ಬರಲಿದೆ ವಿದ್ಯುತ್ ಸ್ಮಾರ್ಟ್ ಮೀಟರ್

Reading Time: 5 minutes

ಬರಲಿದೆ ವಿದ್ಯುತ್ ಸ್ಮಾರ್ಟ್ ಮೀಟರ್

ಸದ್ಯ ದೇಶಾದ್ಯಂತ ಮನೆಗಳಿಗೆ, ಮಳಿಗೆಗಳಿಗೆ ಎಲ್ಲಕ್ಕೂ ಬಳಸುತ್ತಿರುವ ವಿದ್ಯುತ್ ಮಾಪಕಗಳು ಸಾಮಾನ್ಯವಾದವು. ಇವುಗಳನ್ನ ಸ್ಮಾರ್ಟ್ ಮೀಟರ್​ಗಳಾಗಿ ಬದಲಾವಣೆ ಮಾಡಲಾಗುತ್ತದೆ. 2023ರ ವೇಳೆಗೆ ಅಂದ್ರೆ ಇನ್ನು 3 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ಪವರ್ ಮತ್ತು ರಿನಿವಬಲ್ ಸೆಕ್ಟರ್​ಗೆ 2,200 ಕೋಟಿ ರೂಪಾಯಿ ಅನುದಾನವನ್ನ ನೀಡಲಾಗುತ್ತದೆ.

ಮೊಬೈಲ್‌ನಂತೆ, ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಸೌಲಭ್ಯಗಳಂತೆ ಈ ಸ್ಮಾರ್ಟ್ ಮೀಟರ್­ಗಳು ಕಾರ್ಯನಿರ್ವಹಣೆ ಮಾಡಲಿವೆ. ಗ್ರಾಹಕರು ರೀಚಾರ್ಜ್ ಮಾಡಿ ವಿದ್ಯುತ್ ಪಡೆಯಬಹುದಾಗಿದೆ. ನಾವು ಹೆಚ್ಚು ರೀಚಾರ್ಜ್ ಮಾಡಿದರೆ ಹೆಚ್ಚು ವಿದ್ಯುತ್ ಸಿಗುತ್ತದೆ. ಮುಂದಿನ ರಿಜಾರ್ಜ್ ವೇಳೆ ಹಿಂದಿನ ರಿಜಾರ್ಜ್ ನಲ್ಲಿ ಉಳಿದ ವಿದ್ಯುತ್ ಅನ್ನು ಸೇರಿಸಲಾಗುತ್ತದೆ. ಅಗತ್ಯವಿಲ್ಲದಿದ್ದರೆ ಮೀಟರ್ ಅನ್ನು ಸ್ವಿಚ್ ಆಫ್ ಸಹ ಮಾಡಬಹುದು. ನಿಗದಿತ ಶುಲ್ಕದ ಪ್ರಕಾರ ಒಟ್ಟು ಮೊತ್ತ ಅಥವಾ ಕಂತಿನಲ್ಲಿ ಪಾವತಿ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ, ವಿದ್ಯುತ್ ಕಳ್ಳತನ, ಲೋಡ್ ವ್ಯವಸ್ಥೆ, ಬಿಲ್ ಭರ್ತಿ ಇತ್ಯಾದಿಗಳ ಜಂಜಾಟಗಳಿಂದ ನಮಗೆ ಮುಕ್ತಿ ಸಿಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಪ್ರಮುಖ ವಿಷಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕೂಡ ಒಂದು. ಅಂದ್ರೆ, ಈಗಿರುವ ವಿದ್ಯುತ್ ಮೀಟರ್​ಗಳ ಬದಲು ಸ್ಮಾರ್ಟ್ ಮೀಟರ್​ಗಳ ಅಳವಡಿಕೆ ಮಾಡುವುದು. ಅದೂ ಕೂಡ ಪ್ರಿಪೇಯ್ಡ್​​ ಮೀಟರ್​ ಅಳವಡಿಕೆಯೊಂದಿಗೆ ಅನ್ನೋದು ವಿಶೇಷ..!

ವಿದ್ಯುತ್ ಬಿಲ್ ಮುಂಗಡವನ್ನು ಠೇವಣಿ ಇಡುವವರಿಗೆ, ಪೂರ್ವ-ಪಾವತಿಸುವ ಸೌಲಭ್ಯವೂ ಮೀಟರ್‌ನಲ್ಲಿರುತ್ತದೆ. ಮನೆಯಲ್ಲಿ ಕೆಲವು ತಿಂಗಳುಗಳ ಕಾಲ ಇಲ್ಲದೇ ಇದ್ದ ಸಂದರ್ಭದಲ್ಲೂ ಅನಗತ್ಯ ವಿದ್ಯುತ್ ಬಿಲ್ ಪಾವತಿಸಬೇಕಾದ ಸಂದರ್ಭ ಎದುರಾಗುವುದಿಲ್ಲ.

ಕಡಿಮೆ ವಿದ್ಯುತ್ ಬಳಸುವ ಪ್ರದೇಶದಿಂದ ಹೆಚ್ಚಾಗಿ ವಿದ್ಯುತ್ ಉಪಯೋಗಿಸುವ ಪ್ರದೇಶಗಳಿಗೆ ವಿದ್ಯುತ್‍ನ್ನು ವರ್ಗಾಯಿಸಲು ಸ್ಮಾರ್ಟ್ ಮೀಟರ್ ಸಹಕಾರಿಯಾಗಿದೆ. ಮನೆಯಲ್ಲಿಯೇ ಕುಳಿತು ವಿದ್ಯುತ್ ಬಳಕೆ ಮತ್ತು ಶುಲ್ಕವನ್ನು ತಿಳಿಯಬಹುದು. ಹಾಗೆಯೇ ವಿದ್ಯುತ್ ಕಳ್ಳತನವಾಗುವುದನ್ನು ತಡೆಯಬಹುದಾಗಿದೆ.

ನಮ್ಮ ದೇಶ ಡಿಜಿಟಲೀಕರಣದತ್ತ ದಾಪುಗಾಲಿಡುತ್ತಿದೆ, ನಮ್ಮ ನಗರಗಳು ಸ್ಮಾರ್ಟ್ ಸಿಟಿಗಳಾಗುತ್ತಿವೆ. ಹೀಗಾಗಿ ನಮ್ಮ ಎಲ್ಲಾ ಸೌಲಭ್ಯಗಳು ಕೂಡ ಸ್ಮಾರ್ಟ್ ಆಗುತ್ತಾ ಸಾಗುತ್ತಿದೆ. ಇದರ ಒಂದು ಭಾಗವಾಗಿ ಕೇಂದ್ರ ಸರ್ಕಾರ ದೇಶವ್ಯಾಪಿಯಾಗಿ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯವನ್ನು ಈಗ ಚುರುಕುಗೊಳಿಸುತ್ತಿದೆ. ವಿದ್ಯುತ್ ಉಳಿತಾಯವನ್ನು ಉತ್ತೇಜಿಸುವತ್ತ ಸ್ಮಾರ್ಟ್ ಮೀಟರ್ ಒಂದು ಸ್ಮಾರ್ಟ್ ಚಿಂತನೆ. ಯಾಕೆಂದರೆ, ಸ್ಮಾರ್ಟ್ ಮೀಟರ್ ಅಳವಡಿಕೆಯ ಬಳಿಕ ಮಿತಿಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದರೆ ಸ್ವಯಂಚಾಲಿತವಾಗಿದೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಇನ್ನು ಮುಂದೆ ಕರೆಂಟ್ ಬಿಲ್ ಪಾವತಿಸದೇ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಶೀಘ್ರದಲ್ಲೇ, ಮನೆ ಮನೆಗಳಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಲಾಗುವುದು. ಇದಕ್ಕಾಗಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೊಸ ಮೀಟರ್ ಅಳವಡಿಕೆ ನಂತರ, ನಿಗದಿತ ಅವಧಿಗೆ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ವಿದ್ಯುತ್ ಪೂರೈಕೆ ಇದ್ದಕಿದ್ದಂತೆ ನಿಲ್ಲುತ್ತದೆ. ಬಿಲ್ ಪಾವತಿ ಮಾಡಿದ ನಂತರವೇ ಅದನ್ನು ಪುನರಾರಂಭಿಸಲಾಗುತ್ತದೆ. ಇದಕ್ಕಾಗಿ ಯಾವುದೇ ಲೈನ್ ಸಿಬ್ಬಂದಿ ಹೆಚ್ಚುವರಿ ಸಮಯವನ್ನು ನೀಡಬೇಕಾಗಿಲ್ಲ .

ಭಾರತ ಸರ್ಕಾರದ ಸ್ಮಾರ್ಟ್ ಮೀಟರ್ ರಾಷ್ಟ್ರೀಯ ಕಾರ್ಯಕ್ರಮದಡಿ ಭಾರತದಾದ್ಯಂತ 10 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸುವುದಾಗಿ ಕೇಂದ್ರ ವಿದ್ಯುತ್ ಖಾತೆ ರಾಜ್ಯ ಸಚಿವ ಆರ್.ಕೆ.ಸಿಂಗ್ ಘೋಷಿಸಿದ್ದಾರೆ. ಈಗಾಗಲೇ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿವೆ. ಆದ್ದರಿಂದ ವಿದ್ಯುತ್ ಸೇವೆಗಳನ್ನು ಸುಧಾರಿಸಲು ಸಾಕಷ್ಟು ಅವಕಾಶಗಳು ಸಿಗುತ್ತವೆ. ವಿದ್ಯುತ್ ಸಚಿವರು ಸ್ಮಾರ್ಟ್ ಮೀಟರ್ ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಕಾರ್ಯಕ್ರಮದ ಉಪಕ್ರಮಗಳ ಡ್ಯಾಶ್‌ಬೋರ್ಡ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಡ್ಯಾಶ್ ಬೋರ್ಡ್ ಮೂಲಕ, ಕಾರ್ಯಕ್ರಮಗಳ ಪ್ರಗತಿ ಮತ್ತು ಅದರ ಪ್ರಭಾವವನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ.

ಈ ಸ್ಮಾರ್ಟ್ ಮೀಟರ್ ಬಳಕೆಯಿಂದ ಪ್ರತಿ ಮನೆಯ ಪ್ರತಿ ದಿನ ಅಥವಾ ನಿಮಿಷದ ವಿದ್ಯುತ್ ಬಳಕೆಯ ಪ್ರಮಾಣವನ್ನು ತಿಳಿಯಬಹುದು. ವಿವಾದಿತ ಬಿಲ್ಲಿಂಗ್ ವ್ಯವಸ್ಥೆಗೂ ಕಡಿವಾಣ ಹಾಕಬಹುದು. ಅಲ್ಲದೆ, ಎ/ಸಿ, ಫ್ರಿಡ್ಜ್ ಮತ್ತಿತರ ಉಪಕರಣಗಳಿಗೆ ಎಷ್ಟು ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಸ್ಮಾರ್ಟ್‌ ಮೀಟರ್‌ ಅಳವಡಿಕೆಯಿಂದ ಮಾನವ ಶಕ್ತಿ ಬಳಕೆಯನ್ನು ಕಡಿಮೆಗೊಳಿಸುವುದಲ್ಲದೇ, ವಿದ್ಯುತ್‌ ಸೋರಿಕೆಯನ್ನು ಕಡಿತಗೊಳಿಸಬಹುದಾಗಿದೆ.

✍. ವಿವೇಕ್‌ ನರೇನ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments