ಸುಳ್ಯ: ಶೋಷಿತ ಸಮುದಾಯದಿಂದ ಮೇಲೆದ್ದು ಬಂದು ಬದುಕಿನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ಜೀವನದಲ್ಲಿ ಏನಾದರೂ ಸಾಧಿಸಿ ಸಾರ್ಥಕ ಬದುಕನ್ನು ರೂಪಿಸಬೇಕೆನ್ನುವ ಛಲವನ್ನು ಇಟ್ಟುಕೊಂಡಿರುವ ವಿದ್ಯಾವಂತ, ಪದವೀಧರ ಸಂಘಟನಾ ಕೌಶಲ್ಯ ಹಾಗೂ ನಯ, ವಿನಯ, ಗೌರವದ ವ್ಯಕ್ತಿತ್ವವನ್ನು ಹೊಂದಿರುವ ಸುಂದರ ಮೇರರವರು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 207ನೇ ಸುಳ್ಯ ಮೀಸಲು ಕ್ಷೇತ್ರದಲ್ಲಿ ಗಾಲಿ ಜನಾರ್ಧನ ರೆಡ್ಡಿ ಇವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಮೊಗೇರ ಸಮುದಾಯದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಸುಂದರ ಮೇರ ಇವರನ್ನು “ ಸರ್ಚ್ ಕೂರ್ಗ್ ಮೀಡಿಯಾ” ವು ಸಂದರ್ಶಿಸಿ ಮಾಹಿತಿಯನ್ನು ಕಲೆಹಾಕಿದ್ದಾಗ, ಶ್ರೀಯುತ ಸುಂದರ ಮೇರರವರು ನಮ್ಮೋಂದಿಗೆ ಹಂಚಿಕೊಂಡ ಮಾತುಗಳನ್ನು ಅವರದೇ ಮಾತಿನಲ್ಲಿ ಕೇಳೊಣ.
“ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ನಿಕಟಪೂರ್ವ ಅಧ್ಯಕ್ಷನಾದ ನಾನು, ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕು ಎಲ್ಲೂರು ಗ್ರಾಮದ ದಿ. ತನಿಯ ಮೊಗೇರ ಮತ್ತು ಗುಲ್ಲಿ ಮುಗೇರ್ತಿ ಇವರ ಮಗನಾಗಿದ್ದೇನೆ. ಬಾಲ್ಯದಲ್ಲಿ ಅನುಭವಿಸಿದ ಅನೇಕ ಅವಮಾನ, ಅಸ್ಪಶ್ಯತೆ, ಅಸಮಾನತೆಗಳನ್ನು ಉಂಡು ನೋವಿನ ಜೀವನವನ್ನು ನಡೆಸಿರುವುದು ಒಂದೆಡೆಯಾದರೆ ಇನ್ನೊಂದೆಡೆ ಬಾಲ್ಯದಲ್ಲಿ ಅನುಭವಿಸಿದ ಆ ಕಷ್ಟದ ದಿನಗಳಲ್ಲಿ ನನಗೆ ಕಲಿಸಿಕೊಟ್ಟ ಜೀವನದ ಪಾಠ, ನನ್ನ ತಂದೆ ತಾಯಿ ಹಿರಿಯರ ಆದರ್ಶಯುತ ಬದುಕಿನ ಮೌಲ್ಯಗಳು ಬಡಿದೆಬ್ಬಿಸಿ ನನ್ನನ್ನು ಓರ್ವ ಹೋರಾಟಗಾರನನ್ನಾಗಿ ರೂಪಿಸಿ ಸಾಧಿಸಬೇಕೆನ್ನುವ ಕಿಚ್ಚನ್ನು ಹಚ್ಚಿ ಹೋರಾಟಕ್ಕೆ ಧುಮುಕುವಂತೆ ಮಾಡಿದೆ.
ಬಾಲ್ಯದ ದಿನಗಳಲ್ಲಿ ತುತ್ತು ಅನ್ನದ ಹುಡುಕಾಟದ ಜೊತೆ ಕಲಿಕೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ನಾನು ಅಕ್ಷರದ ಹಸಿವನ್ನು ಇಂಗಿಸಲು ಕಠಿಣ ಪರಿಶ್ರಮದ ಮೂಲಕ ಪದವಿ ಶಿಕ್ಷಣ, ಕಾನೂನು ಶಿಕ್ಷಣವನ್ನು ಪಡೆದು ಕೊಂಡಿರುವುದು ಅಂದಿನ ದಿನಗಳಲ್ಲಿ ನಾನು ಮಾಡಿದ ದೊಡ್ಡ ಸಾಧನೆಯೇ ಸರಿ. ಮುಂದಕ್ಕೆ 1990ರಲ್ಲಿ ಭಾರತೀಯ ಜೀವ ವಿಮಾ ನಿಗಮ (LIC) ದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ (Development officer) ಕಳೆದ 30 ವರ್ಷಗಳಿಂದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ಹಾಗೂ ಕಳೆದ 4 ವರ್ಷಗಳಲ್ಲಿ ಉಪ ಶಾಖಾಧಿಕಾರಿಯಾಗಿ (Assistant Branch Manager) ಇತ್ತೀಚೆಗೆ ನಿವೃತ್ತಿ ಹೊಂದಿರುತ್ತೇನೆ.
ಸರಕಾರಿ ಸೇವೆಯ ಅವಧಿಯಲ್ಲಿ ವೃತ್ತಿ ಜೀವನದ ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸ್ಕಾಲರ್ ಶಿಫ್, ರಕ್ತದಾನ ಶಿಬಿರ, ಕಲೆ, ಕ್ರೀಡೆ, ಸಂಗೀತ ಹೀಗೆ ಅನೇಕ ರೀತಿಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಜನಸೇವೆಯನ್ನು ಮಾಡಿರುವ ಸಂತೃಪ್ತಿ ನನಗಿದೆ. ದಲಿತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದಲಿತರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಅನೇಕ ಹೋರಾಟವನ್ನು ಸಂಘಟಿಸಿರುವ ಹಿರಿಮೆ ನನ್ನದಾಗಿದೆ. ಇತ್ತೀಚೆಗೆ ಬೆಳ್ತಂಗಡಿಯ ಶಿಬಾಜೆ ಗ್ರಾಮದಲ್ಲಿ ನಡೆದ ಮೊಗೇರ ಯುವಕನ ಅಮಾನುಷ ಕೊಲೆಯ ವಿರುದ್ಧ ನಡೆದಿರುವ ಬೃಹತ್ ಹೋರಾಟದಲ್ಲಿ ಸಕ್ರಿಯ ಭಾಗವಹಿಸುವಿಕೆ, ಪುತ್ತೂರಿನಲ್ಲಿ ನಡೆದ ಮೊಗೇರ ಬಾಲಕಿಯ ಮೇಲೆ ಆಗಿರುವ ದೌರ್ಜನ್ಯದ ವಿರುದ್ಧದ ಹೋರಾಟ………ಹೀಗೆ ಸದಾ ದಲಿತ ಸಮುದಾಯದ ಅಭ್ಯುದಯಕ್ಕಾಗಿ ತೊಡಗಿಸಿಕೊಂಡು ಬಂದಿರುವ ಸಂತೃಪ್ತಿ ನನಗಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1 ರಲ್ಲಿರುವ ಮೀನುಗಾರ ಜಾತಿಯ ಮೊಗೇರರು ನೈಜ ಪ.ಜಾತಿಯ ಮೊಗೇರರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ನಮ್ಮ ಮೀಸಲಾತಿ ಹಕ್ಕನ್ನು ಕಸಿದು ಮಹಾ ಅನ್ಯಾಯ ಎಸಗಿರುತ್ತಾರೆ. ಇದರಿಂದಾಗಿ ನಮ್ಮ ಮುಂದಿನ ಪೀಳಿಗೆಯನ್ನು ಮತ್ತೆ ದಾಸ್ಯಕ್ಕೆ ದೂಡಲು ಯತ್ನಿಸಿರುವುದರ ವಿರುದ್ಧ ರಾಜ್ಯ ಮತ್ತು ಜಿಲ್ಲಾ ಮೊಗೇರ ಸಂಘ ಕೈಗೆತ್ತಿಗೊಂಡಿರುವ ಐತಿಹಾಸಿಕ ಹೋರಾಟದಲ್ಲಿ ನನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ಸಕ್ರಿಯವಾಗಿ ಧುಮುಕಿದ್ದೇನೆ. ಈ ಹೋರಾಟವು ನಿರಂತರವಾಗಿ ಸಾಗುತ್ತಿದ್ದು ಸಂಘದ ಜೊತೆ ಕಾಯ, ವಾಚ, ಮನಸ ತ್ರಿಕರ್ಣ ಪೂರ್ವಕವಾಗಿ ತೊಡಗಿಸುತ್ತಾ ಮೊಗೇರರ ಸಂವಿಧಾನಿಕ ಹಕ್ಕನ್ನು ಸಂರಕ್ಷಿಸಲು ಶ್ರಮಿಸುತ್ತಿದ್ದೇನೆ.
ಇತ್ತೀಚೆಗೆ ರಾಜ್ಯ ಸರಕಾರ ಹೊರಡಿಸಿರುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣದಲ್ಲಿ ಮೊಗೇರ ಜಾತಿ ಸೇರಿದಂತೆ 89 ಪರಿಶಿಷ್ಟ ಜಾತಿಗೆ ಮಹಾ ಅನ್ಯಾಯ ಆಗಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. 101 ಪ.ಜಾತಿಯನ್ನು 4 ಗುಂಪುಗಳನ್ನಾಗಿ ಮಾಡಿದ್ದು, ಈ ಪೈಕಿ 4ನೇ ಗುಂಪಿಗೆ ಒಟ್ಟು ಮೀಸಲಾತಿಯ 17% ಪ್ರಮಾಣದಲ್ಲಿ ಕೇವಲ 1% ಮಾತ್ರ ನಿಗದಿಪಡಿಸಿ ನಮ್ಮನ್ನು ಮೀಸಲಾತಿ ಸೌಲಭ್ಯದಿಂದ ವಂಚಿಸಿರುವ ದುರಂತ ನಡೆದಿದ್ದು, ಸರಕಾರದ ಈ ಆದೇಶವು ನಮಗೆಲ್ಲಾ ಮರಣ ಶಾಸನದಂತ ಪರಿಣಮಿಸಲಿದೆ. ಇದರ ವಿರುದ್ಧ ರಾಜ್ಯ ಮತ್ತು ಜಿಲ್ಲೆಯಲ್ಲಿ ಹೋರಾಟಗಳು ಎದ್ದು ಬಂದಿದ್ದು ಈಗಾಗಲೇ ಪುಣ್ಯಾನಂದ ಪುರಿ ಸ್ವಾಮಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಹೋರಾಟದಲ್ಲಿ ನಾನು ಈ ಜಿಲ್ಲೆಯ ಸಮಸ್ತ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ನ್ಯಾಯಕ್ಕಾಗಿ ಪ್ರತಿಧ್ವನಿ ಎತ್ತಿದ್ದೇನೆ.
ನನ್ನ ಜೀವಮಾನವಿಡೀ ದಲಿತ ಬಂಧುಗಳ ಕಷ್ಟ ದುಃಖಗಳಲ್ಲಿ ಕಳೆದಿದ್ದು ಮುಂದೆಯೂ ನಮ್ಮವರ ಸೇವೆಯನ್ನು ಮಾಡುವ ಮಹದಾಸೆಯನ್ನು ಇಟ್ಟುಕೊಂಡಿದ್ದೇನೆ. ಹೀಗಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರಾತಿನಿಧ್ಯವನ್ನು ಪಡೆಯಲು ಸುಳ್ಯ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ.”
ಸುಳ್ಯ ತಾಲೂಕಿನ ಸುಳ್ಯ ನಗರ ಭಾಗದ ಕೇರ್ಪಳದಲ್ಲಿ ವಾಸವಾಗಿದ್ದು, ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತಿರುವ 61 ವರ್ಷದ ಸುಂದರ ಮೇರರವರ ರಾಜಕಿಯ ಹಾಗೂ ಸಾಮಾಜಿಕ ಜೀವನವು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು “ ಸರ್ಚ್ ಕೂರ್ಗ್ ಮೀಡಿಯಾ” ಬಳಗವು ಹಾರೈಸುತ್ತದೆ.
ಸುಂದರ ಮೇರ ಇವರ ಸಂಪರ್ಕ ಸಂಖ್ಯೆ : 9611102132