“ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”
ಅಜಾದ್ ಎಂಬ ಹೆಸರಿಗೆ ಅರ್ಥ ಕೊಟ್ಟ ಅಪ್ರತಿಮ ಹೋರಾಟಗಾರ; “ಚಂದ್ರಶೇಖರ್ ಆಜಾದ್”
ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ ರಾಷ್ಟ್ರಭಕ್ತ ಚಂದ್ರಶೇಖರ ಅಜಾದ್, ದೇಶಪ್ರೇಮಿ ಸ್ವಾಭಿಮಾನಿಗಳ ನೆಚ್ಚಿನ ಬಂಟ.
1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಆಡಳಿತದ ವಿರುದ್ಧದ ತಮ್ಮ ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಆಯುಧಗಳನ್ನು ಬಳಸಿದ್ದ ಮೊದಲ ಭಾರತೀಯ ಕ್ರಾಂತಿಕಾರಿಗಳಲ್ಲಿ ಚಂದ್ರಶೇಖರ್ ಆಜಾದ್ ಒಬ್ಬರಾಗಿದ್ದರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನೆಂಬುದು ಕೂಡಾ ಚಂದ್ರಶೇಖರ್ ಆಜಾದ್ ಅಭಿಪ್ರಾಯವಾಗಿತ್ತು. ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್.
ಪಂಡಿತ್‌ಜಿ ಎಂದು ಆಗ್ಗಾಗ್ಗೆ ಕರೆಯಲ್ಪಡುತ್ತಿದ್ದ ಆಜಾದ್‌ರವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಓರ್ವ ಕ್ರಾಂತಿಕಾರಿಯಾಗಿದ್ದರು. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾವರಾ ಎಂಬ ಸ್ಥಳದಲ್ಲಿ, ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೆಯ ಮಗನಾಗಿ ಜನಿಸಿದ ಚಂದ್ರಶೇಖರ್, ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಕೇವಲ ೧೪ರ ವಯಸ್ಸಿನಲ್ಲೇ ಛಡಿ ಏಟಿನ ಕ್ರೂರ ಶಿಕ್ಷೆಗೆ ಒಳಗಾದ ಚಂದ್ರಶೇಖರ, ನಂತರದ ಬೆಳವಣಿಗೆಗಳಲ್ಲಿ ಗಾಂಧೀಜಿಯವರ ನಿರ್ಣಯಗಳಿಂದ ಬೇಸತ್ತು ಕ್ರಾಂತಿಮಾರ್ಗವನ್ನು ಹಿಡಿದರು. ರಾಮ್‌ಪ್ರಸಾದ್ ಬಿಸ್ಮಿಲ್ಲರನ್ನು ತಮ್ಮ ಗುರುಗಳೆಂದು ಸ್ವೀಕರಿಸಿ, ತಮಗೆ ಆಝಾದ್ (ಸ್ವತಂತ್ರ) ಎನ್ನುವ ಹೆಸರನ್ನು ಸೇರಿಸಿಕೊಂಡರು. ಹದಿನೈದನೇ ವಯಸ್ಸಿಗೇ ತಮ್ಮ ಮೊದಲ ಶಿಕ್ಷೆಯನ್ನು ಪಡೆದರು ಚಂದ್ರಶೆಖರ್ ಅಜಾದ್. ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅಜಾದ್‌ರನ್ನು ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಮ್ಯಾಜಿಸ್ಟ್ರೇಟ್ ಹೆಸರು ಕೇಳಿದಾಗ, ‘ಅಜಾದ್’ ಎಂದು ಹೇಳುವ ಮೂಲಕ ಹದಿನೈದು ಛಡಿಯೇಟಿನ ಶಿಕ್ಷೆ ಅನುಭವಿಸಿದರು. ಪ್ರತಿಯೊಂದು ಹೊಡೆತಕ್ಕೂ ‘ಭಾರತ್ ಮಾತಾ ಕಿ ಜೈ, ಗಾಂಧಿ ಕಿ ಜೈ’ ಎನ್ನುವ ಘೋಷಣೆ ಕೂಗಿದರು. ಆ ಮೂಲಕ ಚಂದ್ರ ಶೇಖರ್ ‘ಅಜಾದ್’ ಎಂದೇ ಹೆಸರಾದರು.
ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಸಂಘವನ್ನು ಆರಂಭಿಸಿದ ಅಜಾದ್ ಅವರ ಜತೆಗೆ ಭಗತ್ ಸಿಂಗ್, ಸುಖ್ ದೇವ್, ಬಟುಕೇಶ್ವರ್ ದತ್, ರಾಜ್ ಗುರು ಸಾಥ್ ನೀಡಿದರು. ೧೯೨೫ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ ೯ ಆರೋಪಿಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿಯಾದರು. ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ಚುಕ್ಕಾಣಿಯನ್ನು ಹಿಡಿದು ಭಾರತಮಾತೆಯ ಸೇವೆಯನ್ನು ಮುಂದುವರಿಸಿದ ಆಝಾದ್, ಮುಂದಿನ ಕೆಲವರ್ಷಗಳಲ್ಲಿ ಭಾರತೀಯ ಸ್ವಾತಂತ್ರಸಂಗ್ರಾಮದಲ್ಲಿ ಸಂಪೂರ್ಣವಾಗಿ ಮುಳುಗಿದರು.. ೧೯೨೮ ರಲ್ಲಿ ಭಾರತಕ್ಕೆ ಆಗಮಿಸಿದ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸುವ ವೇಳೆ ಶ್ರೀಯುತ ಲಾಲಾ ಲಜಪತರಾಯರ ಮೇಲಾದ ಕ್ರೂರ ದಬ್ಬಾಳಿಕೆಗೆ ಉತ್ತರವಾಗಿ ಆಝಾದರ ನೇತೃತ್ವದಲ್ಲಿ ಭಗತ್ ಸಿಂಗ್ ಹಾಗೂ ರಾಜಗುರು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ರನ್ನು ಹತ್ಯೆಗೈದರು. ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಅಜಾದ್‌ರನ್ನು ಪೊಲೀಸರಿಗೆ ಬೇಕಾದವರ ಬಹುಮುಖ್ಯರ ಪಟ್ಟಿಯಲ್ಲಿ ಸೇರಿಸಿ ಬ್ರಿಟಿಷರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು.
ಅಂದು 1931 ರ ಫೆಬ್ರವರಿ 27 ರಂದು ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನ ಕಡೆ ಹೊರಟ. ಈ ವಿಷಯವನ್ನು ವೀರಭದ್ರ ತಿವಾರಿ ಎಂಬ ದೇಶದ್ರೋಹಿ ಪೊಲೀಸರಿಗೆ ತಿಳಿಸಿದ. ಎಂಬತ್ತು ಮಂದಿ ಪೊಲೀಸರು ಪಾರ್ಕ್ ಸುತ್ತ ಸುತ್ತುವರೆದರು. ಕಾರಿನಲ್ಲಿ ಬಂದ ನಾಟಬಾಪರ್ ಎಂಬ ಅಧಿಕಾರಿ ಆಜಾದ್ ತೊಡೆಗೆ ಗುರಿಯಿಟ್ಟು ಹೊಡೆದ. ಆ ಗುಂಡು ಆಜಾದ್’ಗೆ ತಾಕಿತು. ಅಪಾಯದ ಅರಿವಾದ ಕೂಡಲೇ ಆಜಾದ್ ತನ್ನ ಸ್ನೇಹಿತನನ್ನು ರಕ್ಷಿಸಿ ಹೋರಾಟಕ್ಕೆ ಸಜ್ಜಾದ. ಕೈಯಲ್ಲಿ ಬಂದೂಕು ಹಿಡಿದು ಒಂದೇ ಸಮನೆ ಗುಂಡು ಹಾರಿಸಿದ. 80 ಪೊಲೀಸರು ಮತ್ತು ಒಬ್ಬ ಆಜಾದ್. ಆಜಾದ್ ಚಿರತೆಯಂತೆ ಓಡಾಡುತ್ತಾ ಪೊಲೀಸರಿಗೆ ತಕ್ಕ ಉತ್ತರ ನೀಡಿದ. ಅರ್ಧ ಗಂಟೆಗೂ ಹೆಚ್ಚು ಕಾಲ ಯುದ್ದ ಮಾಡಿದ ಆಜಾದ್’ಗೆ ತನ್ನ ಬಳಿಯಿರುವ ಗುಂಡಿನ ಲೆಕ್ಕವಿತ್ತು. ಕೊನೆಯ ಗುಂಡು ಉಳಿದಿತ್ತು. ಜೀವಂತವಾಗಿ ಪೋಲೀಸರ ಕೈಗೆ ಸಿಗಬಾರದೆಂದು ನಿರ್ಧರಿಸಿದ್ದ ಆಜಾದ್ ಆ ಒಂದು ಗುಂಡನ್ನು ತಲೆಗೆ ಹೊಡೆದುಕೊಂಡು ಸೇನಾನಿಯಂತೆ ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದ. ಅಂದು ಆಲ್ ಫ್ರೆಡ್ ಉದ್ಯಾನವನದಲ್ಲಿ ಅಂತಿಮ ಕ್ಷಣ ಎದುರಿಸುವಾಗಲೂ ಅಜಾದ್ ಶರಣಾಗಲಿಲ್ಲ. ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.
ಚಂದ್ರಶೇಖರ್ ಆಜಾದ್ ಅಥವಾ ‘ಆಜಾದ್’ ಎಂಬ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ. ಭಗತ್ ಸಿಂಗ್ ರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ ಚಂದ್ರಶೇಖರ ಸೀತಾರಮ್ ತಿವಾರಿ ಅಲಿಯಾಸ್ ಆಜಾದ್ ಅವರ ಸಂಸ್ಮರಣಾ ದಿನವನ್ನು ದೇಶದೆಲ್ಲಡೆ ಸ್ಮರಿಸಲಾಗುತ್ತಿದೆ. ನಂಬಿಕಸ್ತರ ವಂಚನೆಯಿಂದಲೇ ಅಂದು ಆಜಾದ್ ಬಲಿದಾನವಾಯಿತು. ಅವರು ಸಾಯುತ್ತಿರುವುದನ್ನು ನೋಡಿದರೂ ಅವರ ಮೃತದೇಹದ ಬಳಿಗೆ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಬ್ರಿಟಿಷ್ ಸೈನಿಕನೂ ಹೋಗಲಿಲ್ಲವೆಂದು ಹೇಳಲಾಗುತ್ತದೆ. ಆಜಾದ್ ಎಂಬ ಬಹುರೂಪಿ ಯಾವ ರೀತಿ ಬ್ರಿಟಿಷರಿಗೆ ಭಯ ಹುಟ್ಟಿಸಿದ್ದರು ಎಂಬುದನ್ನು ಕಾಣಬಹುದು.
ನಮಗಾಗಿ ಆಜಾದ್ ಅವರು ಮಾಡಿದ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಫೆಬ್ರವರಿ 27. ಇಂಥ ಹೀರೋಗಳು ಮತ್ತೆ ಹುಟ್ಟಿ ಬರಲಿ. ಚಂದ್ರಶೇಖರ ಆಜಾದ್ ತ್ಯಾಗ ಬಲಿದಾನವನ್ನು ಸ್ಮರಿಸೋಣ, ಅವರ ಮಹಾನ್ ವ್ಯಕ್ತಿತ್ವ ನೆನೆದಾಗಲೆಲ್ಲಾ ದೇಶಭಕ್ತಿಯನ್ನು ಪ್ರಜ್ವಲಿಸುವ ಅಮರ ಜ್ಯೋತಿಯ ಉದ್ದೀಪನವಾದಂತೆನಿಸುತ್ತದೆ. ಅವರ ಬದುಕಿನಲ್ಲಿ ಜಾಗೃತವಾಗಿದ್ದ ಸುಸಂಸ್ಕೃತ ನಡಾವಳಿ, ಹಿರಿಯರ ಬಗ್ಗೆ ಗೌರವ, ದೇಶಕ್ಕಾಗಿ ಏನನ್ನೂ ಮಾಡಲು ಸಿದ್ಧರಿದ್ಧ ಭಕ್ತಿನಿಷ್ಠೆಗಳು ನಿರಂತರ ಮನನಯೋಗ್ಯವಾಗಿವೆ. ಆ ಮಹಾನ್ ರಾಷ್ಟ್ರಯೋಧರ ಚೇತನಕ್ಕೆ ಶಿರಬಾಗಿ ನಮಿಸೋಣ.
✍. ಕಾನತ್ತಿಲ್ ರಾಣಿ ಅರುಣ್