ಕೊಕ್ಕೊ
ರುಚಿಯಾದ ಚಾಕೋಲೇಟ್, ಮಿಠಾಯಿ, ಕೇಕ್ ಮತ್ತು ಪಾನೀಯಗಳ ತಯಾರಿಕೆಯಲ್ಲಿ ಕೊಕ್ಕೊ ಬೀಜವು ಅತೀ ಮುಖ್ಯ ಕಚ್ಚಾವಸ್ತುವಾಗಿ ಬಳಕೆಯಲ್ಲಿದೆ. ಕೊಕ್ಕೊ ಬೀಜದ ಸಿಪ್ಪೆಯು ಜಾನುವಾರುಗಳಿಗೆ ಉತ್ತಮ ಮೇವನ್ನು ಒದಗಿಸುವುದಲ್ಲದೆ ಇದರಲ್ಲಿ ಸಸಾರಜನಕ, ಶರ್ಕರಪಿಷ್ಟ, ಅನ್ನಾಂಗಗಳು, ಮೇದಸ್ಸು ಮೊದಲಾದ ಪೌಷ್ಟಿಕ ಆಹಾರಾಂಶಗಳಿವೆ. ಕೊಕ್ಕೊ ಒಂದು ಲಾಭದಾಯಕ ಮಿಶ್ರ ಬೆಳೆಯಾದ್ದರಿಂದ ಹೆಚ್ಚಿನ ಲಾಭಗಳಿಸಲು ಈ ಬೆಳೆಯ ವೈಜ್ಞಾನಿಕ ಕೃಷಿ ಪದ್ಧತಿಯನ್ನು ತಿಳಿದುಕೊಂಡು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಮಣ್ಣು
ಕೊಕ್ಕೊ ಬೆಳೆಯನ್ನು ಸಾಮಾನ್ಯವಾಗಿ ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮಣ್ಣಿನ ಆಳ ಮತ್ತು ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಮರಳು ಮಿಶ್ರಿತ ಗೋಡು, ಕೆಂಪುಗೋಡು ಮಣ್ಣು ಮತ್ತು ಉತ್ತಮ ಬಸಿಯುವಿಕೆಯಿರುವ ಮಣ್ಣಿನಲ್ಲಿ ಕೊಕ್ಕೊ ಚೆನ್ನಾಗಿ ಬೆಳೆಯುತ್ತದೆ. ಗಟ್ಟಿ ನೆಲ ಮತ್ತು ಜೌಗು ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ.
ಹವಾಗುಣ
ಸಮುದ್ರ ಮಟ್ಟದಿಂದ 900 ಮೀ. ಎತ್ತರದವರೆಗೂ ಕೊಕ್ಕೊವನ್ನು ಬೆಳೆಯಬಹುದಾಗಿದೆ. 15 ಯಿಂದ 350 ಸೆ. ಹಾಗೂ ವಾರ್ಷಿಕ ಸರಾಸರಿ ತಾಪಮಾನ 250 ಸೆಂ. ಇರುವ ಉಷ್ಣಾಂಶ ಇದಕ್ಕೆ ಅನುಕೂಲಕರ. ಕೊಕ್ಕೊ ಬೆಳೆಗೆ 100 ಸೆಂ.ಗಿಂತ ಕಡಿಮೆ ಮತ್ತು 380 ಸೆಂ. ಗಿಂತ ಹೆಚ್ಚಿನ ಉಷ್ಣಾಂಶ ಈ ಬೆಳೆಗೆ ಸೂಕ್ತವಾಗುವುದಿಲ್ಲ.
ಕೊಕ್ಕೊ ತಳಿಗಳು
• ಫಾರೆಸ್ಟೆರೋ: ವಿವಿಧ ಹವಾಗುಣಗಳಿಗೆ ಹೊಂದಿಕೊಳ್ಳುವ ಈ ತಳಿಯು ಚಪ್ಪಟೆಯಾದ ತಾಜಾ ಬೀಜವನ್ನು ಹೊಂದಿದ್ದು ಹಸಿರು ಕೋಡುಗಳು ಬಲಿತ ಮೇಲೆ ಹಳದಿ ಬಣ್ಣ ಹೊಂದುತ್ತವೆ. ಸಿಪ್ಪೆ ದಪ್ಪಗಿದ್ದು ನಯವಾದ ಮೇಲ್ಮೈ ಹೊಂದಿರುತ್ತದೆ.
• ಕ್ರಿಯಲ್ಲೊ: ಕಾಯಿಗಳು ಸಾಮಾನ್ಯವಾಗಿ ಕಡು ಕೆಂಪಾಗಿದ್ದು, ಒರಟಾದ ಮೇಲ್ಮೈ ಸ್ವಷ್ಟವಾಗಿ ಚೂಪಾದ ತುದಿ ಮತ್ತು ತೆಳ್ಳನಯ ಸಿಪ್ಪೆಯನ್ನು ಹೊಂದಿರುತ್ತದೆ.
ಪ್ರತಿ ಗಿಡಕ್ಕೆ ಕೊಡಬೇಕಾಗುವ ಗೊಬ್ಬರದ ಪ್ರಮಾಣ (ಗ್ರಾಂ. ಪ್ರತಿ ಗಿಡಕ್ಕೆ)
ಪೆÇೀಷಕಾಂಶಗಳು ಸಾರಜನಕ ರಂಜಕ ಪೆÇಟ್ಯಾಶ್
ಗಿಡನೆಟ್ಟ ಒಂದು ವರ್ಷದ ನಂತರ 25 10 35
ಎರಡು ವರ್ಷದ ನಂತರ 50 20 70
ಮೂರು ವರ್ಷದ ನಂತರ 75 30 105
ನಾಲ್ಕು ವರ್ಷದ ನಂತರ 100 40 140
ಸಾವಯವ ಗೊಬ್ಬರ 25 ಕೆ.ಜಿ
ಸ್ಥಳದ ಆಯ್ಕೆ
ಸಾಮಾನ್ಯವಾಗಿ ಅಡಿಕೆ ತೋಟಗಳಲ್ಲಿ ಈ ಬೆಳೆಯನ್ನು ಬೆಳೆಯಾಲಾಗುತ್ತದೆ. ಕಾಡು ಪ್ರದೇಶಗಳಲ್ಲಿ ಅಗತ್ಯವಿರುವಷ್ಟು ನೆರಳು ಸಿಗುವಂತೆ ಹೆಚ್ಹಿನ ಗಿಡಗಳನ್ನು ಕಡಿದು ಸಹ ಕೊಕ್ಕೊವನ್ನು ಬೆಳೆಸಬಹುದಾಗಿದೆ.
ಗಿಡ ನೆಡುವ ಕಾಲ
ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಮುಂಗಾರಿನ ಅಂತ್ಯದಲ್ಲಿ ಅಂದರೆ ಸೆಪ್ಟಂಬರ್ ತಿಂಗಳಲ್ಲಿ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮುಂಗಾರಿನ ಆರಂಭದಲ್ಲಿ ಅಂದರೆ ಜೂನ್ ತಿಂಗಳಿನಲ್ಲಿ ಕೊಕ್ಕೊ ಸಸಿಗಳನ್ನು ನೆಡಬಹುದಾಗಿದೆ.
ಗಿಡಗಳ ನಡುವಿನ ಅಂತರ ಹಾಗೂ ಗಿಡ ನೆಡುವಿಕೆ
ಕೊಕ್ಕೊ ಬೆಳೆಯು ಮೂಲತಃ ನೆರಳನ್ನು ಬಯಸುವ ಗಿಡವಾಗಿದ್ದು ಮಿಶ್ರ ಬೆಳೆಯಾಗಿ ಅಡಿಕೆ ಮತ್ತು ತೆಂಗು ತೋಟಗಳಲ್ಲಿ ಬೆಳೆಯಬಹುದು. ಮುಖ್ಯ ಬೆಳೆಯಾಗಿ ಬೆಳೆಯುವ ಪ್ರದೇಶಗಳಲ್ಲಿ ಮೊದಲೆ ನೆರಳಿನ ಏರ್ಪಾಡು ಮಾಡಿಕೊಳ್ಳಬೇಕು. 2.7 ಮೀ. ಘಿ 2.7 ಮೀ. ಅಂತರದಲ್ಲಿ 90 ಸೆಂ. ಮಿ. ಘನಾಕೃತಿಯ ಗುಣಿಗಳನ್ನು ತೆಗೆದು 25 ಕೆ.ಜಿ. ಸಾವಯವ ಗೊಬ್ಬರ ಮತ್ತು ಮೇಲ್ಮಣ್ಣುಗಳನ್ನು ಗುಣಿಗಳಿಗೆ ತುಂಬಿಸಬೇಕು. 4 ರಿಂದ 6 ತಿಂಗಳಿನ ಸಸಿಗಳನ್ನು ಗುಣಿಯ ಮಧ್ಯದ ಭಾಗದಲ್ಲಿ ನೆಟ್ಟು ಊರುಗೋಲನ್ನು ಆಧಾರವಾಗಿ ಕೊಟ್ಟು ನೆರಳನ್ನು ಒದಗಿಸಬೇಕು. 2.7 ಮೀ. ಘಿ 2.7 ಮೀ ಅಂತರದಲ್ಲಿರುವ ಅಡಿಕೆ ತೋಟಗಳಲ್ಲಿ ಕೊಕ್ಕೊವನ್ನು 2.7 ಮೀ. ಘಿ 5.4 ಮೀ. ( 9 ಅಡಿ ಘಿ 15 ಅಡಿ) ಅಂತರದಲ್ಲಿ ನೆಡಬೇಕು.
ನೀರಾವರಿ
ಉತ್ತಮ ಕೊಕ್ಕೊ ಬೆಳೆಗೆ ಬೇಸಿಗೆಯಲ್ಲಿ ನೀರಾವರಿ ಅತಿ ಅವಶ್ಯಕ. ನವೆಂಬರ್-ಡಿಸೆಂಬರ್‍ನಲ್ಲಿ ವಾರಕ್ಕೊಮ್ಮೆ, ಜನವರಿ-ಮಾರ್ಚ್ ತಿಂಗಳಲ್ಲಿ 6 ದಿನಗಳಿಗೊಮ್ಮೆ ಹಾಗೂ ಎಪ್ರಿಲ್-ಮೇ ತಿಂಗಳಲ್ಲಿ 4 ರಿಂದ 5 ದಿನಗಳಿಗೊಮ್ಮೆ 175 ಲೀ. ನಂತೆ ನೀರುಣಿಸಬೇಕು. ಹನಿ ನೀರಾವರಿ ಪದ್ಧತಿಯು ಕೊಕ್ಕೊ ಬೆಳೆಸಲು ಉತ್ತಮ ನೀರಾವರಿ ಪದ್ಧತಿಯಾಗಿದ್ದು ಗಿಡವೊಂದಕ್ಕೆ 20 ಲೀ. ನೀರನ್ನು ಪ್ರತಿದಿನವೂ ಕೊಡಬೇಕು.
ಕೊಕ್ಕೊ ಗಿಡ ಸವರುವಿಕೆ (ಪ್ರೂನಿಂಗ್)
ಗಿಡಗಳನ್ನು ಕ್ರಮಬದ್ಧವಾಗಿ ಕತ್ತರಿಸುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಬೆಳೆಯನ್ನು ಕೊಯ್ಯಲು ಮತ್ತು ತೋಟವನ್ನು ವ್ಯವಸ್ಥಿತವಾಗಿ ಇಡಲು ಸುಲಭವಾಗುತ್ತದೆ. ಕೊಕ್ಕೊ ಗಿಡಗಳು ಹಂತ ಹಂತವಾಗಿ ಬೆಳೆಯುವುದರ ಜೊತೆಗೆ ಗಿಡವು ವಕ್ರವಾಗಿ ಬೆಳೆದು ಗಂಟುಗಳಾಗಿ ಉಪರೆಂಬೆಗಳು ಬೆಳೆಯುತ್ತವೆ. ಉಪರೆಂಬೆಗಳನ್ನು ಕಾಲ ಕಾಲಕ್ಕೆ ಕತ್ತರಿಯಿಂದ ಕತ್ತರಿಸಿ ಹಾಕುತ್ತಿರಬೇಕು.
ಸಾಮಾನ್ಯವಾಗಿ ಕೊಕ್ಕೊವನ್ನು ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಆದ್ದರಿಂದ ಮುಖ್ಯ ಬೆಳೆಗೆ ಹಾನಿಯಾಗದಂತೆ ಮಾಡಲು ಕೊಕ್ಕೊ ಗಿಡದ ಆಕಾರ ಮತ್ತು ಹರಡುವಿಕೆಯನ್ನು ನಿಯಂತ್ರಣದಲ್ಲಿಡಬೇಕು. ಇದಕ್ಕಾಗಿ ಸೂಕ್ತ ಹಾಗೂ ಕ್ರಮಬದ್ಧವಾದ ಸವರುವಿಕೆ ಈ ಬೆಳೆಯಲ್ಲಿ ಅತಿ ಅವಶ್ಯ. ಸವರುವಿಕೆಯನ್ನು ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಲ್ಲಿ ಮಾಡಬೇಕು.
ಪ್ರಮುಖ ಕೀಟಗಳು
1. ಹಿಟ್ಟಿನ ತಿಗಣೆ
ಕೊಕ್ಕೊದಲ್ಲಿ ಕಂಡುಬರುವ ಕೀಟಗಳಲ್ಲಿ ಪ್ರಮುಖವಾದ ಕೀಟ. ಎಳೆಯ ಮತ್ತು ಪ್ರಬುದ್ದ ಹೆಣ್ಣು ಕೀಟಗಳು ಎಳೆಯ ಕಾಂಡ, ಹೂಗಳು, ಎಳೆ ಮತ್ತು ಬಲಿತ ಕಾಯಿಗಳಿಂದ ರಸ ಹೀರುತ್ತವೆ. ಈ ಕೀಟದ ಬಾಧೆಗೂಳಗಾದ ಸಣ್ಣ ಸಸಿಗಳು ಬೆಳವಣಿಗೆಯಲ್ಲಿ ಕುಂಠಿತವಾಗಿ ಬೇಡದ ಎತ್ತರದಲ್ಲಿ ಹೆಚ್ಚು ಕವಲುಗಳನ್ನು ಹೊಂದಿರುತ್ತವೆ. ಇದರಿಂದಾಗಿ ಎಳೆಕಾಯಿಕಾಯಿಗಳು ಸೊರಗಿಹೋಗುತ್ತವೆ. ಈ ಕೀಟದ ಉಪಟಳ ಹೆಚ್ಚಾಗಿ ಬೇಸಿಗೆಯಲ್ಲಿ ಕಂಡುಬರುತ್ತದೆ.
ಹತೋಟಿ ಕ್ರಮ
• ಕೀಟಗಳು ಹೆಚ್ಚಾಗಿ ಕಂಡುಬರುವ ಕಡೆ 1.7 ಮೀ. ಲಿ. ಡೈಮಿಥೋಯೆಟ್‍ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.
2 ಟೀ ಸೊಳ್ಳೆ
ಈ ಕೀಟವು ಸಾಮಾನ್ಯವಾಗಿ ಕಾಯಿಗಳನ್ನು ಹಾಳು ಮಾಡುತ್ತವೆ. ಕೀಟವು ರಸ ಹೀರಿದ ಸ್ಥಳದಲ್ಲಿ ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಳು ಕಂಡುಬರುತ್ತವೆ. ದಿನ ಕಳೆದಂತೆ ಈ ಚುಕ್ಕೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಯಿಯ ಮೇಲೆ ಬಹಳಷ್ಟು ಕಡೆಗಳಲ್ಲಿ ರಸ ಹೀರುವುದರಿಂದ ಕಾಯಿಯು ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ
ಹತೋಟಿ ಕ್ರಮ
• ಕೀಟಗಳು ಹೆಚ್ಚಾಗಿ ಕಂಡುಬರುವ ಕಡೆ 1.7 ಮೀ. ಲಿ. ಡೈಮಿಥೋಯೆಟ್‍ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.
3 ಕಾಂಡ ಕೊರೆಯುವ ಹುಳು
ಈ ಕೀಟದ ಬಾಧೆಯು ರೆಂಬೆ ಹಾಗೂ ಕಾಂಡಗಳಲ್ಲಿ ಕಂಡುಬರುವುದರಿಂದ ಬಾಧೆಗೊಳಗಾದ ರೆಂಬೆ/ ಕಾಂಡದ ಮೇಲ್ಭಾಗ ಒಣಗುತ್ತದೆ.
ಹತೋಟಿ ಕ್ರಮಗಳು
• ಈ ಕೀಟದ ಬಾಧೆಗೆ ತುತ್ತಾದ ರೆಂಬೆ/ಕಾಂಡವನ್ನು ಕತ್ತರಿಸಿ ನಾಶಪಡಿಸುವುದರಿಂದ ಸಮರ್ಪಕವಾಗಿ ನಿಯಂತ್ರಿಸಬಹುದು.
• ಕೀಟ ಬಾಧೆ ಇರುವ ಭಾಗಕ್ಕೆ ಕಾರ್ಬಾರಿಲ್ ( 20 ಗ್ರಾಂ 10 ಲೀ. ನೀರಿಗೆ) ಮುಲಾಮನ್ನು ಹಚ್ಚಿ ಈ ಕೀಟದ ಬಾಧೆಯನ್ನು ನಿಯಂತ್ರಿಸಬಹುದು.
ಪ್ರಮುಖ ರೋಗಗಳು
1 ಕಪ್ಪು ಕಾಯಿ ರೋಗ/ಕಾಯಿ ಕೊಳೆಯುವ ರೋಗ
ಪೈಟಾಪ್ತರ ಪಾಮಿವೋರಾ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮುಂಗಾರಿನಲ್ಲಿ (ಜುಲೈ-ಆಗಸ್ಟ್) ಹೆಚ್ಚಾಗಿ ಕಂಡುಬರುತ್ತದೆ. ಪ್ರಾರಂಭದಲ್ಲಿ ಕಾಯಿಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ರೋಗ ತೀವ್ರವಾದಾಗ ಕಂದು ಚುಕ್ಕೆ ಇಡಿ ಕಾಯಿಯನ್ನು ಆವರಿಸಿ ನಂತರ ಕಾಯಿಗಳು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿ ಒಳಗಿನ ಅಂಗಾಂಶ ಮತ್ತು ಬೀಜಗಳು ಬಣ್ಣ ಕಳೆದುಕೊಂಡು ಕೊಳೆಯುತ್ತವೆ.
ಹತೋಟಿ ಕ್ರಮಗಳು
• ರೋಗ ಭಾಧಿತ ಕಾಯಿಗಳನ್ನು ಕಾಲಕಾಲಕ್ಕೆ ಕೊಯ್ದು ನಾಶಪಡಿಸಬೇಕು.
• ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮೊದಲು ಶೇ.1 ರ ಬೋರ್ಡೊ ದ್ರಾವಣವನ್ನು ಕೊಕ್ಕೊ ಕಾಯಿಗಳು ಸಂಪೂರ್ಣವಾಗಿ ಒದ್ದೆಯಾಗುವಂತೆ ಸಿಂಪರಣೆ ಮಾಡಬೇಕು. ನಂತರ 30 ರಿಂದ 45 ದಿನಗಳ ಅಂತರದಲ್ಲಿ ಎರಡನೆ ಸಿಂಪರಣೆಯನ್ನು ಮಾಡಬೇಕು.
1. ಕಜ್ಜಿ ರೋಗ
ಪೈಟಾಪ್ತರ ಪಾಮಿವೋರಾ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮುಖ್ಯ ಕಾಂಡ, ಕವಲು ಒಡೆಯುವ ಜಾಗ ಅಥವಾ ಕವಲುಗಳ ಮೇಲೆ ಕಂಡುಬರುತ್ತದೆ. ಪ್ರಾರಂಭದಲ್ಲಿ ಇದು ತೊಗಟೆಯ ಹೊರಭಾಗದಲ್ಲಿ ಬೂದು ಮಿಶ್ರಿತ ಕಂದು ಬಣ್ಣದ ವಿಶಿಷ್ಟ ಚಿನ್ಹೆಯಾಗಿ ಕಂಡುಬರುತ್ತದೆ. ನಂತರ ಈ ಭಾಗದಿಂದ ಕೆಂಪು ಮಿಶ್ರಿತ ಕಂದು ಬಣ್ಣದ ರಸ ಕಾಣಿಸಿಕೊಂಡು ಅಲ್ಲಿಯೇ ಒಣಗಿ ತುಕ್ಕು ಹಿಡಿದಂತೆ ಕಾಣುತ್ತದೆ. ಒಳಭಾಗದ ಅಂಗಾಶಗಳು ಕೊಳೆತು ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಕಜ್ಜಿಗಳು ಮುಖ್ಯ ಕಾಂಡ ಅಥವಾ ರೆಂಬೆಗಳಲ್ಲಿ ಸುತ್ತಲೂ ಉಂಗುರದಂತೆ ಒಂದಕ್ಕೊಂದು ಸೇರಿಕೊಂಡಾಗ ಆ ಭಾಗದಿಂದ ಗಿಡವು ಒಣಗಿ ಸಾಯುತ್ತದೆ.
ಹತೋಟಿ ಕ್ರಮಗಳು
• ತೋಟದಲ್ಲಿ ನೀರು ನಿಲ್ಲದಂದೆ ಉತ್ತಮ ಬಸಿಕಾಲುವೆಗಳನ್ನು ಮಾಡಬೇಕು.
• ರೋಗದ ಪ್ರಾರಂಭದಲ್ಲಿ ರೋಗಗ್ರಸ್ಥ ಭಾಗವನ್ನು ಕೆತ್ತಿ ತೆಗೆದು ಆ ಭಾಗಕ್ಕೆ ಶೇ. 10ರ ಬೋರ್ಡೊ ಮುಲಾಮನ್ನು ಲೇಪಿಸಬೇಕು.
2. ಎಳೆಕಾಯಿ ಸೊರಗು/ಕೊಳೆ ರೋಗ
ಪ್ರಾರಂಭದಲ್ಲಿ ಕಾಯಿಗಳು ಹೊಳಪನ್ನು ಕಳೆದುಕೊಂಡು 4 ರಿಂದ 7 ದಿನಗಳಲ್ಲಿ ಚಪ್ಪಟೆಯಾಗುತ್ತವೆ. ಇಂತಹ ಕಾಯಿಗಳೂ ಕೆಳಗೆ ಬೀಳದೆ ಗಿಡದಲ್ಲಿಯೇ ಅಂಟಿಕೊಂಡು ಇರುತ್ತವೆ. ಕಾಯಿಗಳ ತೊಟ್ಟಿನ ಭಾಗದಿಂದ ಹಳದಿ ಮಿಶ್ರಿತ ದಟ್ಟ ಕಂದು ಬಣ್ಣದ ಗುರುತುಗಳು ಕಾಣುತ್ತವೆ. ನಂತರ ಕಂದು ಬಣ್ನದ ಗುರುತುಗಳು ಇಡೀ ಕಾಯಿಗೆ ಹರಡಿ ದಟ್ಟ ಕಂದು ಬಣ್ಣಕ್ಕೆ ತಿರುಗಿ ಗಿಡದಲ್ಲಿಯೇ ಉಳಿಯುತ್ತವೆ.
ಹತೋಟಿ ಕ್ರಮಗಳು
• 5 ಗ್ರಾಂ ಕಾರ್ಬೆಂಡೆಜಿಮ್ ಶಿಲೀಂದ್ರನಾಶಕವನ್ನು 10 ಲೀ. ನೀರಿಗೆ ಬೆರಸಿ ಅಥವಾ 2 ಗ್ರಾಂ ಡೈಥೆನ್ ಎಂ-45 ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.
3. ನಸುಗೆಂಪು ರೋಗ
ಪೆಲಿಕುಲೇರ್ಯಾ ಸಾಲ್‍ಮೋನಿಕಲರ್ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಕಾಂಡದ ಮೇಲೆ ಸಸುಗೆಂಪು ಪುಡಿಯ ಲೇಪನ ಇರುವುದು ಈ ರೋಗದ ವಿಶಿಷ್ಟ ಲಕ್ಷಣವಾಗಿರುತ್ತದೆ. ಇದರಿಂದ ಕುಡಿಗಳು ಸೊರಗಿ, ಎಲೆಗಳು ಉದುರಿ ಕೊನೆಯಲ್ಲಿ ರೆಂಬೆಗಳು ಸಾಯುತ್ತವೆ.
ಹತೋಟಿ ಕ್ರಮಗಳು
• ರೋಗಕ್ಕೆ ತುತ್ತಾದ ರೆಂಬೆಯನ್ನು ಕತ್ತರಿಸಿ ಕೆತ್ತಿ ತೆಗೆದು ಆ ಭಾಗಕ್ಕೆ ಶೇ. 10ರ ಬೋರ್ಡೊ ಮುಲಾಮನ್ನು ಲೇಪಿಸಬೇಕು.
• ಕಾಲ ಕಾಲಕ್ಕೆ ಶೇ.1 ರ ಬೋರ್ಡೊ ದ್ರಾವಣವನ್ನು ಸಂಪೂರ್ಣವಾಗಿ ಒದ್ದೆಯಾಗುವಂತೆ ಸಿಂಪರಣೆ ಮಾಡಬೇಕು.
ಕೊಯ್ಲು
ಕೊಕ್ಕೊ ನೆಟ್ಟ ಎರಡು ವರ್ಷದ ನಂತರ ಹೂ ಬಿಡಲು ಪ್ರಾರಂಬಿಸಿ ನಂತರ 4 ರಿಂದ 5 ತಿಂಗಳಲ್ಲಿ ಕಾಯಿ ಬಲಿಯುವುದನ್ನು ಕಾಣಬಹುದು. ಕೊಕ್ಕೊದಲ್ಲಿ ವರ್ಷವಿಡೀ ಕಾಯಿಗಳನ್ನು ಕೊಯ್ಯಬಹುದಾದರು ಮುಖ್ಯ ಬೆಳೆ ಎಪ್ರಿಲ್-ಜೂನ್ ತಿಂಗಳವರೆಗೆ ಇರುತ್ತದೆ. ಹಣ್ಣಾದ ಕಾಯಿಗಳನ್ನು ಹೂ ಬಿಡುವ ಜಾಗಕ್ಕೆ ಪೆಟ್ಟಾಗದಂತೆ ಹರಿತವಾದ ಕತ್ತಿಯಿಂದ ಕೊಯ್ಯಬೇಕು. ಪ್ರತಿ 15-20 ದಿನಗಳ ಅಂತರದಲ್ಲಿ ಕೊಯ್ಲು ಮಾಡಬಹುದು. ಕೊಯ್ದ ಹಣ್ಣುಗಳನ್ನು ಎರಡು ದಿನ ಬಿಟ್ಟು ಒಡೆದು ಬೀಜಗಳನ್ನು ಬೇರ್ಪಡಿಸಬೇಕು. ಯಾವುದೇ ಕಾರಣಕ್ಕೂ ಹಣ್ಣುಗಳನ್ನು ಕೊಯ್ದಾದ ಮೇಲೆ ನಾಲ್ಕು ದಿನಗಳ ಮೇಲೆ ಇಡಬಾರದು.
ಹುಳಿಸುವಿಕೆ ಮತ್ತು ಒಣಗಿಸುವಿಕೆ
ಬೀಜಕ್ಕೆ ಅಂಟಿಕೊಂಡಿರುವ ಲೋಳೆಯನ್ನು ತೆಗೆಯಲು, ಅದಕ್ಕೆ ಸ್ವಾದ ಹಾಗೂ ಪರಿಮಳ ಬರುವಂತೆ ಮಾಡಲು, ಕಹಿಯನ್ನು ಕಡಿಮೆ ಮಾಡಲು ಮತ್ತು ಬೀಜಾಂಕುರವನ್ನು ಸಾಯಿಸಿ ಹೊರ ಸಿಪ್ಪೆಯನ್ನು ಸಡಿಲಗೊಳಿಸಲು ಹುಳಿ ಬರಿಸುವಿಕೆ/ಕೊಳೆಸುವಿಕೆ ಅತಿ ಅವಶ್ಯಕ. ಬೀಜಗಳನ್ನು ಪೆಟ್ಟಿಗೆಯಲ್ಲಿಟ್ಟು ಅಥವಾ ರಾಶಿ ಹಾಕಿ ಅಥವಾ ತಟ್ಟೆಯಲ್ಲಿಟ್ಟು ಅಥವಾ ಬುಟ್ಟಿಯಲ್ಲಿ ಹುಳಿ ಬರಿಸುವುದು ಹೆಚ್ಚು ಪ್ರಚಲಿತದಲ್ಲಿದೆ.
ಪೆಟ್ಟಿಗೆ ಪದ್ಧತಿ
ದೊಡ್ದ ಪ್ರಮಾಣದಲ್ಲಿ ಕೊಕ್ಕೊ ಬೀಜವನ್ನು ಹುಳಿಸಲು ಈ ಪದ್ಧತಿಯನ್ನು ಬಳಸಲಾಗುತ್ತದೆ. ತಳದಲ್ಲಿ ರಂಧ್ರವಿರುವ 60 ಸೆಂ.ಮೀ. ಘಿ 60 ಸೆಂ.ಮೀ. ಘಿ 45 ಸೆಂ.ಮೀ ಅಳತೆಯ ಕಟ್ಟಿಗೆಯ ಪೆಟ್ಟಿಗೆಗಳನ್ನು ಬಳಸಬೇಕು. ತಳದಲ್ಲಿರುವ ರಂಧ್ರಗಳ ಮೂಲಕ ಬೀಜದ ಮೇಲಿನ ಲೋಳೆ ಕರಗಿ ನೀರಾಗಿ ಹರಿದು ಹೋಗುತ್ತದೆ ಮತ್ತು ಪೆಟ್ಟಿಗೆಯೊಳಗೆ ಹಾಳಿಯಾಡಲು ಅನುಕೂಲವಾಗುತ್ತದೆ. ಬೀಜಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಬಾಳೆ ಎಲೆ ಅಥವಾ ಗೋಣಿ ಚೀಲದಿಂದ ಮುಚ್ಚಬೇಕು. ಬೀಜಗಳನ್ನು ಒಂದು ದಿನದ ಅಂತರದಲ್ಲಿ ಮತ್ತೊಂದು ಪೆಟ್ಟಿಗೆಗೆ ಹಾಕುವ ಮೂಲಕ ಮಿಶ್ರ ಮಾಡಬೇಕು. ಇದರಿಂದ ಬೀಜಗಳು ಏಕಪ್ರಕಾರವಾಗಿ ಹುಳಿಯಲು ಸಹಾಯವಾಗುತ್ತದೆ. ಒಂದು ಪೆಟ್ಟಿಗೆಯಿಂದ ಇನ್ನೊಂದು ಪೆಟ್ಟಿಗೆಗೆ ಹಾಕಲು ಸಹಾಯಕವಾಗುವಂತೆ ಪೆಟ್ಟಿಗೆಗಳನ್ನು ಹಂತಗಳಲ್ಲಿ ಇಡಬೇಕು.45 ಘಂಟೆಗಳಲ್ಲಿ ಪೆಟ್ಟಿಯಲ್ಲಿಯ ತಾಪಮಾನ 42 ರಿಂದ 48 ಸೆಂ. ಆಗಿರುತ್ತದೆ. ಬೀಜಗಳನ್ನು 72 ಘಂಟೆಗಳ ನಂತರ ಒಮ್ಮೆ ಮಿಶ್ರ ಮಾಡಿ ಕೊನೆಯ ಬಾರಿ ಮತ್ತೊಂದು ದಿನದ ನಂತರ ಮಿಶ್ರ ಮಾಡಬೇಕು. ಪೂರ್ಣವಾಗಲುಒಟ್ಟೂ6 ದಿನಗಳು ಬೇಕಾಗುತ್ತದೆ. 6 ದಿನಗಳ ಹುಳಿಯುವಿಕೆಯ ನಂತರ ಬೀಜಗಳನ್ನು ತೆಗೆದು ಒಣಗಿಸಬೇಕು.
ಬಿಸಿಲಿನಲ್ಲಿ ಒಣಗಿಸುವುದು
ಉತ್ತಮ ಗುಣಮಟ್ಟದ ಉತ್ಪನ್ನವನ್ನು ಪಡೆಯಲು ಬೀಜಗಳನ್ನು ಬಿಸಿನಲ್ಲಿ ಒಣಗಿಸಬೇಕು. ಬೀಜಗಳನ್ನು ತೆಳ್ಳನೆಯ ಪದರದಲ್ಲಿ ಬಿದಿರಿನ ಚಾಪೆ ಅಥವಾ ಸಿಮೆಂಟಿನ ನೆಲದ ಮೇಲೆ ಹರಡಿ 5 ರಿಂದ 6 ದಿನಗಳ ಕಾಲ ಒಣಗಿಸಬೇಕು. ಏಕಪ್ರಕಾರದಲ್ಲಿ ಒಣಗಲು ಮೇಲಿಂದ ಮೇಲೆ ಬೀಜಗಳನ್ನು ಮಗುಚಿ ಹಾಕುತ್ತೀರಬೇಕು.
ದಾಸ್ತಾನು
ಒಣಗಿದ ಬೀಜಗಳನ್ನು ಸ್ವಚ್ಚಗೊಳಿಸಿ ಸಪ್ಪಟೆಯಾದ, ತುಂಡಾದ, ಸುಕ್ಕುಗಟ್ಟಿದ ಬೀಜಗಳನ್ನು ಬೇರ್ಪಡಿಸಬೇಕು. ಹೀಗೆ ಸ್ವಚ್ಚ ಮಾಡಿದ ಬೀಜಗಳನ್ನು ಪಾಲಿಥಿನ್ ಪದರವಿರುವ ಗೋಣಿಚೀಲಗಳಲ್ಲಿ ತುಂಬಿಸಬೇಕು. ಈ ಚೀಲಗಳನ್ನು ಹಲಗೆಗಳ ಮೇಲೆ ನೆಲದಿಂದ ಎತ್ತರದಲ್ಲಿ ಇಡಬೇಕು.
ಇಳುವರಿ
ಸಾಮಾನ್ಯವಾಗಿ ಒಂದು ಕೊಕ್ಕೊ ಗಿಡವು ವರ್ಷವೊಂದಕ್ಕೆ 1 ರಿಂದ 2 ಕಿ.ಗ್ರಾಂ. ಒಣ ಬೀಜಗಳನ್ನು ಉತ್ಪಾದಿಸುತ್ತದೆ.