ತರಕಾರಿ ಬೆಳೆಗಳಲ್ಲಿ ಕೀಟನಿರ್ವಹಣೆ Pest management of vegetable crops

Reading Time: 32 minutes

ತರಕಾರಿ ಬೆಳೆಗಳಲ್ಲಿ ಕೀಟನಿರ್ವಹಣೆ

ಬದನೆ
ರೆಂಬೆ ಮತ್ತು ಕಾಯಿಕೊರಕ
ಲಕ್ಷಣ ಮತ್ತು ಹಾನಿ
ಹೂಬಿಡುವ ಮುನ್ನ ಎಳೆಕೊಂಬೆಗಳು ಸೊರಗುತ್ತವೆ ಮತ್ತು ಕೊಂಬೆ ಹಾಗು ಕಾಯಿಗಳಲ್ಲಿ ಕೊರೆದ ರಂಧ್ರಗಳು ಹಿಕ್ಕೆಗಳಿಂದ ಮುಚ್ಚಲ್ಪಟ್ಟಿರುತ್ತದೆ. ಲಾರ್ವ ಗುಲಾಬಿ ಬಣ್ಣ ಹೊಂದಿದ್ದು ವರ್ಷವಿಡೀ ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಅತೀ ಹೆಚ್ಚು ಕೀಟ ಬಾಧೆಯಿದ್ದಲ್ಲಿ ಇಳುವರಿಯಲ್ಲಿ ಶೇ 60 ರಷ್ಟು ನಷ್ಟ ಉಂಟಾಗುತ್ತದೆ.
ನಿರ್ವಹಣೆ
ಕೀಟ ಬಾಧೆಯಿರುವ ಕೊಂಬೆಯನ್ನು ಕತ್ತರಿಸಿ ತೆಗೆಯಬೇಕು. ಹೆಕ್ಟೇರ್‍ಗೆ 250 ಕೆ.ಜಿ ಬೇವಿನ ಹಿಂಡಿಯನ್ನು ಹೂ ಬಿಡುವ ಸಮಯದಲ್ಲಿ ಹಾಕಬೇಕು ಮತ್ತು 30 ದಿನ ಅಂತರದಲ್ಲಿ 2-3 ಬಾರಿ ಪುನರಾವರ್ತಿಸಬೇಕು. ಜಮೀನಿನಲ್ಲಿ ಲಿಂಗಾಕರ್ಷಕ ಬಲೆಯನ್ನು ಅಳವಡಿಸಬೇಕು (ಲ್ಯೂಸಿಲ್ಯೂರ್ 10/ಹೆ), ಅಥವಾ ಹೆಕ್ಟೇರಿಗೆ 5 ಲಕ್ಷ ಟ್ರೈಕೋಡರ್ಮ ಬೆಲೋನಿಸ್ ಬಿಡುಗಡೆ ಮಾಡಬೇಕು. ಹೂ ಬಿಡುವ ಸಮಯದಲ್ಲಿ 5 ದಿನಕ್ಕೊಮ್ಮೆ 5 ಬಾರಿ ಬಿ.ಟಿ. (1.0 ಗ್ರಾಂ/ಲೀ.) ಸಿಂಪಡಣೆ ಮಾಡಬೇಕು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕಾಂಡಕೊರಕ
ಲಕ್ಷಣ ಮತ್ತು ಹಾನಿ
ತಿಳಿ ಬೂದು ಬಣ್ಣದಿಂದ ಕೂಡಿದ ಅಲ್ಪ ಹುರಿಗಳಿವಿರುವ ಕಂಬಳಿ ಹುಳುಗಳು ಕಾಂಡವನ್ನು ಕೊರೆಯುತ್ತವೆ. ಹಾನಿಗೊಳಗಾದ ಹಳೆಯ ಗಿಡಗಳು ಸೊರಗಿ ಹೋಗುತ್ತವೆ.
ನಿರ್ವಹಣೆ
ಕೀಟದ ತೀವ್ರತೆ ಕಡಿಮೆ ಇದ್ದರೆ ಹಾನಿಗೊಳಗಾದ ಗಿಡದ ಭಾಗವನ್ನು ತೆಗೆದು ಹಾಕಬೇಕು. ಗಿಡ ನೆಡುವ ಸಮಯದಲ್ಲಿ 250 ಕೆ.ಜಿ ಬೇವಿನ ಹಿಂಡಿಯನ್ನು ಪ್ರತೀ ಹೆಕ್ಟೇರಿಗೆ ಹರಡಬೇಕು. 30 ಮತ್ತು 60 ದಿನ ಅಂತರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಬೇವಿನ ಹಿಂಡಿಯ ಬಳಕೆಯನ್ನು ಪುನರಾವರ್ತಿಸಬೇಕು. ಹಳೆ ಸಸಿಯ ಉಳಿಕೆಯನ್ನು ನಾಶಪಡಿಸಬೇಕು. ಡೆಲ್ಟಾಮೆಥ್ರಿನ್ 2.8 ಈ.ಸಿ. ಕೀಟನಾಶಕವನ್ನು 0.5ಮಿಲಿ/ಲೀ ನೀರಿನಲ್ಲಿ ಬೆರೆಸಿ ಸಸಿಗಳಿಗೆ ಸಿಂಪಡಿಸಬೇಕು

ಏಷ್ ವೀವಿಲ್
ಲಕ್ಷಣ ಮತ್ತು ಹಾನಿ
ಎಲೆ ಅಂಚುಗಳು ಹಾನಿಯಾಗಿ ಏಣಿಯಂತ ಗುರುತು ಕಾಣುತ್ತದೆ. ಸೊರಗಿದ ಗಿಡಗಳನ್ನು ಕಿತ್ತಾಗ ಪೋಷಕಾಂಶ ಹೀರುವ ಬೇರುಗಳು ಹಾನಿಗೊಳಗಾಗಿರುತ್ತವೆ ಮತ್ತು ಮರಿಹುಳುಗಳು ಮಣ್ಣಿನಲ್ಲಿ ಕಂಡು ಬರುತ್ತವೆ. ಹಾನಿ ಅತೀ ಹೆಚ್ಚಾದಾಗ ಶೇ 50ರಷ್ಟು ಗಿಡಗಳು ಹಾನಿಗೊಳಗಾಗಬಹುದು.

ನಿರ್ವಹಣೆ
ಗಿಡ ನಾಟಿ ಮಾಡುವ ಸಮಯದಲ್ಲಿ 250 ಕೆ.ಜಿ. ಬೇವಿನ ಹಿಂಡಿಯನ್ನು ಪ್ರತೀ ಹೆಕ್ಟೇರಿಗೆ ಹರಡಬೇಕು. ತದನಂತರ ಬೇವಿನ ಹಿಂಡಿಯ ಬಳಕೆಯನ್ನು ಗಿಡ ನೆಟ್ಟ 30 ಮತ್ತು 60 ದಿನಗಳಲ್ಲಿ ಪುನರಾವರ್ತಿಸಬೇಕು. ಎಲೆಗಳಿಗೆ ಕಾರ್ಬರಿಲ್ 50 ಡಬ್ಲ್ಯೂ.ಪಿ ಕೀಟನಾಶಕವನ್ನು 2 ಗ್ರಾಂ/ಲೀ ನೀರಿನಲ್ಲಿ ಅಥವಾ ಟ್ರೈಯಾಜೋಫಾಸ್ 40 ಈ.ಸಿ. ಯನ್ನು 1.6 ಮಿಲೀ/ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಚಿಗಟ
ಲಕ್ಷಣ ಮತ್ತು ಹಾನಿ
ಹೂಮೊಗ್ಗು ಮತ್ತು ಎಳೆಕಾಯಿಗೆ ಧಾಳಿಯಿಡುತ್ತದೆ. ಇದರಿಂದ ಹೂ ಒಣಗುತ್ತದೆ ಅಥವಾ ಕಾಯಿ ರೂಪ ಕಳೆದು ಕೊಳ್ಳುತ್ತದೆ.
ನಿರ್ವಹಣೆ
ಇಮಿಡಕ್ಲೋಪ್ರಿಡ್ 17.8 ಎಸ್.ಎಲ್. (0.3ಮೀ/ಲೀ) ಅಥವಾ ಅಬಾಮೆಕ್ಟಿನ್ 1.9 ಈ.ಸಿ 0.2 ಮಿಲೀ/ಲೀ. ನೀರಿನಲ್ಲಿ ಬೆರೆಸಿ ಸಿಂಪಡಣೆಮಾಡಬೇಕು.

ಹಿಟ್ಟಿನ ತಿಗಣೆ
ಲಕ್ಷಣ ಮತ್ತು ಹಾನಿ
ಹೆಚ್ಚಾಗಿ ಎಲೆಯ ತಳಭಾಗದಲ್ಲಿ ಕಂಡು ಬರುವ ಈ ಕೀಟ, ರಸವನ್ನು ಹೀರಿ ಗಿಡವನ್ನು ದುರ್ಬಲವಾಗಿಸುತ್ತದೆ.
ಅತೀ ಹೆಚ್ಚು ಹಾನಿ ಕಂಡು ಬಂದಲ್ಲಿ ಮೀನೆಣ್ಣೆಯ ರಾಳವನ್ನು ಸಿಂಪಡಿಸಬೇಕು (100 ಗ್ರಾಂ ಮೀನೆಣ್ಣೆಯ ರಾಳವನ್ನು 80-90ಲಿ ಸೆ. ಬೆಚ್ಚನೆಯ 5 ಲೀ. ನೀರಿನಲ್ಲಿ 4 ಗಂಟೆಯಿರಿಸಿ ಕರಗಿಸಬೇಕು. ಇದನ್ನು 50 ಲೀ. ನೀರಿನಲ್ಲಿ ಬೆರೆಸಿ (2 ಕೆ.ಜಿ/ಹೆಕ್ಟೇರ್) ಸಿಂಪಡಿಸಬೇಕು.

ಹೇನು
ಲಕ್ಷಣ ಮತ್ತು ಹಾನಿ
ಹೇನಿನ ಗುಂಪು ಎಳೆಯ ಎಲೆ, ಹೂ ಮೊಗ್ಗು ಮತ್ತು ಇತರ ಭಾಗದಲ್ಲಿ ಕಂಡು ಬರುತ್ತದೆ. ಕೀಟನಾಶಕದ ಅವ್ಯವಸ್ಥಿತ ಬಳಕೆಯಿಂದ ಈ ಕೀಟದ ಸಂಖ್ಯೆ ಹೆಚ್ಚಾಗುತ್ತದೆ.
ನಿರ್ವಹಣೆ
ಪ್ರಾಥಮಿಕ ಹಂತದಲ್ಲಿ 10 ಗ್ರಾಂ/ಲೀ ನೀರಿನಲ್ಲಿ ಬೇವಿನ ಸಾಬೂನಿನ ಸಿಂಪಡಣೆಯಿಂದ ಕೀಟವನ್ನು ನಿಯಂತ್ರಿಸಬಹುದು. ಡೈಮಿಥೋಯೇಟ್ 30ಈ.ಸಿ (2 ಮಿಲೀ/ಲೀ) ಯನ್ನು ಬೇವಿನ ಉತ್ಪನ್ನಗಳ ಸಿಂಪಡಣೆಯ ನಂತರ ಸಿಂಪಡಿಸಬೇಕು. (ಬೇವಿನ ಬೀಜದ ತಿರುಳಿನ ಸಾರ 4% ಅಥವಾ ಬೇವಿನ ಸಾಬೂನು 10 ಗ್ರಾಂ/ಲೀ ಸಿಂಪಡಿಸಬಹುದು).

ಎಲೆಜಿಗಿತ ಹುಳು
ಲಕ್ಷಣ ಮತ್ತು ಹಾನಿ
ಹಾನಿಗೊಳಗಾದ ಎಲೆಗಳ ಅಂಚು ಮೇಲುಗಡೆಗೆ ಸುರುಟಿಗೊಳ್ಳುತ್ತದೆ. ಎಳೆಯ ನಿಂಪ್‍ಗಳು ಬಗೆಬಗೆಯ ಬಣ್ಣಗಳನ್ನು ಹೊಂದಿದ್ದು ಎಲೆಯ ತಳ ಬಾಗ ಮತ್ತು ಮಧ್ಯ ರೇಖೆಯಲ್ಲಿ ಕೇಂದ್ರಿತಗೊಂಡಿರುತ್ತವೆ.
ನಿರ್ವಹಣೆ
ಡೆಲ್ಟಾಮೆಥ್ರಿನ್ 2.8 ಈ.ಸಿ. ಯನ್ನು 0.4 ಮಿಲೀ/ಲೀ ನೀರಿನಲ್ಲಿ ಬೆರೆಸಿ ಒಮ್ಮೆ ಸಿಂಪಡಣೆ ಅಥವಾ ಇಮಿಡೊಕ್ಲೋಪ್ರಿಡ್ 17.8 ಎಸ್.ಎಲ್ 0.3 ಮಿಲಿ/ಲೀ ನೀರನಲ್ಲಿ ಬೆರೆಸಿ ಸಿಂಪಡಿಸಬೇಕು, ತದನಂತರ ಡೈಮಿಥೊಯೇಟ್ 30 ಈ.ಸಿ ಯನ್ನು 2 ಮಿಲೀ/ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಥ್ರಿಪ್ಸ್
ಲಕ್ಷಣ ಮತ್ತು ಹಾನಿ
ಪ್ರೌಢ ಕೀಟ ಮತ್ತು ನಿಂಪ್‍ಗಳು ಹಣ್ಣು ಮತ್ತು ಎಲೆಗಳನ್ನು ಗಾಯಗೊಳಿಸುತ್ತವೆ. ಹೆಚ್ಚಾಗಿ ಕೀಟಗಳು ಹಳೆಯ ಎಲೆಯ ತಳಭಾಗದಲ್ಲಿ ಕಂಡು ಬರುತ್ತವೆ.
ನಿರ್ವಹಣೆ
ಎಸಿಫೇಟ್ 75WP 0.75 ಗ್ರಾಂ/ಲೀ+ಹೊಂಗೆಣ್ಣೆ 2 ಮಿಲೀ/ಲೀ+ಅಂಟುದ್ರಾವಣ 1 ಮಿಲೀ/ಲೀ.ನ ದ್ರಾವಣಸಿಂಪಡಣೆ ಮಾಡಬೇಕು

ಎಪಿಲೇಕ್ನ ಜೀರುಂಡೆ
ಲಕ್ಷಣ ಮತ್ತು ಹಾನಿ
ಮಳೆಗಾಲದ ಬೆಚ್ಚನೆಯ ಮತ್ತು ತೇವಾಂಶದ ವಾತಾವರಣದಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಚುಕ್ಕೆಗಳಿರುವ ಪ್ರೌಢ ಕೀಟಗಳು ಮತ್ತು ಹುರಿಗಳಿಂದ ಕೂಡಿದ ಮರಿಹುಳುಗಳು ಎಲೆಗಳನ್ನು ಕೆರೆದು ಗಾಯ ಮಾಡುವುದು ಕಂಡುಬರುತ್ತದೆ. ಸಿಗರೇಟ್ ಆಕಾರದ ಹಳದಿ ಬಣ್ಣದ ಮೊಟ್ಟೆಗಳು ಎಲೆಗಳ ಮೇಲೆ ಗುಂಪು ಗುಂಪಾಗಿ ಕಂಡುಬರುತ್ತದೆ.
ನಿರ್ವಹಣೆ
ಕಾಯಿಕೊರಕಕ್ಕೆ ಬಳಸುವ ನಿಯಂತ್ರಣ ವಿಧಾನದಿಂದ ಈ ಕೀಟವನ್ನು ನಿಯಂತ್ರಿಸಬಹುದು. ಕೀಟದ ಸಂಖ್ಯೆ ಕಡಿಮೆ ಇದ್ದರೆ ಪ್ರೌಢ ಮತ್ತು ಮರಿಹುಳುವನ್ನು ಹೆಕ್ಕಿ ನಾಶಪಡಿಸಬೇಕು ಸ್ಪರ್ಶ ಕೀಟನಾಶಕವಾದ ಕಾರ್ಬಾರಿಲ್50WP3ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಗೆದ್ದಲು ಹುಳುಗಳು
ಲಕ್ಷಣ ಮತ್ತು ಹಾನಿ
ಹೆಚ್ಚಾಗಿ ಮರಳು ಮಿಶ್ರಿತ ಮಣ್ಣಿನಲ್ಲಿ ಕಂಡು ಬರುತ್ತದೆ. ಬೇರಿನ ಹಾನಿಯಿಂದ ಇದ್ದಕ್ಕಿದ್ದಂತೆ ಗಿಡಗಳು ಸೊರಗಿ ಹೋಗುತ್ತದೆ.

ನಿರ್ವಹಣೆ
ಕ್ಲೋರುಪೈರಿಫಾಸ್ 20ಈ.ಸಿ 2.5 ಮಿಲಿ ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಮಣ್ಣಿಗೆ ಸುರಿಯ ಬೇಕು ಅಥವಾ ಇಮಿಡೋಕ್ಲೋಫ್ರಿಡ್ 17.8ಎಸ್‍ಎಲ್ 1 ಮಿಲಿ/ಲೀ ನೀರಿನಲ್ಲಿ ಬೆರೆಸಿ ಉಪಯೋಗಿಸಬೇಕು.

ನುಸಿ
ಲಕ್ಷಣ ಮತ್ತು ಹಾನಿ
ಚಿಕ್ಕದಾದ ಕೆಂಪಿನ ಜೇಡ ನುಸಿಗಳು ಸಾಮಾನ್ಯವಾಗಿ ಎಲೆಯ ತಳಭಾಗದಲ್ಲಿ ಕಂಡುಬರುತ್ತದೆ. ಅಲ್ಲೆ ಬಲೆ ಕಟ್ಟಿ ಆಹಾರ ಸೇವಿಸುತ್ತವೆ. ಎಲೆ ಹಳದಿ ಬಣ್ಣಕ್ಕೆ ತಿರುಗಿ ಉದುರಿಹೋಗಿತ್ತದೆ.
ನಿರ್ವಹಣೆ
ಒಮ್ಮೊಮ್ಮೆ ಹಳೆಯಗಿಡಗಳಿಗೆ ಹೆಚ್ಚಿನ ಹಾನಿಯುಂಟಾಗುತ್ತದೆ. ನೀರಿನಲ್ಲಿ ಕರಗುವ ಗಂಧಕ 80ಡಬ್ಲ್ಯಪಿ 2 ಗ್ರಾಂ ಪುಡಿಯನ್ನು 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಅಥವಾ ಬೇವಿನ ಸೋಪು/ಹೊಂಗೆಣ್ಣೆ (ಶೇಕಡ 1) ಅಥವಾ ಡೈಕೊಪೋಲ್ 18.5 ಇ.ಸಿ.ಯ 2.5 ಮಿಲಿಯನ್ನು 1 ಲೀ ನೀರಿನಲ್ಲಿ ಬೆರೆಸಿ ಎಲೆಯ ತಳಭಾಗಕ್ಕೆ ಸಿಂಪಡಣೆಯನ್ನು ಮಾಡಬೇಕು.

ಎಲೆಕೋಸು ಮತ್ತು ಹೂಕೋಸು
ಡೈಮಂಡ್ ಕಪ್ಪು ಪತಂಗ
ಲಕ್ಷಣ ಮತ್ತು ಹಾನಿ
ಕೋಸು ಜಾತಿಯ ಬೆಳೆಗಳಿಗೆ ಜಗತ್ತಿನಾದ್ಯಂತ ಹಾನಿಗೊಳಿಸುವ ಭಯಂಕರ ಕೀಟ ಇದಾಗಿದೆ. ಲಾರ್ವದಿಂದ ಕೋಸು ಗಿಡಗಳ ಬೆಳೆಯುವ ಭಾಗಗಳು ಮತ್ತು ಎಳೆಯ ಎಲೆಗಳು ಉದುರಿ ಹೋಗುತ್ತವೆ. ಹಾನಿ ಅತೀಯಾದಾಗ ಹೂ ಕಟ್ಟುವುದು ನಿಂತು ಹೋಗುತ್ತದೆ. ಬಾಧೆ ಹೆಚ್ಚಾದಾಗ ಸುಮಾರು ಶೇಕಡ 80-90ರಷ್ಟು ಇಳುವರಿಯಲ್ಲಿ ನಷ್ಟ ಉಂಟಾಗುತ್ತದೆ.

ಕಾಂಡಕೊರಕ
ಲಕ್ಷಣ ಮತ್ತು ಹಾನಿ
ನಾಟಿ ಮಾಡಿದ ಎಳೆಯ ಗಿಡಗಳ ಕಾಂಡವನ್ನು ಲಾರ್ವಗಳು ಭಕ್ಷಿಸುತ್ತವೆ. ಇದರಿಂದ ಹೂಕೋಸಿನಲ್ಲಿ ಹೂ ಕಟ್ಟುವುದು ನಿಂತು ಹೋಗುತ್ತದೆ. ಕೀಟಗಳು ಹಳೆಯ ಗಿಡ ಮತ್ತು ಅದರ ಮಧ್ಯ ರೇಖೆಯನ್ನು ಸಹ ಭಕ್ಷಿಸುತ್ತವೆ.

ಹೇನು
ಲಕ್ಷಣ ಮತ್ತು ಹಾನಿ
ಬಿ. ಬ್ರಸಿಕೆ ಜಾತಿಯ ನುಸಿಗಳು ಎಲೆಯಲ್ಲಿ ಬಿಳಿ ಬಣ್ಣದ ಪದರದಂತೆ ಕಾಣುತ್ತದೆ ಹೆಚ್. ಇರಿಸಿಮಿ ಬಣ್ಣರಹಿತವಾಗಿರುತ್ತದೆ. ಇವು ಗಿಡಗಳನ್ನು ಭಕ್ಷಿಸಿ ಬೆಳವಣಿಗೆಯನ್ನು ನಿಲ್ಲಿಸುತ್ತವೆ. ಇದರಿಂದ ಹೂ ಕೋಸಿನ ಗುಣಮಟ್ಟ ಕಡಿಮೆ ದರ್ಜೆಯದಾಗುತ್ತದೆ.

ತಂಬಾಕು ಕಂಬಳಿಹುಳು
ಲಕ್ಷಣ ಮತ್ತು ಹಾನಿ
ಮೊಟ್ಟೆಗಳನ್ನು ಗುಂಪಿನಲ್ಲಿಡುತ್ತದೆ ಮತ್ತು ಲಾರ್ವ ಎಲೆಗಳನ್ನು ಭಕ್ಷಿಸುವುದರಿಂದ ಗಿಡಗಳು ಎಲೆ ರಹಿತವಾಗಿರುತ್ತದೆ. ದೊಡ್ಡ ಲಾರ್ವಗಳು ಹೂಕೋಸಿನ ಒಳಗೆ ಸೇರಿಕೊಳ್ಳುತ್ತದೆ.
ನಿರ್ವಹಣೆ
ನರ್ಸರಿಯಲ್ಲಿ ಬೀಜ ಬಿತ್ತಿ 10 ದಿನಗಳ ನಂತರ ಮತ್ತು ನಾಟಿಗಿಂತ ಮೊದಲು ಬಿ.ಟಿ. 1 ಗ್ರಾಂನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡಿದ 20 ದಿನಗಳ ನಂತರ ಬೇವಿನ ಬೀಜದ ಸಾರ (ಎನ್.ಎಸ್.ಪಿ.ಇ) ಶೇಕಡ 4 ಅಥವಾ ಬೇವಿನ/ಹೊಂಗೆಯ ಸೋಪು ಶೇಕಡ 1ನ್ನು ಸಿಂಪಡಿಸಬೇಕು. ಡೈಮಂಡ್ ಕಪ್ಪು ಪತಂಗ, ಎಲೆಯಲ್ಲಿ ಬಲೆಕಟ್ಟುವ ಕೀಟ ಮತ್ತು ಹೇನನ್ನು ನಿಯಂತ್ರಿಸಲು 10-15 ದಿವಸ ಅಂತರದಲ್ಲಿ 2-3 ಬಾರಿ ಈ ಸಿಂಪಡಣೆಯನ್ನು ಪುನರಾವರ್ತಿಸಬೇಕು. ಸ್ಪೋಡೋಪ್ಟರದ ಲಾರ್ವ ಮತ್ತು ಮೊಟ್ಟೆಗಳನ್ನು ನಾಶಪಡಿಸಬೇಕು. ಅಕ್ಕಿ/ಗೋದಿಯ ತವುಡು (10 ಕೆ.ಜಿ), ಮಿಥೊಮಿಲ್ 40 ಎಸ್.ಪಿ (250 ಗ್ರಾಂ), ಬೆಲ್ಲ (2 ಕೆ.ಜಿ) ಯ ಮಿಶ್ರಣಕ್ಕೆ ಕೀಟಗಳನ್ನು ಆಕರ್ಷಿಸಬೇಕು. ಅವಶ್ಯವಿದ್ದಲ್ಲಿ ಇದನ್ನು ಪನರಾವರ್ತಿಸಬೇಕು. ಡೈಮಂಡ್ ಕಪ್ಪು ಪತಂಗವನ್ನು ದೀಪದ ಬಲೆಯಿಂದ ಆಕರ್ಷಿಸಬಹುದು. ಅಗತ್ಯ ಕಂಡು ಬಂದಲ್ಲಿ ಶೇಕಡ 0.2ರ ಡೈಮಿಥೊಯೇಟ್ 30 ಈ.ಸಿ ಸಿಂಪಡಣೆಯಿಂದ ಹೇನಿನ ನಿಯಂತ್ರಣ ಸಾಧ್ಯ. ಸಾಸಿವೆಯ ಬಲೆ ಬೆಳೆಯನ್ನು ಬೆಳೆಸಿ ಡೈಮಂಡ್ ಕಪ್ಪು ಪತಂಗವನ್ನು ಆಕರ್ಷಿಸಿ ಉಪಟಳವನ್ನು ಕಡಿಮೆ ಮಾಡಬಹುದು. ಬೇವು/ಹೊಂಗೆಯ ಸೋಪಿನ ಶೇ 1ರ ದ್ರಾವಣವನ್ನು 2-3 ಬಾರಿ ಸಿಂಪಡಿಸುವುದರಿಂದ ಡೈಮಂಡ್ ಕಪ್ಪು ಪತಂಗದ ಲಾರ್ವವನ್ನು ಹತೋಟಿಯಲ್ಲಿಡಬಹುದು.

ಧಾನ್ಯದ ಕಂಬಳಿಹುಳು
ಲಕ್ಷಣ ಮತ್ತು ಹಾನಿ
ಹುರಿಗಳನ್ನು ಹೊಂದಿದ ಒಂಟಿ ಲಾರ್ವವು ಹೂಕೋಸಿನಲ್ಲಿ ತೂತು ಕೊರೆದು ಒಳ ಸೇರುತ್ತದೆ.
ನಿರ್ವಹಣೆ
ಅಂತಿಮ ಘಟ್ಟದಲ್ಲಿ ಈ ಕೀಟವನ್ನು ನಿಯಂತ್ರಿಸುವುದು ಅಸಾಧ್ಯ. ಊಚಿ ಓPಗಿ 250 ಎಲ್‍ಈ/ಒಂದು ಹೆಕ್ಟೇರಿಗೆ ಬಳಸುವುದರಿಂದ ಅಥವಾ 1 ಮಿಲಿ/ಲೀ ನೀರಿನಲ್ಲಿ ಇಂಡೋಕ್ಷಾಕಾರ್ಬ್ 14.5 ಈಸಿ ಸಿಂಪಡಿಸುವುದರಿಂದ ಈ ಕೀಟವನ್ನು ಪ್ರಾಥಮಿಕ ಹಂತದಲ್ಲಿ ನಿಯಂತ್ರಿಸಬಹುದು. ಬೆಳೆದ ಲಾರ್ವಗಳು ಕಡಿಮೆ ಸಂಖ್ಯೆಯಲ್ಲಿದ್ದರೆ ಚೂಪಾದ ಕಬ್ಬಿಣದ ಸೂಜಿಯ ಮೂಲಕ ಹೂಕೋಸಿನಿಂದ ಹೆಕ್ಕಿ ತೆಗೆದು ನಾಶಪಡಿಸಬೇಕು. ಇದು ಅತ್ಯಂತ ಕಡಿಮೆ ವೆಚ್ಚದ ಪರಿಣಾಮಕಾರಿ ಕ್ರಮವಾಗಿದೆ.
ಸಾಸಿವೆ ಸಾ ಕೀಟ
ಲಕ್ಷಣ ಮತ್ತು ಹಾನಿ
ಕಪ್ಪು ಲಾರ್ವಗಳು ಗುಂಪಾಗಿ ಎಲೆಯನ್ನು ಭಕ್ಷಿಸುತ್ತದೆ
ನಿರ್ವಹಣೆ
ಗಿಡಗಳನ್ನು ಅಲುಗಾಡಿಸಿ ಕೆಳಗೆ ಬಿದ್ದ ಕೀಟಗಳನ್ನು ಹೆಕ್ಕಿ ನಾಶಪಡಿಸಬೇಕು. ಕೀಟ ಗೋಚರಿಸಿದೊಡನೆ ಶೇಕಡ 4ರ ಬೇವಿನ ಬೀಜದ ಸಾರವನ್ನು ಅಥವಾ ಒಂದು ಲೀಟರ್ ನೀರಿನಲ್ಲಿ 2.5 ಮಿಲಿ ಕ್ಲೋರೊಪೈರಿಫಾಸ್ ಬೆರೆಸಿ ಸಿಂಪಡಣೆ ಮಾಡಬೇಕು.

ಪಟ್ಟೆ ಬಣ್ಣದ ಜೀರುಂಡೆ
ಲಕ್ಷಣ ಮತ್ತು ಹಾನಿ
ಬೃಹತ್ ಸಂಖ್ಯೆಯ ಈ ಕೀಟಗಳು ಚಿಕ್ಕ ಸಸಿಗಳನ್ನು ತಿಂದು ಹಾಕುತ್ತದೆ. ನಂತರ ಎಳೆಯ ಎಲೆಗಳಲ್ಲಿ ರಂಧ್ರಗಳು ಗೋಚರಿಸುತ್ತವೆ.
ನಿರ್ವಹಣೆ
ಕೀಟ ಗೋಚರಿಸಿದೊಡನೆ ಸಾಸಿವೆ ಸಾ ಕೀಟ ನಿಯಂತ್ರಿಸಲು ಬಳಸಿದ ರಾಸಾಯನಿಕವನ್ನು ಸಿಂಪಡಿಸಬೇಕು

ಬಣ್ಣದ ತಿಗಣೆ
ಲಕ್ಷಣ ಮತ್ತು ಹಾನಿ
ಕಪ್ಪು ಮತ್ತು ಕಿತ್ತಳೆ ಬಣ್ಣದ ಪ್ರೌಢ ಮತ್ತು ನಿಂಪ್‍ಗಳು ಎಲೆಯಿಂದ ರಸವನ್ನು ಹೀರುತ್ತದೆ. ಇದರಿಂದ ಎಲೆ ಹಳದಿ ಬಣ್ಣ ಹೊಂದಿ ಗಿಡ ಸೊರಗುತ್ತದೆ.
ನಿರ್ವಹಣೆ
3 ಗ್ರಾಂ ಕಾರ್ಬರಿಲ್ 50 ಡಬ್ಲ್ಯೂ.ಪಿ ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಕೀಟದ ಸಂಖ್ಯೆ ಕಡಿಮೆಯಿದ್ದಲ್ಲಿ ಶೇಕಡ 10 ಬೇವಿನ ಸೋಪು ಅಥವಾ 4% ಬೇವಿನ ಬೀಜದ ಸಾರ ಉಪಯೋಗಿಸಬಹುದು.

ದೊಡ್ಡ ಮೆಣಸು ಮತ್ತು ಖಾರದ ಮೆಣಸಿನ ಕಾಯಿ
ಥ್ರಿಪ್ಸ್
ಲಕ್ಷಣ ಮತ್ತು ಹಾನಿ
ಇವು ಕುಚ್ಚಿನ ರೆಕ್ಕೆ ಹೊಂದಿದ ಅತೀ ಚಿಕ್ಕ ಕೀಟಗಳು. ಪ್ರೌಢ ಮತ್ತು ನಿಂಪ್‍ಗಳು ಎಲೆಯಲ್ಲಿ ಗೀರುಗಳನ್ನು ಉಂಟು ಮಾಡುತ್ತದೆ. ಎಲೆ ಒಳಗಡೆಗೆ ಮಡಚಿಕೊಳ್ಳುತ್ತದೆ. ದೊಡ್ಡ ಮೆಣಸಿನಕಾಯಿ ಹೂಗಳ ಕೆಳಭಾಗದಲ್ಲಿ ಮತ್ತು ಕಾಯಿಯ ದಂಟಿನಲ್ಲಿ ಹಾನಿ ಉಂಟುಮಾಡುತ್ತದೆ. ಹಣ್ಣಿನಲ್ಲಿ ಗೀರುಗಳನ್ನು ಕೆರೆಯುವುದರಿಂದ ಹಣ್ಣಿನ ಹೊಳಪು ಕುಂದುತ್ತದೆ.

ನಿರ್ವಹಣೆ
ದೊಡ್ಡ ಮೆಣಸಿಕಾಯಿ ಗಿಡಗಳಲ್ಲಿ ಕೀಟ ಗೋಚರಿಸಿದೊಡನೆ ಒಂದು ಲೀಟರ್ ನೀರಿನಲ್ಲಿ 0.75 ಗ್ರಾಂ ಎಸಿಫೇಟ್ 75WP +ಹೊಂಗೆಣ್ಣೆ (2 ಮಿಲಿ/ಲೀ) +ಅಂಟುದ್ರಾವಣ (1 ಮಿಲಿ/ಲೀ) ಮಿಶ್ರಣವನ್ನು ಹದಿನೈದು ದಿನಗಳಿಗೊಮ್ಮೆ ಸಿಂಪಡಣೆ ಮಾಡಬೇಕು

ನುಸಿ
ಲಕ್ಷಣ ಮತ್ತು ಹಾನಿ
ಬರಿಕಣ್ಣಿಗೆ ಗೋಚರಿಸದ ಬಿಳಿ ಬಣ್ಣದ ಕೀಟಗಳಾಗಿವೆ. ಹಾನಿಗೊಳಗಾದ ಎಲೆಗಳು ಒಳಭಾಗಕ್ಕೆ ಮಡಚಿಕೊಳ್ಳುತ್ತದೆ. ಮಳೆಯಾಧರಿತ/ಒಣಬೇಸಾಯದಲ್ಲಿ ಹೆಚ್ಚು ಹಾನಿಯುಂಟುಮಾಡುತ್ತದೆ ಹತೋಟಿ ಕ್ರಮ ಕೈಗೊಳ್ಳದಿದ್ದರೆ ಶೇಕಡ 80 ರಷ್ಟು ಇಳುವರಿಯಲ್ಲಿ ನಷ್ಟ ಸಂಭವಿಸುತ್ತದೆ.
ನಿರ್ವಹಣೆ
3 ಗ್ರಾಂ ನೀರಿನಲ್ಲಿ ಕರಗುವ ಗಂಧಕ 80 ಡಬ್ಲ್ಯೂ.ಪಿ.ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಅಥವಾ ನುಸಿನಾಶಕ ಡೈಕೊಫಾಲ್ (2.5 ಮಿಲಿ/ಲೀ)+ಹೊಂಗೆಣ್ಣೆ (2 ಮಿಲಿ/ಲೀ)ಯನ್ನು ಅಂಟುದ್ರಾವಣದೊಡನೆ (1 ಮಿಲಿ/ಲೀ) ಮಿಶ್ರಣ ಮಾಡಿ ಸಿಂಪಡಿಸಬೇಕು ನುಸಿನಾಶಕಗಳಾದ ಅಬಾಮೆಕ್ಟಿನ್ 1.9ಈ.ಸಿ (0.5 ಮಿಲಿ/ಲೀ) ಡೈಕೊಪಾಲ್ 18.5ಈ.ಸಿ. (2.5 ಮಿಲಿ/ಲೀ) ಅಥವಾ ಫೆನಾಜಾಕ್ಸಿನ್ 10ಈ.ಸಿ (1 ಮಿಲಿ/ಲೀ) ಒಂದಾದ ನಂತರ ಒಂದರಂತೆ ಬೇವಿನೆಣ್ಣೆ/ಹೊಂಗೆಣ್ಣೆ (1%)+ ಅಂಟುದ್ರಾವಣ ಮಿಶ್ರಣಗಳನ್ನು ಅತೀ ಎಚ್ಚರಿಕೆಯಿಂದ ಸಿಂಪಡಿಸಬೇಕು.

ಹೇನು
ಲಕ್ಷಣ ಮತ್ತು ಹಾನಿ
ಕೀಟಗಳು ಗುಂಪು ಗುಂಪಾಗಿ ಎಳೆಯ ಎಲೆ ಮತ್ತು ಹೂ ಮೊಗ್ಗುಗಳಿಂದ ರಸ ಹೀರುತ್ತದೆ
ನಿರ್ವಹಣೆ
ಕೀಟಗಳು ಬಾಧೆ ಕಂಡು ಬಂದಾಗ ಮಾತ್ರ ಸಿಂಪಡಣೆ ಕೈಗೊಳ್ಳಬೇಕು. ಎಸಿಫೇಟ್ 75ಡಬ್ಲ್ಯೂ.ಪಿ. (1 ಗ್ರಾಂ/ಲೀ) ಅಥವಾ ಡೈಮಿಥೊಯೇಟ್ 30 ಈ.ಸಿ. (2 ಮಿಲಿ/ಲೀ) ಒಂದಾದನಂತರ ಒಂದನ್ನು ಸಿಂಪಡಿಸಬೇಕು. ನಂಜುರೋಗ ಪೀಡಿತ ಎಲ್ಲಾ ಸಸಿಗಳನ್ನು ನಾಶಪಡಿಸಬೇಕು.

ಕಾಯಿಕೊರಕ
ಲಕ್ಷಣ ಮತ್ತು ಹಾನಿ
ಕಾಯಿಯ ಒಳಗಡೆ ತೂತು ಕೊರೆಯುತ್ತದೆ. ಹತ್ತಿ ಗಿಡವನ್ನು ಖಾರದ ಮೆಣಸಿನ ಕಾಯಿಯೊಡನೆ ಅಂತರ ಬೆಳೆಯಾಗಿ ಬೆಳೆದಾಗ ಬೆಳೆ ಹಾನಿ ಕಡಿಮೆಯಾಗುತ್ತದೆ. ಕೀಟ ಬಾಧೆ ಹೆಚ್ಚಾದಾಗ ಶೇಕಡ 30 ರಷ್ಟು ಇಳುವರಿ ನಷ್ಟವಾಗುತ್ತದೆ.

ನಿರ್ವಹಣೆ
ಪ್ರಾಥಮಿಕ ಹಂತದಲ್ಲಿ ಹ.ಎನ್.ಪಿ.ವಿ. ಯನ್ನು ಹೆಕ್ಟೇರಿಗೆ 250ಎಲ್‍ಈ ಯಂತೆ ಬಳಸಬೇಕು. ತದನಂತರ 10 ದಿನಗಳ ನಂತರ ಪುನರಾವರ್ತಿಸಬೇಕು. ಕೀಟ ಬಾಧೆ ಜಾಸ್ತಿಯಿದ್ದರೆ 0.4 ಮಿಲಿ ಇಂಡಾಕ್ಸುಕಾರ್ಬ 14.5 ಎಸ್.ಪಿ ಯನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಟೊಮೇಟೊದ ಸಮಗ್ರ ಕೀಟ ನಿಯಂತ್ರಣ ವಿಧಾನವನ್ನು ಮೇಲಿನ ತರಕಾರಿ ಬೆಳೆಯಲ್ಲಿ ಸಹ ಅಳವಡಿಸಬಹುದು.

ಕಟ್ ವಮ್ರ್ಸ್ (ಕತ್ತರಿ ಹುಳು)
ರಾತ್ರಿ ಸಮಯದಲ್ಲಿ ಸಸಿಗಳನ್ನು ಬುಡದಿಂದ ಕತ್ತರಿಸಿಹಾಕುತ್ತದೆ. ಹಗಲಿನಲ್ಲಿ ಬಿರುಕುಗಳಲ್ಲಿ, ಸಡಿಲ ಮಣ್ಣಿನಲ್ಲಿ ಅಡಗಿ ಕುಳಿತಿರುತ್ತದೆ.
ನಿರ್ವಹಣೆ
ಅಕ್ಕಿ/ಗೋಧಿ ತವುಡು (10 ಕೆ.ಜಿ)+ಮೆಥೋಮಿಲ್ 40ಎಸ್.ಪಿ (250 ಗ್ರಾಂ)+ ಬೆಲ್ಲ (2 ಕೆ.ಜಿ) ದ್ರಾವಣದ ಬಲೆಗೆ ಕೀಟಗಳನ್ನು ಆಕರ್ಷಿಸಬಹುದು. ಅಗತ್ಯ ಬಿದ್ದಲ್ಲಿ ಈ ಕ್ರಮವನ್ನು ಪುನರಾವರ್ತಿಸಬೇಕು.

ಬಿಳಿ ಮರಿ ಹುಳ
ಮುಂಗಾರು ಸಮಯದಲ್ಲಿ ಮಣ್ಣಿನಲ್ಲಿ ಮೊಟ್ಟೆಯಿಡುತ್ತದೆ ಮತ್ತು ಹೊರಬಂದ ಮರಿಹುಳುಗಳು ಬೇರುಗಳನ್ನು ತಿನ್ನುತ್ತವೆ. ಪ್ರೌಢ ಕೀಟಗಳು ಎಲೆಗಳನ್ನು ತಿನ್ನುತ್ತವೆ.
ನಿರ್ವಹಣೆ
ಜಮೀನು ಉಳುಮೆಯಾದಾಗ ಮರಿಹುಳುಗಳು ಮಣ್ಣಿನ ಮೇಲ್ಭಾಗಕ್ಕೆ ಬಂದು ಪಕ್ಷಿಗಳಿಗೆ ಆಹಾರವಾಗುತ್ತದೆ. ಕ್ಲೋರೊಪೈರಿಪಾಸ್ 20ಈ.ಸಿ (2 ಮಿಲಿ/ಲೀ) ಅಥವಾ ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ದ್ರಾವಣದಿಂದ ಮಣ್ಣನ್ನು ತೋಯ್ಸಬೇಕು. ಪ್ರೌಢ ಕೀಟಗಳನ್ನು ನಿಯಂತ್ರಣ ಮಾಡುವುದು ಕಷ್ಟಕರ.

ಕ್ಯಾರೆಟ್ (ಗೆಜ್ಜರಿ)
ಎಲೆಜಿಗಿತ ಹುಳು
ಲಕ್ಷಣ ಮತ್ತು ಹಾನಿ
ಪ್ರೌಢ ಮತ್ತು ನಿಂಪ್‍ಗಳು ರಸ ಹೀರಿ ಸಸಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ನಿರ್ವಹಣೆ
ಡೆಲ್ಟಾಮೆಥ್ರಿನ್ 2.8ಈ.ಸಿ (0.5 ಮಿಲಿ/ಲೀ) ಸಿಂಪಡಣೆಯ 15 ದಿನ ಅಂತರದಲ್ಲಿ ಡೈಮಿಥೊಯೇಟ್ (2 ಮಿಲಿ/ಲೀ) ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. (0.4 ಮಿಲಿ/ಲೀ) ಸಿಂಪಡಣೆ ಮಾಡಬೇಕು.

ಕತ್ತರಿ ಹುಳು (ಕಟ್ ವರ್ಮ್)
ಲಕ್ಷಣ ಮತ್ತು ಹಾನಿ
ರಾತ್ರಿ ವೇಳೆ ಸಸಿಗಳನ್ನು ಬುಡದಿಂದಲೆ ಕತ್ತರಿಸಿ ಹಾಕುತ್ತದೆ.
ನಿರ್ವಹಣೆ
ಅಕ್ಕಿ/ಗೋಧಿಯ ತವುಡು (10 ಕೆ,ಜಿ)+ ಮೆಥೊಮಿಲ್ 40ಎಸ್.ಪಿ (250 ಗ್ರಾಂ)+ ಬೆಲ್ಲದ (2 ಕೆ.ಜಿ.) ದ್ರಾವಣಕ್ಕೆ ಹುಳುವನ್ನು ಆಕರ್ಷಿಸಿ ನಾಶಪಡಿಸಬೇಕು. ಅಗತ್ಯ ಕಂಡುಬಂದಲ್ಲಿ ಈ ವಿಧಾನವನ್ನು ಪುನರಾವರ್ತಿಸಬೇಕು.

ಅಲಸಂಡೆ
ಕಾಂಡದ ಕೀಟ
ಲಕ್ಷಣ ಮತ್ತು ಹಾನಿ
15 ದಿವಸದ ಒಳಗಿನ ಸಸಿಗಳಿಗೆ ಹಾನಿ ಉಂಟುಮಾಡುತ್ತದೆ. ಎಲೆಯ ಬುಡದಲ್ಲಿ ಚುಚ್ಚಿದ ಬಿಳಿ ಬಣ್ಣದ ಗುರುತುಗಳು ಕಾಣಬರುತ್ತವೆ. ಲಾರ್ವಗಳು ಗಿಡದ ಬುಡದ ಸಿಪ್ಪೆಗಳ ಒಳಗೆ ಕಂಡುಬರುತ್ತವೆ ಮತ್ತು ಕಾಂಡವನ್ನು ಹಾನಿಮಾಡುವುದರಿಂದ ಗಿಡಗಳು ಸೊರಗಿಹೋಗುತ್ತವೆ.
ನಿರ್ವಹಣೆ
ಒಣ ವಾತಾವರಣದ ಮುಂದುವರಿಕೆಯಿಂದ ಸಸಿಗಳಿಗೆ ಈ ಕೀಟದ ಬಾಧೆ ಜಾಸ್ತಿಯಾಗುತ್ತದೆ. ಮೊಳಕೆಯೊಡೆದ ಸಸಿಗಳಲ್ಲಿ ಪ್ರೌಢ ಕೀಟ ಚುಚ್ಚಿದ ಬಿಳಿ ಗುರುತು ಮತ್ತು ತೊಟ್ಟಿನಲ್ಲಿರುವ ಸುರಂಗದ ಗುರುತಿಗಾಗಿ ವೀಕ್ಷಣೆ ಅಗತ್ಯ. ಪ್ರೌಢ ಕೀಟಗಳು ಕಂಡುಬಂದಾಗ ಎಂಡೋಸಲ್ಫಾನ್ 35ಈ.ಸಿ. (2 ಮಿಲಿ/ಲೀ) ಯನ್ನು ಅಥವಾ ಎಸಿಫೇಟ್ 75 ಡಬ್ಲ್ಯೂ.ಪಿ. (1 ಗ್ರಾಂ/ಲೀ) ದ್ರಾವಣವನ್ನು ಸಿಂಪಡಿಸಬೇಕು.

ಕಾಯಿಕೊರಕ
ಲಕ್ಷಣ ಮತ್ತು ಹಾನಿ
ಲಾರ್ವ ಹೂ ಮೊಗ್ಗು ಮತ್ತು ಕಾಯಿಗಳಲ್ಲಿ ರಂಧ್ರ ಕೊರೆಯುತ್ತದೆ.
ನಿರ್ವಹಣೆ
1 ಮಿಲಿ ಬಿ.ಟಿ.ಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಹೂ ಬಿಡುವ ಮೊದಲೆ ಸಿಂಪಡಿಸ ಬೇಕು. ನಂತರ 7 ದಿನ ಅಂತರದಲ್ಲಿ ಸೈಪರ್‍ಮೆಥ್ರಿನ್ 25ಈ.ಸಿ. (0.5 ಮಿಲಿ/ಲೀ) ಸಿಂಪಡಿಸಿದ 15 ದಿನಗಳ ಅಂತರದಲ್ಲಿ ಕಾರ್ಬಾರಿಲ್ (3 ಗ್ರಾಂ/ಲೀ) ಅಥವಾ ಇಂಡಾಕ್ಸ್‍ಕಾರ್ಬ್ 14.5 ಎಸ್.ಎಲ್. (0.4 ಮಿಲಿ/ಲೀ) ಸಿಂಪಡಿಸಬೇಕು.

ಬ್ರೂಕಿಡ್
ಲಕ್ಷಣ ಮತ್ತು ಹಾನಿ
ಜಮೀನಿನಲ್ಲಿ ಪ್ರಾರಂಭವಾದ ಕೀಟ ಬಾಧೆ ಕೊಠಡಿಯಲ್ಲಿ ಶೇಕರಣೆ ಮಾಡಿದ ಫಸಲಿಗೆ ಹಾನಿಯುಂಟು ಮಾಡುತ್ತದೆ. ಹುಳುಗಳು ತಿರುಳನ್ನು ತಿಂದು ಬೀಜವನ್ನು ಟೊಳ್ಳಾಗಿಸುತ್ತದೆ.
ನಿರ್ವಹಣೆ
ಸಂಗ್ರಹಣೆಗಿಂತ ಮೊದಲು ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಶೇಕಡ 2ರ ಆಹಾರ ಯೋಗ್ಯ ಎಣ್ಣೆಯಿಂದ ಬೀಜಗಳನ್ನು ಮಿಶ್ರಣ ಮಾಡುವುದರಿಂದ ಬೀಜದ ಸಿಪ್ಪೆಯಲ್ಲಿ ಕೀಟ ಮೊಟ್ಟೆಯಿಡದಂತೆ ತಡೆಯಬಹುದಲ್ಲದೆ 6 ತಿಂಗಳಿನವರೆಗೆ ಫಸಲನ್ನು ಕೆಡದಂತೆ ಇಡಬಹುದು.
ಹೇನು
ಲಕ್ಷಣ ಮತ್ತು ಹಾನಿ
ನುಸಿಗಳ ಗುಂಪು ಎಳೆ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೀಟಬಾಧೆಯಿರುವ ಚಿಗುರನ್ನು ಕತ್ತರಿಸಿ ತೆಗೆಯಬೇಕು ಮತ್ತು ಶೇಕಡ 1ರ ಬೇವಿನ/ಹೊಂಗೆಯ ಸೋಪು ಅಥವಾ ಎಸಿಫೇಟ್ 75ಡಬ್ಲ್ಯೂ.ಪಿ ಯ 1.5 ಗ್ರಾಂ ಪುಡಿಯನ್ನು 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಅಥವಾ ಡೈಮಿಥೊಯೇಟ್ 30 ಈ.ಸಿ. (2 ಮಿಲಿ/ಲೀ) ಸಿಂಪಡಿಸಬೇಕು.

ಎಲೆ ತಿನ್ನುವ ಕಂಬಳಿ ಹುಳು
ರೋಮ ಭರಿತ ಕಂಬಳಿ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದು ಅತ್ಯಂತ ತ್ವರಿತಗತಿಯಲ್ಲಿ ಎಲೆಗಳನ್ನು ತಿಂದು ಹಾಕುತ್ತದೆ. ಕೆಲವೊಮ್ಮೆ ಕೀಟಬಾಧೆಯ ತೀವ್ರತೆ ಜಾಸ್ತಿಯಿರುತ್ತದೆ.
ನಿರ್ವಹಣೆ
ಪ್ರಾಥಮಿಕ ಹಂತದಲ್ಲಿ 0.1 ಮಿಲಿ ಬಿ.ಟಿ.ಯನ್ನು ಒಂದು ಲೀಟರ್ ನೀರಿನಲ್ಲಿ ಸಿಂಪಡಿಸಬಹುದು. ಕೀಟಬಾಧೆ ಜಾಸ್ತಿಯಿದ್ದಲ್ಲಿ ಕ್ಲೋರುಫೈರಿಪಾಸ್ 20 ಈ.ಸಿ (2.5 ಮಿಲಿ/ಲೀ) ಅಥವಾ ಸೈಪರ್‍ಮೆಥ್ರಿನ್ 25 ಈ.ಸಿ (0.5 ಮಿಲಿ/ಲೀ) ಸಿಂಪಡಿಸಬೇಕು.

ಸೌತೆ, ಸೋರೆ ಮತ್ತು ಕುಂಬಳಬೆಳೆಗಳು
ಕುಂಬಳ ಜೀರುಂಡೆ
ಲಕ್ಷಣ ಮತ್ತು ಹಾನಿ
ಗಿಡದ ಬಳ್ಳಿಯಲ್ಲಿ ಹಾರಾಡುವ ಹಳದಿ ಕಂದು ಅಥವಾ ಕಿತ್ತಳೆ ಬಣ್ಣದ ಜೀರುಂಡೆಗಳಿಂದ ಎಲೆಗಳಿಗೆ ಹಾನಿ ಉಂಟಾಗುತ್ತದೆ. ಬೇರು ಮತ್ತು ನೆಲಕ್ಕೆ ಮುಟ್ಟಿರುವ ಗಿಡದ ಭಾಗವನ್ನು ಲಾರ್ವಗಳು ತಿನ್ನುತ್ತವೆ. ಗಿಡ ಮೊಳಕೆ ಬಂದೊಡನೆ ಪ್ರೌಢ ಕೀಟಗಳು ಎಲೆಗಳನ್ನು ಉದುರಿಸುತ್ತವೆ.
ನಿರ್ವಹಣೆ
ಕೀಟದ ಸಂಖ್ಯೆ ಕಡಿಮೆ ಇದ್ದರೆ ಹೆಕ್ಕಿ ನಾಶಪಡಿಸಬೇಕು. ಕಾರ್ಬರಿಲ್ 50ಡಬ್ಲ್ಯೂ.ಪಿ. (4 ಗ್ರಾಂ/ಲೀ) ಅಥವಾ ಡಿ.ಡಿ.ವಿ.ಪಿ. 76ಈ.ಸಿ. (1 ಮಿಲಿ/ಲೀ) ಸಿಂಪಡಿಸಬೇಕು.

ಎಲೆಸುರಂಗ ಹುಳ
ಲಕ್ಷಣ ಮತ್ತು ಹಾನಿ
ಲಾರ್ವಗಳು ಎಲೆಗಳನ್ನು ಭಕ್ಷಿಸುವುದರಿಂದ ಹಾವಿನಾಕೃತಿಯ ಸುರಂಗಗಳು ಎಲೆಯಲ್ಲಿ ಕಂಡುಬರುತ್ತವೆ.

ನಿರ್ವಹಣೆ
ಹೆಚ್ಚು ರಾಸಾಯನಿಕದ ಸಿಂಪಡಣೆಯಿಂದ ಕೀಟದ ಸಹಜ ಶತ್ರು ನಾಶವಾಗುತ್ತದೆ. ಗಿಡ ಮೊಳಕೆಯೊಡೆದೊಡನೆ ಪ್ರತಿ ಹೆಕ್ಟೇರು ಪ್ರದೇಶಕ್ಕೆ 250 ಕೆ.ಜಿ. ಬೇವಿನ ಹಿಂಡಿಯನ್ನು ಹರಡಬೇಕು. ಬೀಜ ಮೊಳೆತ ನಂತರ ಬೀಜದ ಎಲೆಗಳನ್ನು ಕಿತ್ತು ಹಾಕಬೇಕು. ಅವಶ್ಯಕತೆ ಎನಿಸಿದಾಗ ಬೇವಿನ ಉತ್ಪನ್ನ (3 ಮಿಲಿ/ಲೀ) ಅಥವಾ ಬೇವಿನ ಬೀಜದ ಸಾರ (ಶೇಕಡ 4) ಪ್ರತೀ 5 ದಿನಗಳಿಗೊಮ್ಮೆ ಸಿಂಪಡಿಸಬೇಕು. ಕ್ಲೋರೋಪೈರಿಪಾಸ್ 20 ಈ.ಸಿ. (2.5 ಮಿಲಿ/ಲೀ) ದ್ರಾವಣದಿಂದ ಮಣ್ಣನ್ನು ನೆನಸಬೇಕು. ಇದರಿಂದ ಕೋಶಾವಸ್ಥೆಯ ಲಾರ್ವಗಳು ನಾಶವಾಗುತ್ತದೆ. ವಾರಕ್ಕೊಮ್ಮೆ ಕೆಳಹಂತದ 2-3 ಎಲೆಗಳನ್ನು ಕಿತ್ತು ಹಾಕಬೇಕು. ಕೀಟಬಾಧೆ ಮಿತಿಮೀರಿದಾಗ ಪೀಡಿತ ಎಲೆಗಳನ್ನು ಕಿತ್ತು ನಾಶಪಡಿಸಬೇಕು. ಬೇವಿನ ಸೋಪು (5 ಗ್ರಾಂ/ಲೀ)/ ಟ್ರೆಯಾಜೊಫಾಸ್ 40 ಈ.ಸಿ. (1 ಮಿಲಿ/ಲೀ) ಸಿಂಪಡಣೆ ಮಾಡಬೇಕು ಒಂದು ವಾರದನಂತರ ಅವಶ್ಯಕತೆ ಕಂಡುಬಂದರೆ ಬೇವಿನ ಉತ್ಪನ್ನಗಳಿಂದ ಸಿಂಪಡಣೆ ಮಾಡಬೇಕು.

ಹಣ್ಣಿನ ನೊಣ
ಲಕ್ಷಣ ಮತ್ತು ಹಾನಿ
ಎಳೆಯ ಮತ್ತು ಮಾಗಿದ ಕಾಯಿ ಕೊಳೆಯುತ್ತದೆ.
ನಿರ್ವಹಣೆ
ಕೀಟ ನಿರೋಧಕ ಅರ್ಕಾ ಸೂರ್ಯಮುಖಿ ತಳಿಯನ್ನು ಬೆಳೆಯಬೇಕು. ಬೀಜ ಮೊಳಕೆಯೊಡೆದಾಗ ಮತ್ತು ಹೂ ಬಿಡುವ ಸಮಯದಲ್ಲಿ ಬೇವಿನ ಹಿಂಡಿಯನ್ನು ಮಣ್ಣಿನಲ್ಲಿ ಹರಡಬೇಕು. ಹೂ ಬಿಟ್ಟ ನಂತರ ಪ್ರತಿ 10 ದಿನ ಅಂತರದಲ್ಲಿ ಶೇಕಡ 1ರ ಬೇವಿನ ಸೋಪು ಅಥವಾ ಶೇಕಡ 4ರ ಬೇವಿನ ಬೀಜದ ಸಾರವನ್ನು ಸಿಂಪಡಿಸಬೇಕು. ಜಜ್ಜಿದ ಕುಂಬಳಕಾಯಿಗೆ 100 ಗ್ರಾಂ ಬೆಲ್ಲ ಮತ್ತು 2 ಮಿಲಿ ಮೆಲಥಿಯಾನ್ ಬೆರೆಸಿ ಮಿಶ್ರಣ ಮಾಡಬೇಕು. ಇವುಗಳನ್ನು ಜಮೀನಿನ 4-6 ಕಡೆ ಇಟ್ಟಾಗ ಹುಳಿ ಬಂದ ಕುಂಬಳಕಾಯಿಗೆ ಕೀಟಗಳು ಆಕರ್ಷಿಸಲ್ಪಟ್ಟು ಮೊಟ್ಟೆಗಳನ್ನಿಟ್ಟು ಸಾಯಲ್ಪಡುತ್ತವೆ. ಗಂಡು ಕೀಟಗಳನ್ನು ನಿರ್ನಾಮ ಮಾಡಲು ಕೀಟಾಕರ್ಷಕ ಬಲೆಗಳನ್ನು ಎಕರೆಗೆ 10 ರಂತೆ ಕಟ್ಟಬೇಕು. ಕಾರ್ಬರಿಲ್ 50ಡಬ್ಲ್ಯೂ.ಪಿ. (3 ಗ್ರಾಂ/ಲೀ) ಅಥವಾ ಡೆಲ್ಟಾಮೆಥ್ರಿನ್ (1 ಮಿಲಿ/ಲೀ) ಮತ್ತು ಶೇಕಡ 1ರ ಬೆಲ್ಲವನ್ನು ಮಿಡಿಕಚ್ಚುವ ಮತ್ತು ಕಾಯಿ ಮಾಗುವ ಸಮಯದಲ್ಲಿ ಎಲೆಗಳಿಗೆ ಸಿಂಪಡಿಸುವುದರಿಂದ ಕೀಟವನ್ನು ಹತೋಟಿಯಲ್ಲಿಡಬಹುದು. ಕೀಟ ಬಾಧಿತ ಎಲ್ಲಾ ಹಣ್ಣುಗಳನ್ನು ಸುಡುವುದರ ಅಥವಾ ಹೂಳುವುದರ ಮೂಲಕ ನಾಶಪಡಿಸಬೇಕು.

ಹೊಪ್ಪಳೆ ಜೀರುಂಡೆ (ಬ್ಲಿಸ್ಟರ್ ಜೀರುಂಡೆ)
ಲಕ್ಷಣ ಮತ್ತು ಹಾನಿ
ಹೊಳೆಯುವ ಬಣ್ಣದ (3 ಕಪ್ಪು ಮತ್ತು 3 ಹಳದಿ ಪಟ್ಟಿಯ) ಜೀರುಂಡೆಗಳು ಹೂವನ್ನು ತಿನ್ನುತ್ತದೆ.
ನಿರ್ವಹಣೆ
ಹಾರಾಡುವ ಪ್ರೌಢ ಕೀಟಗಳನ್ನು ಹೆಕ್ಕಿ ನಾಶಪಡಿಸಬೇಕು.

ದುರ್ವಾಸನೆಯ ತಿಗಣೆ
ಲಕ್ಷಣ ಮತ್ತು ಹಾನಿ
ಗುಂಪಾಗಿರುವ ಕೀಟಗಳು ಎಳೆಯ ಗಿಡದ ಎಲೆ ಮತ್ತು ಇತರ ಭಾಗಗಳಿಂದ ರಸ ಹೀರುತ್ತವೆ. ತಿಗಣೆಯನ್ನು ಮುಟ್ಟಿದಾಗ ದುರ್ಗಂಧ ಬೀರುತ್ತದೆ.
ನಿರ್ವಹಣೆ
ಕೀಟ ಬಾಧೆ ಕಡಿಮೆ ಇದ್ದಾಗ ಹೆಕ್ಕಿ ಕೀಟಗಳನ್ನು ನಾಶಪಡಿಸಬೇಕು. ಬಾಧೆ ಹೆಚ್ಚಾದರೆ ಎಂಡೋಸಲ್ಫಾನ್ 35 ಈ.ಸಿ. (2 ಮಿಲಿ/ಲೀ) ಅಥವಾ ಕಾರ್ಬರಿಲ್ 50 ಡಬ್ಲ್ಯೂ.ಪಿ. (3 ಗ್ರಾಂ/ಲೀ) ಸಿಂಪಡಿಸಬೇಕು.

ಹೇನು
ಲಕ್ಷಣ ಮತ್ತು ಹಾನಿ
ಎಳೆಯ ಎಲೆ, ಹೂವಿನ ಮೊಗ್ಗುಗಳಲ್ಲಿ ಗುಂಪಾಗಿರುತ್ತದೆ ಮತ್ತು ರಸ ಹೀರಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ನಿರ್ವಹಣೆ ಇಮಿಡಾಕ್ಲೋಫ್ರಿಡ್ 17.8 ಎಸ್.ಎಲ್. (0.4 ಮಿಲಿ/ಲೀ) ಅಥವಾ ಫಿಪ್ರೊನಿಲ್ 50 ಈ.ಸಿ. (1.5 ಮಿಲಿ/ಲೀ) ಸಿಂಪಡಿಸಬೇಕು.

ನುಸಿ
ಲಕ್ಷಣ ಮತ್ತು ಹಾನಿ
ನುಸಿಗಳ ಗುಂಪು ಎಲೆಗಳ ತಳ ಭಾಗದಲ್ಲಿ ನೆಲೆಸಿ ರೇಶ್ಮೆಯಂತ ಬಲೆಕಟ್ಟುತ್ತದೆ.
ನಿರ್ವಹಣೆ
ಬೇವಿನ ಅಥವಾ ಹೊಂಗೆಯ ಸೋಪು (10 ಗ್ರಾಂ/ಲೀ) ಎಲೆಯ ತಳಭಾಗದಲ್ಲಿ ಸಿಂಪಡಿಸಬೇಕು. ನಂತರ ಸರದಿಯಲ್ಲಿ ಡೈಮಿಥೊಯೇಟ್ 30ಈ.ಸಿ. (2 ಮಿಲಿ/ಲೀ) ಅಥವಾ ಇಥಿಯಾನ್ 50ಈ.ಸಿ. (1 ಮಿಲಿ/ಲೀ) ಅಥವಾ ನೀರಿನಲ್ಲಿ ಕರಗುವ ಗಂಧಕ 80 ಡಬ್ಲ್ಯೂ.ಪಿ. (3 ಗ್ರಾಂ/ಲೀ) ಸಿಂಪಡಿಸಬೇಕು.

ಥ್ರಿಪ್ಸ್
ಲಕ್ಷಣ ಮತ್ತು ಹಾನಿ
ಎಳೆಯ ಎಲೆಗಳನ್ನು ತಿನ್ನುತ್ತವೆ, ನಂತರ ಎಲೆ ಒಳಗಡೆ ಮುದುಡಿ ಕೊಳ್ಳುತ್ತದೆ
ನಿರ್ವಹಣೆ
ಎಸಿಫೇಟ್ 75ಡಬ್ಲ್ಯೂ.ಪಿ. (0.75 ಮಿಲಿ/ಲೀ) ಹೊಂಗೆಣ್ಣೆ/ ಬೇವಿನೆಣ್ಣೆ (2 ಮಿಲಿ/ಲೀ)+ ಅಂಟುದ್ರಾವಣ (0.5 ಮಿಲಿ/ಲೀ) ಸಿಂಪಡಿಸಬೇಕು.

ಗರಿಯ ಪತಂಗ
ಲಕ್ಷಣ ಮತ್ತು ಹಾನಿ
ರೋಮದಿಂದಾವೃತ, ಬದಿಯಲ್ಲಿ ಪಟ್ಟಿಗಳನ್ನು ಹೊಂದಿದ ಚಿಕ್ಕ ಹಸಿರು ಬಣ್ಣದ ಲಾರ್ವಗಳು ಎಲೆಗಳನ್ನು ತಿಂದು ರಂಧ್ರ ಮಾಡುತ್ತದೆ.
ನಿರ್ವಹಣೆ
ಕೈಯಿಂದ ಹೆಕ್ಕಿ ನಾಶಪಡಿಸುವುದು ಉತ್ತಮ ಕ್ರಮ. ಡಿ.ಡಿ.ವಿ.ಪಿ. 76ಈ.ಸಿ. (1 ಮಿಲಿ/ಲೀ) ಸಿಂಪಡಿಸಬಹುದು.

ಎಲೆ ತಿನ್ನುವ ಕಂಬಳಿ ಹುಳು
ಲಕ್ಷಣ ಮತ್ತು ಹಾನಿ
ಹೊಳೆಯುವ ಹಸಿರು ಬಣ್ಣದ ಉದ್ದನೆಯ ಕಂಬಳಿ ಹುಳುಗಳು ಎಲೆಯನ್ನು ತಿನ್ನುತ್ತವೆ. ಕೋಶಾವಸ್ಥೆಯಲ್ಲಿರುವರೇಶ್ಮೆಯಂತ ಹುಳುವಿನ ಗೂಡನ್ನು ಎಲೆಯ ಮೇಲೆ ಕಾಣಬಹುದು.
ನಿರ್ವಹಣೆ
ಬೀಜ ಮೊಳಕೆ ಬಂದೊಡನೆ ಬೇವಿನ ಹಿಂಡಿಯನ್ನು ಹರಡಬೇಕು. ಎಲೆಯಲ್ಲಿ ಮೊಟ್ಟೆಗಳನ್ನು ವೀಕ್ಷಿಸಿದೊಡನೆ ಬಿಟಿ (1 ಮಿಲಿ/ಲೀ) ಸಿಂಪಡಿಸಬೇಕು. ಸಂಪರ್ಕ ಕೀಟನಾಶಕವಾದ ಕಾರ್ಬರಿಲ್ 50 ಡಬ್ಲ್ಯೂ.ಪಿ. (3 ಗ್ರಾಂ/ಲೀ) ಅಥವಾ ಇಂಡಾಕ್ಷಕಾರ್ಬ್ 14.5 ಎಸ್.ಸಿ. (0.5 ಮಿಲಿ/ಲೀ) ಮತ್ತು ಬೇವಿನ/ಹೊಂಗೆಯ ಸೋಪು (10 ಗ್ರಾಂ/ಲೀ) ಸರದಿಯಲ್ಲಿ ಸಿಂಪಡಿಸಬೇಕು.

ಕಾಂಡ ಗೀರುವ ಹುಳ
ಲಕ್ಷಣ ಮತ್ತು ಹಾನಿ
ಒಮ್ಮೊಮ್ಮೆ ಹಾಗಲಕಾಯಿಯಲ್ಲಿ ತೀವ್ರ ಹಾನಿ ಕಂಡು ಬರುತ್ತದೆ. ಬಳ್ಳಿಗಳ ಮೇಲೆಲ್ಲಾ ಗಾಯಗಳು ಕಂಡುಬರುತ್ತದೆ.
ನಿರ್ವಹಣೆ
ಬಳ್ಳಿಯ ಪೀಡಿತ ಭಾಗವನ್ನು ನಾಶಪಡಿಸಬೇಕು. ಕಾರ್ಬರಿಲ್ 50 ಡಬ್ಲ್ಯೂ.ಸಿ. (3 ಗ್ರಾಂ/ಲೀ) ಅಥವಾ ಎಸಿಫೇಟ್ 75 ಡಬ್ಲ್ಯೂ.ಪಿ. (1 ಗ್ರಾಂ/ಲೀ) ಸಿಂಪಡಿಸಬೇಕು.

ಫ್ರೆಂಚ್ ಬೀನ್
ಕಾಂಡದ ಕೀಟ
ಲಕ್ಷಣ ಮತ್ತು ಹಾನಿ
ಬೀಜ ಮೊಳಕೆಯೊಡೆದೊಡನೆ ಪ್ರೌಢ ಕೀಟಗಳು ಎಲೆಯ ಮೇಲಿನ ಪೊರೆಯನ್ನು ತೂತು ಮಾಡಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯಿಂದ ಹೊರಬಂದ ಲಾರ್ವಗಳು ಎಲೆ ತೊಟ್ಟು ಮತ್ತು ಕಾಂಡದಲ್ಲಿ ಸುರಂಗ ನಿರ್ಮಿಸಿ ಸಸಿಗಳಿಗೆ ಹೆಚ್ಚು ಹಾನಿ ಉಂಟು ಮಾಡುತ್ತವೆ. ಬಿತ್ತನೆ ಮಾಡಿದ 30 ದಿನಗಳ ನಂತರ ಗಿಡ ಸೊರಗುತ್ತದೆ. ಮಳೆಗಾಲದಲ್ಲಿ ಒಣವಾತಾವರಣ ಮುಂದುವರಿದಾಗ ಕೀಟ ಬಾಧೆ ಅತಿಯಾಗಿ ಶೇಕಡ 80-90ರಷ್ಟು ಗಿಡಗಳು ಸೊರಗಿ ಹೋಗುತ್ತದೆ.
ನಿರ್ವಹಣೆ
ಪ್ರೌಢ ಕೀಟಕ್ಕಾಗಿ ವೀಕ್ಷಣೆ ಅಗತ್ಯ. ಮೊಳಕೆ ಬಂದ ಸಸಿಗಳಲ್ಲಿ ಚುಚ್ಚಿದ ಗುರುತು ಮತ್ತು ಎಲೆ ತೊಟ್ಟಿನಲ್ಲಿ ಸುರಂಗ ಗುರುತಿಗಾಗಿ ವೀಕ್ಷಣೆ ಅಗತ್ಯ. ಪ್ರೌಢ ಕೀಟ ಕಂಡೊಡನೆ ಎಂಡೋಸಲ್ಫಾನ್ (2 ಮಿಲಿ/ಲೀ) ಅಥವಾ ಎಸಿಫೇಟ್ 75ಡಬ್ಲ್ಯೂ.ಪಿ. (1 ಗ್ರಾಂ/ಲೀ) ಸಿಂಪಡಣೆ ಅಗತ್ಯ.

ಎಲೆ ಜಿಗಿತ ಹುಳು
ಲಕ್ಷಣ ಮತ್ತು ಹಾನಿ
ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಜಮೀನಿನಲ್ಲಿ ಅಡ್ಡಾಡಿದಾಗ ಪ್ರೌಢ ಕೀಟಗಳ ಗುಂಪಿನ ಹಾರಾಟ ಕಂಡು ಬರುತ್ತದೆ. ಎಲೆ ಹಳದಿ ಬಣ್ಣಕ್ಕೆ ತಿರುಗಿ ಅಂಚು ತಿರುಚಿ ಕೊಂಡು ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಎಲೆ ಉದುರಿ ಕೆಳಗೆ ಬೀಳುತ್ತದೆ.
ನಿರ್ವಹಣೆ
ಎಳೆ ಸಸಿಗಳು ಕೀಟಬಾಧೆಗೆ ಬೇಗನೆ ತುತ್ತಾಗುತ್ತವೆ. ಡೆಲ್ಟಾಮೆಥ್ರಿನ್ (0.4 ಮಿಲಿ/ಲೀ) ಅಥವಾ ಇಮಿಡಾಕ್ಲೋಫ್ರಿಡ್ 17.8ಎಸ್.ಡಲ್. (0.4 ಮಿಲಿ/ಲೀ) ಅಥವಾ ಥೈಯಾಮೆಥೋಕ್ಷಾಮ್ 70 ಡಬ್ಲ್ಯೂ.ಎಸ್. (0.2 ಗ್ರಾಂ/ಲೀ) ಸಿಂಪಡಣೆಯ ನಂತರ ಡೈಮಿಥೊಯೇಟ್ 30ಈ.ಸಿ (2 ಮಿಲಿ/ಲೀ) ಸಿಂಪಡಿಸಬೇಕು.

ಎಲೆ ಸುರಂಗ ಹುಳು
ಹಾವಿನಾಕಾರದ ಸುರಂಗವನ್ನು ಎಲೆಗಳಲ್ಲಿ ಕೊರೆಯುತ್ತದೆ. ಪ್ರಾಥಮಿಕವಾಗಿ ಕೀಟ ಬಾಧೆ ಬೀಜದಳದಲ್ಲಿ ಪ್ರಾರಂಭವಾಗುತ್ತದೆ. ತಡೆಗಟ್ಟದಿದ್ದರೆ ಇತರ ಎಲೆಗಳಿಗೂ ಪಸರಿಸುತ್ತದೆ.
ನಿರ್ವಹಣೆ ಅಗತ್ಯತೆ ಇದ್ದರೆ ಬೇವಿನ ಉತ್ಪನ್ನಗಳನ್ನು (3 ಮಿಲಿ/ಲೀ) ಅಥವಾ ಬೇವಿನ ಬೀಜದ ಸಾರ ಶೇಕಡ 4 ನ್ನು 5 ದಿನಗಳ ಅಂತರದಲ್ಲಿ ಸಿಂಪಡಿಸಬೇಕು ಮಣ್ಣನ್ನು ಕ್ಲೋರೊಪೈರಿಪಾಸ್ 20ಈ.ಸಿ. (2.5 ಮಿಲಿ/ಲೀ) ದ್ರಾವಣದಿಂದ ತೊಯ್ಸುವುದರಿಂದ ಕೋಶಾವಸ್ಥೆಯಿಂದ ಹೊರಬರುವ ಲಾರ್ವಗಳು ಕೊಲ್ಲಲ್ಪಡುತ್ತವೆ. ಕೆಳಹಂತ 2-3 ಎಲೆಗಳನ್ನು ವಾರಕ್ಕೊಮ್ಮೆ ಕಿತ್ತುಹಾಕಬೇಕು. ಕೀಟಬಾಧೆ ಅತೀ ಹೆಚ್ಚಾದರೆ ಎಲ್ಲಾ ಎಲೆಗಳನ್ನು ಕಿತ್ತು ನಾಶಪಡಿಸಬೇಕು. ಬೇವಿನ ಸೋಪು (5 ಗ್ರಾಂ/ಲೀ) ಟ್ರೈಯಾಜೊಫಾಸ್ 40ಈ.ಸಿ. (1 ಮಿಲಿ/ಲೀ) ಸಿಂಪಡಿಸಬೇಕು. ಅಗತ್ಯವಿದ್ದರೆ ಸಿಂಪಡಣೆಯನ್ನು ಪುನರಾವರ್ತಿಸಬೇಕು.

ಥ್ರಿಪ್ಸ್
ಲಕ್ಷಣ ಮತ್ತು ಹಾನಿ
ಎಲೆ, ಹೂ ಮತ್ತು ಕಾಯಿ ಹಾನಿಗೊಳಪಡುತ್ತದೆ. ಒಮ್ಮೊಮ್ಮೆ ತೀವ್ರ ಬಾಧೆಯಿಂದ ಎಲೆ ನೆರಿಗೆ ಕಟ್ಟುತ್ತದೆ, ಹೂ ಕಳಚಿ ಬೀಳುತ್ತದೆ ಮತ್ತು ಕಾಯಿಗಳ ಮೇಲೆ ಗೀರುಗಳು ಕಂಡು ಬರುತ್ತದೆ.

ನಿರ್ವಹಣೆ
ಒಣವಾತಾವರಣದಲ್ಲಿ ಅಥವಾ ಉಷ್ಣತೆ ಹೆಚ್ಚಾದಾಗ ಈ ಕೀಟ ಗೋಚರಿಸುತ್ತದೆ. ಹಾನಿಗೊಳಗಾದ ಕೊಂಬೆಯನ್ನು ಕತ್ತರಿಸಿ ತೆಗೆಯಬೆಕು. ಬೇವಿನ ಅಥವಾ ಹೊಂಗೆಣ್ಣೆಯ ಸೋಪು (ಶೇಕಡ 1) ಅಥವಾ ಎಸಿಫೇಟ್ 75ಡಬ್ಲ್ಯೂ.ಪಿ. (0.75 ಗ್ರಾಂ/ಲೀ)+ ಹೊಂಗೆಣ್ಣೆ/ ಬೇವಿನೆಣ್ಣೆ (2 ಮಿಲಿ/ಲೀ)+ ಅಂಟು ದ್ರಾವಣ (0.5 ಮಿಲಿ/ಲೀ) ಅಥವಾ ಡೈಮಿಥೊಯೆಟ್ (2 ಮಿಲಿ/ಲೀ) ಸಿಂಪಡಿಸಬೇಕು.

ಕೆಂಪು ಜೇಡ ನುಸಿ
ಲಕ್ಷಣ ಮತ್ತು ಹಾನಿ
ಎಲೆ ತಳ ಭಾಗದಲ್ಲಿ ಕೆಂಪು ಜೇಡ ನುಸಿ ಕಾಣಿಸಿಕೊಳ್ಳುತ್ತದೆ. ಕೀಟದ ಸಾಂದ್ರತೆ ಜಾಸ್ತಿಯಾದರೆ ಬಲೆಕಟ್ಟಿ ಅಲ್ಲಿಂದಲೆ ಆಹಾರ ಸೇವಿಸುತ್ತದೆ. ಬಲೆ ಹೆಚ್ಚಾಗಿ ಹಳೆಯ ಎಲೆಯಲ್ಲಿ ಕಂಡುಬರುತ್ತದೆ
ನಿರ್ವಹಣೆ
ಹಳೆಯ ಗಿಡಗಳಲ್ಲಿ ಒಮ್ಮೊಮ್ಮೆ ಕೀಟ ಬಾಧೆ ಜಾಸ್ತಿಯಿರುತ್ತದೆ. ಬೇವಿನೆಣ್ಣೆ/ಹೊಂಗೆಣ್ಣೆಯ ಸೋಪಿನ (10 ಗ್ರಾಂ/ಲೀ) ದ್ರಾವಣವನ್ನು ಎಲೆಯ ತಳಭಾಗಕ್ಕೆ ಚೆನ್ನಾಗಿ ಸಿಂಪಡಿಸಬೆಕು. ತದನಂತರ ಡೈಮಿಥೊಯೇಟ್ 30ಈ.ಸಿ. (2 ಮಿಲಿ/ಲೀ) ಅಥವಾ ಇಥಿಯೋನ್ 50ಈ.ಸಿ. (1 ಮಿಲಿ/ಲೀ) ಅಥವಾ ನೀರಿನಲ್ಲಿ ಕರಗುವ ಗಂಧಕ 80ಡಬ್ಲ್ಯೂ.ಪಿ. (3 ಗ್ರಾಂ/ಲೀ) ಸಿಂಪಡಿಸಬೇಕು.

ಬೆಂಡೆಕಾಯಿ
ಎಲೆ ಜಿಗಿತ ಹುಳು
ಕೀಟ ಬಾಧಿತ ಎಲೆಗಳು ಅಂಚಿನಲ್ಲಿ ಮೇಲ್ಭಾಗಕ್ಕೆ ಮುದುಡಿಕೊಳ್ಳುತ್ತದೆ. ವಿವಿಧ ಬಣ್ಣದ ಚಿಕ್ಕ ನಿಂಪ್‍ಗಳು ಎಲೆಯ ತಳ ಭಾಗದಲ್ಲಿ ಕಂಡು ಬರುತ್ತದೆ.
ನಿರ್ವಹಣೆ
ಇಮಿಡಾಕ್ಲೋಫ್ರಿಡ್ (7 ಗ್ರಾಂ/ಕೆ.ಜಿ ಬೀಜಕ್ಕೆ) ಅಥವಾ ಥೈಯೋಮೆಥೊಕ್ಷಾಮ್ (4.5 ಗ್ರಾಂ/ಕೆ.ಜಿ. ಬೀಜಕ್ಕೆ) ನಿಂದ ಬೀಜೋಪಚಾರ ಮಾಡಬೇಕು ಬೀಜ ಬಿತ್ತಿದ 30 ದಿನಗಳ ನಂತರ ಥೈಯೋಮೆಥೊಕ್ಷಾಮ್ 70 ಡಬ್ಲ್ಯೂ.ಎಸ್. (0.2 ಗ್ರಾಂ/ಲೀ) ಸಿಂಪಡಿಸಬೇಕು ಮತ್ತು 15 ದಿನಗಳಿಗೊಮ್ಮೆ ಪುನರಾವರ್ತಸಬೇಕು.

ಕೊಂಬೆ ಮತ್ತು ಕಾಯಿಕೊರಕ
ಲಕ್ಷಣ ಮತ್ತು ಹಾನಿ
ಹಾನಿಗೊಳಗಾದ ಕೊಂಬೆಗಳು ಸೊರಗುತ್ತದೆ. ಲಾರ್ವ ಅಥವಾ ಅದರ ಹಿಕ್ಕೆಗಳು ಹಾನಿಗೊಳಗಾದ ಕಾಯಿಯ ಒಳಗೆ ಗೋಚರಿಸುತ್ತದೆ. ಬಣ್ಣದ ಬಾಲ್‍ವರ್ಮ್‍ಗಳು ವರ್ಷವಿಡೀ ಕಂಡುಬಂದು ಮಾರ್ಚ್-ಮೇ ಮತ್ತು ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಹೆಣ್ಣು ಕೀಟ ಉದ್ದನೆಯ ಬದುಗಳುಳ್ಳ ಹಸಿರು ಬಣ್ಣದ ಮೊಟ್ಟೆಗಳನ್ನು ಹೂ ಮೊಗ್ಗಿನಲ್ಲಿ ಮತ್ತು ಹೂಗಳ ಮೇಲೆ ಇಡುತ್ತದೆ. ಬದನೆಯಲ್ಲಿ ಹೂ ಬಿಡುವುದಕ್ಕಿಂತ ಮೊದಲು ಮತ್ತು ನಂತರ ಕಾಂಡ ಮತ್ತು ಕಾಯಿಗಳಲ್ಲಿ ಹುಳುಗಳ ಉಪಟಳ ಕಂಡುಬರುತ್ತದೆ
ನಿರ್ವಹಣೆ
ಬಾಧಿತ ಕೊಂಬೆ ಮತ್ತು ಕಾಯಿಗಳನ್ನು ಆರಿಸಿ ತೆಗೆದು ನಾಶಪಡಿಸಬೇಕು. ಬೀಜ ಮೊಳಕೆಯೊಡೆಯುವ ಸಮಯದಲ್ಲಿ 250 ಕೆ.ಜಿ ಬೇವಿನ ಹಿಂಡಿಯನ್ನು ಎರಡು ಬಾರಿ ಹರಡ ಬೇಕು. ಬೇವಿನ ಸೋಪು (ಶೇಕಡ 10) ಅಥವಾ ಬೇವಿನ ಬೀಜದ ಸಾರವನ್ನು (ಶೇಕಡ 4) ಹತ್ತು ದಿನದ ಅಂತರದಲ್ಲಿ ಸಿಂಪಡಿಸಬೇಕು. ಮಳೆಗಾಲದಲ್ಲಿ ಸಂಪರ್ಕ ಕೀಟನಾಶಕಗಳಾದ ಇಂಡಾಕ್ಷಕಾರ್ಬ್ 14.5ಈ.ಸಿ. (0.4 ಮಿಲಿ/ಲೀ) ಸಿಂಪಡಿಸಬೇಕು. ಒಂದು ವಾರ ನಿರೀಕ್ಷಣೆಯ ನಂತರ ಕೀಟ ಕಂಡು ಬಂದರೆ ಯಾವುದೇ ಸಂಪರ್ಕ ಕೀಟನಾಶಕ ಬಳಕೆಯನ್ನು ಶಿಫಾರಸ್ಸು ಮಾಡಲಾಗಿದೆ. ಸಸಿಗಳನ್ನು ಓಲಾಡುವಂತೆ ನೆಡಬಾರದು.

ಹೊಪ್ಪಳೆ ಜೀರುಂಡೆ
ಲಕ್ಷಣ ಮತ್ತು ಹಾನಿ
ಹೊಳೆಯುವ ಬಣ್ಣದ (3 ಕಪ್ಪು ಮತ್ತು 3 ಹಳದಿ ಪಟ್ಟಿ) ಜೀರುಂಡೆಗಳು ಹೂಗಳನ್ನು ಭಕ್ಷಿಸುತ್ತವೆ. ಒಮ್ಮೊಮ್ಮೆ ಕಾಣಿಸಿಕೊಳ್ಳುವ ಕೀಟ ಇದಾಗಿದೆ.
ನಿರ್ವಹಣೆ
ಕೀಟಗಳನ್ನು ಹೆಕ್ಕಿ ನಾಶಪಡಿಸಬೇಕು

ಟೊಮೇಟೊ
ಕಾಯಿಕೊರಕ
ಲಕ್ಷಣ ಮತ್ತು ಹಾನಿ
ಕೀಟ ಹಾನಿ ಹೂವಿನಿಂದ ಪ್ರಾರಂಭವಾಗುತ್ತದೆ. ಎಳೆಯ ಎಲೆಗಳಲ್ಲಿ ಮೊಟ್ಟೆಗಳನ್ನಿಟ್ಟು ಅದರಿಂದ ಹೊರಬಂದ ಲಾರ್ವಗಳು ಎಲೆಗಳನ್ನು ತಿಂದು ನಾಶಪಡಿಸುತ್ತವೆ. ಅರ್ಧ ದೇಹ ಹೊರಗಿಟ್ಟು ಕಾಯಿಗಳಲ್ಲಿ ತೂತು ಕೊರೆಯುತ್ತದೆ. ಒಂದು ಲಾರ್ವ ಅನೇಕ ಕಾಯಿಗಳಿಗೆ ತೂತು ಕೊರೆಯುತ್ತದೆ. ಒಟ್ಟಾರೆ ಶೇಕಡ 5-50ರಷ್ಟು ನಷ್ಟವಾಗುತ್ತದೆ.
ನಿರ್ವಹಣೆ
ಸಮಗ್ರ ಕೀಟ ಹತೋಟಿ ಕ್ರಮದಿಂದ ಈ ಕೀಟವನ್ನು ನಿಯಂತ್ರಿಸಬಹುದು. 40 ದಿವಸದ ಎತ್ತರದ ಆಫ್ರಿಕ ಚೆಂಡು ಹೂವಿನ ತಳಿಯನ್ನು (ಹಳದಿ ಹೂಗಳನ್ನು ಹೆಚ್ಚಾಗಿ ಬಿಡುತ್ತದೆ) 25 ದಿವಸಗಳ ಟೊಮೆಟೋ ಗಿಡಗಳ 16 ಸಾಲಿಗೆ ಒಂದು ಸಾಲಿನಂತೆ ನಾಟಿ ಮಾಡಬೇಕು. ಚೆಂಡು ಹೂವಿನ ಗಿಡ ಮತ್ತು ಟೊಮೆಟೋ ಗಿಡಗಳು ಒಂದೇ ಸಮಯಕ್ಕೆ ಹೂ ಬಿಟ್ಟಾಗ ಕೀಟ ನಿಯಂತ್ರಣ ಪ್ರಮಾಣ ಜಾಸ್ತಿಯಿರುತ್ತದೆ. ಕಾಯಿಕೊರಕದ ಕೀಟವು ಚೆಂಡು ಹೂವಿನಲ್ಲಿ ಇಟ್ಟ ಮೊಟ್ಟೆಯಿಂದ ಹೊರಬಂದ ಲಾರ್ವಗಳು ಹೂವನ್ನು ತಿನ್ನುತ್ತವೆ. ಚೆಂಡು ಗಿಡಕ್ಕೆ ಸಿಂಪಡಣೆಯ ಅಗತ್ಯವಿಲ್ಲ. ಆದರೆ ಟೊಮೆಟೋ ನಾಟಿ ಮಾಡಿದ 28 ಮತ್ತು 35 ದಿನಗಳಲ್ಲಿ ಎಂಡೋಸಲ್ಫಾನ್ 35ಈ.ಸಿ. (1.6 ಮಿಲಿ/ಲೀ) ಅಥವಾ ಡೈಕ್ಲೋರೊವಾಸ್ (1 ಮಿಲಿ/ಲೀ) ಸಿಂಪಡಿಸಿ ಕಾಯಿಕೊರಕದಿಂದ ಆಗುವ ಹಾನಿಯನ್ನು ಶೇಕಡ 2 ಗಿಂತ ಕಡಿಮೆಯಾಗಿಸಬಹುದು. ಗಿಡಗಳು ಹೂಬಿಡುವ ಸಮಯದಲ್ಲಿ (ನಾಟಿಮಾಡಿದ 20-25 ದಿನಗಳ ನಂತರ) ಪ್ರೌಢ ಕೀಟಗಳು ಕಂಡುಬಂದು ಮೊಟ್ಟೆಗಳನ್ನಿಡುತ್ತವೆ. ತುದಿಯ ಮೂರು ಎಲೆಗಳನ್ನು ವೀಕ್ಷಿಸಿದಾಗ ಮೊಟ್ಟೆಗಳು ಕಂಡುಬರುತ್ತದೆ. 30 ಎಳೆಯ ಎಲೆಗಳಲ್ಲಿ ಸರಾಸರಿ 2 ಮೊಟ್ಟೆ ಕಂಡು ಬಂದಾಗ ಎಂಡೋಸಲ್ಫಾನ್ 35ಈ.ಸಿ (1.6 ಮಿಲಿ/ಲೀ) ಸಿಂಪಡಿಸಬೇಕು.

ಎಲೆಸುರಂಗ ಹುಳ
ಲಕ್ಷಣ ಮತ್ತು ಹಾನಿ
ಇತ್ತೀಚೆಗೆ ಕಂಡು ಬಂದ ಈ ಕೀಟ ಅನೇಕ ಬೆಳೆಗಳನ್ನು ಬಾಧಿಸುತ್ತದೆ. ಲಾರ್ವವು ಎಲೆಯ ತಳಭಾಗದಲ್ಲಿ ಸುರಂಗ ಕೊರೆದು ಅನೇಕ ಸಲ ಬೆಳೆಗಳನ್ನು ತೀವ್ರವಾಗಿ ಬಾಧಿಸುತ್ತದೆ. ಹರಳು ಕೀಟನಾಶಕದ ಬಳಕೆಯಿಂದ ಉಪಟಳ ಜಾಸ್ತಿಯಾಗುತ್ತದೆ.
ನಿರ್ವಹಣೆ
ತೀವ್ರವಾಗಿ ಬಾಧಿತವಾಗಿರುವ ಎಲೆಗಳನ್ನು ಕಿತ್ತು ತೆಗೆಯ ಬೇಕು. ಬೇವಿನ ಬೀಜದ ಸಾರ (ಶೇಕಡ 4) ಅಥವಾ ಬೇವಿನ ಔಷಧಿಯನ್ನು (3 ಮಿಲಿ/ಲೀ) ಅಥವಾ ಟ್ರೈಯಾಜೊಫಾಸ್ 40ಈ.ಸಿ. (1.6 ಮಿಲಿ/ಲೀ) ಅಥವಾ ಡೆಲ್ಟಾಮೆಥ್ರಿನ್ (0.5 ಮಿಲಿ/ಲೀ) ಹತ್ತು ದಿನಗಳ ಅಂತರವಿಟ್ಟು ಸಿಂಪಡಿಸಬೇಕು. ಸಿಂಪಡಿಸುವಾಗ ಗಿಡದ ಕೆಳ ಭಾಗದಲ್ಲಿರುವ ಮಣ್ಣನ್ನು ಒದ್ದೆಯಾಗಿಸುವುದರಿಂದ ಕೋಶಾವಸ್ಥೆಯಲ್ಲಿರುವ ಮರಿಹುಳುಗಳು ಕೊಲ್ಲಲ್ಪಡುತ್ತದೆ.

ಥ್ರಿಪ್ಸ್
ಲಕ್ಷಣ ಮತ್ತು ಹಾನಿ
ಪ್ರೌಢ ಮತ್ತು ನಿಂಪ್‍ಗಳು ಎಲೆಗಳಲ್ಲಿ ಗೀರುಗಳನ್ನು ಮಾಡಿ ಗಾಯಗೊಳಿಸುತ್ತವೆ. ಎಲೆಯ ಬಣ್ಣ ಮಾಸಿ ಹೊಳಪನ್ನು ಕಳೆದುಕೊಳ್ಳುತ್ತದೆ.
ನಿರ್ವಹಣೆ
ಎಸಿಫೇಟ್ 75ಹೆಚ್.ಪಿ. (0.75 ಗ್ರಾಂ/ಲೀ)+ ಹೊಂಗೆಣ್ಣೆ/ಬೇವಿನೆಣ್ಣೆ (2 ಮಿಲಿ/ಲೀ)+ ಅಂಟುದ್ರಾವಣ (0.5 ಮಿಲಿ/ಲೀ) ಅಥವಾ ಡೈಮಿಥೊಯೇಟ್ 30ಈ.ಸಿ. (2 ಮಿಲಿ/ಲೀ) ಹತ್ತು ದಿನಗಳ ಅಂತರವಿಟ್ಟು ಸಿಂಪಡಿಸಬೇಕು.

ಹರಿವೆ ಮತ್ತು ಬಸಳೆ
ಎಲೆತಿನ್ನುವ ಕಂಬಳಿ ಹುಳು
ಲಕ್ಷಣ ಮತ್ತು ಹಾನಿ
ಹಸಿರು ಬಣ್ಣದ ಕಂಬಳಿ ಹುಳುಗಳ ಹಾನಿಯಿಂದ ಎಲೆಗಳು ಮೇಲ್ಭಾಗಕ್ಕೆ ಸುರುಟಿಕೊಳ್ಳುತ್ತವೆ. ಅನೇಕ ವೇಳೆ ಎಲೆಗಳಲ್ಲಿ ಬಲೆಕಟ್ಟಿ ಬೆಳಗಿನಿಂದಲೇ ಆಹಾರ ಸೇವಿಸಲು ತೊಡಗುತ್ತವೆ.

ಎಲೆಯಲ್ಲಿ ಬಲೆಕಟ್ಟುವ ಹುಳು
ಲಕ್ಷಣ ಮತ್ತು ಹಾನಿ
ಹಸಿರು ಬಣ್ಣದ ಕಂಬಳಿ ಹುಳು ಎಲೆಯಲ್ಲಿ ತೂತುಮಾಡಿ, ಬಲೆಯನ್ನು ಕಟ್ಟಿ ಒಳಗಿನಿಂದ ಎಲೆಯ ಹಸಿರು ಭಾಗವನ್ನು ತಿನ್ನುತ್ತದೆ.

ಹೇನು
ಲಕ್ಷಣ ಮತ್ತು ಹಾನಿ
ಗಿಡಗಳಿಂದ ರಸಹೀರಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಬೆಳೆಯುವ ತುದಿಯಲ್ಲಿ ಗುಂಪಾಗಿ ಕಂಡುಬರುತ್ತದೆ. ವಿಸರ್ಜನೆ ಸಿಹಿಯಾಗಿರುವುದರಿಂದ ಇರುವೆಗಳು ಆಕರ್ಷಿಸಲ್ಪಡುತ್ತವೆ.

ಕಾಂಡದ ವೀವಿಲ್
ಲಕ್ಷಣ ಮತ್ತು ಹಾನಿ
ಪ್ರೌಢ ಮತ್ತು ಮರಿಹುಳುಗಳ ಕಾಂಡದಲ್ಲಿ ಸುರಂಗಮಾಡಿ ಹಿಕ್ಕೆಯಿಂದ ಸುರಂಗವನ್ನು ತುಂಬಿಸುತ್ತದೆ. ಹಲವು ವೇಳೆ ಕಾಂಡ ಬಿರಿದು ಗಿಡ ಸಾಯುತ್ತದೆ.
ನಿರ್ವಹಣೆ
ಸಿಂಥೆಟಿಕ್ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ಎಲೆ ತರಕಾರಿ ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು. ಸುತ್ತಲಿರುವ ಕಾಡು ಹರಿವೆ ಗಿಡಗಳನ್ನು ಕಿತ್ತು ತೆಗೆಯಬೇಕು. ಬೇವಿನ ಬೀಜದ ಸಾರ (40 ಗ್ರಾಂ/ಲೀ) ಅಥವಾ ಬೇವಿನ ಸೋಪು (10 ಗ್ರಾಂ/ಲೀ) ಅಥವಾ ಬಿ.ಟಿ ದ್ರಾವಣ (1 ಮಿಲಿ/ಲೀ)ವನ್ನು ಸಿಂಪಡಿಸಿ ಕೀಟ ನಿಯಂತ್ರಿಸಬೇಕು.

ಬೀಟ್‍ರೂಟ್
ಕತ್ತರಿ ಹುಳುಗಳು
ಲಕ್ಷಣ ಮತ್ತು ಹಾನಿ
ರಾತ್ರಿ ವೇಳೆಯಲ್ಲಿ ಹೊರಬಂದು ಆಹಾರ ಸೇವಿಸುತ್ತದೆ. ಕೋಶಾವಸ್ಥೆಯನ್ನು ಉದುರಿದ ಎಲೆಗಳ ರಾಶಿಯಲ್ಲಿ ಅಥವಾ ಮಣ್ಣಿನೊಳಗೆ ಕಳೆಯುತ್ತದೆ. ಎಳೆಯ ಸಸಿಗಳ ಕಾಂಡವನ್ನು ಬುಡದಿಂದ ಮತ್ತು ಎಳೆಯ ಕೊಂಬೆಯನ್ನು ಕತ್ತರಿಸುತ್ತದೆ. ಎಲೆಗಳನ್ನು ಸಹ ತಿನ್ನುತ್ತವೆ ಮತ್ತು ಒಮ್ಮೊಮ್ಮೆ ಬಾಧೆ ತೀವ್ರವಾಗಿರುತ್ತದೆ.
ನಿರ್ವಹಣೆ
ಅಕ್ಕಿ/ಗೋಧಿ ತವುಡು (10 ಕೆ.ಜಿ)+ಮೆಥೊಮಿಲ್ 40ಎಸ್.ಪಿ. (250 ಗ್ರಾಂ)+ಬೆಲ್ಲ (2 ಕೆ.ಜಿ.) ಮಿಶ್ರಣದ ದ್ರಾವಣಕ್ಕೆ ಕೀಟಗಳನ್ನು ಆಕರ್ಷಿಸಿ ಕೊಲ್ಲಬೇಕು.

ಎಲೆ ತಿನ್ನುವ ಕಂಬಳಿ ಹುಳು
ಲಕ್ಷಣ ಮತ್ತು ಹಾನಿ
ಎಲೆಗಳಲ್ಲಿ ಗುಂಪಾಗಿ ಮೊಟ್ಟೆಗಳನ್ನಿಟ್ಟು ಹೊರಬಂದ ಲಾರ್ವಗಳು ಗುಂಪಾಗಿ ಎಲೆಯನ್ನು ತಿಂದು ಗಿಡವನ್ನು ಬರಳಾಗಿಸುತ್ತದೆ. ಲಾರ್ವವು ಗೆಡ್ಡೆಯ ಒಳಗೆ ತೂತು ಕೊರೆಯುತ್ತದೆ.
ನಿರ್ವಹಣೆ
ಎಲೆಯ ತಳಭಾಗದಲ್ಲಿರುವ ಮೊಟ್ಟೆಯನ್ನು ಹೆಕ್ಕಿ ನಾಶಪಡಿಸಬೇಕು. ಬರಳಾಗಿರುವ ಗಿಡಗಳಿಂದ ಲಾರ್ವಗಳನ್ನು ಹೆಕ್ಕಿ ನಾಶಪಡಿಸಬೇಕು. ಲಾರ್ವ ಚಿಕ್ಕದಿರುವಾಗ ಬೇವಿನ ಬೀಜದ ಸಾರ (40 ಗ್ರಾಂ/ಲೀ) ಅಥವಾ ಬಿಟಿ (1 ಗ್ರಾಂ/ಲೀ) ಸಿಂಪಡಿಸಬೇಕು. ಬೆಳೆದ ಲಾರ್ವಗಳಿಗೆ ಇಂಡೋಕ್ಷಾಕಾರ್ಬ್ 14.5ಎಸ್.ಪಿ. (0.4 ಮಿಲಿ/ಲೀ) ಸಿಂಪಡಿಸಬೇಕು. ಅಕ್ಕಿ/ಗೋಧಿಯ ತವುಡು (10ಕೆ.ಜಿ)+ಮೆಥೊಮಿಲ್ 40ಎಸ್.ಪಿ. (250 ಗ್ರಾಂ)+ಬೆಲ್ಲ (2ಕೆ.ಜಿ.) ದ್ರಾವಣವನ್ನು ಕೀಟಾಕರ್ಷಕ ಬಲೆಯಾಗಿ ಬಳಸಬಹುದು.

 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments