ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ 1998 ರಿಂದ 2000 ಶೈಕ್ಷಣಿಕ ವರ್ಷದಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾಚೆಟ್ಟಿರ ಶ್ರೀ ಮಾದಪ್ಪ, ಉಪಾಧ್ಯಕ್ಷರಾದ ಪುದಿಯೋಕ್ಕಡ ಸುಬ್ರಮಣಿ, ಖಜಾಂಚಿಯವರಾದ ಬಡುವಂಡ ಶ್ರೀ ಸುಬ್ರಮಣಿ ಅವರು ಸೇರಿದಂತೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗು ಹಳೆಯ ವಿದ್ಯಾರ್ಥಿ ಮತ್ತು ಪ್ರಸಕ್ತ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಕುಶನ್ ಬಿ.ಎಸ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಳೆಯ ವಿದ್ಯಾರ್ಥಿ ಸತೀಶ್ ಅವರು ಮಾತನಾಡಿ ಈ ವಿದ್ಯಾಸಂಸ್ಥೆಯಲ್ಲಿ ಓದಿದ ಹೆಮ್ಮೆ ನಮಗಿದೆ. ಸ್ವಚ್ಚ ಭಾರತ ಕಲ್ಪನೆಯಡಿ ಈ ಶೌಚಾಲಯ ನಿರ್ಮಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಇನ್ನಷ್ಟು ಕೊಡುಗೆಗಳನ್ನು ನೀಡುವ ಶಕ್ತಿ ನಮಗೆ ಲಭ್ಯವಾಗಲಿ ಎಂದು ನುಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷರು ಮಾತನಾಡಿ ಹಳೆಯ ವಿದ್ಯಾರ್ಥಿಗಳು ಒಂದು ಸಣ್ಣ ಆರಂಭವನ್ನು ಮಾಡಿದ್ದೀರಿ. ವಿದ್ಯಾಸಂಸ್ಥೆಯ ಮೇಲಿನ ಅಭಿಮಾನ ಮೆಚ್ಚುವಂತದ್ದು. ಮುಂದೆ ಇನ್ನಷ್ಟು ಕೊಡುಗೆಗಳು ಬಂದು ವಿದ್ಯಾಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ನಂತರ ಶೌಚಾಲಯವನ್ನು ಅಧಿಕೃತವಾಗಿ ವಿದ್ಯಾಸಂಸ್ಥೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. 1998-2000 ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಕಲಾವಿಭಾಗದ ವಿದ್ಯಾರ್ಥಿ, ಈಗ ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಹರೀಶ್ ಕಿಗ್ಗಾಲು ಅವರು ಸ್ವಾಗತಿಸಿ ನಿರೂಪಿಸಿದರು.