ಕಾಫಿ ಹೂ ಬಿಡುವ ಸಮಯದಲ್ಲಿ ಉತ್ತಮ ಮಳೆಯಾಗದೆ ಇದ್ದರೆ ಮುಂದಿನ ಬಾರಿಯ ಫಸಲಿಗೆ ಭಾರಿ ಹೊಡೆತ ಬೀಳುತ್ತದೆ. ಮಳೆ ಅಭಾವ ಮೆಣಸಿನ ಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಮಳೆ ಸರಿಯಾಗಿ ಆಗದಿದ್ದರೆ ಬೆಳೆಗಾರರು ಸಹಜವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ತೋಟಗಳು ಬೋರಾರ್ ರೋಗಕ್ಕೆ ತುತ್ತಾಗುವುದನ್ನು ತಳ್ಳಿ ಹಾಕುವಂತಿಲ್ಲ.
ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ಬೆಳೆಗಳು ಬಿಸಲ ಝಳಕ್ಕೆ ಒಣಗಿ ಹೋಗಿವೆ. ಹಚ್ಚಹಸಿರಿನಿಂದ ನಳನಳಿಸಬೇಕಿದ್ದ ತೋಟಗಳು ಒಣಗಿ ನಿಂತಿವೆ. ಇಲ್ಲಿಯವರೆಗೆ ಸರಿಯಾದ ಮಳೆ ಭೂಮಿಗೆ ಬಿದ್ದಿಲ್ಲ.ಬಹುಪಾಲು ಬೆಳೆಗಾರರು ಕಾಫಿಬೆಳೆಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಕೃಷಿ ಹೊಂಡ, ಕೊಳವೆ ಬಾವಿ ವ್ಯವಸ್ಥೆ ಮಾಡಿಕೊಂಡಿದ್ದು, ತೋಟಕ್ಕೆ ಸ್ಪಿಂಕ್ಲಿಂಗ್ ಮಾಡಿಕೊಂಡಿದ್ದಾರೆ. ಆ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿವೆ. ಉಳಿದ ತೋಟಗಳು ಮಳೆಯಿಲ್ಲದೆ ಸೊರಗಿನಿಂತಿವೆ. ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ಪ್ರಮುಖ ಬೆಳೆಯಾಗಿದ್ದು ಮಳೆಯನ್ನೇ ಆಧರಿಸಿವೆ.
ಹೊಳೆ, ಕೆರೆ, ಕಟ್ಟೆಗಳು ಒಣಗಿಹೋಗಿವೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಮಾರ್ಚ್ ಕೊನೆಯಲ್ಲಿ ಆರಂಭವಾಗುವ ರೇವತಿ ಮಳೆ ವಾಣಿಜ್ಯ, ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳಿಗೆ ಪ್ರಮುಖ ಆಧಾರ. ಕಳೆದ ಹಲವಾರು ವರ್ಷಗಳಿಂದ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್ ಆರಂಭದಲ್ಲಿ ಸುಮಾರು 4 ಇಂಚು ಮಳೆ ಬೀಳುತ್ತಿದ್ದರಿಂದ ಕಾಫಿ ಹೂ ಕಟ್ಟುತ್ತಿತ್ತು. ಈ ಬಾರಿ ಕೆಲವು ದಿನಗಳ ಹಿಂದೆ ಅರ್ಧ ಇಂಚಿಗೂ ಕಡಿಮೆ ಮಳೆ ಬಂತು. ಆದರೆ ಮತ್ತೆ ಅದರ ಸುಳಿವೇ ಇಲ್ಲವಾಗಿ ಬಲವಂತದಿಂದ ಹೂ ಕಟ್ಟಿ ಮಾಗುವ ಮುನ್ನವೆ ಬಿಸಿಲ ಝಳಕ್ಕೆ ಸುಟ್ಟು ಹೋಗುತ್ತಿವೆ. ಕೃತಕ ನೀರಾವರಿ ಸೌಲಭ್ಯವಿರದ ಸಾವಿರಾರು ಸಣ್ಣ, ಅತಿಸಣ್ಣ ಬೆಳೆಗಾರರು ಕಾಫಿ ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.