೋಧ್ಯೆಯೆ ಕಣ್ಣೀರಿಟ್ಟಿತ್ತು. ಜಿಲ್ಲಾಧಿಕಾರಿಯಾಗಿ ಕೆ.ಕೆ. ನಾಯರ್ ಹೊರಡಿಸಿದ್ದ ಸರಕಾರಿ ಆದೇಶದಿಂದಾಗಿಯೇ ಈ ತನಕವೂ ಅಯೋಧ್ಯೆ ಶ್ರೀರಾಮನಿಗೆ ನಿತ್ಯಪೂಜೆ ಸಲ್ಲಿಸಲು ಸಾಧ್ಯವಾಯಿತು. ಕೆ.ಕೆ. ನಾಯರ್ ರವರ ಪ್ರಮಾಣೀಕತೆ, ದಕ್ಷತೆ, ಸ್ವಾರ್ಥ ರಹಿತ ಕರ್ತವ್ಯದ ಕಾರಣದಿಂದಾಗಿ ಕೆ.ಕೆ. ನಾಯರ್ ಲಕ್ಷಾಂತರ ಜನರ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ.

ಶ್ರೀರಾಮ ಮಂದಿರ ಹೋರಾಟವನ್ನು ಚುರುಕುಗೊಳಿಸುವ ಸಲುವಾಗಿ 1982 ರಲ್ಲಿ ಆರ್.ಎಸ್.ಎಸ್. ನ ಹಿರಿಯ ಪ್ರಚಾರಕರಾಗಿದ್ದ ಅಶೋಕ್ ಸಿಂಘಾಲ್ ರವರನ್ನು ಸಂಘವು ವಿ.ಹೆಚ್.ಪಿ. ಗೆ ನಿಯುಕ್ತಿಗೊಳಿಸಿತು. 1984 ರಲ್ಲಿ ದೇಶದ 8 ದಿಕ್ಕುಗಳಿಂದ ಆರಂಭವಾದ ರಾಮ ಜಾನಕಿ ರಥಯಾತ್ರೆಯ ರಕ್ಷಣೆಗಾಗಿ ಅಂದು ಬಜರಂಗದಳ ಆರಂಭವಾಯಿತು.

1985 ರಲ್ಲಿ ದೇಶದ ಸಾಧು-ಸಂತರು ಮಠಾಧೀಶರನ್ನೊಳಗೊಂಡ ಧರ್ಮ ಸಂಸತ್ತು ಕರ್ನಾಟಕದ ಉಡುಪಿಯಲ್ಲಿ ನಡೆದು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿತ್ತು. ಆಗ ಬೆದರಿದ ಕೇಂದ್ರ ಸರ್ಕಾರ ಶ್ರೀರಾಮನ ಪೂಜೆಗೆ ಮತ್ತೆ ಅವಕಾಶ ನೀಡಿತು. 1988-89 ರಲ್ಲಿ ದೇಶದ್ಯಂತದಿಂದ ಪೂಜಿತ ಇಟ್ಟಿಗೆ ಸಂಗ್ರಹದೊಂದಿಗೆ ರಾಮಶಿಲಾ ಪೂಜೆ ನಡೆಯಿತು. ನಾಲ್ಕು ಲಕ್ಷ ಇಟ್ಟಿಗೆಗಳು ಅಯೋಧ್ಯೆಗೆ ತಲುಪಿದವು.

1989 ರ ನವೆಂಬರ್ 9 ರಂದು ಬಿಹಾರದ ವಿ.ಹೆಚ್.ಪಿ. ಮುಖಂಡರು ಪ್ರಸ್ತುತ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳು, ದಲಿತ ಬಂಧುಗಳಾದ ಶ್ರೀ ಕಾಮೇಶ್ವರ್ ಚೌಪಾಲ್ ರವರು ಅಯೋಧ್ಯೆಯಲ್ಲಿ ಮೊದಲ ಶಿಲಾನ್ಯಾಸ (ಭೂಮಿಪೂಜೆ) ನೆರವೇರಿಸಿದರು. ನೂರಾರು ಮಠಾಧೀಶರು, ಸ್ವಾಮೀಜಿಗಳು, ಸಾಧು ಸಂತರು, ರಾಮಭಕ್ತರು ಈ ಐತಿಹಾಸಿಕ ಕ್ಷಣವನ್ನು ಕಣ್ಣುಂಬಿಕೊಂಡರು. ಈ ನಡುವೆ ವಿವಾದಿತ ಭೂಮಿಯ ಒಡೆತನಕ್ಕಾಗಿ ಮತ್ತೇ ನಾಲ್ಕಾರು ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾದವು. “ಮಂದಿರ್ ವಹೀ ಬನಾಯೇಂಗೆ” (ಮಂದಿರವಲ್ಲೇ ಕಟ್ಟುವೆವು) ಎನ್ನುವ ರಾಮಭಕ್ತರ ಘೋಷವಾಕ್ಯವು ಇಡೀ ದೇಶದಾದ್ಯಂತ ಭಾರಿ ಜನಪ್ರಿಯಗೊಂಡಿತು. ಕರ್ನಾಟಕದಲ್ಲಿ ಈ ಘೋಷ ವಾಕ್ಯವು “ಪಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು” ಜನಪ್ರಿಯವಾಯಿತು.

ದೇಶಕ್ಕಾಗಿ ಬಲಿದಾನವಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮದಿನವಾದ ಸೆಪ್ಟೆಂಬರ್ 25, 1990 ರಂದು ಶ್ರೀ ಲಾಲ್‌ ಕೃಷ್ಣ ಅಡ್ವಾಣಿಯವರು ಗುಜರಾತಿನ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ. ಹೊರಭಾಗದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, 10,000 ಕಿ.ಮೀ. ಅಂತರದ ಸೋಮನಾಥೇಶ್ವರ-ಅಯೋಧ್ಯ ರಥಯಾತ್ರೆಗೆ ಆರಂಭಿಸಿದರು. ಆದರೆ ರಥಯಾತ್ರೆ ಕೊನೆಯ ಹಂತಕ್ಕೆ ತಲುಪುತ್ತಿದ್ದಾಗ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಸರಕಾರ ಎಲ್.ಕೆ. ಅಡ್ವಾಣಿಯವರನ್ನು ಬಿಹಾರದ ಸಮಷ್ಟಿಪುರ ಎಂಬಲ್ಲಿ ಬಂಧಿಸಿ 5 ವಾರಗಳ ಕಾಲ ಬಂಧನದಲ್ಲಿರಿಸಿತ್ತು. ಅಲ್ಲಿಗೆ ರಥಯಾತ್ರೆಯೂ ಕೊನೆಗೊಂಡಿತು. ಎಲ್.ಕೆ. ಅಡ್ವಾಣಿ ಬಂಧನ ಖಂಡಿಸಿ ದೇಶದಾದ್ಯಂತ ಬಿ.ಜೆ.ಪಿ. ಮತ್ತು ರಾಮಭಕ್ತರು ಪ್ರತಿಭಟನೆ ನಡೆಸಿದರು.

ಅಕ್ಟೋಬರ್ 30, 1990 ರಂದು ದೇಶದಾದ್ಯಂತ ರಾಮಭಕ್ತರು ಕರಸೇವೆಗಾಗಿ ಅಯೋಧ್ಯೆಗೆ ತಲುಪುವಂತೆ ಕರೆ ನೀಡಲಾಯಿತು. ಆದರೆ ಅಂದು ಕೇಂದ್ರ ಸರಕಾರದಲ್ಲಿ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ರವರು ರಾಮಭಕ್ತರು ಯಾವುದೇ ಕಾರಣಕ್ಕೂ ಅಯೋಧ್ಯೆ ತಲುಪದಂತೆ ರಾಜ್ಯದ ಎಲ್ಲಾ ಗಡಿಗಳನ್ನು ರಸ್ತೆಗಳನ್ನು ಬಂದ್ ಮಾಡಿಸಿದರು. 144 ಸೆಕ್ಷನ್ ಜಾರಿಗೊಳಿಸಿದರು. ಅಯೋಧ್ಯೆಯತ್ತ ತೆರಳುತ್ತಿದ್ದ ಸುಮಾರು ಎರಡೂವರೆ ಲಕ್ಷ ರಾಮಭಕ್ತರನ್ನು ಬಂಧಿಸಿ ಜೈಲು- ಶಾಲೆ-ಸರಕಾರಿ ಕಛೇರಿ ಸಭಾಂಗಣದಲ್ಲಿ ಕೂಡಿ ಹಾಕಲಾಯಿತು.

ಆದರೂ ಉತ್ತರಪ್ರದೇಶ ಸರಕಾರದ ಏಳು ಸುತ್ತಿನ ಕೋಟೆಯಂತಿದ್ದ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮುರಿದು ಅಕ್ಟೋಬರ್ 30 ರಂದು 50 ಸಾವಿರಕ್ಕೂ ಹೆಚ್ಚು ರಾಮಭಕ್ತರು ಅಯೋಧ್ಯೆಯ ವಿವಾದಿತ ಸ್ಥಳಕ್ಕೆ ನುಗ್ಗಿದರು. ಪೊಲೀಸರ ಲಾಠಿ ಚಾರ್ಜ್, ಗೋಲಿಬಾರ್ಗಗಳ ನಡುವೆಯೂ ಬಾಬರಿ ಮಸೀದಿಯ ಮೇಲೇರಿ ಭಗವಧ್ವಜವನ್ನು ಹಾಕಲಾಯಿತು ಈ ಸಂದರ್ಭ ಕೊಟ್ಟಾರಿ ಸಹೋದರರು ಪೊಲೀಸರ ಗುಂಡೇಟಿಗೆ ಬಲಿಯಾದರು. ಆ ನಂತರ 2-3 ದಿನಗಳ ಕಾಲ ಸರಕಾರದ ಸೂಚನೆಯ ಮೇರೆಗೆ ನಡೆದ ಗೋಲಿಬಾರ್, ಲಾಠಿಚಾರ್ಜ್ ನಿಂದಾಗಿ ಸಾವಿರಾರು ಜನರು ಪ್ರಾಣತೆತ್ತರು. ಉತ್ತರ ಪ್ರದೇಶ ಸರಕಾರವು ಕರಸೇವಕರು, ಸಾಧು ಸಂತರು ಸೇರಿದಂತೆ ನೂರಾರು ಮೃತದೇಹಗಳನ್ನು ಸರಾಯೂ ನದಿಗೆ ಎಸೆಯಿತು. ಮೊಸಳೆಗಳಿದ್ದ ಕೆರೆಗಳಿಗೆ ಮೃತದೇಹಗಳನ್ನು ಬಿಸಾಕಿತ್ತು. ದೇಶದಾದ್ಯಂತ ರಾಮಭಕ್ತರ ಅಕ್ರೋಶ ಮುಗಿಲು ಮುಟ್ಟಿತು.

ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಸರಕಾರ ನೆಲಕಚ್ಚಿತು. ಬಿ.ಜೆ.ಪಿ.ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿ ಕಲ್ಯಾಣ ಸಿಂಗ್ ರವರು ಮುಖ್ಯಮಂತ್ರಿಯಾದರು. ಕೇಂದ್ರದಲ್ಲಿ ಪಿ.ವಿ.ನರಸಿಂಹರಾವ್ ಪ್ರಧಾನಿಗಳಾದರು. ಮೊದಲ ಕರಸೇವೆಯ 2 ವರ್ಷಗಳ ಬಳಿಕ 1992 ಡಿಸೆಂಬರ್ 06 ರಂದು ಅಯೋಧ್ಯೆಯಲ್ಲಿ ಎರಡನೇ ಕರಸೇವೆ ನಡೆಸುವುದಾಗಿ ತೀರ್ಮಾನವಾಯಿತು. ಡಿಸೆಂಬರ್ 06 ರಂದು 4 ಲಕ್ಷಕ್ಕೂ ಅಧಿಕ ಕರಸೇವಕರು ಅಯೋಧ್ಯೆಗೆ ತಲುಪಿದ್ದರು. ನೋಡ ನೋಡುತ್ತಿದ್ದಂತೆಯೇ ಕಳಂಕಿತ ಕಟ್ಟಡದ ಮೂರು ಗುಂಬಸ್‌ಗಳನ್ನು ಕುಟ್ಟಿ ಪುಡಿಗಯ್ಯಲಾಯಿತು. ವಿವಾದಿತ ಬಾಬರಿ ಮಸೀದಿ ನೆಲಕ್ಕುರುಳಿತು. ರಾಮಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ನಂತರ ಕರಸೇವಕರೆಲ್ಲರೂ ತಮ್ಮ ತಮ್ಮ ಊರಿಗೆ ಮರಳಿದರು. ನಂತರ ಪಕ್ಕದಲ್ಲೇ ಶ್ರೀರಾಮನ ತಾತ್ಕಾಲಿಕ ಮಂದಿರವನ್ನು ಕರಸೇವಕರು-ಸಾಧು ಸಂತರು ನಿರ್ಮಿಸಿದರು. ಕರ್ನಾಟಕ ಉಡುಪಿ ಜಿಲ್ಲೆಯ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಾತ್ಕಾಲಿಕ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಷ್ಠಾಪಿಸಿ ಪೂಜೆ ಸಲ್ಲಿಸಿದರೂ ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಇನ್ನು ಮುಂದೆ ಈ ಸ್ಥಳದಲ್ಲಿ ಯಾರು ನಿತ್ಯ ಪೂಜೆ ಮಾಡಬೇಕು ಎಂಬುವುದನ್ನು ಲಿಖಿತವಾಗಿ ಬರವಣಿಗೆ ಮೂಲಕ ನೀಡಿದ ನಂತರವೇ ಇಲ್ಲಿಂದ ತೆರಳುವುದಾಗಿ ತಿಳಿಸಿ ಸತ್ಯಾಗ್ರಹಕ್ಕೆ ಕುಳಿತೇ ಬಿಟ್ಟರು. ಇದಾದ ಕೆಲ ಹೊತ್ತಿನಲ್ಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತವಾಗಿ ಆಶ್ವಾಸನೆ ನೀಡಿ ಪ್ರಸ್ತುತ ಪೂಜೆ ಸಲ್ಲಿಸುತ್ತಿರುವ ಪ್ರಧಾನ ಅರ್ಚಕರಾದ ಮಹಂತ್ ಸತ್ಯೇಂದ್ರ ದಾಸ್ ರವರನ್ನೇ ಅರ್ಚಕರಾಗಿ ನಿಯೋಜಿಸುತ್ತಿರುವುದಾಗಿ ಲಿಖಿತವಾಗಿ ತಿಳಿಸಿದ ನಂತರ ಸ್ವತಃ ಶ್ರೀಗಳೇ ಶ್ರೀರಾಮನಿಗೆ ಮೊದಲ ಆರತಿ ಬೆಳಗಿದ ನಂತರವೇ ಪೇಜಾವರ ಶ್ರೀಗಳು ಸ್ಥಳದಿಂದ ಹಿಂತೆರಳಿದರು.

ನಂತರ ಕೇಂದ್ರ ಸರಕಾರವು ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು 1992 ರಲ್ಲಿ ಅಬರಾನ್ ಆಯೋಗವನ್ನು ರಚಿಸಿ ಕಾಲಮಿತಿಯಲ್ಲಿ ವರದಿ ನೀಡುವಂತೆ ಸೂಚಿಸಿದ್ದರೂ ಅಬರಾನ್ ಆಯೋಗವು 48 ಭಾರಿ ಕಾಲ ವಿಸ್ತರಣೆ ಮಾಡಿ 17 ವರ್ಷ ಕಳೆದ ನಂತರ 2009 ರಲ್ಲಿ 900 ಪುಟಗಳ ವರದಿಯನ್ನು ಮನಮೋಹನ್ ಸಿಂಗ್ ಸರಕಾರಕ್ಕೆ ಸಲ್ಲಿಸಿತ್ತು. ನಂತರ ಕೋರ್ಟ್ ನಿರ್ದೇಶನದಂತೆ ವಿವಾದಿತ ಸ್ಥಳದಲ್ಲಿ ಉತ್ಪನನ ನಡೆಸಿದ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ (A.S.I.) ಯ ಪುರಾತತ್ವ ಶಾಸ್ತ್ರಜ್ಞರಾದ ಪದ್ಮಶ್ರೀ ಶ್ರೀ ಕೆ.ಕೆ. ಮೊಹಮ್ಮದ್ ರವರು ಸ್ಥಳದಲ್ಲಿ ಪುರಾತನ ದೇವಾಲಯವಿದ್ದುದಕ್ಕೆ ಬಲವಾದ ಸಾಕ್ಷಿಗಳ ಸಮೇತ ಕೋರ್ಟ್‌ಗೆ 2003 ರಲ್ಲಿ ವರದಿ ನೀಡಿದ್ದರು. ಈ ಮಧ್ಯೆ 2002 ಫೆಬ್ರವರಿ 27 ರಂದು ಗುಜರಾತ್‌ನಿಂದ ಅಯೋಧ್ಯೆಗೆ ಬಂದಿದ್ದ ಕರಸೇವಕರು ಹಿಂತೆರಳುತ್ತಿದ್ದಾಗ ಗೋಧ್ರಾ ಬಳ 58 ರಾಮಭಕ್ತರಿದ್ದ ಬೋಗಿಗೆ ಮತಾಂಧ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಹೊರಗಿನಿಂದ ಲಾಕ್ ಮಾಡಿ ಬೆಂಕಿ ಹಚ್ಚಿ 58 ರಾಮಭಕ್ತರನ್ನು ಸಜೀವ ದಹನ ಮಾಡುವ ಮೂಲಕ ವಿಕೃತಿ ಮೆರೆದರು. ಇದಕ್ಕೆ ಪ್ರತಿಕಾರವಾಗಿ ಸಾವಿರಾರು ಸಂಖ್ಯೆಯ ಮುಸಲ್ಮಾನರು ಪ್ರಾಣ ತೆರಬೇಕಾಯಿತು. 2005 ರಲ್ಲೂ ಭಯೋತ್ಪದಕರು ಅಯೋಧ್ಯೆಯ ತಾತ್ಕಾಲಿಕ ಶ್ರೀರಾಮ ಮಂದಿರದ ಮೇಲೆ ವಿಫಲ ಧಾಳಿ ನಡೆಸಿದ್ದರು.

2010 ರ ಸೆಪ್ಟೆಂಬರ್ 30 ರಂದು ಅಲಹಬಾದ್ ಹೈಕೋರ್ಟ್ ತನ್ನ ತೀರ್ಪು ನೀಡಿ ವಿವಾದಿತ ಸ್ಥಳವನ್ನು 3 ಭಾಗಗಳಾಗಿ ವಿಂಗಡಿಸಿ ಹಂಚಿಕೆ ಮಾಡಿಕೊಳ್ಳುವಂತೆ ಆದೇಶಿಸಿತು. ಒಂದು ಭಾಗವನ್ನು ವಿ.ಜೆ.ಪಿ. ನೇತೃತ್ವದ ಟ್ರಸ್ಟ್ಗೂ ಎರಡನೇ ಭಾಗವನ್ನು ನಿರ್ಮಾಹಿ ಅಖಾಡಕ್ಕೂ ಮೂರನೇ ಭಾಗವನ್ನು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಸ್ ಬೋರ್ಡ್‌ ಗೂ ಹಂಚಿಕೆಗೆ ಆದೇಶಿಸಿತ್ತು. ನಂತರ ಪ್ರಕಣದ ಮೇಲ್ಮನವಿ ವಿಚಾರಣೆ ಸುಪ್ರೀಂ ಕೋರ್ಟ್‌ ನಲ್ಲಿ ನಡೆದು ಮಾತುಕತೆಯ ಮೂಲಕ ವಿವಾದ ಬಗೆಹರಿಸಲು ಅವಕಾಶ ನೀಡಿತ್ತಾದರೂ ವಿವಾದ ಬಗೆಹರಿಯಲಿಲ್ಲ. ನಂತರ 2019 ರ ಸೆಪ್ಟೆಂಬರ್ 05 ರಿಂದ ಅಕ್ಟೋಬರ್ 16 ರ ತನಕ ನಿರಂತರ 40 ದಿನಗಳ ಕಾಲ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆ ವಾದ ವಿವಾದಗಳು ನಡೆದವು. 2019 ಅಕ್ಟೋಬರ್ 16 ರ ತನಕ ನಿರಂತರ 40 ದಿನಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ನಡೆದ ವಾದ ವಿವಾದಗಳ ಸಂದರ್ಭ 93 ರ ಹರೆಯದ ಹಿರಿಯ ವಕೀಲ ಶ್ರೀ ಕೇಶವ ಪರಶಾರನ್ ದಿನಪೂರ್ತಿ ನಿಂತುಕೊಂಡೆ ಲವ ಲವಿಕೆಯಿಂದ ಶ್ರೀರಾಮ ಮಂದಿರದ ಪರವಾಗಿ ತಮ್ಮ ವಾದ ಮಂಡಿಸಿದ್ದರು. ರಾಮಸೇತು, ಶಬರಿ ಮಲೆ ಪ್ರಕರಣಗಳಲ್ಲಿ ಶ್ರೀ ಕೇಶವ ಪರಶಾರನ್ ತಮ್ಮ ಪ್ರಬಲ ವಾದವನ್ನು ಮಂಡಿಸಿ ಹಿಂದುಗಳ ಪರವಾದ ತೀರ್ಪು ಬರುವಂತೆ ಮಾಡಿದ್ದರು. 2019 ರ ನವೆಂಬರ್ 09 ರಂದು ಶ್ರೀ ರಾಮ ಮಂದಿರದ ಪರವಾಗಿ ಸರ್ವೋಚ್ಛ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿತ್ತು. ಕೋರ್ಟ್ ಆವರಣದಲ್ಲಿ ಶ್ರೀರಾಮ ಭಕ್ತರ ಅಭಿನಂದನೆಗಳ ಮಹಾಪೂರವನ್ನು ಕಣ್ಣುಂಬಿಕೊಂಡ ವಕೀಲರು ನ್ಯಾಯಾಲಯದಿಂದ ದೆಹಲಿಯ ತನ್ನ ಪ್ಲಾಟ್‌ ಗೆ ಹಿಂತೆರಳಿದ ಸಂದರ್ಭ ಆಶ್ಚರ್ಯ ಕಾದಿತ್ತು. ಅಂದಿನವರೆಗೂ ಸುತ್ತ ಮುತ್ತ ಎಲ್ಲೂ ಕಾಣಿಸಿಕೊಳ್ಳದೇ ಇದ್ದ ನೂರಾರು ಮಂಗಗಳು ಕೇಶವ ಪರಶಾರನ್‌ರ ಪ್ಲಾಟ್‌ನ ಸುತ್ತಲೂ ಮರದಿಂದ ಮರಕ್ಕೆ ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುತ್ತಾ ಖುಷಿಪಡುತ್ತಿದ್ದುದ್ದು ಸ್ವತಃ ಕೇಶವರನ್ನೇ ಅಭಿನಂಧಿಸಲು ನೆರೆದಂತೆ ಭಾಷವಾಗುತ್ತಿತ್ತು. ಅಯೋಧ್ಯೆಯಲ್ಲಿ ಇಂದು ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲು ಯಾರಿಂದಲೂ ನಯಾ ಪೈಸೆ ಸಂಭಾವನೆ ಪಡೆಯದೆ ಸೇವೆಗೈದ ಶ್ರೀರಾಮನ ಪರಮ ಭಕ್ತರಾದ ಶ್ರೀ ಕೇಶವ ಪರಶಾರನ್‌ರವರ ಕೊಡುಗೆ ಅತ್ಯಮೂಲ್ಯವಾದುದ್ದು.

ಈ ಮಧ್ಯೆ ಅಯೋಧ್ಯೆಯಲ್ಲಿನ ವಿವಾದಿತ ಮಸೀದಿ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿ.ಬಿ.ಐ. ವಿಶೇಷ ನ್ಯಾಯಾಲಯವು ಎಲ್.ಕೆ. ಅಡ್ವಾಣಿ ಮುರುಳಿ ಮನೋಹರ್ ಜೋಷಿ, ಉಮಾ ಭಾರತಿ, ಬಾಳ್‌ ಠಾಕ್ರೆ, ವಿನಯ್ ಕಟಿಯಾರ್, ಆಚಾರ್ಯ ಗಿರಿರಾಜ್ ಕಿಶೋರ್……. ಸೇರಿದಂತೆ 49 ಆರೋಪಿಗಳನ್ನು ದೋಷಮುಕ್ತಗೊಳಿಸಿ ಸೆಪ್ಟೆಂಬರ್ 30. 2020 ರಂದು ತೀರ್ಪು ನೀಡುವ ಮೂಲಕ ಅಂದಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರೆಲ್ಲರೂ ನಿರಾಳರಾದರು. ಸುಧೀರ್ಘ 500 ವರ್ಷಗಳ ಕಾಲ ನಡೆದ ಅಯೋಧ್ಯೆ ಶ್ರೀರಾಮ ಮಂದಿರದ ಹೋರಾಟದಲ್ಲಿ 76 ಬಾರಿ ಯುದ್ಧಗಳು ನಡೆದಿದ್ದು, ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ಇತ್ತೀಚೆಗೆ 1990 ರಲ್ಲಿ ವೋಟ್ ಬ್ಯಾಂಕ್ ತುಷ್ಟಿಕರಣಕ್ಕಾಗಿ ಅಂದಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತಿರೇಕದ ನಿರ್ಧಾರ ಕೈಗೊಂಡ ಕಾರಣ ನೂರಾರು ಕರಸೇವಕರು ಪ್ರಾಣ ಕಳೆದುಕೊಂಡರಲ್ಲದೆ ದೇಶದಾದ್ಯಂತ ಕೋಮು ಗಲಭೆಗಳು ನಡೆಯುವಂತಾಯಿತೆಂದು ಇತಿಹಾಸ ತಜ್ಞರು ವಿಶ್ಲೇಷಿಸಿದ್ದಾರೆ.

1990 ಹಾಗೂ 1992 ರ ಕರಸೇವೆಗಳಲ್ಲಿ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಮುರುಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಠಿಯಾರ್, ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮಿಗಳು, ಪ್ರಮೋದ್ ಮಹಾಜನ್, ನರೇಂದ್ರ ಮೋದಿ, ಕಲ್ಯಾಣ್ ಸಿಂಗ್, ಅಶೋಕ್ ನಿಂಘಾಲ್, ಎಂ.ಬಿ ಪುರಾಣಿಕ್, ಕಲ್ಲಡ್ಕ ಪ್ರಭಾಕರ್ ಭಟ್, ಸತ್ಯಜಿತ್ ಸುರತ್ಕಲ್. ಕೊಡಗಿನ ಚಿ.ನಾ ಸೋಮೇಶ್, ಸೇರಿದಂತೆ ಲಕ್ಷಾಂತರ ರಾಮಭಕ್ತರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಾಲ್ಗೊಂಡಿದ್ದರು. ಆ ಮೂಲಕ ಇಂದು ಸುಮಾರು 500 ವರ್ಷಗಳ ಹೋರಾಟ, ತ್ಯಾಗ ಬಲಿದಾನಗಳ ಮೂಲಕ ಅಯೋಧ್ಯೆಯಲ್ಲಿ ಅತ್ಯಾಧುನಿಕ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ.

ಮೈಸೂರಿನ ಪ್ರಸಿದ್ದ ಶಿಲ್ಪಿ ಅರುಣ್‌ ಯೋಗಿರಾಜ್‌ರವರು ಹೆಚ್.ಡಿ. ಕೋಟೆಯಿಂದ ತರಲಾದ 19 ಟನ್ ತೂಕದ ವಿಶೇಷ ಶಿಲೆಯಿಂದ ಕೆತ್ತಿರುವ ರಾಮಲಲ್ಲಾನ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಜನವರಿ 22 ರಂದು ಪ್ರಾಣಪ್ರತಿಷ್ಟೆ ಮಾಡಲು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದ್ದು. ಜನವರಿ 16 ರಿಂದ 7 ದಿನಗಳ ಕಾಲ ದೈವಿಕ ವಿಧಿ ವಿಧಾನಗಳು ಪೂಜೆಗಳು ನಡೆಯುತ್ತವೆ. 1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಸಂದರ್ಭ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದ ಅರ್ಚಕರಾದ ಶ್ರೀ ಮಹಂತ ಸತ್ಯೇಂದ್ರದಾಸ್ (84 ವರ್ಷ) ರವರನ್ನೇ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ಮುಂದುವರೆಸಲಾಗಿದೆ. 70 ಏಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ 2.7 ಏಕ್ರೆ ಜಾಗವು ದೇವಾಲಯದ ಸಂಕೀರ್ಣವನ್ನೊಳಗೊಂಡಿದ್ದು. 57,400 ಚದರ ಅಡಿ ವಿಸ್ತೀರ್ಣದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಭೂಕಂಪನ ಸಂಭವಿಸಿದಾಗಲೂ ದೇವಾಲಯಕ್ಕೆ ಯಾವುದೇ ಹಾನಿ ಸಂಭವಿಸದಂತೆ 45 ಅಡಿಯಷ್ಟು ಭೂಮಿಯ ತಳಭಾಗದಿಂದ ಕಾಂಕ್ರೀಟ್ ಹಾಕಲಾಗಿದ್ದು. ದೇವಾಲಯದ ಮೇಲ್ಬಾಗದಲ್ಲಿ ಒಂದಿಷ್ಟು ಸಹ ಸಿಮೆಂಟ್ ಬಳಸದೆ ಮಂದಿರ ನಿರ್ಮಾಣ ಮಾಡಲಾಗಿದೆ. ದೇವಾಲಯದ ಗೋಡೆ. ನೆಲ, ಕೆತ್ತನೆಗಳನ್ನು ಭಕ್ತರು ಮುಟ್ಟಿದಾಗಲೂ ಕೊಳೆಯಾಗದಂತೆ ರಾಸಾಯನಿಕ ದ್ರವ್ಯಗಳನ್ನು ಲೇಪನ ಮಾಡಲಾಗಿದೆ. ದಿನದ 24 ಗಂಟೆ ವಿದ್ಯುತ್ ಸರಬರಾಜು ಇರುವಂತೆ ಪ್ರತ್ಯೇಕ ವಿದ್ಯುತ್ ಸರಬರಾಜು ಕೇಂದ್ರವನ್ನೇ ಆವರಣದಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಆವರಣದಲ್ಲೇ ತುರ್ತು ಚಿಕಿತ್ಸಾ ಕೇಂದ್ರಗಳಿದ್ದು, ತಜ್ಞ ವೈದ್ಯರುಗಳನ್ನು ನೇಮಿಸಲಾಗಿದೆ. ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯದ ವ್ಯವಸ್ಥೆಗಳು, ವಾಷಿಂಗ್ ಬೇಸನ್‌ಗಳು ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ದೇವಾಲಯದ ಗೋಡೆ ಹಾಗೂ ಕಂಬಗಳ ಮೇಲೆ ದೇವಾನುದೇವತೆಗಳನ್ನು ಕೆತ್ತಲಾಗಿದೆ. ಶ್ರೀರಾಮನ ಸಿಂಹಾಸನ, ಕಿರೀಟ, ಪಾದುಕೆ, ಬಾಗಿಲುಗಳ ತಯಾರಿಯಲ್ಲಿ ಕ್ವಿಂಟಾಲ್‌ ಗಟ್ಟಲೆ ಚಿನ್ನ, ಬೆಳ್ಳಿ ಲೋಹ ಬಳಸಲಾಗಿದ್ದು, ಅತ್ಯಾಕರ್ಷವಾಗಿ ರಚಿಸಲಾಗಿದೆ. ರಾಮಾಯಣಕ್ಕೆ ಸಂಬಂಧಿಸಿದ ನೈಜ ಪಾತ್ರಗಳ ಮೂರ್ತಿ ಹಾಗೂ ದೇವಾಲಯಗಳನ್ನು ದೇವಾಲಯದ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ.15 ಸದಸ್ಯರನ್ನೊಳಗೊಂಡ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಮೂಲಕ ಬಡ ಮಕ್ಕಳ ಶಿಕ್ಷಣ, ಗೋಸೇವೆ, ಆಸ್ಪತ್ರೆ, ನಿರ್ಗತಿಕರಿಗೆ ಮನೆ ಸೇರಿದಂತೆ ಹತ್ತು ಹಲವು ಸಮಾಜಸೇವಾ ಕಾರ್ಯಗಳನ್ನು ನಡೆಸಲು ಸಿದ್ಧತೆ ನಡೆದಿದೆ. ಅಯೋಧ್ಯೆಗೆ ಸಂಬಂಧಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಈಗಾಗಲೇ 18,000 ಕೋಟಿ ಹಣವನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ಶ್ರೀರಾಮನ ದರ್ಶನಕ್ಕೆ ಬರುವ ರಾಮಭಕ್ತರಿಗೆ ಯಾವುದೇ ಕೊರತೆಗಳಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.

ಜನವರಿ 22, 2024 ರ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆಯ ಅವಧಿಯೊಳಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ರಾಮಲಲ್ಲಾ (ಬಾಲರಾಮ)ನ ನೂತನ ವಿಗ್ರಹ ಪ್ರಾಣಪ್ರತಿಷ್ಠೆಯಾಗಲಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ. ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಜಿ. ಭಾಗವಾತ್, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ದೇಶದ ನಾನಾ ಭಾಗಗಳ ಮಠಾಧೀಶರು, ಸಾಧು ಸಂತರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡಲಿದ್ದು, ದೇಶದಾದ್ಯಂತ ದೇವಾಲಯಗಳಲ್ಲಿ ಜನವರಿ 22 ರಂದು ವಿಶೇಷಪೂಜೆ, ಭಜನೆ, ರಾಮಜಪ, ದೀಪಾರಾಧನೆ. ಅನ್ನದಾನ ಕಾಯಕ್ರಮಗಳು ನಡೆಯಲಿವೆ. 500 ವರ್ಷಗಳ ಕನಸ್ಸು ನನಸ್ಸಾಗುತ್ತಿರುವ ಕ್ಷಣವನ್ನು ಇಡೀ ದೇಶವೇ ಕಣ್ಣುಂಬಿಕೊಂಡು ಸಂಭ್ರಮಿಸಲು ಕಾತರಿಸುತ್ತಿದೆ.

ಲೇಖನ:
ಟಿ.ಎ. ಕುಮಾರ್
ಹಿಂದು ಜಾಗರಣ ವೇದಿಕೆ
ಕೊಡಗು : 9845178711

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments