ದೇವಲೋಕವನ್ನು ಸೃಷ್ಟಿಸಿದ ಹಬ್ಬದ ಮಹಾಪೂಜೆಯ ಕೊನೆಯ ಕ್ಷಣ.!!!
ಪೊನ್ನಂಪೇಟೆ: ಪೊನ್ನಂಪೇಟೆ ತಾಲ್ಲೂಕಿನ ಬೊಟ್ಟಿಯತ್ ನಾಡ್ ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದು ಹಬ್ಬದ ಕೊನೆಯ ದಿನವಾದ ಭಾನುವಾರ ಸಂಜೆ ಮಹಾಪೂಜೆಯ ವೇಳೆ ಅಚ್ಚರಿಯ ಹಾಗೂ ವಿಸ್ಮಯ ಎಂಬಂತೆ ಒಂದಷ್ಟು ಸಮಯ ಭಾರಿ ಮಿಂಚು ಹಾಗೂ ಗುಡುಗು ಆರ್ಭಟಿಸಿ ಇನ್ನೇನು ಮಳೆ ಬಿದ್ದೇ ಬಿಡುತ್ತೆ ಎಂಬಂತಿದ್ದ ವಾತಾವರಣ ಕೆಲವೇ ಸಮಯದಲ್ಲಿ ತಿಳಿಗೊಂಡದ್ದು ವಿಶೇಷ. ಇದು ದೇವರ ಮಹಿಮೆಯಲ್ಲದೇ ಬೇರೆನು ಎಂಬಂತೆ ನೆರೆದಿದ್ದ ಭಕ್ತರು ಮಾತನಾಡುತ್ತಿದ್ದರು.
ಹಬ್ಬದ ಎರಡನೇ ದಿನವಾದ ಭಾನುವಾರ ಹಬ್ಬವೆಲ್ಲಾ ಮುಗಿದು ಇನ್ನೇನೂ ಮಹಾಮಂಗಳಾರತಿ ಆಗಬೇಕು ಎನ್ನುವಷ್ಟರಲ್ಲಿ ಕಪ್ಪು ಮೋಡ ಆವರಿಸಿ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿತು. ಇನ್ನೇನು ಭಾರಿ ಮಳೆ ಬೀಳುವ ಸೂಚನೆಯನ್ನು ನೀಡಿತಾದರೂ ಕೊನೆಯವರೆಗೂ ವರುಣದೇವನಿಗೆ ಕೊಡೆ ಹಿಡಿದಂತೆ ಕಂಡ ಆ ಕ್ಷಣ ಪ್ರಕೃತಿ ಆರಾಧಕರಿಗೆ ರಸದೌತಣವನ್ನು ನೀಡಿತು ಎಂದರೆ ತಪ್ಪಲ್ಲ. ಇತ್ತಾ ಮಹಾಮಂಗಳಾರತಿ ಕೊನೆಯ ಕ್ಷಣವಾದ ಮಹಾಪೂಜೆ ಸಂಪನ್ನಗೊಳ್ಳುತ್ತಿದ್ದಂತೆ ಸಾಂಪ್ರದಾಯಿಕ ವಾಲಗ, ಡಮರುಗ, ಜಾಗಟೆ, ಶಂಖ ಹಾಗೂ ಗಂಟೆಯ ನಾದದೊಂದಿಗೆ ಒಳಗೆ ಮಹಾಮಂಗಳಾರತಿ ಹೊರಗೆ ಮೈಮೇಲೆ ಬರುವ ದೇವರ ಆರ್ಭಟದ ನಡುವೆ ಕೆಲವು ಸಮಯ ಇನ್ನೇನು ಮಳೆ ಬಿದ್ದೇ ಬಿಟ್ಟಿತು ಎಂಬಂತೆ ಆಕಾಶದಲ್ಲಿ ಮೂಡಿಬಂದ ಭಯಂಕರ ಗುಡುಗು ಮಿಂಚು ಒಂದು ಕ್ಷಣ ಕಣ್ಣಿನ ಮುಂದೆ ದೇವರ ಸಿನಿಮಾ ನಡೆಯುತ್ತಿದೆಯೇನೊ ಎಂಬಂತೆ, ಆ ಕ್ಷಣ ದೇವಲೋಕದ ಸುಂದರ ಚಿತ್ರಣವನ್ನು ಸೃಷ್ಟಿಸಿತು ಎಂದರೆ ತಪ್ಪಲ್ಲ. ಗುಡುಗು ಮಿಂಚಿಗೆ ಭಯಪಡದೆ ಪ್ರಕೃತಿಯನ್ನು ಆರಾಧಿಸಿ ಆಸ್ವಾದಿಸುವ ಮಂದಿಗೆ ಈ ಕ್ಷಣ ಮನಸು ಪುಳಕಿತಗೊಂಡಿತು ಎಂದರೆ ತಪ್ಪಲ್ಲ. ಹಳ್ಳಿಗಟ್ಟು ವ್ಯಾಪ್ತಿಯನ್ನು ಹೊರತುಪಡಿಸಿ ಕೇವಲ ಒಂದೆರಡು ಕಿ.ಮಿ ದೂರದಿಂದಾಚೆ ಭಯಂಕರ ಗಾಳಿ ಮಳೆ ಬೀಳುತ್ತಿದೆ ಎಂಬ ಸುದ್ದಿ ಬಂದರೂ ಊರಿನೊಳಗೆ ದೇವರು ಕೊಡೆ ಹಿಡಿದಂತೆ ಆಕಾಶದಿಂದ ಬೀಳುತಿದ್ದ ಮಳೆ ಅರ್ಥ ದಾರಿಯಲ್ಲಿ ಬಂದು ನಿಂತಂತೆ ಕಂಡದ್ದು ವಿಶೇಷವಾಗಿತ್ತು. ಇದು ದೇವರ ಪವಾಡವಲ್ಲದೆ ಬೇರೇನೂ ಎಂದು ಹಲವಾರು ಭಕ್ತರು ಮಾತನಾಡಿಕೊಳ್ಳುತ್ತಿದ್ದರು.
ಒಂದು ದಿನದ ಹಿಂದೆ ಶನಿವಾರ ಕೂಡ ಇದೇ ಅನುಭವವಾಗಿದ್ದು ಇಲ್ಲಿನ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಪೂಜೆ ಆಗುತ್ತಿದ್ದಂತೆ ಗುಡುಗು ಮಿಂಚಿನೊಂದಿಗೆ ಬಂದ ಮಳೆ ಸುತ್ತಾಮುತ್ತಲ ಪ್ರದೇಶಕ್ಕೆ ಹೊಡೆಯಿತಾದರೂ ಹಳ್ಳಿಗಟ್ಟು ವ್ಯಾಪ್ತಿಯಿಂದ ದೂರ ಇದ್ದದ್ದು ಕೂಡ ಭಕ್ತರಲ್ಲಿ ಹೆಚ್ಚು ನಂಬಿಕೆ ಮೂಡುವಂತೆ ಮಾಡಿತು. ಶನಿವಾರ ಹಾಗೂ ಭಾನುವಾರ ವಿಜೃಂಭಣೆಯಿಂದ ನಡೆದ ಹಳ್ಳಿಗಟ್ಟು ಬೋಡ್ ನಮ್ಮೆ ಸೋಮವಾರ ಚಮ್ಮಟೀರ ಹಾಗೂ ಮಚ್ಚಿಯಂಡ ಬಲ್ಯಮನೆಯಲ್ಲಿ ಗುರುಕಾರೋಣ ಹಾಗೂ ಮಂದಣಮೂರ್ತಿಯನ್ನು ಹಾಡುವ ಮೂಲಕ ವಾರ್ಷಿಕ ಬೇಡು ಹಬ್ಬಕ್ಕೆ ಅಂತಿಮ ತೆರೆ ಎಳೆಯಲಾಯಿತು.
ಇದಕ್ಕೂ ಮುನ್ನ ಶನಿವಾರ ಮಧ್ಯಾಹ್ನ ಊರು ತಕ್ಕರಾದ ಚಮ್ಮಟೀರ ಕುಟುಂಬದಿಂದ ಪೊಲವಂದೆರೆ ಹೊರಡುವ ಮೂಲಕ ವಾರ್ಷಿಕ ಬೋಡ್ ನಮ್ಮನೆಗೆ ಚಾಲನೆ ದೊರೆತು ಸಂಜೆ ಗುಂಡಿತ್ ಅಯ್ಯಪ್ಪ ದೇವರ ಅವುಲ್ ಬಳಿಕ ರಾತ್ರಿ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಲ್ಲಿ ಬೋಡ್ ನಮ್ಮೆಯ ಮನೆ ಮನೆ ಕಳಿ ಗಮನ ಸೆಳೆಯಿತು. ಭಾನುವಾರ ಮಧ್ಯಾಹ್ನ ಚಮ್ಮಟೀರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ, ಮೂಕಳೇರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ ಒಂದೆಡೆ ಸೇರಿ ಸಂಭ್ರಮಿಸಿದ್ದರು. ಈ ಸಂದರ್ಭದಲ್ಲಿ ಹತ್ತಿರದ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಎರಚಾಡಿಕೊಂಡು ಊರಿನವರು ಸಂಭ್ರಮಿಸಿದ್ದರೆ, ಹತ್ತಾರು ವಿವಿಧ ವೇಷಧಾರಿಗಳು ಗಮನ ಸೆಳೆದರು. ಬಳಿಕ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ವಾರ್ಷಿಕ ಬೋಡ್ ನಮ್ಮೆ ಸಂಪನ್ನಗೊಂಡಿತು.