ಹೂಕೋಸು (ಕಾಲಿಫ್ಲವರ್) Cauliflower

ಹೂಕೋಸು (ಕಾಲಿಫ್ಲವರ್)

ಹೂಕೋಸು (Brassica oleraceae var.botrytis) ಕ್ರುಸಿಫೆರೆ ಕುಟುಂಬಕ್ಕೆ ಸೇರಿದ ತರಕಾರಿ ಬೆಳೆಯಾಗಿದೆ. ಹೂಕೋಸಿನ ಮೂಲ ಬಹುಶಃ ಪಶ್ಚಿಮ ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶದ ಉತ್ತರ ಭಾಗವಿರಬೇಕು. ಹೂಕೋಸನ್ನು ಸಾಮಾನ್ಯವಾಗಿ ವಿಶ್ವದ ಎಲ್ಲಾ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಬಿಹಾರ್, ಮಶ್ಚಿಮ ಬಂಗಾಳ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಪ್ರತೀ 100 ಗ್ರಾಂ ತಿನ್ನಲು ಯೋಗ್ಯವಾದ ಭಾಗದಲ್ಲಿ 91.7% ನೀರು ಮತ್ತು 31 ಕೆಲೋರಿಗಳಷ್ಟು ಶಕ್ತಿ, 2.4 ಗ್ರಾಂ ಪ್ರೋಟೀನ್, 22 ಮಿ.ಗ್ರಾಂ ಕ್ಯಾಲ್ಸಿಯಂ, 40 ಐಯು ವಿಟಮಿನ್ ಎ, 70 ಮಿ.ಗ್ರಾಂ ಎಸ್ಕಾರ್‍ಬಿಕ್ ಆಮ್ಲ ಮತ್ತು 0.1 ಮಿ.ಗ್ರಾಂ ರೈಬೋಪ್ಲೆವಿನ್ ಇದೆ. ಅಲ್ಲದೆ ಖನಿಜ ಪದಾರ್ಥಗಳಾದ ಪೊಟಾಸಿಯಂ, ಸೋಡಿಯಂ, ಕಬ್ಬಿಣ, ಪಾಸ್ಫರಸ್ ಮತ್ತು ಮೆಗ್ನೇೀಸಿಯಂ ಮುಂತಾದವನ್ನು ವಿಪುಲವಾಗಿ ಒಳಗೊಂಡಿದೆ.
ಮಣ್ಣು ಮತ್ತು ವಾಯುಗುಣ
ಹೂಕೋಸು ಬೆಳೆಯಲು ನಿರ್ಧಿಷ್ಟ ತಾಪಮಾನ ಮತ್ತು ಸೂರ್ಯನ ಬೆಳಕು ಸಿಗುವ ಅವಧಿ ಅತ್ಯಾವಶ್ಯಕ. ವಿವಿಧ ತಳಿಗಳ ತಾಪಮಾನದ ಅವಶ್ಯಕತೆ ಬೇರೆ ಬೇರೆಯಾಗಿದೆ. ಹೂ ಕಟ್ಟಲು ಅನುಕೂಲಕರ ತಾಪಮಾನ 220 ಸೆ. ಆಗಿದ್ದರೆ, ಗರಿಷ್ಟ ತಾಪಮಾನ 250 ಸೆ. ಮತ್ತು ಕನಿಷ್ಟ ಸರಾಸರಿ ತಾಪಮಾನ 80 ಸೆಲ್ಸಿಯಸ್. ಉಷ್ಣತೆ ಅತೀ ಹೆಚ್ಚಾದಲ್ಲಿ ಹೂಕಟ್ಟುವುದಿಲ್ಲ. ಫಲವತ್ತಾದ ಮತ್ತು ನೀರು ಹಿಡಿದಿಡುವ ಎಲ್ಲಾ ಮಣ್ಣಿನಲ್ಲಿ ಹೂಕೋಸನ್ನು ಬೆಳೆಯಬಹುದು. ಮಣ್ಣಿನ ರಸಸಾರ 6.0 ರಿಂದ 6.5 ಇರಬೇಕು. 5.5 ರಿಂದ 6.5 ರಸಸಾರ ಮಣ್ಣಿನಲ್ಲಿ ಉತ್ತಮ ಇಳುವರಿ ದೊರಕಿದೆ. ಹೆಚ್ಚು ಆಮ್ಲೀಯ ಮಣ್ಣು ಹೂಕೋಸು ಬೆಳೆಯಲು ಸೂಕ್ತವಲ್ಲ.
ತಳಿಗಳು
ವಿವಿಧ ಸಂಶೋಧನಾ ಸಂಸ್ಥೆಗಳು ಬಹಳಷ್ಟು ಪರೀಕ್ಷಣೆಯ ಬಳಿಕ ಅನೇಕ ಸುಧಾರಿಸಿದ ತಳಿಗಳನ್ನು ಬಿಡುಗಡೆಗೊಳಿಸಿವೆ. ಕೆಲವು ಪ್ರಮುಖ ತಳಿಗಳೆಂದರೆ ಅರ್ಲಿ ಕುನ್ವಾರಿ, ಪೂಸ ಕಟಿಕಿ, ಪೂಸ ದೀಪಾಲಿ, ಸುಧಾರಿಸಿದ ಜಪಾನಿಸ್, ಮತ್ತು ಪೂಸ ಸ್ನೋಬಾಲ್.
ಸಸ್ಯಾಭಿವೃದ್ದಿ ಮತ್ತು ಬೀಜ ಪ್ರಮಾಣ
ನರ್ಸರಿಗಳಲ್ಲಿ ಬೀಜದಿಂದ ಉತ್ಪಾದಿಸಲಾದ ಸಸಿಗಳನ್ನು ಸ್ವಲ್ಪ ದೊಡ್ಡದಾದ ನಂತರ ಸಿದ್ಧಪಡಿಸಿದ ಮುಖ್ಯ ಭೂಮಿಗೆ ಸ್ಥಳಾಂತರಿಸಬೇಕು. ಬೀಜಗಳನ್ನು ಸಸಿ ಮಡಿಗಳಲ್ಲಿ ಬಿತ್ತಲಾಗುವುದು. ಭಾರತದ ವಾಯುಗುಣ ಮತ್ತು ತಾಪಮಾನಕ್ಕೆ ಅನುಗುಣವಾಗಿ ಬೀಜ ಬಿತ್ತನೆ ಮಾಡಬೇಕು. ಚೆನ್ನಾಗಿ ಅಗೆದು ತಯಾರಿಸಿದ ಸಸಿ ಮಡಿಗಳಲ್ಲಿ ನೀರು ಚೆನ್ನಾಗಿ ಬಸಿದು ಹೋಗುವಂತಿರಬೇಕು. ಬೀಜಗಳನ್ನು 1.5-2 ಸೆಂ.ಮೀ ಆಳದಲ್ಲಿ ಸಾಲಿನಿಂದ ಸಾಲಿಗೆ 7 ಸೆಂ. ಮೀ ಅಂತರದಲ್ಲಿ ಬಿತ್ತನೆ ಮಾಡಬೇಕು. ಒಂದು ಹಕ್ಟೇರು ಪ್ರದೇಶಕ್ಕೆ 250-500 ಗ್ರಾಂ. ಬೀಜ ಸಾಕಾಗುತ್ತದೆ. ಬಿತ್ತನೆ ನಂತರ ಆ ಸಸಿ ಮಡಿಗಳಿಗೆ ಆಗಾಗ ನೀರುಣಿಸುತ್ತಿರಬೇಕು ಒಮ್ಮೆ ಅಥವಾ ಎರಡು ಬಾರಿ ಕಳೆ ನಿರ್ವಹಣೆ ಅಗತ್ಯ.
ಜಮೀನು ಸಿದ್ದಪಡಿಸುವುದು
ಸಸಿ ನೆಡುವ ಮೊದಲು ಭೂಮಿಯನ್ನು ಉಳುಮೆ ಮಾಡಿ ಹದಮಾಡಿಟ್ಟುಕೊಳ್ಳಬೇಕು. ಸಿದ್ಧಪಡಿಸಿದ ಭೂಮಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಮೂಲ ಗೊಬ್ಬರವಾಗಿ ಹರಡಬೇಕು. ಮಡಿಯ ಅಳತೆ, ಸಾಲಿನ ಸಂಖ್ಯೆ ಮತ್ತು ನೀರಿನ ಕಾಲುವೆ ಇವು ಭೂಮಿ ಮತ್ತು ನೀರಾವರಿ ಕ್ರಮವನ್ನು ಅವಲಂಬಿಸಿದೆ. 3-4 ಸಾಲಿನ ಮಡಿಗಳನ್ನು ತಯಾರಿಸುತ್ತಾದರೂ, ಒಂದು ಅಥವಾ ಎರಡು ಸಾಲಿನ ಮಡಿಗಳು ಹೆಚ್ಚು ಅನುಕೂಲವಾಗಿವೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಸಿ ನೆಡುವುದು
ಅಲ್ಪಾವಧಿ ತಳಿಯ ಸಸಿಗಳನ್ನು ಬದುಗಳಲ್ಲಿ ನೆಡಬೇಕು. ಈ ತಳಿಗಳನ್ನು ಗಿಡದಿಂದ ಗಿಡಕ್ಕೆ 40 ಸೆ.ಮೀ ಮತ್ತು ಸಾಲಿನಿಂದ ಸಾಲಿಗೆ 60 ಸೆ.ಮೀ ಅಂತರದಲ್ಲಿ ನಾಟಿಮಾಡಬೇಕು. ದೀರ್ಘಾವಧಿ ತಳಿಯ ಸಸಿಗಳನ್ನು ಗಿಡದಿಂದ ಗಿಡಕ್ಕೆ 60 ಸೆ.ಮೀ, ಸಾಲಿನಿಂದ ಸಾಲಿಗೆ 90 ಸೆ.ಮೀ ಅಂತರವಿರುವಂತೆ ನಾಟಿ ಮಾಡಬೇಕು. ಸಸಿಗಳು 3-4 ವಾರದ್ದಿರಬೇಕು ಮತ್ತು 4-6 ಎಲೆಗಳನ್ನು ಹೊಂದಿರಬೇಕು. ಹೆಚ್ಚು ವಯಸ್ಸಿನ ಸಸಿಗಳನ್ನು ನಾಟಿ ಮಾಡಿದರೆ ಮತ್ತು ಮಣ್ಣಿನ ತೇವಾಂಶವನ್ನು ಕಾಪಾಡದಿದ್ದರೆ ಅವಧಿಗಿಂತ ಮೊದಲೇ ಹೂಕಟ್ಟುತ್ತದೆ. ಜಮೀನಿನ ಮಣ್ಣನ್ನು ಅವಲಂಬಿಸಿ ಸಸಿಗಳನ್ನು ಬದುಗಳ ಬದಿಯಲ್ಲಿ ಅಥವಾ ಬದುವಿನ ತಳದಲ್ಲಿ ನಾಟಿ ಮಾಡಬೇಕು ಮತ್ತು ನೀರು ಹಾಯಿಸಿದಾಗ ಸಸಿಗಳಿಗೆ ಹಾನಿಯಾಗದಂತಿರಬೇಕು.

ಪೋಷಕಾಂಶಗಳು
ಹೂಕೋಸು ಹೆಚ್ಚು ಪೋಷಕಾಂಶ ಬಯಸುತ್ತದೆ. ವಾಯುಗುಣ ಮತ್ತು ಮಣ್ಣಿನ ಗುಣವನ್ನು ಆಧರಿಸಿ ಈ ಕೆಳಗಿನ ಶಿಫಾರಸ್ಸುಗಳನ್ನು ಮಾಡಲಾಗಿದೆ. ಪ್ರತೀ ಹೆಕ್ಟೇರ್‍ಗೆ 30-40 ಟನ್ ಕೊಟ್ಟಿಗೆ ಗೊಬ್ಬರ, 60-120 ಕೆ.ಜಿ ಸಾರಜನಕ, 40-45 ಕೆ.ಜಿ ರಂಜಕ ಮತ್ತು 40 ಕೆ.ಜಿ ಪೊಟ್ಯಾಷನ್ನು ಮೂಲ ಗೊಬ್ಬರವಾಗಿ ಪೂರೈಸಬೇಕು. ಸಾರಜನಕ ಗೊಬ್ಬರವನ್ನು ಪ್ರತೀ ಹೆಕ್ಟೇರ್‍ಗೆ 150 ಕೆ.ಜಿಗೆ ಹೆಚ್ಚಿಸಿದಾಗ ಉತ್ತಮ ಪಲಿತಾಂಶ ಕಂಡುಬಂದಿದೆ. ಪೂರ್ಣಪ್ರಮಾಣದ ಕೊಟ್ಟಿಗೆ ಗೊಬ್ಬರ, ರಂಜಕ, ಪೊಟ್ಯಾಷ್, ಮತ್ತು ಅರ್ಧ ಪ್ರಮಾಣದ ಸಾರಜನಕವನ್ನು ನಾಟಿಗಿಂತ ಮೊದಲೇ ಒದಗಿಸಬೇಕು. ಉಳಿದ ಅರ್ಧ ಪ್ರಮಾಣದ ಸಾರಜನಕವನ್ನು ನಾಟಿಮಾಡಿದ ಒಂದು ತಿಂಗಳ ನಂತರ ನೀಡಿ ನೀರೊದಗಿಸಬೇಕು. ಭಾರತದ ಅನೇಕ ಕಡೆಗಳಲ್ಲಿ ಬೋರಾನಿನ ಕೊರತೆ ಇರುವುದರಿಂದ ಇಂತಹ ಜಮೀನಿಗೆ ನಾಟಿಗಿಂತ ಮೊದಲು 10-20 ಕೆ,ಜಿ ಬೋರಿಕ್ ಆಮ್ಲವನ್ನು ಭೂಮಿಗೆ ಒದಗಿಸಬೇಕು.

ನೀರಾವರಿ
ನಾಟಿ ಆದ ತಕ್ಷಣ ಸಸಿಗಳಿಗೆ ನೀರೊದಗಿಸಬೇಕು. ಮಳೆಯನ್ನು ಆಧರಿಸಿ ಬೆಳೆಯುವ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆಗಳಿಗೆ ಮಳೆಯ ಕೊರತೆ ಕಂಡು ಬಂದರೆ ಬೆಳೆಯನ್ನು ಕಾಪಾಡಲು ನೀರಿನ ವ್ಯವಸ್ಥೆ ಇರಬೇಕು. ಬೆಳವಣಿಗೆಯ ಮತ್ತು ಹೂಕಟ್ಟುವ ಸಮಯದಲ್ಲಿ ತೇವಾಂಶ ಅತೀ ಅವಶ್ಯ. ಅಲ್ಪಾವಧಿ ಹೂಕೋಸು ಬೆಳೆಗೆ ಪ್ರತೀ 5-6 ದಿನಗಳಿಗೊಮ್ಮೆ, ದೀರ್ಘಾವಧಿ ಬೆಳೆಗೆ 10-15 ದಿನಗಳಿಗೊಮ್ಮೆ ನೀರನ್ನು ಒದಗಿಸಬೇಕಾಗುತ್ತದೆ.

ಕೀಟ ಬಾಧೆ
ಮಸ್ಟರ್ಡ್ ಸಾ ಕೀಟ
ಪ್ರೌಢ ಕೀಟವು ಕಪ್ಪು ಬಣ್ಣ ಹೊಂದಿದ್ದು, ಎಲೆಯ ಕೋಶಗಳಲ್ಲಿ ಒಂದೊಂದಾಗಿ ಮೊಟ್ಟೆಯಿಡುತ್ತದೆ. ಈ ಮೊಟ್ಟೆಗಳಿಂದ ಕಪ್ಪು ಬಣ್ಣದ ಮರಿ ಹುಳುಗಳು ಹೊರಬರುತ್ತವೆ. ಈ ಹುಳುಗಳು ಚಿಕ್ಕ ಸಸಿಗಳ ಎಲೆಗಳನ್ನು ಆರಂಭದಲ್ಲಿ ಭಕ್ಷಿಸಲು ಪ್ರಾರಂಭಿಸುತ್ತವೆ. ಕೀಟ ಬಾಧೆಯಿಂದ ಮುರುಟಿದ ಎಲೆಗಳನ್ನು ಮುಟ್ಟಿದಾಗ ಬಿದ್ದು ಹೋಗುತ್ತದೆ. 0.02% ಮಲಥಿಯಾನ್ ಪುಡಿ ಉದುರಿಸುವುದರಿಂದ ಅಥವಾ ಹದಿನೈದು ದಿನದಲ್ಲಿ 2-3 ಬಾರಿ ಸಿಂಪಡಣೆ ಮಾಡುವುದರಿಂದ ಈ ಕೀಟವನ್ನು ಹತೋಟಿಯಲ್ಲಿಡಬಹುದು.

ಸಾಸಿವೆ ಹೇನು
ಇದು ಹಸಿರು ಮಿಶ್ರಿತ ಬಿಳಿ ಬಣ್ಣದ ಚಿಕ್ಕ ಕೀಟವಾಗಿದೆ. ಇವು ಹೂಕೋಸು ಮತ್ತು ಕೋಸು ಜಾತಿಯ ಇತರ ಬೆಳೆಗಳನ್ನು ಭಕ್ಷಿಸುತ್ತವೆ. ಮೋಡ ತುಂಬಿದ ವಾತಾವರಣವಿದ್ದಲ್ಲಿ ಇವುಗಳ ಉಪಟಳ ಜಾಸ್ತಿ ಇರುತ್ತದೆ. ಸಸ್ಯದ ರಸವನ್ನು ಹೀರುವುದರಿಂದ ಎಲೆಗಳು ಮುರುಟಿ ಗಿಡಗಳು ಸಾಯುತ್ತವೆ. 0.5% ಮಲಥಿಯಾನ್ ಸಿಂಪಡಣೆ ಮಾಡುವುದರಿಂದ ಈ ಕೀಟವನ್ನು ಹತೋಟಿಯಲ್ಲಿಡಬಹುದು.

ಬಣ್ಣದ ತಿಗಣೆ
ಇದು ಕಪ್ಪು ಮತ್ತು ಕಿತ್ತಳೆ ಬಣ್ಣದ ಕೀಟವಾಗಿದ್ದು, ಮೊಟ್ಟೆಯಿಂದ ಹೊರಬಂದ ನಿಂಪ್‍ಗಳು ಹೊಳೆಯುವ ಕಿತ್ತಳೆ ಬಣ್ಣ ಹೊಂದಿವೆ. ಎಲೆಗಳ ಮೇಲೆ ಮತ್ತು ಮೆದು ಸಡಿಲ ಮಣ್ಣಿನಲ್ಲಿ ಮೊಟ್ಟೆಯಿಡುತ್ತದೆ. ಗಿಡಗಳ ರಸ ಹೀರುವುದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಡೈಮಂಡ್ ಕಪ್ಪು ಪತಂಗ
ಚಿಕ್ಕದಾದ ತೆಳ್ಳಗಿನ ಈ ಕೀಟ ಹಸಿರು ಬಣ್ಣ ಹೊಂದಿದೆ. ಗಿಡಗಳ ಎಲೆಗಳನ್ನು ತಿಂದು, ಎಲೆಗಳಲ್ಲಿ ತೂತು ಮಾಡುತ್ತದೆ. ಪತಂಗಗಳು ವಜ್ರಾಕೃತಿಯ ರೆಕ್ಕೆಗಳನ್ನು ಹೊಂದಿದ್ದು ಎಲೆಗಳ ಮೇಲೆ ಒಂದೊಂದಾಗಿ ಮೊಟ್ಟೆಯಿಡುತ್ತದೆ. ಎಲೆಗಳ ಮೇಲೆ ಕೋಶಾವಸ್ಥೆ ಮುಗಿಸಿ ಹುಳು ಹೊರಬರುತ್ತದೆ. 450 ಗ್ರಾಂ ಸೀಸದ ಆರ್ಸನೇಟನ್ನು 227 ಲೀ. ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಕೀಟ ನಿಯಂತ್ರಣ ಮಾಡಬಹುದು.

ರೋಗಗಳು
ಕಾಂಡಕೊಳೆ ರೋಗ
ಇದು ಸಾಧಾರಣವಾಗಿ ನರ್ಸರಿಯಲ್ಲಿರುವ ಸಸಿಗಳ ಕಾಂಡದಲ್ಲಿ ಕಾಣಿಸಿಕೊಳ್ಳುವ ಕೊಳೆರೋಗ. ಸಸಿ ಮಡಿಗಳನ್ನು ಶೇಕಡ 0.1ರ ಬ್ರಸಿಕಾಲ್ ಅಥವಾ ಕ್ಯಾಪ್ಟಾನ್ ಅಥವಾ ಫೈಟಲಾನ್ ದ್ರಾವಣದಿಂದ ತೋಯ್ಸುವುದರ ಮೂಲಕ ರೋಗ ಬಾಧೆ ಕಡಿಮೆಯಿರುತ್ತದೆ. 1 ಕೆ.ಜಿ. ಬೀಜವನ್ನು 2 ಗ್ರಾಂ ಎಗ್ರಸಾನ್ ಜಿ.ಎನ್. ಅಥವಾ ಸಿರೆಸಾನ್‍ನಿಂದ ಬೀಜೋಪಚಾರ ಮಾಡುವುದರಿಂದ ಈ ರೋಗ ಬಾರದಂತೆ ತಡೆಂiÀಬಹುದು.

ಕಪ್ಪು ಕೊಳೆರೋಗ
ಇದು ಬೀಜದಿಂದ ಹರಡುವ ರೋಗವಾಗಿದ್ದು ನರ್ಸರಿಯಲ್ಲಿ ಮತ್ತು ಜಮೀನಿನಲ್ಲಿ ನಾಟಿ ಮಾಡಿದ ಸಸಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗ ಪೀಡಿತ ಸಸಿಗಳ ಎಲೆಯ ಅಂಚು ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಾಂಡದ ನಾಳಗಳು ಬಣ್ಣ ಕಳೆದುಕೊಳ್ಳುತ್ತವೆ. ಕೋಸು ಜಾತಿಯ ಬೆಳೆಗಳನ್ನು 3-4 ವರ್ಷ ಒಂದೇ ಜಮೀನಿನಲ್ಲಿ ಪುನರಾವರ್ತನೆ ಮಾಡದಿರುವುದರಿಂದ ಮತ್ತು ಬೀಜವನ್ನು 500 ಸೆ. ಬಿಸಿ ನೀರಿನಲ್ಲಿ 30 ನಿಮಿಷದವರೆಗೆ ನೆನಸುವುದರಿಂದ ರೋಗವನ್ನು ಹತೋಟಿಯಲ್ಲಿಡಬಹುದು.

ಎಲೆಚುಕ್ಕೆ ಮತ್ತು ಕಾಡಿಗೆ (ಬ್ಲೈಟ್) ರೋಗ
ಈ ರೋಗದಿಂದ ಎಲೆಗಳ ಮೇಲೆ ಚಿಕ್ಕ ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಚುಕ್ಕೆಗಳು ಹಿಗ್ಗಿ ವೃತ್ತಾಕಾರವಾಗಿ ಎಲ್ಲಾ ಕಡೆ ಪಸರಿಸುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಅತೀಯಾದಲ್ಲಿ ಸಸಿಗಳು ಕಂದು ಬಣ್ಣಕ್ಕೆ ತಿರುಗುತ್ತದೆ. ಬೀಜವನ್ನು ಬಿಸಿನೀರಿನಲ್ಲಿ ನೆನಸಿ ಬಿತ್ತಬೇಕು.

ಶಾರೀರಕ ವೈಪರೀತ್ಯ
ರೈಸಿನೆಸ್
ರೈಸಿನೆಸ್‍ನಿಂದ ಅವಧಿ ಮುನ್ನ ಸಸಿ ಹೂಕಟ್ಟುತ್ತದೆ. ಹೂವಿನ ದಂಟು ಉದ್ದವಾಗಿ ಹೂ ಬಿಡಿ ಬಿಡಿಯಾಗಿ ಬಿರಿದುಕೊಳ್ಳುತ್ತದೆ. ಇಂತಹ ಗುಣಮಟ್ಟ ಹೊಂದಿದ ಹೂ ಕೋಸು ಮಾರಾಟಕ್ಕೆ ಯೋಗ್ಯವಲ್ಲ. ವಿವಿಧ ತಳಿಗಳಿಗೆ ಬೇಕಾದ ಅಗತ್ಯ ಉಷ್ಣತೆಯಲ್ಲಿ ವ್ಯತ್ಯಾಸವದರೆ ಇಂತಹ ವೈಪರೀತ್ಯಗಳು ಕಾಣಿಸಿಕೊಳ್ಳುತ್ತವೆ. ಮಿತಿಮೀರಿದ ಬೆಳವಣಿಗೆ, ಅತೀ ಹೆಚ್ಚು ಸಾರಜನಕದ ಬಳಕೆ ಮತ್ತು ಹೆಚ್ಚಿದ ಆದ್ರ್ರತೆ ಸಹ ವೈಪರೀತ್ಯಕ್ಕೆ ಕಾರಣವಾಗಿದೆ. ಕಟಾವು ವಿಳಂಬವಾದಲ್ಲಿ ಹೂ ಕೋಸು ಬಲಿತು ಈ ರೀತಿಯಾಗಬಹುದು.

ಕುರುಡುತನ
ಗಿಡದ ತುದಿಯ ಮೊಗ್ಗು ಅಭಿವೃದ್ದಿ ಹೊಂದದಿದ್ದರೆ, ಮುರಿದು ಹೋದರೆ ಅಥವಾ ಕೀಟಗಳು ಭಕ್ಷಿಸಿದರೆ ಸಸಿ ಹೂಕಟ್ಟುವುದಿಲ್ಲ. ಇಂತಹ ಸಸಿಗಳು ದಪ್ಪನೆಯ ದೊಡ್ಡದಾದ ಎಲೆಗಳನ್ನು ಹೊಂದಿದ್ದು ಕಡುಹಸಿರು ಬಣ್ಣ ಹೊಂದಿದೆ. ಇಂತಹ ವೈಪರೀತ್ಯದ ಸಸಿಗಳನ್ನು ಕಿತ್ತುಹಾಕಬೇಕು.
ಕೊಯ್ಲು ಮತ್ತು ಇಳುವರಿ
ಹೂ ಕೋಸು ಸರಿಯಾಗಿ ಪಕ್ವವಾಗುವ ಸಮಯದಲ್ಲಿ ಕಟಾವು ಮಾಡಬೇಕು. ಇಳುವರಿ ಋತು ಮತ್ತು ತಳಿಯನ್ನು ಅವಲಂಬಿಸಿದೆ. ಸಾಮಾನ್ಯವಾಗಿ 1 ಹೆಕ್ಟೇರ್ ಪ್ರದೇಶದಿಂದ 25-30 ಟನ್ ಇಳುವರಿ ಪಡೆಯಬಹುದು. ಚಳಿಗಾಲದಲ್ಲಿ ತೆರೆದ ಪರಿಸರದಲ್ಲಿ ಹೂಕೋಸನ್ನು 2-3 ದಿನ ಕೆಡದಂತೆ ಇಡಬಹುದು. ಬೇಸಿಗೆಯಲ್ಲಿ ಇದು ಅಸಾಧ್ಯ. ಶೈತ್ಯಾಗಾರದಲ್ಲಿ 3200 ಫೆ. ಉಷ್ಣತೆಯಲ್ಲಿ ಮತ್ತು ಶೇಕಡ 85-95 ತೇವಾಂಶದಲ್ಲಿ ಒಂದು ತಿಂಗಳಿನವರೆಗೆ ಕೆಡದಂತೆ ಸಂಗ್ರಹಿಸಿಡಬಹುದು.

ಬೀಜೋತ್ಪಾದನೆ
ಅಲ್ಪಾವಧಿ ಮತ್ತು ಮದ್ಯಮಾವಧಿ ಹೂಕೋಸು ಬೀಜಗಳನ್ನು ಉತ್ತರ ಮತ್ತು ಪಶ್ಚಿಮ ಭಾರತದ ಮೈದಾನ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ. ದೀರ್ಘಾವಧಿಯ ತಳಿಯ ಬೀಜಗಳನ್ನು ಗುಡ್ಡಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ. ಬೀಜೋತ್ಪಾದನೆಗಾಗಿ ಉತ್ತಮ ಹೂಕೋಸನ್ನು ಆಯ್ಕೆ ಮಾಡಿ ಕಟಾವು ಮಾಡದೆ ಬಿಡಬೇಕಾಗುತ್ತದೆ. ಈ ರೀತಿ ಕೊಯ್ಲು ಮಾಡದೆ ಬಿಡುವುದರಿಂದ ಹೂತೊಟ್ಟಿನಿಂದ ಹೂಗಳು ಕಾಣಿಸಿಕೊಳ್ಳುತ್ತವೆ. ಮಾರ್ಚ್-ಮೇ ತಿಂಗಳಿನಲ್ಲಿ ಬೀಜಗಳು ಬಲಿಯುತ್ತವೆ. ಬೀಜೋತ್ಪಾದನೆಗಾಗಿ ಹೆಚ್ಚಿನ ಸ್ಥಳದ ಅವಶ್ಯಕತೆಯಿದೆ. ಇದಕ್ಕಾಗಿ ಆಯ್ದು ಹೂಕೋಸು ಸಸಿಗಳನ್ನು ಕಿತ್ತು ಒಂದೆಡೆ ನೆಡಬೇಕು. ನೆಡುವ ಮೊದಲು ಹೂಕೋಸಿನ ಮದ್ಯದಲ್ಲಿ ಗಾಯ ಮಾಡುವುದರಿಂದ ಹೂತೊಟ್ಟು ಮೂಡಲು ಅನುಕೂಲವಾಗುತ್ತದೆ. ಹೂಕೋಸಿನಲ್ಲಿ ಪರಕೀಯ ಪರಾಗಸ್ಪರ್ಷ ಆಗುವುದರಿಂದ ಎರಡು ವಿವಿಧ ತಳಿಗಳನ್ನು 1000 ಮೀ ಅಂತರದಲ್ಲಿ ನಾಟಿಮಡುವುದರಿಂದ ತಳಿಯ ಶುದ್ಧತೆಯನ್ನು ಕಾಪಾಡಬಹುದು. ಅಲ್ಪಾವಧಿ ಮತ್ತು ಮಧ್ಯಂತರ ತಳಿಗಳಲ್ಲಿ ಪ್ರತೀ ಹೆಕ್ಟೇರಿಗೆ 500-650 ಕೆ.ಜಿ. ಬೀಜ ದೊರೆತರೆ, ದೀರ್ಘಾವಧಿ ತಳಿಗಳಲ್ಲಿ ಬೀಜಗಳ ಇಳುವರಿ 200-250 ಕೆ.ಜಿ. ಇರುತ್ತದೆ.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments