ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

Reading Time: 7 minutes

ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

ಡೈನೋಸಾರುಗಳ ಯುಗ ಏಕೆ ಅಂತ್ಯವಾಗಿರಬಹುದು? ಅವುಗಳ ಕ್ರೌರ್ಯ ಅತಿಯಾದುದರಿಂದಲೆ ಆಗಿರಬೇಕು! ಈಗಿರುವಾಗ ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ. ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಭೇದಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!
ಈ ಕೊರೋನಾ ಎಂಬ ವೈರಸ್ ಮನುಷ್ಯನ ಮನಸ್ಸನನ್ನು ಹೈರಾಣ ಮಾಡಿಬಿಟ್ಟಿದೆ. ನನ್ನ ವಿವೇಚನೆಯ ಮೂಲಕವೆ ಏನೆಲ್ಲವನ್ನು ನಿಯಂತ್ರಿಸಬಲ್ಲೆ ಎಂಬ ಅಹಂಕಾರದಲ್ಲಿದ್ದ ಮನುಷ್ಯನ ಅಂತಸತ್ವಕ್ಕೆ ಬಹುದೊಡ್ಡ ಸವಾಲಾಗಿ ಕೊರೋನಾ ವೈರಸ್ ಕಾಡುತ್ತಿದೆ. ಕೊರೋನಾ ಬಂದವರೆಲ್ಲ ಸತ್ತೆ ಹೋಗುತ್ತಾರೆಂದೂ ಅಲ್ಲ. ಎಲ್ಲ ಜ್ವರಗಳಾಗೆ ಈ ವೈರಸ್ ಜ್ವರವು ಬಾಧಿಸುತ್ತದೆ. ಜ್ವರ ಬಂದಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯ ಪ್ರಭಾವದಿಂದ ಜ್ವರ ವಾಸಿಯಾಗುತ್ತದೆ. ಹೀಗೆ ಎಲ್ಲರಿಗೂ ಆಗುತ್ತದೆಂದಲ್ಲ. ಅವರವರ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ.
ಈ ಮಹಾಮಾರಿ ಮುಂದೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಈ ಸಾಂಕ್ರಮಿಕ ಖಾಯಿಲೆಗಳೇ ಹಾಗೆ, ವಿಚಿತ್ರವಾಗಿ ನಡೆದುಕೊಳ್ಳುತ್ತವೆ. ೧೯೧೮ರಲ್ಲಿ ಬಂದಿದ್ದ ಸ್ಪಾನಿಷ್ ಜ್ವರ ಹೋಯಿತು ಅಂದುಕೊಳ್ಳುತ್ತಿದ್ದ ಹಾಗೆ, ಮತ್ತೆ ಎರಡನೇ ಬಾರಿ ತೀರಾ ತೀವ್ರವಾಗಿ ಎರಗಿತು. ಕೆಲವೇ ದಿನಗಳಲ್ಲಿ ಮತ್ತೆ ಹೊರಟು ಹೋಯಿತು. ಈಗಿನ ಕೊರೋನ ಕೂಡ ಹಾಗೆ. ಊಹಿಸುವುದಕ್ಕೆ ಸಾಧ್ಯವಿಲ್ಲ. ಸುಳ್ಳು ಸುದ್ದಿಗಳಿಂದ ಜನ ಪ್ಯಾನಿಕ್ ಆಗಿರುವುದು ಒಂದು ಕಡೆಯಾದರೇ, ನಮಗೇನು ಆಗಲ್ಲ ಎಂದು ನಿರ್ಲಕ್ಷ್ಯ, ಉದಾಸೀನಾದಿಂದ ಹುಂಬುತನ ಮೆರೆಯುವವರೂ ಇನ್ನೊಂದೆಡೆ.
ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವರ ಸಂಖ್ಯೆಗೆ ಹೋಲಿಸಿದರೆ ಈಗ ಕೊರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಇದುವರೆಗೆ ಬಹಳ ಕಡಿಮೆಯೇ.. ಆಗ ಅದು ಜಗತ್ತಿನಾದ್ಯಂತ ೫೦ ಕೋಟಿ ಜನರನ್ನು ಬಾಧಿಸಿತ್ತು. ಅಂದರೆ ಆಗಿನ ಜಗತ್ತಿನ ಜನಸಂಖ್ಯೆಯ ಶೇಕಡ ೨೭ರಷ್ಟು ಜನ ಅದರಿಂದ ತೊಂದರೆಗೊಳಗಾಗಿದ್ದರು. ಅವರಲ್ಲಿ ಸುಮಾರು ಶೇಕಡ ೧೦ರಷ್ಟು ಜನ ಸತ್ತಿದ್ದರು (ಈ ಸಂಖ್ಯೆಯ ಬಗ್ಗೆ ವಿಭಿನ್ನ ಅಂದಾಜುಗಳಿವೆ. ಇದು ಒಂದು ಸರಾಸರಿ). ಭಾರತದಲ್ಲೇ ಅಂದಾಜು ೧.೭ ಕೋಟಿ ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕೊರೋನ ವೈರಾಣುವಿನಿಂದ ಜಗತ್ತಿನಾದ್ಯಂತ ಪೀಡಿತರಾದವರ ಸಂಖ್ಯೆ ‌ಈ ಬರಹ ಬರಯುವ ಸಮಯದಲ್ಲಿ ಸಧ್ಯಕ್ಕೆ 14,39,516 ಲಕ್ಷ. ಸೋಂಕಿತರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 85,711. ಒಟ್ಟು ಜಗತ್ತಿನ 212 ದೇಶಗಳು ಈ ಕೊರೋನ ವೈರಾಣುವಿನಿಂದ ತತ್ತರಿಸಿ ಹೋಗಿದೆ.
ಪ್ರಕೃತಿ ಮಾತೆ ಯುಗಾದಿ ಆರಂಭಕ್ಕೆ ಮುನ್ನವೇ ತನ್ನ ತಾನು ರಕ್ಷಿಸಿಕೊಳ್ಳಲು ಮಾನವನು ತನ್ನ ಮೇಲೆ ಎಸಗುತ್ತಿರುವ ನಿರಂತರ ಅತ್ಯಾಚಾರವನ್ನು ಅಂತ್ಯವಾಗಿಸಲು ದುಷ್ಟರಿಗೆ ಪಾಠ ಕಲಿಸಲೋ ಎಂಬಂತೆ; ಪ್ರಕೃತಿಯು ಕೊರೋನ ವೈರಸ್ಸಿನ ಏಕಾಣುವಿನ ಅತ್ಯಂತ ಚಿಕ್ಕ ದೇಹಿಯಾಗಿ ರೌದ್ರ ನರ್ತನಗೈಯ್ಯುತ ಮಾನವ ಕುಲಕೋಟಿಯ ನುಂಗಿ ನೊಣೆಯುತ್ತಿರುವುದು ನೋಡಿದರೆ ಈ ಯುಗಾದಿಯು ಯುಗಾಂತ್ಯ ಅನ್ನಿಸದಿರದು!
ಭಾರತದಂತಹ ಅಧಿಕ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಮುನ್ನಚರಿಕೆ ಎಂಬುದು ಅತ್ಯಗತ್ಯವಾಗಿ ಬೇಕು. ಅಧಿಕ ಜನಸಾಂದ್ರತೆಯ ಭಾರತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ವೈರಸ್ ಹರಡುವಿಕೆ ಅತಿ ತೀವ್ರ. ಸೋಂಕಿತ ವ್ಯಕ್ತಿ ಎನ್ನುತ್ತಲೇ ಮಾರುದ್ದ ಓಡುವ ನಾವು, ಅದೇ ವ್ಯಕ್ತಿಯ ಬಳಿ ಇದ್ದು ಚಿಕಿತ್ಸೆ ನೀಡುವ ವೈದ್ಯರು ನರ್ಸುಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ನಿಜವಾಗಿಯೂ ದೇವರ ಸ್ವರೂಪವೆ.
ಎಲ್ಲರೂ ಸಂಘಟಿತ ಪ್ರಯತ್ನದಲ್ಲಿ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಧರ್ಮಾಂಧತೆ ಹಾಗೂ ಅಜ್ಞಾನವನ್ನು ದೂರ ಮಾಡಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಮಹಾಮಾರಿಯಿಂದ ದೂರವಾಗಲು ಸಾಧ್ಯ. ಇಲ್ಲವಾದಲ್ಲಿ ಮನುಕುಲದ ಬಹುಪಾಲು ನಾಶ ಖಂಡಿತ.
ಭಾರತ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಶ್ಲಾಘನೀಯ. ಕೆಲ ನಿರ್ಧಾರಗಳಿಂದ ಬಡ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೆಯೇ ಎಲ್ಲಾ ವರ್ಗದವರ ಜೀವನ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಏಕೆಂದರೆ ಮನುಷ್ಯ ಬದುಕಿ ಬಾಳ ಬೇಕಾದರೆ ಜೀವ ಮುಖ್ಯ ಅಲ್ಲವೆ?
ತಿಂಗಳ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯಂತೆ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು.
ಬದುಕು ಎಷ್ಟು ಚಿಕ್ಕದು ಅಂತ? ಬದುಕನ್ನು ತೀರಾ ಗಂಭೀರವಾಗಿ ತೆಗೆದುಕೊಂಡೆವು ಅಂತಾ? ತಮ್ಮ ಖುಷಿಗಾಗಿ ಒಂದಷ್ಟೂ ಹಣವನ್ನೂ ವ್ಯಯಿಸದೇ, ಬ್ಯಾಂಕಿನಲ್ಲಿ ಹಣವನ್ನು ಪೇರಿಸಿಡುವವರಾದರೂ ಈಗ ಯೋಚಿಸಬಹುದ? ಯಾಕಾದರೂ ತಾನು ಬದುಕನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿತ್ತು ಅಂತ. ಹಣ, ಜಾತಿ, ಧರ್ಮ ಜೀವನಾವಶ್ಯಕ ಸಂಗತಿಗಳಾ? ಇದ್ದಷ್ಟು ದಿನ ಚಂದವಾಗಿ ಬದುಕು ಕಳೆಯೋಕೆ ಏನು ಬೇಕು ಅಂತ ನಾವೇ ನಿರ್ಧರಿಸಬೇಕು.
ಅಸಮಾನತೆಯ ಸಂಘರ್ಷ, ಸ್ವಾರ್ಥದ ಯೋಚನೆ ಆಸೆ, ಹತಾಶೆ, ಇವೆಲ್ಲವೂ ನಮ್ಮ ಸ್ಥಿತಿಯನ್ನು ಇನ್ನಷ್ಟು ಅಧಃಪತನ ಮಾಡುತ್ತದೆ. ಇಲ್ಲಿ ಯಾರಿಗೂ ಯಾರು ಇಲ್ಲ ಅನ್ನುವ ಸತ್ಯ ಗೊತ್ತಿದ್ದರೂ ಸದಾ ಬಡಿದಾಡುತ್ತಲೇ ಬದುಕುತ್ತೇವೆ. ಎಲ್ಲ ಇದ್ದರೂ ಏನು ಇಲ್ಲ ಅನ್ನುವ ಕೊರಗು ನಮ್ಮ ನೆಮ್ಮದಿಯನ್ನು ಕಿತ್ತು ತಿನ್ನುತ್ತಿರುತ್ತದೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಶರೀರಕ್ಕೆ ಬದುಕಿನ ಸತ್ಯ ದರ್ಶನವಾಗುವುದೇ ಇಲ್ಲ.
ಈವರೆಗೆ ಏನೆಲ್ಲ ಚಿತ್ರ-ವಿಚಿತ್ರ ಕಲಹಗಳ ಉದಾಹರಣೆಗಳನ್ನ ನೋಡಿದ್ದೀವಿ, ಕೇಳಿದ್ದೀವಿ. ತೀರಾ ಕ್ಷುಲ್ಲಕ ಕಾರಣಗಳಿಗೆ, ಆಸ್ತಿ ವಿವಾದಗಳಿಗೆ, ಅಣ್ಣ-ತಮ್ಮಂದಿರು ದೂರವಾದದ್ದನ್ನ ಕೇಳಿದ್ದೀವಿ. ಜಾತಿಯ ವಿಷಯವಾಗಿ ನಡೆದ ಕೊಲೆಗಳಿಗೆ ಕಿವಿಯಾಗಿದ್ದೀವಿ. ತಮ್ಮದಲ್ಲದ ಜಾತಿಯ ಹುಡುಗನ್ನು ಮದುವೆಯಾದ ಮಗಳನ್ನೇ ಕೊಂದುಬಿಡುವ ನಿರ್ಧಾರಕ್ಕೆ ಬರುವಷ್ಟು ಕ್ರೌರ್ಯವನ್ನು ಎದೆಯಲ್ಲಿಟ್ಟುಕೊಂಡು ನಮ್ಮ ನಡುವೆ ಓಡಾಡುವ ಜನರಿದ್ದಾರೆ ಅಂತ ಎಲ್ಲರಿಗೂ ತಿಳಿದ ವಿಷಯವೇ.
ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ, ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಹಾಗೇ ಈ ಮಹಾಮಾರಿ ಕೊರೋನಾ ಎಂಬ ವೈರಸ್ ಮನುಕುಲಕ್ಕೆ ಹೈರಾಣ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲ ಮಾನವಿಯತೆಯನ್ನು ಜೊತೆಯಾಗಿಸಬೇಕಾಗಿರುವುದು ಅನಿರ್ವಾಯವಾಗಿದೆ.
ಅಂದು ಒಂದೇ ಜತೆ ಬಟ್ಟೆಯಲ್ಲಿ ಸಂತೋಷವಾಗಿ ಬದುಕುತ್ತಿದ್ದರು, ಇಂದು ಹೊಸ ಬಟ್ಟೆಗೆ ಬರವಿಲ್ಲ. ಆದರೆ ಅವುಗಳ ಧರಿಸಲು ಹಿಂದಿನಂತಹ ಕುತೂಹಲ ಆಸೆ ಇಲ್ಲ. ಧರಿಸಿದರೂ ಅಂದಿನಂತೆ ಇಂದು ಸಂತಸವಾಗುತ್ತಿಲ್ಲ. ನಮ್ಮದು ನಿರೀಕ್ಷೆಗಳ ಬದುಕು ಕಳೆದುಕೊಂಡಿದ್ದನ್ನು ಹುಡುಕುವ ನೆಪದಲ್ಲಿ ಸುಂದರವಾದ ಕ್ಷಣಗಳನ್ನು ಕಳೆದುಕೊಂಡಿರುತ್ತೇವೆ. ಈಗ ಪ್ರಕೃತಿಯು ತನ್ನಲ್ಲಿ ಹೊಸತನವನ್ನು ಸೃಷ್ಟಿಸಿ ನಮ್ಮ ಜೀವನದಲ್ಲಿ ಹೊಸತನದ ಬದುಕನ್ನು ರೂಪಿಸಲು ಪ್ರೇರೇಪಿಸುತ್ತಿರುವಂತೆ ಕಾಣುತ್ತಿದೆ. ನಿನ್ನೆಗಳ ಮರೆತವರು ನಾಳೆ ಕಟ್ಟಲಾರರು ಅಲ್ಲವೇ….?
ಈ ಸಂದರ್ಭದಲ್ಲಿ ಚಿ.ಉದಯಶಂಕರ್ ಸಾಹಿತ್ಯದ, ರಾಜನ್-ನಾಗೇಂದ್ರ ಸಂಗೀತದ, ಡಾ.ರಾಜಕುಮಾರ್ ಗಾಯನದ ಗಿರಿಕನ್ಯೆ ಚಲನಚಿತ್ರದ ಹಾಡು ನೆನಪಿಗೆ ಬರುತ್ತದೆ. ಅದೊಂದು ಅರ್ಥ ಗರ್ಭಿತವಾದ ಹಾಡು ಅದರ ಪಲ್ಲವಿ ಹೀಗಿದೆ.
“ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ…. ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ. ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ. ಯಾರನ್ನೂ ಪ್ರೀತಿಸನು ಮನದಲ್ಲಿ. ಏನೊಂದೂ ಬಾಳಿಸನು ಜಗದಲ್ಲಿ. ಏನೆಂದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ”….?

ಲೇಖಕರು: ✍. ಅರುಣ್ ಕೂರ್ಗ್

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments