ಸೋಮವಾರಪೇಟೆ: ಮಡಿಕೇರಿ ಕ್ಷೇತ್ರದ ಜನ ಸುಖ, ಶಾಂತಿ, ನೆಮ್ಮದಿಯಿಂದ ಬಾಳಬೇಕಾದರೆ ಅಪ್ಪಚ್ಚು ರಂಜನ್ ಮತ್ತೆ ಅರಿಸಿಬರಬೇಕು, ಆದ್ದರಿಂದ ನಿಮ್ಮಗಳ ಮತಗಳನ್ನು ದಾನವಾಗಿ ಕೊಡಿ ಎಂದು ಕೇಳಿಕೊಂಡು ಬಂದಿದ್ದೇನೆ ಎಂದು ಬಸವಾಪಟ್ಟಣದ ಬಸವಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಅಯೋಜಿಸಲಾಗಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಡಿಕೇರಿ ಶಾಸಕ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರ ಮತ ಯಾಚಿಸಿದ ಸ್ವಾಮೀಜಿಗಳು ಶಾಸಕರ ಮರುಆಯ್ಕೆ ಪ್ರಾಮಾಣಿಕತೆಗೆ ಸಲ್ಲುವ ಗೆಲುವು ಎಂದರು.
ಅರಕಲಗೂಡಿನ ಮಾಜಿ ಶಾಸಕ, ಸಜ್ಜನ ರಾಜಕಾರಣಿ: ಎ. ಟಿ. ರಾಮಸ್ವಾಮಿ ಮತ್ತು ಅಪ್ಪಚ್ಚು ರಂಜನ್ ನನ್ನ ನೆಚ್ಚಿನ ಇಬ್ಬರು ರಾಜಕಾರಣಿಗಳು. ಈ ಇಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡಬೇಕೆಂಬ ನನ್ನ ಬಹುದಿನದ ಅಪೇಕ್ಷೆ ಇಂದು ಈಡೇರಿದೆ ಎಂದರು.
ಅಪ್ಪಚ್ಚು ರಂಜನ್ ಒಂದೇ ಕಪ್ಪು ಚುಕ್ಕೆಯೂ ಇಲ್ಲ
ದ ವ್ಯಕ್ತಿ. ಬಿಜೆಪಿ ಒಂದು ಶಕ್ತಿ. ಈ ವ್ಯಕ್ತಿ ಮತ್ತು ಶಕ್ತಿ ಮತ್ತೆ ಒಂದಾಗಿ ವಿಜಯ ಸಾಧಿಸಬೇಕಿದೆ ಎಂದರು.
ಕೇವಲ ಹತ್ತು ವರ್ಷಗಳ ಹಿಂದೆ ನಾನು ಭಾರತೀಯ ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿ ಇರಲಿಲ್ಲ. ಈಗ ನರೇಂದ್ರ ಮೋದಿಯವರು ನಾನು ಭಾರತೀಯ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ, ಭಾರತ ವಿಶ್ವಗುರು ಆಗುತ್ತಿದೆ ಎಂದರು.
ಶಾಸಕ ಅಪ್ಪಚ್ಚು ರಂಜನ್, ಅರಕಲಗೂಡು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ, ಎಲ್ಲಾ ಬಿಜೆಪಿ ಸ್ಥಳೀಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.