ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು….!!!!

ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು….!!!!

ಕೃಷಿ ಮರೆತವರು, ಕೃಷಿ ಭೂಮಿ ಪಾಳು ಬಿಟ್ಟವರು, ಕೃಷಿಯನ್ನು ಕಾಲ ಕಸದಂತೆ ಕಂಡವರು ಕೃಷಿಭೂಮಿಯನ್ನು ಕೇವಲ ಹಣಕ್ಕಾಗಿ ಮಾರಿಕೊಂಡವರು ಮತ್ತೆ ಯೋಚಿಸಬೇಕಾಗಿದೆ.. !

ಒಂದು ಕಾಲದಲ್ಲಿ ನಮಗೆ ಬದುಕಲು ಕೃಷಿಯೇ ಆಧಾರ ಎಂದು ಭೂಮಿ ಪಡೆದುಕೊಂಡ ಜನ, ಇಂದು ಅದು ಪೂರೈಸುವುದಿಲ್ಲ ಎಂದು ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟು, ಬೇರೆ ವೃತ್ತಿ ಮಾಡುತ್ತಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

೫೦ ಲಕ್ಷ ಎಕರೆ ಕೃಷಿ ಭೂಮಿ ರಾಜ್ಯದಲ್ಲಿ ಪಾಳು ಬಿದ್ದಿರುವ ಬಗ್ಗೆ ವರದಿಗಳಿವೆ. ರಾಜ್ಯದಲ್ಲಿ ಹಲವು ಕಾರಣಗಳಿಗಾಗಿ ಕೃಷಿ ಭೂಮಿ ಪಾಳು ಬಿದ್ದಿದೆ. ಈ ಭೂಮಿ ಸದ್ಬಳಕೆ ಕುರಿತು ನೀತಿ ರೂಪಿಸುವ ಜವಾಬ್ದಾರಿ ಕೃಷಿ ಬೆಲೆ ಆಯೋಗದ ಮೇಲಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ತಲೆಮಾರು ಆಸಕ್ತಿ ತೋರುತ್ತಿಲ್ಲ. ಇತರ ಉದ್ಯೋಗಗಳಿಗೆ ಹೋಲಿಸಿದಾಗ ಕೃಷಿ ಉತ್ಪತ್ತಿ ತುಂಬಾ ಕಡಿಮೆ ಇದೆ.

ನಮ್ಮ ಭಾರತ ಕೃಷಿ ಪ್ರಧಾನ ದೇಶ. ನಮಗೆ ಕೃಷಿಯೇ ಜೀವಾಳ, ಹಾಗಾಗಿಯೇ ರೈತ ನಮ್ಮ ದೇಶದ ಬೆನ್ನೆಲುಬು ಎಂದು ಕರೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಬರಗಾಲ, ಅಪಾರ ಮಳೆ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಕೃಷಿಕರು ತತ್ತರಿಸಿ ಹೋಗಿದ್ದಾರೆ. ಭೂಮಿ ಎಂದರೆ ಏನೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆ ಆಗುವವರೆಗೆ ನಾವು ಯಾವುದರ ಜೊತೆಗೂ ಅರ್ಥಮೂರ್ಣ ಸಂಬಂಧವನ್ನು ಸ್ಥಾಪಿಸಿಕೊಳ್ಳಲಾರೆವು.

ಇವತ್ತು ಕೃಷಿಗೆ ವ್ಯಾಪಕ ಪ್ರಚಾರ, ಒತ್ತು ಸಿಗುತ್ತಿದೆ. ಕೃಷಿಕನಿಗೆ ಸಮ್ಮಾನ, ಪ್ರಶಸ್ತಿಗಳೂ ಲಭಿಸುತ್ತವೆ. ಆದರೆ “ನಾನು ಕೃಷಿಕ ನನ್ನ ಮಗ ಕೃಷಿಕನಾಗುವುದು ಬೇಡ” ಎಂಬ ಮನೋಭಾವ ಬೆಳೆಯುತ್ತಿದೆ. ಸಾಮಾಜಿಕ ಸ್ಥಾನಮಾನಗಳು, ಕೌಟುಂಬಿಕ ಭಾಗ್ಯಗಳು ಗತಕಾಲದ ವೈಭವಗಳಾಗುತ್ತಿವೆ.

ಇಂದಿನ ಆಧುನಿಕ ಯುಗದಲ್ಲಿ, ಕೃಷಿಕನೆಂದರೆ ಉದ್ಯಮಿಯೆಂದೇ ಅರ್ಥ. ಒಂದು ಕಾಲದಲ್ಲಿ ಇಲ್ಲಿ ಚೆನ್ನಾಗಿ ಉತ್ತಿ-ಬಿತ್ತಿ ಬೆಳೆದ ನಿಜ ಅರ್ಥದ ರೈತರೆಲ್ಲ ಈಗ ಇಲ್ಲ. ಅವರ ಮಕ್ಕಳೂ ಇಲ್ಲ.

ದೇಶದ ಪ್ರತೀ ಗ್ರಾಮ ಗ್ರಾಮಗಳಲ್ಲಿ ಒಂದಿನಿತು ಕೃಷಿ ಭೂಮಿಯೂ ಬಂಜರು ಬೀಳದಂತೆ, ಒಂದಿಂಚ್ಚು ಭೂಮಿಯೂ ಅನ್ಯ ಉದ್ದೇಶಗಳಿಗೆ ಪರಭಾರೆಯಾಗದಂತೆ ಸಾಧ್ಯವಾದಷ್ಟು ತಡೆಯೋಣ. ಭೂಮಿಯನ್ನು ಮತ್ತೆ ಹಸಿರು ಹಸುಗಳಿಂದ ಸಮೃದ್ಧಗೊಳಿಸುವ ಸಂಕಲ್ಪವಾಗಲಿ.

ಕೃಷಿ-ನಿಸರ್ಗ ಮನುಷ್ಯನ ಮೂಲಭೂತ ಅಂಶಗಳಲ್ಲೊಂದು. ಮಾನವ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನಮ್ಮ ವೈಜ್ಞಾನಿಕವೆಂದು ಹೇಳಿಕೊಳ್ಳುವ ಸಂಶೋಧನೆಗಳು, ಅಭಿವೃದ್ಧಿ ನಮಗೇ ಅರಿವಿಲ್ಲದಂತೆ ಬದುಕನ್ನು ಹಳಿ ತಪ್ಪಿಸಿವೆ. ಅದೇ ಸಂರ್ಭದಲ್ಲಿ ಹಳ್ಳಿಯ ಬಡ ರೈತ, ಬಡಗಿ, ಕಮ್ಮಾರ, ಚಮ್ಮಾರರು ಕೈಗೊಳ್ಳುವ ಪುಟ್ಟ ಪುಟ್ಟ ಶೋಧಗಳು ಬದುಕಿನ ಮಾರ್ಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತವೆ. ಇಂಥವೆಲ್ಲ ಬದಲಾವಣೆಗಳು ಸುತ್ತಲಿನ ಪರಿಸರದಿಂದ ಹೊರತಾಗಿ ನಡೆಯುವುದಿಲ್ಲ. ಇಂಥ ಸಾಧನೆಯ ಹಿಂದೆ ನಿಂತು ಇಡೀ ಜೀವನವನ್ನು ಸವೆಸುವ, ಮನುಕುಲಕ್ಕಾಗಿ ಮನೆ-ಮನದ ಸುಖವನ್ನೇ ತ್ಯಾಗಮಾಡುತ್ತಿರುವ ‘ದೇಸಿ ವಿಜ್ಞಾನಿ’ಗಳ ಸಮುದಾಯ ಸಂಖ್ಯಾ ದೃಷ್ಟಿಯಿಂದ ಬಹಳಷ್ಟು ದೊಡ್ಡದಿದೆ.

ಯಾರೂ ಕೃಷಿ ಭೂಮಿಯನ್ನು ಮಾರಾಟ ಮಾಡಬಾರದು. ತಮಗೆ ಸಾಗುವಳಿ ಕೃಷಿ ಮಾಡುವುದು ಸಾಧ್ಯವಿಲ್ಲವಾದರೆ ಅದನ್ನು ಮಾಡುವ ಆಸಕ್ತರಿಗೆ ಬಿಟ್ಟು ಕೊಡಬೇಕು. ಈ ಹಿಂದಿನ ಭೂ ಸುಧಾರಣಾ ಕಾಯಿದೆಯಂತೆ ಪಡೆದ ಭೂಮಿ ಪಾಳು ಬಿದ್ದಿದ್ದರೆ ಅದನ್ನು ತಕ್ಷಣ ಸರಕಾರ ಸ್ವಾದೀನ ಪಡಿಸಿ ಬೇಸಾಯ ಮಾಡುವವರಿಗೆ ಕೊಡಬೇಕು.

ಈ ಕೊರೊನಾ ನಮಗೆ ಮತ್ತೆ ಧಾವಂತದ ಬದುಕಿನಿಂದ ಹಿಂದೆ ಸರಿಯುವ ಪಾಠ ಹೇಳುತ್ತಿದೆ.ದುಡ್ಡೇ ಬದುಕು, ದುಡ್ಡಿನಿಂದಲೇ ಸರ್ವಸ್ವ ದುಡ್ಡೊಂದಿದ್ದರೆ ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ, ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು…. ಮನೆಯ ಮಕ್ಕಳನ್ನೆಲ್ಲಾ ಐ.ಟಿ- ಬಿ.ಟಿಯ ವರ್ತುಲದೊಳಗೆ ತಳ್ಳಿ, ಭೂಮಿಯನ್ನು ಹಡ್ಲು ಬಿಟ್ಟು ದ್ರೋಹ ಮಾಡಿದ ಜನ ಈಗ ಯೋಚಿಸಲೇಬೇಕಾದ ಪರಿಸ್ಥಿತಿ ಬಂದಿದೆ.

ಅನ್ನಂ ಹಿ ಧಾನ್ಯಸಂಜಾತಂ ಧಾನ್ಯಂ ಕೃಷ್ಯಾ ವಿನಾ ನ ಚ |
ತಸ್ಮಾತ್ ಸರ್ವಂ ಪರಿತ್ಯಜ್ಯ ಕೃಷಿಂ ಯತ್ನೇನ ಸಾಧಯೇತ್ ||

ಅನ್ನವು ಧಾನ್ಯಗಳಿಂದ ಲಭ್ಯವಾಗುತ್ತದೆ. ಕೃಷಿಯನ್ನು ಮಾಡದಿದ್ದಲ್ಲಿ ಧಾನ್ಯಗಳಿಲ್ಲ. ಆದುದರಿಂದ ಎಲ್ಲವನ್ನು ತೊರೆದು ಪ್ರಯತ್ನ ಪೂರ್ವಕವಾಗಿ ಕೃಷಿಯನ್ನು ಮಾಡಬೇಕು-ಮಾಡಿಸಬೇಕು. ಹೀಗೆ ಕೃಷಿಯ ಮಹತ್ವವನ್ನು ಪೂರ್ವಜರು ಹೇಳಿದ್ದಾರೆ.

ನಮ್ಮ ಉಳಿವಿಗೆ, ಜೀವನಕ್ಕೆ ಅಗತ್ಯವಾಗಿರುವ ಅನ್ನಕ್ಕಾಗಿ ಕೃಷಿ ಮಾಡುವುದು ಅನಿವಾರ್ಯ. ಇಂತಹ ಮಹತ್ವದ ಕೃಷಿಯ ಉಗಮ ಹಾಗೂ ಬೆಳವಣಿಗೆಯ ಕಡೆ ಒಮ್ಮೆ ಕಣ್ಣು ಹಾಯಿಸುವುದು ಭಾರತೀಯ ಕೃಷಿ ಪರಂಪರೆಯನ್ನು ನಾವು ಅರಿಯುವಲ್ಲಿ ಸಹಕಾರಿಯಾಗುತ್ತದೆ.

ಪರಿಸರಕ್ಕೇ ಪರಕೀಯನಾಗಿ ನಿಲ್ಲುವ ಯಾವನೇ ವ್ಯಕ್ತಿಯ ಅಸ್ತಿತ್ವ ಶೂನ್ಯವೇ. ಬದುಕಿನ ಜೀವಸೆಲೆ ಬತ್ತಿಹೋದ ಮೇಲೆ ಉಳಿಯುವುದೇನು? ಇದಕ್ಕಿರುವ ಏಕೈಕ ಪರಿಹಾರ ನಿಸರ್ಗಾರಾಧನೆ. ಕೃಷಿ ಎಂಬುದು ತಮಸ್ಸಲ್ಲ, ಅದು ತಪಸ್ಸು. ಹೊಲಗಳು ಅಧ್ಯಾತ್ಮಿಕ ತಪೋವನ. ಅದು ವ್ಯಸನಗಳಿಂದ ಬರಡಾಗಬಾರದು. ನಿರ್ಜೀವ ಯಂತ್ರಗಳು ನಮ್ಮ ಹಸಿವನ್ನು ನೀಗಿಸಲಾರವು. ನಿಸರ್ಗದೊಂದಿಗಿನ ಮಧುರ ಭಾಂಧ್ಯವ್ಯದ ಬೆಸುಗೆಯೊಂದೇ ನಮ್ಮನ್ನು ತೃಪ್ತ ಸ್ಥಿತಿಗೆ ಒಯ್ಯುವುದು.

ಲೇಖಕರು: ✍. ಅರುಣ್ ಕೂರ್ಗ್

0 0 votes
Article Rating
Subscribe
Notify of
guest
0 Comments
Inline Feedbacks
View all comments