ಪಪಾಯ Papaya

Reading Time: 7 minutes

ಪಪಾಯ

ಪಪಾಯ (Carica papaya. Family- Caricaceae) ಬೆಳೆಯನ್ನು ಅದರ ಸ್ವಾದಿಷ್ಟಭರಿತ ಹಣ್ಣು ಹಾಗೂ ಅದರಲ್ಲಿ ದೊರಕತಕ್ಕಂತಹ ಹಾಲಿನಂತ ದ್ರವ ಪಪೀನಿಗಾಗಿ ಉಷ್ಣವಲಯದಲ್ಲಿ ಬೆಳೆಯುತ್ತಾರೆ. ಇದರ ಉಗಮ ಸ್ಥಾನ ಮೆಕ್ಸಿಕೊ. ವಿಟಮಿನ್ ಎ ಮತ್ತು ಖನಿಜಾಂಶಗಳ ಅಗರವಾಗಿದೆ. ಪಚನಕಾರಿ ಗುಣವನ್ನು ಹೊಂದಿದ್ದು, ಒಂದು ಕಿತ್ತಳೆ ಹಣ್ಣಿನಲ್ಲಿ ಸಿಗುವಷ್ಟೆ ವಿಟಮಿನ್ ಸಿ ಅನ್ನು ಸಹ ಒಳಗೊಂಡಿದೆ. ವಿಟಮಿನ್ ಎ ಅಂಧತ್ವ ನಿವಾರಣೆಯಲ್ಲಿ ಸಹಕಾರಿ. ಪಪಾಯ ಹಣ್ಣನ್ನು ಪೈಲ್ಸ್, ಪಿತ್ತಜನಕಾಂಗದ ತೊಂದರೆ, ಡಿಪ್ತೀರಿಯ ಮತ್ತು ಚರ್ಮದ ತೊಂದರೆಗಳಲ್ಲಿ ಔಷಧವಾಗಿ ಬಳಸುತ್ತಾರೆ. ಪಪೀನನ್ನು ಚರ್ಮ ಹದಗೊಳಿಸಲು ಚರ್ಮದ ಉದ್ದಿಮೆಯಲ್ಲಿ ಉಪಯೋಗಿಸುತ್ತಾರೆ. ಪಪಾಯ ವೆಸ್ಟ್ ಇಂಡೀಸಿನಿಂದ ಮಲೇಸಿಯದ ಮೂಲಕ 16ನೆ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟಿತ್ತು. ಭಾರತದಲ್ಲಿ ಪಪಾಯ ಹಣ್ಣನ್ನು ಕರ್ನಾಟಕ, ಮಹಾರಾಷ್ಥ್ರ, ತಮಿಳುನಾಡು, ಆಂದ್ರಪ್ರದೇಶ, ಗುಜರಾತ್, ಒರಿಸ್ಸಾ, ಉತ್ತರ ಪ್ರದೇಶ, ಪ. ಬಂಗಾಳ ಮತ್ತು ಅಸ್ಸಾಂನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಪ್ರಪಂಚದಲ್ಲಿ ಒಟ್ಟು 6 ಮಿಲಿಯನ್ ಟನ್ ಹಣ್ಣು ಉತ್ಪಾದನೆಯಾದರೆ, ಅದಕ್ಕೆ ಭಾರತದ ಕೊಡುಗೆ ಶೇ. 50 ರಷ್ಟು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹವಾಗುಣ ಮತ್ತು ಮಣ್ಣು
ಉಷ್ಣವಲಯ ಮತ್ತು ಸಮಶೀತೋಷ್ಣವಲಯದಲ್ಲಿ, ಸಮುದ್ರ ಮಟ್ಟದಿಂದ 1000 ಮೀ ಗಿಂತ ಕಡಿಮೆ ಎತ್ತರದ ಪ್ರದೇಶದಲ್ಲಿ, ಉಷ್ಣಾಂಶ 350 ರಿಂದ 450 ಸೆ. ಇದ್ದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ವೇಗವಾಗಿ ಬೆಳೆಯುವ ಗಿಡವಾದ್ದರಿಂದ ನೀರು ಬಸಿದುಹೋಗತಕ್ಕಂಥ ಉತ್ತಮ ಗುಣಮಟ್ಟದ ಮಣ್ಣನ್ನು ಬಯಸುತ್ತದೆ. ಸಪೂರ ಪೋಷಕಾಂಶ ಮತ್ತು ನೀರನ್ನು ಒದಗಿಸುವುದರಿಂದ ಕಡಿಮೆ ಗುಣಮಟ್ಟದ ಮಣ್ಣಿನಲ್ಲೂ ಉತ್ತಮ ಬೆಳೆಯನ್ನು ಪಡೆಯಬಹುದು. ಗಿಡದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು.

ತಳಿಗಳು
ಐಎಆರ್‍ಐಯ ಪೂಸ ಡ್ವಾರ್ಪ್, ಪೂಸ ಡೆಲಿಸಿಯಸ್, ಪೂಸ ಜೆಯಿಂಟ್. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಸೂರ್ಯ, ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯ ಕೂರ್ಗ್ ಹನಿ ಡ್ಯೂ ಮತ್ತು ಥೈವಾನ್, ಸನ್ ರೈಸ್ ಸೋಲೊ, ಸಿಒ-1, ಸಿಒ-2 ಇನ್ನಿತರ ತಳಿಗಳು.

ಕೂರ್ಗ್ ಹನಿ ಡ್ಯೂ
ಕೇಂದ್ರೀಯ ತೋಟಗಾರಿಕ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿಯಲ್ಲಿ ಹನಿಡ್ಯೂ ತಳಿಯಿಂದ ಆರಿಸಿ ಅಭಿವೃಧ್ಧಿ ಪಡಿಸಿದ ತಳಿಯಾಗಿದೆ. ಈ ಗಿಡದ ವಿಶೇಷತೆ ಏನೆಂದರೆ ಇದರಲ್ಲಿ ಗಂಡು ಗಿಡಗಳು ಇರುವುದಿಲ್ಲ. ಹೆಣ್ಣು ಮತ್ತು ದ್ವಿಲಿಂಗ ಗಿಡಗಳು ಇದ್ದು ಫಸಲನ್ನು ನೀಡುತ್ತವೆ. ಹೆಣ್ಣು ಗಿಡದಿಂದ ದೊರೆತ ಹಣ್ಣು ಬೀಜರಹಿತವಾಗಿದ್ದರೆ ದ್ವಿಲಿಂಗ ಸಸ್ಯದಿಂದ ದೊರೆತ ಹಣ್ಣಿನಲ್ಲಿ ಬೀಜ ಸಮೃಧ್ದವಾಗಿರುತ್ತದೆ. ಗಿಡಗಳು ಗಿಡ್ಡವಾಗಿದ್ದು ಪ್ರತೀ ಗಿಡದಿಂದ 30 ರಿಂದ 40 ಕೆ.ಜಿ ಯಷ್ಟು ಉತ್ತಮ ಗುಣಮಟ್ಟದ ಹಣ್ಣು ದೊರಕುತ್ತದೆ ಹಾಗು ಪಪೀನ್ ಇಳುವರಿ ಸಹ ಆಶಾದಾಯಕವಾಗಿದೆ.

ವಂಶಾಭಿವೃಧ್ಧಿ
ಪಪಾಯ ಸಸಿಗಳನ್ನು ಬೀಜದಿಂದಲೇ ಬೆಳಸಲಾಗುತ್ತದೆ. ಆದರೆ ತಳಿಗಳ ಶುಧ್ಧತೆಯ ಬಗ್ಗೆ ಅತ್ಯಂತ ಗಮನ ಹರಿಸಬೇಕಾಗುತ್ತದೆ. ಬಿತ್ತಲು ಹೊಸ ಬೀಜಗಳನ್ನು ಉಪಯೋಗಿಸಬೇಕು. ಹದಿನೈದು ದಿನಗಳ ನಂತರ ಬೀಜದ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. 2:1:1 ರ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಮಣ್ಣು, ಮರಳು ಚೆನ್ನಾಗಿ ಮಿಶ್ರಣ ಮಾಡಿ 4 x 6” ಅಳತೆಯ ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಬೇಕು. ಇದರಲ್ಲಿ 1-2 ಬೀಜಗಳನ್ನು ಬಿತ್ತನೆ ಮಾಡಬೇಕು. ವಾತವರಣದ ಉಷ್ಣಾಂಶಕ್ಕೆ ಅನುಗುಣವಾಗಿ ಬೀಜಗಳು 3-4 ವಾರದಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. 250 ಗ್ರಾಂ ಬೀಜ 1 ಹೆಕ್ಟೇರು ಪ್ರದೇಶಕ್ಕೆ ಸಾಕಾಗುತ್ತದೆ.

ಗಿಡ ನೆಡುವಿಕೆ
ಸಸಿಗಳಲ್ಲಿ 6-8 ಎಲೆಗಳು ಕಂಡು ಬಂದಾಗ ನೆಡಲು ಸೂಕ್ತವಾಗಿರುತ್ತದೆ. ಹದಿನೈದು ದಿನಗಳಿಗಿಂತ ಮೊದಲೆ ತೆಗೆದ 60 x 60 x 60 ಸೆ,ಮೀ. ಗುಂಡಿಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಪದರ ಮಣ್ಣನ್ನು ತುಂಬಿ ಗಿಡವನ್ನು ನೆಡಬೇಕು. ಬೇವಿನ ಹಿಂಡಿಯನ್ನು ಸಹ ಉಪಯೋಗಿಸಬಹುದು. ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 2.1 ಮೀ. ಅಂತರವಿರುವಂತೆ ನೋಡಿಕೊಳ್ಳಬೇಕು. ಈ ಅಂತರದಲ್ಲಿ 1 ಹೆಕ್ಟೇರು ಪ್ರದೇಶದಲ್ಲಿ ಸುಮಾರು 2,260 ಗಿಡಗಳನ್ನು ನೆಡಬಹುದು.

ನೀರುಣಿಸುವಿಕೆ
ಗಿಡದ ಬುಡದಲ್ಲಿ ನೀರು ನಿಂತರೆ ಗಿಡ ಬಹಳ ಬೇಗ ಕೊಳೆ ರೋಗಕ್ಕೆ ತುತ್ತಾಗುತ್ತದೆ. ಮಣ್ಣಿನಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ 6-8 ದಿನಗಳಿಗೊಮ್ಮೆ ನೀರುಣಿಸುವುದು ಗಿಡದ ಬೆಳವಣಿಗೆಗೆ ಸಹಕಾರಿ.

ಪೋಷಕಾಂಶಗಳ ನಿರ್ವಹಣೆ
ಪಪಾಯ ವೇಗವಾಗಿ ಬೆಳೆಯುವ ಗಿಡವಾದ್ದರಿಂದ ಹೆಚ್ಚು ಪೋಷಕಾಂಶವನ್ನು ಬಯಸುತ್ತದೆ. 90 ಗ್ರಾಂ ಯೂರಿಯಾ, 250 ಗ್ರಾಂ ಸಿಂಗಲ್ ಸೂಪರ್ ಪಾಸ್ಪೇಟ್, ಮತ್ತು 140 ಗ್ರಾಂ ಪೊಟ್ಯಾಶನ್ನು ಚೆನ್ನಾಗಿ ಮಿಶ್ರಣ ಮಾಡಿ 2 ತಿಂಗಳಿಗೊಮ್ಮೆ ಗಿಡದ ಸುತ್ತಲು ಕೊಡಬೇಕು. ಇದಲ್ಲದೆ ವರ್ಷಕೊಮ್ಮೆ ಒಂದು ಬುಟ್ಟಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ಸಹ ಗಿಡವೊಂದಕ್ಕೆ ಕೊಡಬೇಕು.

ಇಳುವರಿ ಮತ್ತು ಕೊಯ್ಲು
ಗಿಡ ನೆಟ್ಟು ಐದು ತಿಂಗಳ ನಂತರ ಹೂ ಬಿಟ್ಟು ಮಿಡಿ ಕಚ್ಚಲು ಪ್ರಾರಂಭಿಸುತ್ತದೆ. ಹತ್ತು ತಿಂಗಳಿನಲ್ಲಿ ಹಣ್ಣು ಕೊಯ್ಲಿಗೆ ಬರುತ್ತದೆ. ಪಪಾಯ ಗಿಡವು ಅನೇಕ ವರ್ಷಗಳವರೆಗೆ ಫಲನೀಡಿದರೂ ವಾಣಿಜ್ಯ ದೃಷ್ಟಿಯಿಂದ 3 ವರ್ಷಗಳನಂತರ ಬೆಳೆಯನ್ನು ಉಳಿಸಿಕೊಳ್ಳುವುದು ಲಾಭದಾಯಕವಲ್ಲ. ಮಣ್ಣು, ಹವಾಮಾನ, ತಳಿ, ವ್ಯವಸಾಯ ಕ್ರಮಕ್ಕೆ ಅನುಗುಣವಾಗಿ ಒಂದು ಗಿಡವು ವರ್ಷದಲ್ಲಿ 25-30 ಹಣ್ಣುಗಳನ್ನು ಕೊಡುತ್ತದೆ. ತಿಳಿಹಳದಿ ಬಣ್ಣದ ಹಣ್ಣುಗಳನ್ನು ಕೊಯ್ಲುಮಾಡಬೇಕು.

ರೋಗ ಮತ್ತು ಕೀಟ ಬಾಧೆ
ಕೊಳೆ ರೋಗ: ಹೆಚ್ಚಾಗಿ ನರ್ಸರಿ ಗಿಡಗಳನ್ನು ಬಾಧಿಸುತ್ತದೆ. ಈ ರೋಗವನ್ನು ತಡೆಗಟ್ಟಲು ಮಣ್ಣಿನ ಮಿಶ್ರಣದ ಮೇಲೆ ಪ್ಲಾಸ್ಟಿಕ್ ಹಾಳೆ ಹೊದಿಸಿ 48 ಗಂಟೆಗಳ ಕಾಲ ಸೂರ್ಯಕಿರಣಕ್ಕೆ ತೆರೆದಿಡಬೇಕು. ಇದನ್ನು ಸೋಲರೈಸಿಂಗ್ ಎಂದು ಕರೆಯುತ್ತಾರೆ. ಫಾರ್ಮಾಲ್ಡಿಹೈಡ್ ದ್ರಾವಣದಿಂದ ಸಹ ಮಣ್ಣಿನ ಮಿಶ್ರಣವನ್ನು ಸ್ಟೆರಿಲೈಸ್ ಮಾಡಬಹುದು. 500 ಗ್ರಾಂ ಬೀಜಕ್ಕೆ 1 ಗ್ರಾಂ ಸೆರೆಸಾನ್ ಮಿಶ್ರಮಾಡಿ ಬೀಜೋಪಚಾರ ಮಾಡುವುದರಿಂದ ಈ ರೋಗವನ್ನು ಸಾಕಷ್ಟು ತಡೆಗಟ್ಟಬಹುದು.

ಕಾಂಡ ಕೊಳೆಯುವಿಕೆ: ಗಿಡದ ಬುಡದಲ್ಲಿ ನೀರು ನಿಂತರೆ ಈ ರೋಗ ಕಾಣಿಸಿಕೊಂಡು ಸಾಕಷ್ಟು ಹಾನಿ ಉಂಟುಮಾಡುತ್ತದೆ. ಮಣ್ಣಿನಲ್ಲಿ ನೀರು ಚೆನ್ನಾಗಿ ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ರೋಗ ಪೀಡಿತ ಭಾಗವನ್ನು ಕೆರೆದು ತೆಗೆದು 10% ಬೋರ್ಡೊ ಪೇಸ್ಟನ್ನು ಸವರಬೇಕು. ಬೇರಿನಲ್ಲಿ ಕೊಳೆ ರೋಗ ಕಂಡು ಬಂದರೆ 1% ಬೋರ್ಡೊ ದ್ರಾವಣವನ್ನು ಗಿಡವೊಂದಕ್ಕೆ 5 ಲೀ. ನಂತೆ ಬುಡದಲ್ಲಿ ಸುರಿಯಬೇಕು. ಎಲೆ ಹಾಗು ಕಾಯಿಗಳಲ್ಲಿ ಕೊಳೆ ರೋಗದ ಬಾಧೆಯಿದ್ದರೆ 1% ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

ಏಂತ್ರೋಕ್ನೋಸ್: ಎಲೆ ಹಾಗು ಕಾಯಿಗಳನ್ನು ಬಾಧಿüಸುತ್ತದೆ. ಇದರಿಂದ ಎಲೆ ಮತ್ತು ಕಾಯಿ ಉದುರಿ ಬೀಳುತ್ತದೆ. ರೋಗವನ್ನು ತಡೆಗಟ್ಟಲು 1% ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

ಪೌಡರಿ ಮಿಲ್‍ಡ್ಯೂ: ಈ ರೋಗ ದಕ್ಷಿಣಭಾರತದಲ್ಲಿ ಹೆಚ್ಚಾಗಿದ್ದು ಎಲೆ ಹಾಗು ಹಣ್ಣಿನಲ್ಲಿ ಕಂಡುಬರುತ್ತದೆ. ರೋಗ ತಡೆಗಟ್ಟಲು 0.2% ಗಂಧಕ ಅಥವಾ 0.1% ಕಾರ್ಬೆಂಡೇಜಿಮ್ ಸಿಂಪಡಿಸಬೇಕು.

ಕೆಂಪು ಜೇಡ ಹುಳ: 0.25% ಕೆಲ್ತೇನನ್ನು ಸಿಂಪಡಿಸುವುದರಿಂದ ಈ ಕೀಟಬಾಧೆಯನ್ನು ಹತೋಟಿಯಲ್ಲಿ ಇಡಬಹುದು.

ಹಿಟ್ಟಿನ ತಿಗಣೆ: ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಪಪಾಯಕ್ಕೆ ಅಪಾರ ಹಾನಿ ಮಾಡುತ್ತಿರುವ ಕೀಟ. ಮೊದಲು ಎಲೆಯ ಕೆಳಭಾಗದಲ್ಲಿ ಕಾಣಿಸಿಕೊಂಡು ನಂತರ ಕಾಯಿಗೂ ಪಸರಿಸುತ್ತದೆ. ಇದರಿಂದ ಹಣ್ಣನ್ನು ಮಾರಾಟ ಮಾಡುವುದು ಅಸಾಧ್ಯವಾಗುತ್ತದೆ. ಸುಮಾರು 60-80% ನಷ್ಟು ಬೆಳೆ ಹಾನಿಯಾಗುತ್ತದೆಯೆಂದು ಅಂದಾಜಿಸಲಾಗಿದೆ. ಜೈವಿಕ ನಿಯಂತ್ರಣ ಪರಾವಲಂಬಿ ಕೀಟಗಳಾದ ಎಸೆರೊಫೇಗಸ್ ಪಪಾಯೆ, ಸೂಡ್‍ಲೆಪ್ಟೊಮೇಸ್ಟಿಕ್ ಮೆಕ್ಸಿಕಾನದ ಮೂಲಕ ಹಿಟ್ಟಿನ ತಿಗಣೆಯ ಬಾಧೆ ಯನ್ನು ತಡೆಗಟ್ಟಬಹುದು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments