ಎಲೆಕೋಸು (ಕ್ಯಾಬೇಜು)
ಎಲೆಕೋಸು (Brassica oleracea L. var. capitata) ಕ್ರುಸಿಎರೆ ಕುಟುಂಬಕ್ಕೆ ಸೇರಿದ ಚಳಿಗಾಲದ ತರಕಾರಿ ಬೆಳೆಯಾಗಿದೆ. ಪ್ರಮುಖ ತರಕಾರಿ ಬೆಳೆಯಾದ ಹೂಕೋಸನ್ನು 17ನೇ ಶತಮಾನದಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು. ಇದರ ಮೂಲ ಪಶ್ಚಿಮ ಯುರೋಪ್ ಮತ್ತು ಮೆಡಿಟರೇನಿಯನ್ನಿನ ಉತ್ತರ ಭಾಗ. ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಹಾಗು ದೇಶದ ಉತ್ತರಪ್ರದೇಶ, ಒರಿಸ್ಸಾ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಲ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕೋಸನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಲದಲ್ಲಿ 65,000 ಹೆಕ್ಟೇರು ಪ್ರದೇಶದಿಂದ 1,929 ಮೆಟ್ರಿಕ್ ಟನ್ ಇಳುವರಿ ದೊರೆಯುತ್ತದೆ. ಅಂದರೆ ಪ್ರತೀ ಹೆಕ್ಟೇರಿನಿಂದ ಸರಾಸರಿ 29.6 ಮೆಟ್ರಿಕ್ ಟನ್ ಎಲೆಕೋಸು ಉತ್ಪಾದನೆಯಾಗುತ್ತದೆ. ಎಲೆಕೋಸನ್ನು ಸಲಾಡಿನಲ್ಲಿ ಹಸಿಯಾಗಿ ಇಲ್ಲವೆ ಒಣಗಿಸಿ ಮತ್ತು ಸಾಂಬಾರು, ಉಪ್ಪಿನಕಾಯಿ ಮುಂತಾದುವುಗಳನ್ನು ತಯಾರಿಸಲು ಬಳಸುತ್ತಾರೆ. ಎಲೆಕೋಸಿನಲ್ಲಿ ಖನಿಜಾಂಶ ಮತ್ತು ವಿಟಮಿನ್‍ಗಳಾದ ಎ, ಬಿ, ಬಿ2 ಮತ್ತು ಸಿ ಹೇರಳ ಪ್ರಮಾಣದಲ್ಲಿ ಹೊಂದಿದೆ.
ವಾಯುಗುಣ ಮತ್ತು ಮಣ್ಣು
ತಂಪಾದ ತೇವಾಂಶವುಳ್ಳ ಹವಾಗುಣದಲ್ಲಿ ಎಲೆಕೋಸು ಚೆನ್ನಾಗಿ ಬೆಳೆಯುತ್ತದೆ. ಮೈದಾನ ಪ್ರದೇಶದಲ್ಲಿ ಚಳಿಗಾಲದ ಬೆಳೆಯಾಗಿಯೂ, ಗುಡ್ಡಪ್ರದೇಶದಲ್ಲಿ ವಸಂತಕಾಲ ಮತ್ತು ಬೇಸಿಗೆ ಪ್ರಾರಂಭದ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಅಲ್ಪಾವಧಿ ಬೆಳೆಗೆ ಮರಳು ಮಿಶ್ರಿತ ಜೇಡಿಮಣ್ಣು ಸೂಕ್ತವಾದರೆ ಹೆಚ್ಚು ಇಳುವರಿ ಪಡೆಯಲು ಜೇಡಿ ಮಣ್ಣು ಅಥವಾ ಗೋಡು ಮಣ್ಣು ಹೆಚ್ಚು ಸೂಕ್ತ. ಹೆಚ್ಚು ಆಮ್ಲಯುಕ್ತ ಮಣ್ಣು ಇದರ ಬೆಳೆಗೆ ಸೂಕ್ತವಲ್ಲ ಮತ್ತು ಉತ್ತಮ ಇಳುವರಿಗೆ ಮಣ್ಣಿನ ರಸಸಾರ 5.5 ರಿಂದ 6.5ರಷ್ಟು ಇರಬೇಕು.
ತಳಿಗಳು
ಪ್ರಮುಖವಾದ ತಳಿಗಳೆಂದರೆ ಅರ್ಕಾ ಮುಕ್ತ, ಗೋಲ್ಡನ್ ಎಕರ್, ಪ್ರೈಡ್ ಆಫ್ ಇಂಡಿಯಾ, ಪೂಸ ಡ್ರಮ್ ಹೆಡ್ ಇತ್ಯಾದಿ. ಕೆಲವು ಸಂಕರತಳಿಗಳಾದ ಗ್ರೀನ್ ಎಕ್ಸ್ ಪ್ರೆಸ್, ಗ್ರೀನ್ ಬಾಯ್ ಇತ್ಯಾದಿ ಬೆಳೆಗಾರರಲ್ಲಿ ಜನಪ್ರಿಯವಾಗುತ್ತಿದೆ.
ಜಮೀನು ತಯಾರಿ
ಭುಮಿಯನ್ನು ಸುಮಾರು 20-25 ಸೆ. ಮೀ ನಷ್ಟು ಆಳ ಊಳುಮೆ ಮಾಡಬೇಕು. ಹೆಂಟೆಗಳನ್ನು ಪುಡಿ ಮಾಡಿ ಜಮೀನನ್ನು ಹದಗೊಳಿಸಿ ಹಲಗೆಯ ಸಹಾಯದಿಂದ ಸಮತಟ್ಟಾಗಿಸಬೇಕು.
ಬೀಜ ಪ್ರಮಾಣ ಮತ್ತು ಗಿಡ ನೆಡುವುದು
ಬೀಜಗಳನ್ನು ನರ್ಸರಿಯ ಎತ್ತರದ ಸಸಿ ಮಡಿಗಳಲ್ಲಿ ಬಿತ್ತಲಾಗುತ್ತದೆ. ಅಲ್ಫಾವಧಿ ಬೆಳೆಯ ಬೀಜಗಳನ್ನು. ಆಗಸ್ಟ್- ಸಪ್ಟೆಂಬರ್‍ನಲ್ಲಿ ಬಿತ್ತಲಾಗುತ್ತದೆ. ಒಂದು ಹೆಕ್ಟೇರಿಗೆ ಅಂದಾಜು 500 ಗ್ರಾಂ. ಅಲ್ಪಾವಾಧಿ ಬೆಳೆಯ ಬೀಜ ಬೇಕಾಗುತ್ತದೆ. ದೀರ್ಘಾವಧಿ ಬೆಳೆಯಾದರೆ 375 ಗ್ರಾಂ. ಬೀಜ ಸಾಕಾಗುತ್ತದೆ. ಬೀಜ ಮೊಳಕೆಯ ಪ್ರಮಾಣ ಹೆಚ್ಚಿಸಲು ಮತ್ತು ಉತ್ತಮ ಸಸಿಗಳನ್ನು ಪಡೆಯಲು ಹಸಿರು ಮನೆಯನ್ನು ಉಪಯೋಗಿಸಬೇಕು. 4-6 ವಾರಗಳ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಬೇಕು. ಅಲ್ಪಾವಧಿ ಬೆಳೆಯ ಸಸಿಗಳನ್ನು 45 x 45 ಸೆ. ಮೀ. ಮತ್ತು ದೀರ್ಘಾವದಿಯü ಸಸಿಗಳನ್ನು 60 x 45 ಸೆ. ಮೀ. ಅಂತರದಲ್ಲಿ ನಾಟಿ ಮಾಡಬೇಕು.
ಎಲೆಕೋಸಿನ ಬೇರು ಅಷ್ಟೇನು ಆಳದಲ್ಲಿ ಇರುವುದಿಲ್ಲವಾದ್ದರಿಂದ ಗಿಡಕ್ಕೆ ಹೆಚ್ಚಿನ ಪೋಷಕಾಂಶದ ಅವಶ್ಯಕತೆಯಿದೆ. ನಾಟಿ ಮಾಡುವುದಕ್ಕಿಂತ 2-3 ವಾರಗಳ ಮೊದಲೇ 20-25 ಟನ್ ಕೊಟ್ಟಿಗೆ ಗೊಬ್ಬರವನ್ನು ಒಂದು ಹೆಕ್ಟೇರು ಪ್ರದೇಶಕ್ಕೆ ಮಿಶ್ರಮಾಡಬೇಕು. 100 ಕೆ.ಜಿ ಸಾರಜನಕ, 125 ಕೆ.ಜಿ ರಂಜಕ, ಮತ್ತು 150 ಕೆ.ಜಿ ಪೊಟ್ಯಾಷ್‍ನ್ನು ಪ್ರತೀ ಹೆಕ್ಟೇರ್‍ಗೆ ನಾಟಿಗಿಂತ ಮೊದಲೆ ಹರಡಬೇಕು. ಸಾರಜನಕ ಗೊಬ್ಬರವನ್ನು ವಿಂಗಡಿಸಿ ನಾಟಿ ಮಾಡಿದ 5-6 ವಾರಗಳ ನಂತರ 3-4 ಬಾರಿ ಹನಿ ನೀರಾವರಿಯ ಮೂಲಕ ಸಸಿಗಳಿಗೆ ಒದಗಿಸಬೇಕು.
ನೀರಾವರಿ
ಎಲೆಕೋಸಿನ ಬೆಳವಣಿಗೆಗೆ ನಿರಂತರವಾಗಿ ಮಣ್ಣಿನ ತೇವಾಂಶ ಕಾಪಾಡಬೇಕು. ಕೋಸು ಮೊಟ್ಟೆ ಕಟ್ಟುವ ಸಮಯದಲ್ಲಿ ಹೆಚ್ಚು ನೀರಿನ ಅವಶ್ಯವಿರುವುದಿಲ್ಲ. ದೀರ್ಘ ಒಣ ಅವಧಿಯ ನಂತರ ನೀರೊದಗಿಸಿದರೆ ಎಲೆಕೋಸು ಬಿರುಕು ಬಿಡುತ್ತದೆ. ಹನಿ ನೀರಾವರಿಯಿಂದ ಸಮಾನ ನೀರಿನ ಹಂಚಿಕೆಯಾಗುವುದರಿಂದ ಈ ನೀರಾವರಿ ವಿಧಾನ ಎಲೆಕೋಸು ಬೆಳೆಗೆ ಸೂಕ್ತವೆಂದು ಕಂಡುಬಂದಿದೆ.
ಕಳೆ ನಿಯಂತ್ರಣ
ಸನಿಕೆಯಿಂದ ಮಣ್ಣಿನ ಮೇಲ್ಭಾಗದಲ್ಲಿ ಕೊಚ್ಚುವುದರಿಂದ ಕಳೆ ನಿಯಂತ್ರಣ ಮಾಡಬೇಕು. ಕಪ್ಪು ಪ್ಲಾಸ್ಟಿಕ್ ಹಾಳೆಯ ಬಳಕೆಯಿಂದ ಕಳೆ ಗಿಡಗಳನ್ನು ನಿಯಂತ್ರಣ ಮಾಡಬಹುದು.
ರೋಗ ಮತ್ತು ಕೀಟ ನಿರ್ವಹಣೆ
ಕೀಟ ಮತ್ತು ರೋಗ ನಿಯಂತ್ರಣ ಕ್ರಮ ಅದರ ತೀವ್ರತೆಯನ್ನು ಅವಲಂಬಿಸಿದೆ ಮತ್ತು ಅವುಗಳ ನಿಯಂತ್ರಣಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
ಎಲೆಕೋಸು ಮ್ಲಾಗೋಟ್: ಎಲೆಕೋಸಿನ ಮುಖ್ಯ ಬೇರು ಮತ್ತು ಕವಲು ಬೇರಿಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ಗಿಡ ಸೊರಗುತ್ತದೆ. ಕೀಟ ನಿಯಂತ್ರಣಕ್ಕೆ ಕೆಲೋಮೆಲಿಸ್ ದ್ರಾವಣ ಉಪಯೋಗಿಸಲು ಶಿಫಾರಸು ಮಾಡಲಾಗಿದೆ.
ಕೊಳೆರೋಗ: ನರ್ಸರಿಯ ಸಸಿಮಡಿಗಳಲ್ಲಿರುವ ಎಳೆ ಸಸಿಗಳಿಗೆ ಸಾಮಾನ್ಯವಾಗಿ ಕಂಡುಬರುವ ರೋಗ. ಪಾರದರ್ಶಕ ಹಾಳೆ ಬಳಸಿ ಮಣ್ಣನ್ನು ಸೋಲರೈಸ್ ಮಾಡುವುದರಿಂದ ಅಥವಾ ಬಿತ್ತನೆಗಿಂತ 3-4 ವಾರ ಮೊದಲೆ ಶಿಲೀಂದ್ರ ನಾಶಕದಿಂದ ಮಣ್ಣನು ತೊಯ್ಸುವುದರಿಂದ ರೋಗ ಹತೋಟಿಯಲ್ಲಿಡಬಹುದು.
ಡೌನಿ ಮಿಲ್ ಡ್ಯೂ: ಎಲೆಯ ತಳಭಾಗದಲ್ಲಿ ನೇರಳೆ–ಕಂದು ಬಣ್ಣದ ಕಲೆಗಳು ಗೋಚರಿಸುತ್ತದೆ. ಮಣ್ಣಿನಲ್ಲಿರುವ ಒಂದು ಪರಾವಲಂಬಿ ಕ್ರಿಮಿ ರೋಗಕ್ಕೆ ಮೂಲ ಕಾರಣವಾಗಿದೆ. ನೈರ್ಮಲ್ಯ ಮತ್ತು ಬೆಳೆ ಬದಲಾವಣೆಯಿಂದ ಡೌನಿ ಮಿಲ್‍ಡ್ಯೂ ಸೋಂಕನ್ನು ತಡೆಯಬಹುದು.
ಕೊಯ್ಲು ಮತ್ತು ಇಳುವರಿ
ಎಳೆಯ, ದೊಡ್ಡದಾದ ಮತ್ತು ಗಟ್ಟಿಯಿರುವ ಎಲೆಕೋಸನ್ನು ಕಟಾವು ಮಾಡಲಾಗುತ್ತದೆ. ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಮುಚ್ಚಳಿಕೆ ಬಳಕೆಯಿಂದ ಒಂದು ಹೆಕ್ಟೇರ್ ಪ್ರದೇಶದಿಂದ 100-115 ಟನ್ ಇಳುವರಿ ದೊರಕುತ್ತದೆ. ಗಾತ್ರ ಮತ್ತು ಗುಣಮಟ್ಟ ಆಧಾರದ ಮೇಲೆ ಎಲೆಕೊಸನ್ನು ವರ್ಗೀಕರಿಸಲಾಗುತ್ತದೆ. 00 ಸೆ. ಉಷ್ಣಾಂಶ ಮತ್ತು ಶೇಕಡ 90 ರಿಂದ 95 ಆದ್ರ್ರತೆ ಶೇಖರಣೆಗೆ ಅನುಕೂಲಕರವಾಗಿದೆ.
ಬೀಜೋತ್ಪಾದನೆ
ಎಲೆ ಕೋಸಿನ ಬೀಜವನ್ನು ಗುಡ್ಡ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ. ಉತ್ತಮವಾಗಿ ಬೆಳೆದ ಹೂಕೋಸು ಗಿಡಗಳನ್ನು ಆಯ್ದು ಬಲಿಯಲು ಬಿಟ್ಟಾಗ ಹೂ ತೊಟ್ಟಿನಿಂದ ಹೂ ಹೊರಹೊಮ್ಮುತ್ತದೆ. ಮಾರ್ಚ್-ಮೇ ತಿಂಗಳಿನಲ್ಲಿ ಬೀಜ ಬಲಿಯುತ್ತದೆ. ಆದರೆ ಈ ವಿಧಾನದಲ್ಲಿ ಹೆಚ್ಚು ಜಮೀನು ಬಳಸಬೇಕಾಗುತ್ತದೆ. ಆದ್ದರಿಂದ ಆಯ್ದ ಎಲೆಕೋಸು ಗಿಡಗಳನ್ನು ಎಚ್ಚರದಿಂದ ಬೇರುಸಮೇತ ಕಿತ್ತು ಒತ್ತೊತ್ತಾಗಿ ಒಂದು ಪ್ರದೇಶದಲ್ಲಿ ನೆಟ್ಟು ಎಲೆಕೋಸಿನ ಮಧ್ಯದಲ್ಲಿ ಗಾಯ ಮಾಡಿ ಹೂಬಿಡಲು ಅನುಕೂಲ ಮಾಡಬೇಕು. ಇದರಿಂದ ಗುಣಮಟ್ಟದ ಬೀಜಗಳು ದೊರೆಯುತ್ತದೆ. ಎಲೆಕೋಸು ಪರಕೀಯ ಪರಾಗಸ್ಪರ್ಷ ಹೊಂದುವ ಗಿಡವಾದ್ದರಿಂದ ಎರಡು ತಳಿಗಳ ಮಧ್ಯೆ ಕನಿಷ್ಟ 1000 ಮೀ. ಅಂತರವಿರಬೇಕು. ಒಂದು ಹೆಕ್ಟೇರಿನಿಂದ 500-600 ಕೆ.ಜಿ ಬೀಜ ಉತ್ಪಾದನೆಯಾಗುತ್ತದೆ.