ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ

ಮಡಿಕೇರಿ ಮೇ.18: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ’ ಪ್ರಯುಕ್ತ ‘ವಸ್ತು ಸಂಗ್ರಹಾಲಯಗಳು ಮತ್ತು ಸುಸ್ಥಿರತೆ ಮತ್ತು ಯೋಗಕ್ಷೇಮ’ ಎಂಬ ಘೋಷವಾಕ್ಯದಡಿ ಕೊಡಗು ಜಿಲ್ಲೆಯ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗುರುವಾರ ಚಾಲನೆ ನೀಡಿದರು.
ನಗರದ ಕೋಟೆ ಆವರಣದಲ್ಲಿರುವ ಸರ್ಕಾರಿ ಸಂಗ್ರಹಾಲಯ ಬಳಿ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನ ಉದ್ಘಾಟಿಸಿದರು. ವೈದ್ಯರು ಹಾಗೂ ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಡಾ.ಎಂ.ಜಿ.ಪಾಟ್ಕರ್, ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಪಿ.ಕೆ.ಕೇಶವ ಮೂರ್ತಿ, ಪೊನ್ನಚ್ಚನ ಮಧು ಸೋಮಣ್ಣ ಇತರರು ಪಾಲ್ಗೊಂಡಿದ್ದರು.
50 ವರ್ಷಗಳ ಹಿಂದೆ ಬಳಸುತ್ತಿದ್ದ ಕಂಚಿನ ಪದಾರ್ಥಗಳಾದ ತಟ್ಟೆ, ಲೋಟ, ಕಡಾಯಿ, ಪಾವು, ಸೇರು, ಕಂಚಿನ ತಪ್ಲ, ಕಂಚಿನ ಚೆಂಬು, ಪೆಟ್ಟಿಗೆ, ಊಟದ ಬಾಕ್ಸ್, ಹಾಗೆಯೇ ಮರದ ವಸ್ತುಗಳಾದ ಸೇವಿಗೆ ಮಣೆ, ಬುಟ್ಟಿ, ತಂಬಿಗೆ, ಕಳಸ, ನೀರಿನ ಫಿಲ್ಟರ್, ಮರದ ದುಡಿ, ಕಂಜಿಕಲ, ಕಳಿಕೋಲ್, ಎಲ್‍ತಟ್ಟೆ, ಪಲಿಯ, ಪೋಂದಾಯ ಚಂದುಕ, ಕುರಿ ಕುಟ್ಟ್, ಚೇಕಲ, ಉದಿ, ಪರೆ, ಗುಜಾಯಿ, ಮೀಂಬಾಳ್ ಹೀಗೆ ಹಲವು ವಸ್ತುಗಳು ಗಮನ ಸೆಳೆದವು.
ಸೀಮೆಎಣ್ಣೆ ದೀಪ, ಕ್ಯಾಮರಾ, ತಾಮ್ರದ ಚೆಂಬು, ಲೋಟ, ಚೆಂಬು, ತೂಕದ ಮಾನ, ಮಂಗಳಾರತಿ ಮಾಡುವುದು, ಬುದ್ದನ ವಿಗ್ರಹ, ಆನೆ, ಹಿತ್ತಾಳೆ ಬಿಂದಿಗೆ, ಮೊಳಕೆ ಕಾಳುಗಳನ್ನು ಇಡಲು ಬಳಸುತ್ತಿದ್ದ ಪಾತ್ರೆ, ಹೂವಿನ ಬುಟ್ಟಿ, ದೀಪಗಳು, ಕಾಯಿ ತುರಿಯುವ ಮಣೆ, ಮರದ ಕುರ್ಚಿ, ಬುಟ್ಟಿಗಳು, ಕಡುಬ ಪಾತ್ರೆ, ಮರದ ಹೂವಿನ ಬುಟ್ಟಿ, ನೀರಿನಲ್ಲಿ ಹೂವು ಇಡುವ ಪಾತ್ರೆ, ಮಜ್ಜಿಗೆ ಕಡೆಯುವ ಪಾತ್ರೆ, ಊಟ, ಟೀ, ಗಂಜಿ ಪಾತ್ರೆ, ದೂಪ ಹಾಕುವ ಪಾತ್ರೆ, ಬ್ಯಾಗ್, ಸಾರಥಿ, ತೊಲ ಹೀಗೆ ಹಲವು ವಸ್ತುಗಳು ಗಮನ ಸೆಳೆದವು. ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ, ಇತರರು ಇದ್ದರು.