ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ(ವಿಶಿಷ್ಟ ಸೇವಾ ಪದಕ), ಸಹಕಾರಿಗಳು: ಬೈರಂಬಾಡ. Byrambada
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಘದ ಆಡಳಿತ ಮಂಡಳಿಯಲ್ಲಿ ಮೂಡಿದ ಕೆಲವೊಂದು ಗೊಂದಲಗಳಿಂದ ಸಂಘವು ಅದಃಪತನಕ್ಕೆ ಸಾಗುವ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಕಣ್ಣಂಗಾಲ, ಬೈರಂಬಾಡ, ಹಾಲುಗುಂದ, ಹಚ್ಚಿನಾಡು ಹಾಗೂ ಎಡೂರು ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿರುವ ಸಂಘದ ಸದಸ್ಯರ ಒಕ್ಕೊರಳ ಒತ್ತಾಯದ ಮೇರೆಗೆ ಸಂಘದ ಅಭ್ಯುದಯಕ್ಕಾಗಿ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಸುಬ್ಬಯ್ಯನವರ ತಂದೆ ದಿವಂಗತ ಕಂಡ್ರತಂಡ ಚಿನ್ನಪ್ಪನವರು ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಸಂದರ್ಭದ ಹಿರಿಯ ಸಹಕಾರಿಗಳಾಗಿದ್ದರು.
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20ರಲ್ಲಿ ನಡೆದ ಚುನಾವಣೆಯ ಸಂದರ್ಭ ಸಂಘದ ಸ್ಥಿರತೆಗಾಗಿ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರನ್ನೊಳಗೊಂಡ ಆಡಳಿತ ಮಂಡಳಿಯ ಸರ್ವರೂ ಅವಿರೋಧವಾಗಿ ಆಯ್ಕೆಯಾದರು.
2019-20ರಲ್ಲಿ ಸಂಘವು 24 ಲಕ್ಷ ಲಾಭವನ್ನು ಪಡೆದು ಪ್ರಗತಿಯ ಹಾದಿಗೆ ಅಡಿಯಿಟ್ಟು, ಸದಸ್ಯರಿಗೆ ಹಾಗೂ ರೈತರಿಗೆ ನೀಡಿದ ಸಾಲಗಳ ಶೇಕಡ 98.9%ರಷ್ಟು ಸಕಾಲ ಮರು ಪಾವತಿ ಪ್ರಮುಖ ಕಾರಣ ಎಂದ ಕರ್ನಲ್ ಸುಬ್ಬಯ್ಯನವರು, ಜಾಮೀನು ಸಾಲ, ಕೆ.ಸಿ.ಸಿ. ಸಾಲ, ಆಭರಣ ಸಾಲ, ವ್ಯಾಪಾರ ಸಾಲ, ಸ್ವಸಹಾಯ ಸಂಘಗಳಿಗೆ ನೀಡಲಾದ ಸಾಲ, ವೇತನ ಆಧಾರಿತ ಸಾಲಗಳಿಂದ ಸಂಘವು ಲಾಭಗಳಿಸಿದೆ ಎಂದರು. ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರಸ್ತುತ ಅವಧಿಯಲ್ಲಿ 1ಕೋಟಿಗೂ ಮಿಗಿಲಾಗಿ ಗೊಬ್ಬರ ಮಾರಾಟದ ವಹಿವಾಟಾಗಿದ್ದು, ಕೃಷಿ ಪರಿಕರಗಳ ಮಾರಾಟ, ಸಂಘದ ಕಟ್ಟಡದಲ್ಲಿ ಬ್ಯಾಂಕ್ ಆಫ್ ಬರೋಡದ ಬೈರಂಬಾಡ ಶಾಖೆಗೆ ನೀಡಿದ ಬಾಡಿಗೆ ರೂಪದ ಆದಾಯ, ನ್ಯಾಯ ಬೆಲೆ ಅಂಗಡಿ ಆದಾಯ, ಮೋದಿಕೇರ್ ಮಳಿಗೆಯಿಂದ ಆದಾಯ, ಕೀಟನಾಶಕಗಳ ಮಾರಾಟದಿಂದ ಬಂದ ಆದಾಯ ಮುಂತಾದ ಮೂಲಗಳಿಂದ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ಕರ್ನಲ್ ಸುಬ್ಬಯ್ಯನವರು ಈ ಸಂದರ್ಭದಲ್ಲಿ ತಿಳಿಸಿದರು.
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿನ ಆಡಳಿತ ವ್ಯವಸ್ಥೆಯು ಅಸ್ಥಿರತೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯನ್ನು ಸ್ಥಿರತೆ ತರುವಲ್ಲಿ ಬಹಳ ಶ್ರಮವಹಿಸಿದ್ದ ಕರ್ನಲ್ ಕಂಡ್ರತಂಡ ಸುಬ್ಬಯ್ಯನವರು, ಸಂಘದ ಸದಸ್ಯರು, ರೈತರು ಹಾಗೂ ಗ್ರಾಹಕರುಗಳು ಮುಕ್ತವಾಗಿ ವಹಿವಾಟು ನಡೆಸಲು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಹಾಗೆ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಘದ ಸಿಬ್ಬಂದಿಗಳನ್ನು ಪೂರ್ಣಕಾಲಿಕವಾಗಿ ಮಾಡಲಾಗಿದೆ ಎಂದ ಕರ್ನಲ್ ಸುಬ್ಬಯಯ್ನವರು, ಸಂಘವು ಪ್ರಗತಿಯತ್ತ ಸಾಗಲು ಸಾಕಷ್ಟು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ, “ಆಜಾದಿ ಕಾ ಅಮೃತ ಮಹೋತ್ಸವ” 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಕೊರೋನಾ ಕಾಲಘಟ್ಟದಲ್ಲಿ ಸಲ್ಲಿಸಿದ ಸೇವೆಯನ್ನು ಮನಗಂಡು ಸಂಘದ ಕಾರ್ಯ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತರಿಗೆ ಸನ್ಮಾನಿಸಿ ಪ್ರೋತ್ಸಹಾಧನವನ್ನು ನಿಡಲಾಗಿದ್ದು,&nbs
p; ಇಲ್ಲಿಯವರಗೆ ಸಂಘದ ಆವರಣದಲ್ಲಿ ಧ್ವಜ ಸ್ಥಂಭವಿರದ ಕಾರಣ ನೂತನವಾದ ಧ್ವಜ ಸ್ಥಂಭವನ್ನು ನಿರ್ಮಿಸುವಲ್ಲಿ ತಮ್ಮ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕರ್ನಲ್ ಸುಬ್ಬಯ್ಯನವರು ಮುನ್ನಡಿಯಿಟ್ಟರು.
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಕೊಡಗು ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘವಾಗಿ ಕೊಂಡೊಯ್ಯೊವುವ ನಿಟ್ಟನಲ್ಲಿ ಪ್ರಯತ್ನ ಸಾಗುತ್ತಿದೆ ಎಂದ ಕರ್ನಲ್ ಸುಬ್ಬಯ್ಯನವರು, ಸಂಘದ ವತಿಯಿಂದ ಕಾಫಿ ಗುಣಮಟ್ಟ ಹಾಗೂ ತೇವಾಂಶ ಪರಿಕ್ಷಾ ಕೇಂದ್ರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿನ ಕಾರ್ಯವು ಪ್ರಗತಿಯಲ್ಲಿದೆ ಎಂದರು. ಸಂಘದ ಸದಸ್ಯರು, ರೈತರು ಹಾಗೂ ಗ್ರಾಹಕರುಗಳಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಕರ್ನಲ್ ಸುಬ್ಬಯ್ಯನವರು ತಿಳಿಸಿದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ನಿಟ್ಟಿನಲ್ಲಿ ಕೊಡುವ ಆಶ್ವಾಸನೆಯ ಸಂದರ್ಭ ಸರ್ಕಾರದ ಉನ್ನತ್ತ ಮಟ್ಟದಲ್ಲಿ ಧೃಡ ನಿರ್ಧಾರವಿರಬೇಕು. ಈ ನಿಟ್ಟಿನಲ್ಲಿ ರೈತರಿಗೆ ಪೊಳ್ಳು ಆಶ್ವಾಸನೆಗಳನ್ನು ನೀಡಿ ಗೊಂದಲಕ್ಕೆ ಈಡು ಮಾಡಬಾರದು ಎಂದ ಕರ್ನಲ್ ಸುಬ್ಬಯ್ಯನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಸರ್ಕಾರವು ಸಹಕಾರ ಸಂಘಗಳ ಮೇಲೆ ಸ್ವಲ್ಪ ಮಟ್ಟಿನಲ್ಲಿ ನಿಗಾ ವಹಿಸಿದರೆ ಉತ್ತಮ ಎಂದು ಹೇಳಿದ ಇವರು, ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಮ್ಮ ಸಲಹೆಗಳನ್ನು ತಿಳಿಸಿದರು.
ಸಹಕಾರ ಚಳುವಳಿಯಷ್ಟು ಉತ್ತಮ ಆಂದೋಲನ ಇನ್ನೊಂದಿಲ್ಲ ಎಂದ ಕರ್ನಲ್ ಸುಬ್ಬಯ್ಯನವರು, ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಮುಂದಿನ ಯುವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.
ಸಹಕಾರದೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯನವರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಸ್ಥಾಪಕ ಅಧ್ಯಕ್ಷರಾಗಿ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2010ರಲ್ಲಿ ಮೊದಲ ಬಾರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿದ ಸಂದರ್ಭದಲ್ಲಿ ಹೆಲಿಕಾಪ್ಟ್‌ರ್ ಮೂಲಕ ಪುಷ್ಪವೃಷ್ಟಿ ಅರ್ಪಿಸಿದ್ದು ಕರ್ನಲ್ ಸುಬ್ಬಯ್ಯನವರ ಅಭಿಲಾಷೆಯಿಂದ ಎಂಬುದು ಇಲ್ಲಿ ಪ್ರಸ್ತುತ. ಜನರಲ್ ತಿಮ್ಮಯ್ಯ ಮ್ಯೂಸಿಯಂ ಪ್ರಾರಂಭಿಸುವ ನಿಟ್ಟಿನಲ್ಲಿ ಮೂಂಚೂಣಿಯಲ್ಲಿ ಕರ್ನಲ್ ಸುಬ್ಬಯ್ಯನವರು ಇದ್ದರು. ಹಾಗೆ ಗೊಣಿಕೊಪ್ಪಲಿನ ಕಾವೇರಿ ಕಾಲೇಜು ಕ್ಯಾಂಪಸ್‌ನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪುತ್ಥಳಿ ಸ್ಥಾಪಿಸಿದ ಹೆಗ್ಗಳಿಕೆ ಕರ್ನಲ್ ಸುಬ್ಬಯ್ಯನವರದ್ದು.
ಅಮ್ಮತ್ತಿ ಪ್ರೌಢ ಶಾಲೆಯ ಅಧ್ಯಕ್ಷರಾಗಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಶೈಕ್ಷಣಿಕ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಲತ: ಕೃಷಿಕರಾಗಿರುವ ಹಾಗೂ ಭಾರತೀಯ ಸೇನೆಯಲ್ಲಿ ವಿಶಿಷ್ಟ ಸೇವಾ ಪದಕ ಪಡೆದಿರುವ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರು, ತಂದೆ ದಿವಂಗತ ಕಂಡ್ರತಂಡ ಚಿನ್ನಪ್ಪ ಹಾಗೂ ತಾಯಿ ದಿವಂಗತ ದೇವಣಗೇರಿ ಮುಕ್ಕಾಟಿರ ಪೊನ್ನಮ್ಮ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಕೇಳಪಂಡ ಬೋಜಮ್ಮ ಗೃಹಿಣಿಯಾಗಿದ್ದಾರೆ. ಹಿರಿಯ ಮಗಳು ಕಾವೇರಮ್ಮ ವಿವಾಹಿತರಾಗಿದ್ದು, ಲಂಡನ್‌ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ವೀತಿಯ ಮಗಳು ರಚನಾ ವಿವಾಹಿತರಾಗಿದ್ದು, ದಕ್ಷಿಣ ಭಾರತ ಐ.ಸಿ.ಐ.ಸಿ.ಐ. ಬ್ಯಾಂಕ್‌ನ ಪ್ರತಿನಿಧಿಯಾಗಿ ಬೆಂಗಳೂರಿಲ್ಲಿ ನೆಲೆಸಿದ್ದಾರೆ. ಕಿರಿ ಮಗ ಗಣಪತಿ ವಿವಾಹಿತರಾಗಿದ್ದು, ಇನ್ಪೋಸಿಸ್ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರು, ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಂಬಾಡ ಗ್ರಾಮದಲ್ಲಿ ಪ್ರಸ್ತುತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲ
ಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾಗಿ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರ ಸಂದೇಶ:
ದೇಶ ಕಾಯುವುದು ಒಂದು ಪುಣ್ಯದ ಕೆಲಸವಾಗಿದ್ದು, ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆನ್ನುವ ಕನಸು ಕಾಣುವ ಜೊತೆಯಲ್ಲೇ ಯೋಧನಾಗಬೇಕೆನ್ನುವ ಅಭಿಲಾಷೆಯನ್ನು ಹೊಂದಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರ ಅಭಿಪ್ರಾಯ.
ಗಡಿಯಲ್ಲಿ ರಾತ್ರಿ ಹಗಲೆನ್ನದೆ ದೇಶ ಕಾಯುವ ಯೋಧರನ್ನು ನಿರ್ಲಕ್ಷಿಸುವುದು ಕೂಡ ದೇಶ ದ್ರೋಹವೆಂದು ಅಭಿಪ್ರಾಯಪಟ್ಟ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯನವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನೀಯರನ್ನು ಕೂಡ ನಾವು ಇಂದು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಕುಟುಂಬವರ್ಗವನ್ನು ಮತ್ತು ಜೀವನದ ಎಲ್ಲಾ ಸುಖಗಳನ್ನು ಬಿಟ್ಟು ದೇಶ ರಕ್ಷಣೆಗಾಗಿ ಸದಾ ಕಟ್ಟೆಚ್ಚರದಿಂದ ಗಡಿ ಕಾಯುವ ಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬರಲ್ಲಿ ದೇಶದ ಬಗ್ಗೆ ಗೌರವ ಹೆಚ್ಚಾದಾಗ ಮಾತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ದೇಶ ಕಾಯುವ ವೀರ ಸೇನಾನಿಯನ್ನಾಗಿ ಮಾಡುವ ಬಗ್ಗೆ ಗುರಿ ಹೊಂದಬೇಕೆಂದು ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಈ ಸಂದರ್ಭದಲ್ಲಿ ಕರೆ ನೀಡಿದರು.
ವಿಶಿಷ್ಟ ಸೇವಾ ಪದಕದ ಬಗ್ಗೆ ಒಂದಿಷ್ಟು ಮಾಹಿತಿ:
ವಿಶಿಷ್ಟ ಸೇವಾ ಪದಕವು ಭಾರತೀಯ ರಕ್ಷಣಾ ದಳದಲ್ಲಿ ಕೊಡಲಾಗುವ ಪದಕ. ರಕ್ಷಣಾ ದಳದ ಎಲ್ಲ ಹಂತದವರಿಗೂ ಅಸಾಮಾನ್ಯವಾದ ವಿಶಿಷ್ಟ ಸೇವೆಗಾಗಿ ಕೊಡಲಾಗುತ್ತದೆ.
ಐದು ಮೂಲೆಗಳಿರುವ ನಕ್ಷತ್ರ ಹೊಂದಿರುವ ಪದಕ ಮತ್ತು ಮಧ್ಯದಲ್ಲಿ ನೀಲಿ ಗೆರೆಯನ್ನು ಹೊಂದಿರುವ ನಾಲ್ಕು ಹಳದಿ ಪಟ್ಟಿಯನ್ನು ಹೊಂದಿರುತ್ತದೆ. ಇದನ್ನು ಎಲ್ಲ ರೀತಿಯ ಸೇವೆಗಳಿಗೂ ನೀಡಬಹುದಾದರೂ, 1980 ರಲ್ಲಿ ಯುದ್ಧ ಸೇವಾ ಪದಕವನ್ನು ಸ್ಥಾಪಿಸಿದ ನಂತರ ಇದನ್ನು ಹೆಚ್ಚಾಗಿ ಯುದ್ಧೇತರವಾಗಿ ನೀಡಿರುವ ಸೇವೆಗಾಗಿ ಮಾತ್ರ ನೀಡಲಾಗುತ್ತಿದೆ.
ಸಂದರ್ಶನ ದಿನಾಂಕ: 10-08-2021
Search Coorg Media
Coorg’s Largest Online Media Network