History of Madikeri Dasara

ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ

ಕೊಡಗಿನಲ್ಲಿದ್ದ ಹಾಲೇರಿ ವಂಶದ 5ನೇ ಆಡಳಿತಗಾರ ದೊಡ್ಡ ವೀರರಾಜೇಂದ್ರನು 1780ರಲ್ಲಿ ಪಟ್ಟಕ್ಕೆ ಬಂದು ಆಡಳಿತ ನಡೆಸುತ್ತಿರುವ ಸಮಯದಲ್ಲಿ (1785) ಟಿಪ್ಪು ಸುಲ್ತಾನನು ಕೊಡಗಿನ ಮೇಲೆ ದಾಳಿ ಮಾಡಿ 80 ಸಾವಿರಕ್ಕೂ ಅಧಿಕ ಕೊಡಗರನ್ನು ಅಂದರೆ ಅಂದು ಕೊಡಗಿನಲ್ಲಿರುವ ನಿವಾಸಿಗಳನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಅವರನ್ನು ಮುಸಲ್ಮಾನರನ್ನಾಗಿ ಪರಿವರ್ತಿಸಿದನು ಇದಕ್ಕೆ ಒಪ್ಪದವರನ್ನು ಜೀವಂತವಾಗಿ ಚರ್ಮ ಸುಲಿದು ಸಾಯಿಸುತ್ತಿದ್ದನು. ಆ ಸಂದರ್ಭದಲ್ಲಿ ಕೊಡಗಿನ ರಾಜ ದೊಡ್ಡ ವೀರರಾಜೇಂದ್ರನ್ನನ್ನು ಸೆರೆಹಿಡಿದು ಪಿರಿಯಾ ಪಟ್ಟಣದ ಕೋಟೆಯಲ್ಲಿ ಬಂಧಿಸಿಟ್ಟಿರುತ್ತಾನೆ. 1787ರಲ್ಲಿ ದೊಡ್ಡ ವೀರರಾಜೇಂದ್ರನು ಸೆರೆಯಿಂದ ತಪ್ಪಿಕೊಂಡು ಬಂದು ಪುನಃ ರಾಜ್ಯ ಬಾರ ಶುರುಮಾಡುತ್ತಾನೆ. ಆ ಸಮಯದಲ್ಲಿ ಟಿಪ್ಪುವಿನ ದಾಳಿಯಿಂದ ತತ್ತರಿಸಿದ ಕೊಡಗಿನಲ್ಲಿ ಭೀಕರ ಕಾಯಿಲೆಗಳಾದ ಕಾಲರಾ ಮಲೇರಿಯಾಗಳಿಂದ ಜನ ವಸತಿ ಸ್ಥಳಗಳಾದ ಮಡಿಕೇರಿ, ನಾಲ್ಕುನಾಡು, ಪಾಡಿನಾಲ್ಕುನಾಡು, ಕಡಿಯತ್‍ನಾಡು, ತಾವುನಾಡು, ಅಯ್ಯಂಗೇರಿ, ಕಾಂತೂರು- ಮೂರ್ನಾಡು, ಕಗ್ಗೋಡುನಾಡು, ಬೇಂಗ್‍ನಾಡು, ಹೊರಮಲೆನಾಡು, ನೂರೊಕ್ಲುನಾಡು ಮುಂತಾದ ಸ್ಥಳಗಳಲ್ಲಿ ಜನರೆ ಇಲ್ಲದೆ, ಇರುವ ಜನರು ಊರಿಂದ ಊರೆ ಖಾಲಿಮಾಡುತ್ತಿದ್ದರು ಈ ತೊಂದರೆ ಒಂದೆಡೆಯಾದರೆ ಆರ್ಥಿಕ ತೊಂದರೆಗಳಿಂದ ಜನರು ತುಂಬಾ ತೊಂದರೆ ಅನುಭವಿಸಬೇಕಾಯಿತು. ಈ ಭೀಕರ ಸಾಂಕ್ರಾಮಿಕ ರೋಗಗಳು ಹತೋಟಿಗೆ ಬಾರದಿದ್ದಾಗ 1790ರಲ್ಲಿ ದೊಡ್ಡವೀರರಾಜೇಂದ್ರನು ಸ್ಥಳೀಯ ಧಾರ್ಮಿಕ ಮುಖಂಡರನ್ನು ಕರೆಸಿ ಇದರ ಪರಿಹಾರಕ್ಕಾಗಿ ಸಲಹೆ ಕೇಳಲಾಗಿ ಅವರು ಮಡಿಕೇರಿ ನಗರದಲ್ಲಿದ್ದ ಐದು ಶಕ್ತಿದೇವತೆಗಳಾದ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ, ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆಮಾರಿಯಮ್ಮ, ಮತ್ತು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವರ ಅನುಗ್ರಹ ಪಡೆಯಲು ನವರಾತ್ರಿಯ ಶುಭಗಳಿಗೆಯಲ್ಲಿ ನವರಾತ್ರಿ ಪೂಜಾ ಮಹೋತ್ಸವ ಹಾಗೂ ವಿಜಯದಶಮಿ ಆಚರಣೆಯನ್ನು ಮಾಡಲು ತಿರ್ಮಾನಿಸುತ್ತಾರೆ. ಈ ಐದು ಶಕ್ತಿ ದೇವತೆಗಳಲ್ಲಿ ಮೊದಲಿಗೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ ದೇವರಿಗೆ ಪೂಜೆಯನನು ಸಲ್ಲಿಸಿ, ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆಮಾರಿಯಮ್ಮ, ಮತ್ತು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವರುಗಳನ್ನು ಮಡಿಕೇರಿ ನಗರದ ಎತ್ತರದ ಜಲಝರಿಯಾದ “ಶಕ್ತಿ ದೈವಗಳ ಜಲಝರಿ” (ಈಗಿನ ಪಂಪಿನ ಕೆರೆಯೆಂದು ಪ್ರಸಿದ್ಧಿಯಾಗಿರುವ)ಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ, ಕರಗ ರೂಪದಲ್ಲಿ ಶಕ್ತಿಯನ್ನು ಆಹ್ವಾನಿಸಿ, ದೊಡ್ಡಪೇಟೆಗೆ ಕರೆತಂದು ನಗರ ಪ್ರದಕ್ಷಿಣೆ ಮಾಡಿಸುವ ವ್ಯವಸ್ಥೆಯನ್ನು ಮಾಡಿಸುತ್ತಾರೆ. ಈ ಸಮಯದಲ್ಲಿ ರೋಗ ರುಜಿನಗಳು ತನ್ನಿಂದ ತಾನೆ ಅಥವಾ ದೇವರ ಕೃಪೆ ಎಂಬಂತೆ ಹತೋಟಿಗೆ ಬರಲಾರಂಭಿಸಿತು. ಜನರ ಕಷ್ಟಗಳು ಮಂಜಿನಂತೆ ಕರಗಿ ಶಾಂತಿಯುತ ಆರೋಗ್ಯಕರ ಜನ ಜೀವನವು ಸಹಜ ಸ್ಥಿತಿಗೆ ಬಂದವು. ಪ್ರಪ್ರಥಮವಾಗಿ ನಡೆದ ದಸರಾ ಹಬ್ಬದಿಂದ ನಾಡಿನಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗಗಳೊಂದಿಗೆ ಜನರ ಕಷ್ಟಕೋಟಲೆಗಳು ಮಂಜಿನಂತೆ ಕರಗಿ ಶಾಂತಿಯುತ ವಾತವರಣ ಮೂಡಿತು. ಇದನ್ನು ಮನಗಂಡ ರಾಜನು, ಧಾರ್ಮಿಕ ಮುಖಂಡರು ಮತ್ತು ಶಕ್ತಿ ದೇವತೆಗಳ ಪ್ರಮುಖರು ಇನ್ನು ಮುಂದಕ್ಕೆ ಪ್ರತೀ ವರ್ಷವೂ ಶಕ್ತಿ ದೇವತೆಗಳ ಅನುಗ್ರಹ ಪಡೆಯುವ ಸಲುವಾಗಿ ಕರಗ ಮತ್ತು ದಸರಾ ಹಬ್ಬವನ್ನು ಮುಂದುವರೆಸಿಕೊಂಡು ಬರಲು ತೀಮಾನಿಸಿದರು. ಅಂದಿನಿಂದ ಇಂದಿನವರೆಗೂ ವರ್ಷದಿಂದ ವರ್ಷಕ್ಕೆ 9ದಿನಗಳ ನವರಾತ್ರಿ ಉತ್ಸವದೊಂದಿಗೆ 10ನೇ ದಿನ ವಿಜಯದಶಮಿ ಅಂದರೆ ದಸರಾ ಮಹೋತ್ಸವವನ್ನು ಆಚರಿಸುತ್ತಾ ಬಂದಿರುವುದು ಮಡಿಕೇರಿ ಜನತೆಯ ಪರಂಪರೆಯಾಗಿದೆ. ಅಲ್ಲಿಂದ ಪ್ರಾರಂಭವಾದ ಮಡಿಕೇರಿ ದಸರಾ ಮಹೋತ್ಸವಕ್ಕೆ 231ನೇವರ್ಷ.

ಬ್ರಿಟೀಷರ ಕಾಲದಲ್ಲಿ ಮಡಿಕೇರಿ ದಸರಾ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹಾಲೇರಿ ವಂಶದ ದೊಡ್ಡವೀರರಾಜೇಂದ್ರನ ನಂತರ ರಾಣಿ ದೇವಮ್ಮಾಜಿ, 2ನೇ ಲಿಂಗರಾಜ, ಚಿಕ್ಕ ವೀರರಾಜೇಂದ್ರನ ಕಾಲದವರೆಗೂ ಮಡಿಕೇರಿ ದಸರಾ ಸಾಂಗವಾಗಿ ನಡೆದುಕೊಂಡು ಬರುತ್ತದೆ. 1834ಲ್ಲಿ ಬ್ರಿಟೀಷರು ಕೊಡಗನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರವೂ ಯಾವುದೇ ವಿಘ್ನಗಳಿಲ್ಲದೆ ಮುಂದುವರೆಸಿಕೊಂಡು ಬಂತು. 2 ನೇ ಮಹಾ ಯುದ್ಧದ ಸಂದರ್ಭದಲ್ಲಿಯೂ ಬ್ರಿಟೀಷ್ ಸರ್ಕಾರ ಎಲ್ಲಾ ಉತ್ಸವಗಳನ್ನು ನಿಲ್ಲಿಸಿದರೂ ಮಡಿಕೇರಿ ದಸರಾ ಮಾತ್ರ ನಿಲ್ಲಿಸಲಿಲ್ಲ.

ಸ್ವಾತಾಂತ್ರ್ಯಾನಂತರದ ಮಡಿಕೇರಿ ದಸರಾ

1947ರ ಸ್ವಾತಾಂತ್ರ್ಯಾನಂತರವು ಮಡಿಕೇರಿ ದಸರಾವು ಯಾವುದೇ ಅಡೆ ತಡೆಯಿಲ್ಲದೆ ನಡೆದುಕೊಂಡು ಬಂತು. ಮಡಿಕೇರಿಯ ಆಧುನಿಕ ದಸರಾ ಉತ್ಸವದ ರುವಾರಿ ರಾಜಸ್ಥಾನದ ಮೂಲದಿಂದ ಮಡಿಕೇರಿಗೆ ಬಂದು ನೆಲೆಸಿದ್ದ ಶ್ರೀ ಭೀಮ್ ಸಿಂಗ್ ರವರು. 1950 ರ ವರ್ಷಗಳಲ್ಲಿ ನವರಾತ್ರಿಯ ಕೊನೆಯ ದಿನ ವಿಜಯ ದಶಮಿಯಂದು ಭೀಮ್ ಸಿಂಗ್ ರವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸಿಕೊಳ್ಳುತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುಂತಾಯಿತು. 1958 ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಶಿಲ್ಪಕಲಾವಿದರಿಂದ ಮಾಡಿಸಿ ತರಿಸಿದ ಚಾಮುಂಡೇಶ್ವರಿ ಮೂರ್ತಿಯನ್ನು ಟ್ರಾಕ್ಟರ್ ಮೇಲೆ ಇರಿಸಿ ಹೂವಿನಿಂದ ಅಲಂಕಾರ ಮಾಡಿದ ಮಂಟಪದ ಮೆರವಣಿಗೆ ವಾದ್ಯಗಳೊಂದಿಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ದಸರ ಉತ್ಸವಕ್ಕೆ ಚಾಲನೆ ನೀಡಿದಂತಾಯಿತು.

ನಂತರ ದಿನಮಾನಗಳಲ್ಲಿ ಮಡಿಕೇರಿಯಲ್ಲಿರುವ ದೇವಾಲಯಗಳ ಪೈಕಿ, ಪೇಟೆ ಶ್ರೀ ರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಬಾಲಕ ಶ್ರೀ ರಾಮ ಮಂದಿರ ಮತ್ತು ಭೀಮ್ ಸಿಂಗ್ ರವರ ರಘುರಾಮ ಮಂದಿರಗಳ ನಾಲ್ಕು ಮಂಟಪಗಳು ಅಂದಿನ ಮಡಿಕೇರಿಯ ದಸರದ ಆಕರ್ಷಕ ಮಂಟಪಗಳಾಗಿದ್ದವು. ದಸರಾ ಮಂಟಪಗಳಲ್ಲಿ ಐತಿಹಾಸಿಕವಾಗಿ ಶಿವಾಜಿ ಖಡ್ಗವನ್ನು ದೇವಿ ಅಂಬಾ ಭಾವಾನಿಯಿಂದ ಪಡೆಯುವ ಮೂರ್ತಿ, ಭಾರತ ಮಾತೆಯ ಪದತಲದಲ್ಲಿ ಮಹಾತ್ಮ ಗಾಂಧಿ ಚರಕದಲ್ಲಿ ನೂಲು ತೆಗೆಯುತ್ತಿರುವ ಮೂರ್ತಿ, ಪೌರಾಣಿಕವಾಗಿ ಶ್ರೀ ರಾಮ ಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವ ಭಂಗ, ಮತ್ಸ್ಯ ಅವತಾರ, ಗಜೇಂದ್ರ ಮೋಕ್ಷ, ಮಹಿಷಾಸುರ ಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣ ಕಥೆಗಳನ್ನು ಅಳವಡಿಸಿಕೊಂಡು ದಸರಾ ಆಚರಿಸಲಾಗುತಿತ್ತು. 1967ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿಯೂ ಮಡಿಕೇರಿ ದಸರಾ ಮುಂದುವರೆದುಕೊಂಡು ಬಂತು. 1970 ರ ದಶಕಗಳಲ್ಲಿ ಇನ್ನೂ ಹಲವು ದೇವಾಲಯದ ಮಂಟಪಗಳು ಸೇರ್ಪಡೆಯಾಗಿ ಹತ್ತು ಮಂಟಪಗಳೊಂದಿಗೆ ದಸರಾ ಉತ್ಸವ ಹೆಚ್ಚು ಹೆಚ್ಚು ಆಕರ್ಷಣೀಯವಾಯಿತು.
ಮಡಿಕೇರಿಯ ದಸರಾ ನಡೆಯುತ್ತಿರುವುದು ಜನರು ಭಕ್ತಿ ಪ್ರೀತಿಯಿಂದ ನೀಡುತ್ತಿರುವ ವಂತಿಗೆಯ ಹಣದಿಂದ. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಆರ್. ಗುಂಡೂರಾವ್ ರವರು ಮಡಿಕೇರಿ ದಸರ ಉತ್ಸವಕ್ಕೆ 1980 ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು ನಂತರ ಪ್ರತಿವರ್ಷ ಸಹಯಾ ಧನವನ್ನು ಹೆಚ್ಚಿಸುತ್ತಾ ಬಂದು ಇಂದಿನ ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ನೀಡಲಾಗುತ್ತಿದೆ. ಪ್ರತಿಯೊಂದು ಮಂಟಪಗಳಿಗೆ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಮಂಟಪಕ್ಕೆ ಸುಮಾರು 4 ರಿಂದ 24 ಲಕ್ಷದವರೆಗೆ ಖರ್ಚು ತಗಲುತ್ತದೆ.
ತಾಂತ್ರಿಕವಾಗಿ ಚಲನವಲನಗಳನ್ನು ನೀಡಿ ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ಕೃತಕ ಮೋಡಗಳು, ಮಿಂಚು, ಧೂಮ ಸೃಷ್ಟಿಗಳು ಒಂದಕಿಂತ ಒಂದು ಮೀರಿಸುವಂತಿರುತ್ತದೆ. ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್ ಗಳು ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಒಂದು ಮಂಟಪ ನಿರ್ಮಾಣ ಮಾಡಲು 2 – 3 ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾ ಪ್ರಸಂಗಗಳ ದೇವತಾ ಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ.
ಮಂಟಪಗಳ ಮುಂದೆ ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್ ಗಳು ಉತ್ಸವದಲ್ಲಿ ಭಾಗಿಯಾಗಿರುವ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.

ಮಡಿಕೇರಿ ದಸರಾ ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂ ಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ.ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ.. ಹೆಚ್ಚು ಹೆಚ್ಚು ಜಾತ್ರಾ ವಿಶೇಷ ಸರ್ಕಾರಿ ಬಸ್ ವ್ಯವಸ್ಥೆ ಇರುತ್ತದೆ.

*ಹಕ್ಕುಗಳನ್ನು ಕಾಯ್ದಿರಿಸಲಾಗಿದೆ*

ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಗಳ ಹಕ್ಕುಗಳನ್ನು, ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಕಾಯ್ದಿರಿಸಲಾಗಿದೆ. ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಯನ್ನು ಯಾವುದೇ ರೀತಿಯ ಮಾಧ್ಯಮದಲ್ಲಿ ಪ್ರಕಟ ಪಡಿಸಲು ಅಥವಾ ಪ್ರಸಾರ ಪಡಿಸಲು ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಸಂಸ್ಥೆಯ ಅಪ್ಪಣೆಯನ್ನು ಪಡೆಯ ಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ EMAIL : searchcoorg@gmail.com , MOb: 9483047519

admin

0 0 votes
Article Rating
Subscribe
Notify of
guest
0 Comments
Inline Feedbacks
View all comments