ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ಕೆಲವು ಗಂಟೆಗಳು ಮಾತ್ರ ಉಳಿದಿದ್ದು, ಎಲ್ಲಾ ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪರ ಹಾಗೂ ವಿರೋಧ ಕೀಳುಮಟ್ಟದ ಪದಪ್ರಯೋಗ ಹಾಗೂ ವೈಯಕ್ತಿಕ ತೇಜೋವಧೆಗಳು ನಡೆಯುತ್ತಿದೆ ಎಂದರೆ ತಪ್ಪಲ್ಲ, ಇದರಲ್ಲಿ ಯಾವ ರಾಜಕೀಯ ಪಕ್ಷ ಕೂಡ ಹೊರತಾಗಿ ಇಲ್ಲ.
ವ್ಯಕ್ತಿಯಿಂದ ಹಿಡಿದು ಜಾತಿಯವರೆಗೂ, ಜಾತಿಯಿಂದ ಹಿಡಿದು ಧರ್ಮದವರೆಗೂ ಪ್ರಚಾರ ಹಾಗೂ ಅಪಪ್ರಚಾರ ನಡೆಯುತ್ತಿದೆ ಎಂದರೆ ತಪ್ಪಲ್ಲ. ಕೆಲವರು ಚುನಾವಣೆಯನ್ನು ಚುನಾಣೆಯಾಗಿ ತೆಗೆದುಕೊಳ್ಳದೆ ತಮ್ಮ ತಮ್ಮ ಪ್ರತಿಷ್ಠೆ ಎಂಬಂತೆ ತೆಗೆದುಕೊಂಡು ತಮ್ಮ ಅಭ್ಯರ್ಥಿಯ ಪರ ಹಾಗೂ ಎದುರಾಳಿ ಅಭ್ಯರ್ಥಿಗಳ ವಿರುದ್ಧ ಒಂದಿಷ್ಟು ವಾಸ್ತವ ಹಾಗೂ ಮತ್ತೊಂದಿಷ್ಟು ಕಟ್ಟುಕಥೆಗಳನ್ನು ಎಣೆದು ಪರಸ್ಪರ ವಾಗ್ದಾಳಿ ಹಾಗೂ ಅಪಪ್ರಚಾರಕ್ಕೆ ತೊಡಗಿರುವುದು ಕಂಡುಬಂದಿದೆ.
ಕೊಡವ ಜನಾಂಗ ಹೆಚ್ಚಾಗಿರುವ ಭಾಗದಿಂದ ಗೌಡ ಅಭ್ಯರ್ಥಿಯನ್ನು, ಗೌಡ ಜನಾಂಗದ ಪ್ರಭಾವ ಅಧಿಕವಾಗಿರುವ ಭಾಗದಿಂದ ಕೊಡವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕೊಡಗು ಜಾತ್ಯಾತೀತ ನೆಲೆಗಟ್ಟಿನಲ್ಲಿರುವ ಜಿಲ್ಲೆ, ಇಲ್ಲಿ ಜಾತಿಯ ಆಧಾರದಲ್ಲಿ ಚುನಾವಣೆ ನಡೆಯುವುದಿಲ್ಲ, ವ್ಯಕ್ತಿ, ಪಕ್ಷ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ನಡೆಯುತ್ತದೆ ಎಂದು ಇಡೀ ದೇಶಕ್ಕೆ ತೋರಿಸಿಕೊಟ್ಟಿರುವ ಜಿಲ್ಲೆಯಲ್ಲಿ ಇದೀಗ ಜಾತಿ ಜಾತಿಗಳ ನಡುವೆ ಕಿತ್ತಾಟ ನಡೆಯುತ್ತಿದೆ ಎನ್ನುವುದಕ್ಕಿಂತ ಒಂದು ಪ್ರಬಲ ಸಮುದಾಯದ ಒಳಗೆ ಕಿತ್ತಾಟ ನಡೆಯುತ್ತಿದೆ ಪರಸ್ಪರ ವಾಕ್ಸಮರ ನಡೆಯುತ್ತಿದೆ, ವೈಯುಕ್ತಿಕ ತೇಜೋವಧೆ ನಡೆಯುತ್ತಿದೆ. ಚುನಾವಣೆ ನಂತರವು ಇದು ಹೀಗೆ ಮುಂದುವರೆದರೆ ಹೇಗೆ ಎಂಬ ಭಯ ಎಲ್ಲಾರನ್ನು ಕಾಡುತ್ತಿದೆ.
ಕೊಡಗಿನಲ್ಲಿ ಮೂರಿದ್ದ ವಿಧಾನಸಭಾ ಕ್ಷೇತ್ರ ಎರಡಾಯಿತು. ಬಹುಷಃ ಇದೇ ರೋಷ ,ಆವೇಶ, ಕಿತ್ತಾಟ, ಅರಚಾಟ ಈ ಕ್ಷೇತ್ರ ಪುನರ್ವಿಂಗಡಣೆ ಸಮಯದಲ್ಲಿ ಮಾಡಿದ್ದರೆ ಇಂದು ಇಷ್ಟೊಂದು ಕಿತ್ತಾಟ ಇರುತ್ತಿರಲಿಲ್ಲ ಕಾಣುತ್ತೆ. ಮೂರು ವಿಧಾನಸಭಾ ಕ್ಷೇತ್ರವನ್ನು ಹಾಗೇ ಉಳಿಸಿಕೊಳ್ಳಬಹುದಿತ್ತು, ತಮಗೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಹಾಗೂ ಒಂದಷ್ಟು ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಕ್ಷೇತ್ರದ ವ್ಯಾಪ್ತಿಯನ್ನು ತೆಗೆದುಕೊಳ್ಳದೆ ಜನಸಂಖ್ಯೆ ಆಧಾರವನ್ನು ತೆಗೆದುಕೊಂಡು ಕ್ಷೇತ್ರ ಪುನರ್ವಿಂಗಡಣೆ ಮಾಡಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂದರೆ ತಪ್ಪಲ್ಲ. ಇನ್ನಾದರೂ ನಾವೆಲ್ಲಾ ಒಂದಾಗಿ ಮರಳಿ ಮೂರು ಕ್ಷೇತ್ರಗಳನ್ನು ಪಡೆಯಲು ಹೋರಾಟ ಮಾಡಬೇಕು ಹೊರತು, ಪರಸ್ಪರ ಈ ರೀತಿಯ ಕಚ್ಚಾಟ ಸುಸಂಸ್ಕೃತ ಜಿಲ್ಲೆ ಎಂದು ಹೆಸರಾಗಿರುವ ಕೊಡಗಿಗೆ ಶೋಭೆ ತರುವುದಲ್ಲ.
ಮತದಾನ ಎನ್ನುವುದು ಅವರವರಿಗೆ ಬಿಟ್ಟಿರುವ ವಿಚಾರ, ಈಗಾಗಲೇ ತಮ್ಮ ಓಟು ಯಾರಿಗೆ ಏನೂ ಎಂದು ಪ್ರಬುದ್ಧ ಮತದಾರ, ಅದರಲ್ಲೂ ಓದು ಬರಹ ಬರುವ ಮತದಾರ ನಿರ್ಧಾರ ಮಾಡಿ ಆಗಿದೆ. ನೀವು ಎಷ್ಟೇ ಸಾಮಾಜಿಕ ಜಾಲತಾಣಗಳ ಕಿರುಚಾಟ, ಅರಚಾಟ ಮಾಡಿದ್ದರು ಪ್ರಯೋಜನವಿಲ್ಲ. ಇದರಿಂದ ಜಿಲ್ಲೆಯ ಜನರು ನೆಮ್ಮದಿ ಹಾಳಾಗುತ್ತದೆ, ಪರಸ್ಪರ ವೈಮನಸ್ಸು ಮೂಡುತ್ತದೆ ಹೊರತು ಪ್ರಯೋಜನ ಶೂನ್ಯ.
ಉದಾಹರಣೆಗೆ ನಮ್ಮ ಮನೆಯ ಒಳಗೆ ಇರುವ ಅಪ್ಪ-ಅಮ್ಮ, ಅಣ್ಣಾ-ತಮ್ಮ, ಅಕ್ಕಾ-ತಂಗಿ, ಸೊಸೆ-ನಾದಿನಿ, ಬಾವಾ-ಮೈದುನ ಹೀಗೆ ಮನೆಯೊಳಗಿರುವ ಅಥವಾ ತಮ್ಮ ಸಂಸಾರದ ಒಳಗಿನ ಓಟನ್ನೇ ತಮಗೆ ಬದಲಾಯಿಸಲು ಸಾಧ್ಯವಿಲ್ಲ ಇದು ಹಲವಾರು ಮಂದಿಗೆ ಅನುಭವ ಆಗಿದೆ. ಹೀಗಿರುವಾಗ ಈ ಶೋಷಿಯಲ್ ಮೀಡಿಯಾಗಳಲ್ಲಿ ಈ ಕಿರುಚಾಟ, ಅರಚಾಟ, ತೇಜೋವಧೆಗೆ ಯಾರು ತಾನೇ ಮಣೆ ಹಾಕುತ್ತಾರೆ ಎಂದು ಯೋಚಿಸಬೇಕಿದೆ.
ಅವಕಾಶ ನಿಮ್ಮದು, ಆಯ್ಕೆಯೂ ನಿಮ್ಮದು, ಯಾವುದೇ ಅಪಪ್ರಚಾರ, ಉದ್ವೇಗ, ಸೇಡು ಹಾಗೂ ಒಳಸಂಚಿಗೆ ಬಲಿಯಾಗಿದೆ ಹತ್ತು ಬಾರಿ ಯೋಚಿ ಮತದಾನ ಮಾಡಿ. ಮತದಾನದ ನಂತರ ದಯವಿಟ್ಟು ಎಲ್ಲಾವನ್ನು ಮರೆತು ಒಂದಾಗಿ ಹೆಜ್ಜೆ ಹಾಕೋಣ ಕೊಡಗು ಕೇವಲ ವೀರ ಶೂರರು ನಾಡು ಮಾತ್ರವಲ್ಲ ಸುಸಂಸ್ಕೃತರ ನೆಲೆಬೀಡು. ಹಾಗೇ ಮುಂದಿನ ದಿನಗಳಲ್ಲಿ ಮೂರು ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಹಾಗೂ ಕೊಡಗಿಗೆ ಸೀಮಿತವಾದ ಸ್ವತಂತ್ರ ಎಂ.ಪಿ ( ಸಂಸದರು) ಬೇಕು ಎಂದು ಹೋರಾಟ ಮಾಡೋಣ. ಜನಸಂಖ್ಯೆ ಆದಾರಕ್ಕಿಂತ ಕೊಡಗು ಗುಡ್ಡಗಾಡು ಪ್ರದೇಶ ಇದರ ವಿಸ್ತೀರ್ಣ ಹೆಚ್ಚು ಮತ್ತು ಎಲ್ಲಾ ಭಾಗಕ್ಕೂ ಜನಪ್ರತಿನಿಧಿಗಳಿಗೆ ತಲುಪಲು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿಗೆ ಹೆಚ್ಚುವರಿ ಶಾಸಕರು ಹಾಗೂ ಕೊಡಗಿಗೆ ಸೀಮಿತವಾದ ಸಂಸದರ ಅಗತ್ಯತೆ ಹೆಚ್ಚಾಗಿದೆ ಇದನ್ನು ನಾವು ಕೆಳೋಣ ಏನಂತೀರಾ….?
✍️ಚಮ್ಮಟೀರ ಪ್ರವೀಣ್ ಉತ್ತಪ್ಪ
📲9880967573