ಶ್ರೀ ವನ ಭದ್ರಕಾಳಿ ದೇವಾಲಯ
ಹಾತೂರು ಕೊಳತ್ತೋಡು ಬೈಗೋಡು ಗೋಣಿಕೊಪ್ಪಲು ಕೊಡಗು
2019ರ ಜುಲೈ 8 ಮತ್ತು 9ರಂದು ವನಭದ್ರಕಾಳಿ ದೇವರ ಹಬ್ಬ
“ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ…”, ಎಂಬ ಶ್ರದ್ಧಾ-ಭಕ್ತಿಯೊಡಗೂಡಿ ಹಾತೂರಿನ ಗದ್ದೆ-ಬನಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವನಭದ್ರಕಾಳಿ ದೇವರಹಬ್ಬವು, ತಾ. 8ರಂದು ರಾತ್ರಿ 9ಗಂಟೆಗೆ ದೇವರನ್ನು ತರುವುದು, ತಾ. 9 ರಂದು ಬೆಳಿಗ್ಗೆ 7ರಿಂದ ದೇವರ ದರ್ಶನ ಹಾಗೂ ಪೂಜೆ ನಡೆಯಲಿದೆ. ಅಪರಾಹ್ನ 2ರಿಂದ 5ರ ತನಕ ದೊಡ್ಡ ಹಬ್ಬ ನಡೆಯಲಿರುವದಾಗಿ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಹಾತೂರಿನ ವನಭದ್ರಕಾಳಿ ದೇವರಕಾಡಿನಲ್ಲಿ ಹಬ್ಬದ ದಿನಗಳಾಗಿದ್ದೆ. ಅನೇಕರು ಭದ್ರಕಾಳಿ ಮಾತೆಯ ಭಕ್ತಾಧಿಗಳು ಆಚರಣೆಯಲ್ಲಿ ಮಗ್ನರಾಗಿದ್ದು, ಹಾತೂರಿನ ಜನ, ಬನ, ಬೆಳೆಯನ್ನು ರಕ್ಷಿಸುತ್ತಾ ಬಂದಿರುವ ವನಭದ್ರಕಾಳಿಯ ದೇವರಕಾಡು ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತಾ ಬಂದಿದ್ದು, ಈ ಸಾಲಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಶ್ರೀ ವನ ಭದ್ರಕಾಳಿ ದೇವಾಲಯ
ಪೀಠಿಕೆ
ಸುಮಾರು ಐನೂರು ವರ್ಷಗಳ ಇತಿಹಾಸವಿರುವ ಶ್ರೀ ವನಭದ್ರಕಾಳಿ ದೇವಾಲಯವು ಕೊಡಗಿನ ಗೋಣಿಕೊಪ್ಪಲು ಸಮೀಪವಿರುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ದೇವಾಲಯವು ಹಾತೂರು – ಕೊಳತ್ತೋಡು – ಬೈಗೋಡು ಗ್ರಾಮಸ್ಥರು ಒಟ್ಟಾಗಿ ಸೇರಿ ಇಲ್ಲಿನ ದೇವಾಲಯದಲ್ಲಿ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ದೇವಾಲಯವು ಅಂದಾಜು ಸುಮಾರು 16 ಏಕರೆಯಷ್ಟು ವಿಶಾಲವಿರುವ ದೇವರಕಾಡುವಿನಲ್ಲಿ ನೆಲೆನಿಂತಿದೆ. ವಿರಾಜಪೇಟೆ – ಮೈಸೂರು ಹೆದ್ದಾರಿಯ ಗೋಣಿಕೊಪ್ಪ ಮತ್ತು ವಿರಾಜಪೇಟೆ ನಡುವಿನ ಹಾತೂರು – ಕೊಳತ್ತೋಡು – ಬೈಗೋಡು ಗ್ರಾಮದ ಸಮೀಪದ ಹೆದ್ದಾರಿಗೆ ಹೊಂದಿಕೊಂಡಿದೆ. ದಿನನಿತ್ಯ ಈ ಮಾರ್ಗವಾಗಿ ಚಲಿಸುವ ವಾಹನಗಳಾಗಲಿ, ಭಕ್ತಾದಿಗಳಾಗಲಿ ಒಂದು ನಿಮಿಷ ತಮ್ಮ ವಾಹನಗಳನ್ನು ಈ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಿ ಕಾಣಿಕೆ ಸಲ್ಲಿಸಿ, ದೇವರ ಆಶೀರ್ವಾದವನ್ನು ಪಡೆದು ತಮ್ಮ ಕಾರ್ಯಕಲಾಪಗಳೆಡೆಗೆ ಸಾಗುವುದು ಒಂದು ವಾಡಿಕೆಯಾಗಿದೆ. ಇಲ್ಲಿ ಪ್ರಾರ್ಥಿಸಿ ತೆರಳುವ ಪ್ರತಿಯೊಬ್ಬರೂ ತಮ್ಮ ಕಾರ್ಯಕಲಾಪಗಳು ಸುಗಮವಾದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀ ವನಭದ್ರಕಾಳಿ ದೇವಾಲಯದ ಮಹೋತ್ಸವವು 2 ವರ್ಷಗಳಿಗೊಮ್ಮೆ ಜುಲೈ ತಿಂಗಳು ಗದ್ದೆಗೆ ಬಿತ್ತು ಹಾಕುವ ಸಂದರ್ಭದಲ್ಲೆ ನಡೆಯಲ್ಪಡುತ್ತವೆ. ಈ ಮಹೋತ್ಸವದಲ್ಲಿ ಅಕ್ಕ-ಪಕ್ಕದ ಗ್ರಾಮಸ್ಥರೊಡಗೂಡಿ ಕೊಡಗಿನ ಹಲವಾರು ಭಾಗಗಳಿಂದ ಹಾಗೂ ಹೊರಜಿಲ್ಲೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತೀ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲ್ಪಡುತ್ತದೆ.
ಹಿನ್ನಲೆ – ಇತಿಹಾಸ
ಭತ್ತದ ಕುಯ್ಲಿನ ಸಮಯದಲ್ಲಿ ಗದ್ದೆಯ ಏರಿಯ ಬಳಿಯಲ್ಲಿ ಚಿನ್ನದ ಬಣ್ಣವಿರುವ ಪೋಳೆ (ಕೊಕ್ಕರೆ ಜಾತಿಗೆ ಸೇರಿದ ಪಕ್ಷಿ) ಯೊಂದು ಬಂದು ಕುಳಿತಿರುತ್ತದೆ. ಅಲ್ಲಿ ಕೆಲಸ ಕಾರ್ಯದಲ್ಲಿ ಮಗ್ನಳಾಗಿದ್ದ ಒಬ್ಬ ಹೆಂಗಸು ಅದನ್ನು ಕಂಡು ಅಲ್ಲಿರುವ ಜನರಿಗೆ ತಿಳಿಸುತ್ತಾಳೆ. ಆಗ ಅಲ್ಲಿನ ಜನಗಳು ಅದನ್ನು ಹಿಡಿಯಲು ಪ್ರಯತ್ನಿಸಿ ಬುಟ್ಟಿಯಲ್ಲಿ ಮುಚ್ಚಿಡುತ್ತಾರೆ. ನಂತರ ಅಲ್ಲಿಂದ ಅದು ಹೇಗೋ ತಪ್ಪಿಸಿಕೊಂಡು ಹಾರಿಬಂದು ಈಗ ನೆಲೆನಿಂತಿರುವ ಶ್ರೀ ವನಭದ್ರಕಾಳಿ ದೇವಾಲಯವಿರುವ ಸ್ಥಳದಲ್ಲಿ ಲೀನವಾಗುತ್ತದೆ. ಅಲ್ಲಿಂದ ಆ ಊರಿನ ಜನಗಳು ಅದನ್ನು ಕಾಳೀ ಮಾತೆಯ ಸ್ವರೂಪವೆಂದು ತಿಳಿದು ನಮ್ಮ ಕಷ್ಟ-ಕಾರ್ಯಪಣ್ಯಗಳನ್ನು ದೂರಮಾಡಿ ಊರಿನ ಉದ್ಧಾರಕ್ಕೆಂದು ಬಂದವಳೆಂದು ತಿಳಿದು ಅಲ್ಲೊಂದು ದೇವಾಲಯವನ್ನು ನಿರ್ಮಿಸುತ್ತಾರೆ. ಅದು ಇಂದಿನ ಸುಮಾರು 16 ಏಕರೆಯಷ್ಟಿರುವ ದೇವರಕಾಡು ಬನದ ಶ್ರೀ ವನಭದ್ರಕಾಳಿ ದೇವಾಲಯ.
ವ್ಯವಸ್ಥಾಪನ ಸಮಿತಿ
ಈ ದೇವಾಲಯದ ಉಸ್ತುವಾರಿಯನ್ನು
ಕೇಳಪಂಡ ಕುಟುಂಬದ ಎನ್.ವಿಶ್ವನಾಥ್ (ವಿನು) ಅಧ್ಯಕ್ಷರಾಗಿ,
ಕಾಳೇಂಗಡ ಮಾದಪ್ಪ (ಸಾಬು) ಕಾರ್ಯದರ್ಶಿಗಳಾಗಿ,
ಕೊಂಗೇಪಂಡ ಸುಬ್ಬಯ್ಯ (ಸಾಬು) ತಕ್ಕಮುಖ್ಯಸ್ಥರಾಗಿ ಹಾಗೂ ಕೊಕ್ಕಂಡ ಅರ್ಜುನ ತಕ್ಕಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದಾರೆ.
ದೇವರಕಾಡು
ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿವೆ.
ಕೊಡಗು ಜಿಲ್ಲೆಯ 4104 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿಧ್ಯಮಯ ಸಸ್ಯಗಳು, ಗಿಡ – ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತವೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.
ಸಂದರ್ಶನ
I am text block. Click edit button to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.