ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ
“ಪ್ರಕೃತಿ ಮುನಿದ ಹಾದಿಯಲ್ಲಿ”
ಕಿಶೋರ್ ರೈ ಕತ್ತಲೆಕಾಡು ಇವರು “ಕತ್ತಲೆಕಾಡು” ಎಂದು ಜನಮಾನಸದಲ್ಲಿ ಪ್ರಚಲಿತದಲ್ಲಿದ್ದಾರೆ. ಇವರ ಅನುಭವದ ಅಕ್ಷರಗಳ ಗೊಂಚಲು ಕೊಡಗು ಮಳೆಗೆ ತತ್ತರಿಸಿ, ಜಲಸ್ಫೋಟಗೊಂಡು ಜನಜೀವನವು ಅಸ್ತವ್ಯಸ್ತವಾದ ಸಂದರ್ಭದ ವರದಿಕಾರಿಕೆಯ ಜತೆಜತೆಯಲ್ಲಿ ಆ ಕರಾಳತೆಯನ್ನು ಕಣ್ಣಮುಂದೆ ಕಟ್ಟಿಕೊಡುವ ಪ್ರಯತ್ನ ಅವರ ಲೇಖನಿಯಿಂದ ಮೂಡಿಬಂದ “ಪ್ರಕೃತಿ ಮುನಿದ ಹಾದಿಯಲ್ಲಿ” ಎಂಬ ಪುಸ್ತಕ.
ವರದಿಗಾರ ಲೇಖಕನ ಬರಹಗಳು “ಅಳುವ ಕಡಲಿನಲ್ಲಿ ತೇಲಿ ಬರುತಲಿವೆ ನಗೆಯ ಹಾಯಿ ದೋಣಿ” ಎಂಬಂತೆ ಗಂಭೀರ ಪರಿಸ್ಥಿತಿಯ ವಾತಾವರಣವನ್ನು ಕಟ್ಟಿಕೊಡುವ ನಡುವೆ ಕಚಗುಳಿ ಇಡಿಸಿಕೊಂಡು ಓದಿಸಿಬಿಡುವ ಶಕ್ತಿ ತುಂಬಿಕೊಂಡ, ನೆನಪಿನ ಬುತ್ತಿಯನ್ನು ಬಿಚ್ಚಿಕೊಡುತ್ತಾ ತನಗರಿವಿಲ್ಲದೇ ಬರಹ ಸಾಗಿರುವುದು ವಿಶೇಷ.
ಮತ್ತಷ್ಟು ಅನುಭವಿಸಿದ ಅಗರಗಳು 2018ರ ಮಳೆಗಾಲದ ಕರಾಳತೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಎಲ್ಲಿಯೂ ಉತ್ಪ್ರೇಕ್ಷೆಗೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಮನ ಕರಗುವಂತೆ ಅನುಭವಿಸಿದ ನೈಜಘಟನೆಯನ್ನು ಬಿಡಿಸಿ ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ಇವರ ಈ ಪುಸ್ತಕ ಕೊಡಗಿನ ಆ ದಿನಗಳ ಕರಾಳತೆಯನ್ನು ದಾಖಲೆಯಾಗಿ ಉಳಿಸಿಕೊಳ್ಳಲು ಶ್ರಮಿಸಿದೆ.
ಅಕ್ಷರಶಃ ಕೊಡಗಿನ ಪತ್ರಕರ್ತರು ಆ ದಿನಗಳಲ್ಲಿ ತಾವುಗಳು ತಿರುಗಿ ಮನೆ ತಲುಪುವ ನಿರೀಕ್ಷೆಗೆ ಎಳ್ಳುನೀರು ಬಿಟ್ಟು ಕ್ಷೇತ್ರಕ್ಕೆ ದುಮುಕ್ಕಿದ್ದರು. ಅಲ್ಲದೇ ಕಾಟಾಚಾರದ ವರದಿ ಮಾಡದೆ ಆಪತ್ತಿನಲ್ಲಿ ಇರುವವರಿಗೆ ಸಾಧ್ಯವಾದ ನೆರವು ನೀಡುತ್ತಾ ವರದಿಗಳೊಂದಿಗೆ ಮಾನವೀಯತೆಯನ್ನು ಮೆರೆದದ್ದನ್ನು ಕಿಶೋರ್‍ರವರ ಬರಹ ಸಾಕ್ಷೀಕರಿಸಿದೆ.
ಹುಡುಗುತನ ತುಂಟಾಟ ಭಂಡ ಧೈರ್ಯಗಳೇ ಇವರುಗಳನ್ನು ಪ್ರಾಣದ ಹಂಗು ತೊರೆದು ಇತರರನ್ನು ರಕ್ಷಿಸುವ ಸಾಹಸ ಪ್ರವೃತ್ತಿಗೆ ಇಳಿಸಿಬಿಟ್ಟದ್ದನ್ನು ಇವರ ಅನುಭವದ ಅಕ್ಷರಗಳು ತಿಳಿಸಿಕೊಡುತ್ತದೆ.
ಅದೊಂದು ದಿನ ಕರೆ ಬಂದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮನೆ ಬಿಟ್ಟ ಕಿಶೋರ್ ಹಸಿವು ತಾಳಲಾರದೆ ಅದ್ಯಾವುದೋ ಕ್ಯಾಂಟಿನಿನಲ್ಲಿ ಕೊಡಗಿನ ಮಳೆಯ ವಾತಾವರಣದ ನ್ಯಾಚುರಲ್ ಪ್ರಿಡ್ಜ್‍ನಲ್ಲಿ ಈತನಿಗಾಗಿ 2-3 ದಿನಗಳಿಂದ ಕಾದು ಕುಳಿತಿದ್ದ ಒಂದು ಬನ್ ಮತ್ತು ಟೀಯನ್ನು 80 ರೂಪಾಯಿ ಪಾವತಿಸಿ ಹೊಟ್ಟೆ ತುಂಬಿಸಿಕೊಂಡ ಘಟನೆ ದುಃಖದಲ್ಲೂ ಒಂದು ಮುಗುಳುನಗೆ ತರಿಸಿಬಿಡುತ್ತದೆ.
1. ಸ್ವಾತಂತ್ರ್ಯ ಸಂಭ್ರಮ ಕಸಿದುಕೊಂಡ ಮಳೆರಾಯ
2. ಜಲಾವೃತವಾದ ಕುಶಾಲನಗರ
3. ಬೋಟ್‍ನಲ್ಲೇ ರಾಷ್ಟ್ರ ಧ್ವಜಾರೋಹಣ
4. ಮಕ್ಕಂದೂರಿಗೆ ಪ್ರಯಣ
5. ಜನರ ಆತಂಕ ಮತ್ತು ನಮ್ಮ ತವಕ
6. ಹೆಮ್ಮೆತ್ತಾಳುವಿನಲ್ಲಿ ನಮ್ಮ ತಳಮಳ
7. ಪ್ರಪಾತದ ಹಾದಿಯಲ್ಲಿ ಗುರಿಯತ್ತ ಹೆಜ್ಜೆ
8. ಪ್ರಪಾತದ ಹಾದಿಯಲ್ಲಿ ನಾವು
9. ಹೆಲಿಕಾಪ್ಟರ್ ಬರುತ್ತದೆ ಅಂತ ಜನ ಕಾಯ್ತಾ ಇದ್ರು
10. ಹಳೆ ಬನ್ನ್ ಮತ್ತು ಚಾ
11. ಮಳೆ ಜೋರು ದಾರಿತೋರುವವರಾರು
12. ಅಂತೂ ಕೆಳಗೆ ತಲುಪಿದೆವು
13. ತಮ್ಮವರಿಗಾಗಿ ಕಣ್ಣೀರಿಡುತ್ತಿದ್ದ ನಾಲ್ವರು
14. ಅಗ್ನಿಶಾಮಕದವರ ಮನವೊಲಿಕೆ
15. ಬೇಡಾ ಅಂದ್ರೂ ಕೈ ಮುಗಿದು ಕೆಳಗಿಳಿದೆವು
16. ಅಂತೂ ಚಂದೂಗೋಪಾಲ್ ಮನೆ ತಲುಪಿದೆವು
17. ನಮ್ಮನ್ನು ನಡುಗಿಸಿದ ಗುಡುಗುಡು ಶಬ್ದ
18. ಹೆಲಿಕಾಪ್ಟರ್ ಇಳಿಯಲಿಲ್ಲ
19. ಕಿಶೋರ್ ರೈ ಮಿಸ್ಸಾಗಿದ್ದಾರಂತೆ
20. ನಾವು ದುಡುಕಿದ್ದರೆ
21. ಹೆಬ್ಬೆಟ್ಟಗೇರಿಯಲ್ಲಿ ಕಂಡ ಭಯಾನಕ ಚಿತ್ರಣ
22. ಚಿರನಿದ್ರೆಗೆ ಜಾರಿದ ಮಗು
23. ಸಾವಿನ ಸನಿಹ ನಿಂತು ವೀಡಿಯೋ ಮಾಡಿದ ಭೂಪ
24. ಇಬ್ಬರ ಶವ ಪತ್ತೆ
25. ಕೊಡಗಿಗೆ ಹೀಗಾಗಬಾರದಿತ್ತು
26. ಶವವಾಗಿಯೂ ಸಿಗದ ಮಂಜುಳಾ
27. ದಿಕ್ಕಾರ ಕೂಗಿದರೂ ಸಹಿಸಿಕೊಂಡೆವು
28. ನಾವು ಮಾಡಿದೆಲ್ಲಾ ಸರಿಯಿತ್ತಾ!? ಹೀಗೆ
ಈತ ಹೋಗಿದ್ದ ಆ ಗ್ರಾಮದಲ್ಲಿ ಬೇರೆಯೇ ದಿನವಾಗಿದ್ದರೆ ಕರೆದು ನಾಟಿಕೋಳಿ ಸಾರು, ಅನ್ನ ಬೇಯಿಸಿ ಆ ಜನಗಳು ಕೊಡುವ ಸ್ವಭಾವದ ಅತಿಥಿಪ್ರಿಯರು. ಅಂತಹ ಊರಿನಲ್ಲಿ 80 ರೂಪಾಯಿಗೆ ಹಳಸಿದ ಬನ್ನು, ಟೀ…!?
ಕಿಶೋರ್ ದಾಖಲಿಸಿದ ಅಕ್ಷರಗಳಲ್ಲಿ ಆಗಸ್ಟ್ 15ರ ಪಾವಿತ್ರತೆ, ಆ ದಿನದ ವಿಜೃಂಭಣೆಯ ಮಹತ್ವವನ್ನು ಕುಶಾಲನಗರ ಪಟ್ಟಣದಲ್ಲಿ ಹೆಚ್ಚಿದ ನದಿ ಹರಿವಿನ ನಡುವೆ ದೋಣಿಯೊಂದರಲ್ಲಿ ಕೊಡಗಿನ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಮಾಡಿಸಿ ಮೆರೆದ ರಾಜ್ಯ ವಿಪತ್ತು ನಿರ್ವಹಣಾ ತಂಡದ ಬದ್ದತೆಯನ್ನು ಪ್ರದರ್ಶಿಸುತ್ತದೆ.
ಇದರ ನಡುವೆ ಪ್ರಚಾರಕ್ಕಾಗಿ ಹಪಹಪಿಸುವ ಸ್ವಾರ್ಥಿ ಮುಖಗಳ ದರ್ಶನವನ್ನು ಮಾಡಿಸುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮತ್ತು ಸಾಮಾಜಿಕ ಕೈಂಕರ್ಯದಲ್ಲಿ ಹತ್ತು ಹಲವರ ಮುಖವಾಡಗಳನ್ನು ತಮ್ಮದೇ ಶೈಲಿಯಲ್ಲಿ ಬೆತ್ತಲಾಗಿಸುವ ಪ್ರಯತ್ನವನ್ನು ಕೂಡ ತಮ್ಮ ಇತಿ ಮಿತಿಯೊಳಗೆ ಮಾಡಿದ್ದಾರೆ.
ಇವೆಲ್ಲಕ್ಕೂ ಮಿಗಿಲಾಗಿ ಅಪಾಯದ ಅತಿ ಸಮೀಪದಲ್ಲಿ ಇರುವಾಗಲೂ ಕೂಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇವರುಗಳು ಇರುವ ಸ್ಥಳ ಮತ್ತು ಅಲ್ಲಿಯ ವಾಸ್ತವಾಂಶಗಳನ್ನು ತಿಳಿಸಿಕೊಡುವುದಲ್ಲದೇ, ಅಲ್ಲಿಯ ಸಂದರ್ಭಕ್ಕೆ ಬೇಕಾದ ನೆರವನ್ನು ಒದಗಿಸಿಕೊಡಲು ಕೂಡ ಇವರುಗಳು ಪ್ರಯತ್ನಿಸಿರುವುದು ಶ್ಲಾಘನೀಯವಾಗಿದೆ.
ಕಿಶೋರ್ ದಾಖಲಿಸಿದ್ದರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರು ತಮ್ಮ ಮೂರು ವರ್ಷದ ಮಗನನ್ನು ಬೆಳಗ್ಗೆ ಮತ್ತು ಸಂಜೆ ಆತನೊಂದಿಗೆ ಆಟವಾಡಲೂ, ಆತನನ್ನು ಮುದ್ದುಗೈಯಲೂ ಆಗದೇ ಕೊಡಗಿನ ಜನರ ನೋವಿಗೆ ಹಗಲಿರುಳು ಶ್ರಮಿಸಿದ್ದನ್ನು ತಮ್ಮ ಬರಹದಲ್ಲಿ ದಾಖಲಿಸಿ ಅವರಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ಕೂಡ ಕೊಡಗು ಜನರ ಪರವಾಗಿ ಸಲ್ಲಿಸಿದ್ದಾರೆ.
ನಿಸ್ವಾರ್ಥವಾಗಿ ಬಡವ ಬಲ್ಲಿದ ಜಾತಿ ಧರ್ಮಗಳ ತಾರತಮ್ಯ ಮಾಡದೇ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಿದ್ದ ಇವರಿಗೆ ಅಜ್ಞಾನಿಗಳ ದಿಗ್ ದರ್ಶನವು ಕೂಡ ಆಗಿರುವುದನ್ನು ಮೌನದಿಂದಲೇ ಸಹಿಸಿಕೊಂಡದ್ದು ಪರಿಸ್ಥಿತಿ ಇವರಿಗೆ ಕಲಿಸಿಕೊಟ್ಟ ತಾಳ್ಮೆಯ ಪಾಠವೆಂದೇ ಹೇಳಬೇಕಾಗುತ್ತದೆ.
ಇವೆಲ್ಲ್ಲದರ ನಡುವೆ ಮನ ಕಲುಕುವ ಮತ್ತಷ್ಟು ವಿಚಾರಗಳನ್ನು ಒಳಗೊಂಡ ಲೇಖನಗಳೊಂದಿಗೆ ತಮಗಳ ಪ್ರಜ್ಞಾಸಾಕ್ಷಿಯೆಂಬಂತೆ “ನಾವು ಮಾಡಿದೆಲ್ಲಾ ಸರಿಯಿತ್ತಾ…!? ಎಂಬ ಆತ್ಮ ವಿಮರ್ಶಾಬರಹ-ಯಾ-ತನ್ನೊಳಗೊಂದು ಪ್ರಶ್ನೆಯನ್ನು ಹುಟ್ಟಿಸಿಕೊಂಡು ಆ ಕರಾಳ ದಿನಗಳ ನೋವು ನಲಿವನ್ನು ತೆರೆದಿಡುವ ಪುಸ್ತಕವಾಗಿ ಬೆಳಕು ಕಂಡ “ಮಹಾಮಳೆಗೆ ಕೊಡಗು ನಲುಗಿದ ಕಥೆ” ಯನ್ನು ನಾವು ನೀವು ಕೇವಲ ಓದುವುದಲ್ಲದೇ ‘ನಲುಗಿದ ಕಥೆಯ ಮುಂದಿನ ಪ್ರಯಾಣಕ್ಕೆ ಜತೆಗೂಡಿ ಹೋಗೋಣ. ಈ ಸಾಹಸಿಗರಿಗೆ ಮೌನದ ಮಾತಲ್ಲಿ ಹರಸಿಕೊಳ್ಳುತ್ತಾ ನಾವು ಮೌನದಲ್ಲಾದರೂ ಭಾಗಿಯಾಗೋಣ.
ಕೊನೆಯ ಮಾತು: ಶ್ರೀಮತಿ ಡಾ|| ನಯನಾ ಕಾಶ್ಯಪ್‍ರ ಮುನ್ನುಡಿಯಲ್ಲಿ “ಉತ್ಪಾತ”, “ಸಂಕಥಿಸುವ” ಮುಂತಾದ ಶಬ್ದಗಳು ಹೊತ್ತಿಗೆಗೆ ಶ್ರೀಮಂತಿಕೆಯನ್ನು ತಂದು ಕೊಟ್ಟಿದೆ.
ಪುಸ್ತಕಕ್ಕಾಗಿ ಸಂಪರ್ಕಿಸಿ: ಕಿಶೋರ್ ರೈ ಕತ್ತಲೆಕಾಡು – 7204520272