ಮೇ, 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಗರದ ಹಾಪ್‍ಕಾಮ್ಸ್ ಆವರಣದಲ್ಲಿ ‘ಮಾವು ಮತ್ತು ಹಲಸು’ ಮೇಳ

ಮಡಿಕೇರಿ ಮೇ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಇದೇ ಮೇ, 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಗರದ ಹಾಪ್‍ಕಾಮ್ಸ್ ಆವರಣದಲ್ಲಿ ‘ಮಾವು ಮತ್ತು ಹಲಸು’ ಮೇಳ ನಡೆಯಲಿದ್ದು, ಈ ಅವಕಾಶವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಹಾಪ್‍ಕಾಮ್ಸ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾವು ಮತ್ತು ಹಲಸು ಮೇಳಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಹೀಗೆ ವಿವಿಧ ಜಿಲ್ಲೆಗಳಿಂದ ಮಾವು ಬೆಳೆಗಾರರು ಮಾವು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಹಾಪ್‍ಕಾಮ್ಸ್ ಆವರಣದಲ್ಲಿ ಎರಡನೇ ಬಾರಿ ಮಾವು ಮತ್ತು ಹಲಸು ಮೇಳ ನಡೆಯಲಿದೆ. ಕಳೆದ ಬಾರಿ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಪರಿಚಯಿಸುವುದು, ಜೊತೆಗೆ ಉತ್ತಮ ಗುಣಮಟ್ಟದ ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಕೊಳ್ಳಲು ಅವಕಾಶ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಾವು ಮತ್ತು ಹಲಸು ಬೆಳೆಗಾರರಿಗೂ ನಷ್ಟವಾಗದೆ, ಗ್ರಾಹಕರಿಗೂ ಹೊರೆಯಾಗದೆ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ ಅವರು ಮಾತನಾಡಿ ಕಳೆದ ಬಾರಿ ಮಾವು ಮೇಳವನ್ನು ಆಯೋಜಿಸಲಾಗಿತ್ತು, 15 ಮಳಿಗೆ ತೆರೆಯಲಾಗಿತ್ತು. ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು ಎಂದರು.
ಕೊಡಗು ಜಿಲ್ಲೆಯಲ್ಲಿನ ಮಾವು ಮತ್ತು ಹಲಸು ಇತರೆ ಹಣ್ಣುಗಳನ್ನು ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ. ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವನ್ನು ಕೊಳ್ಳಬಹುದಾಗಿದೆ. ಗ್ರಾಹಕರು ಮತ್ತು ಬೆಳೆಗಾರರ ನಡುವೆ ಹಾಪ್‍ಕಾಮ್ಸ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್ ಅವರು ಗ್ರಾಹಕರು ನೈಸರ್ಗಿಕವಾಗಿ ಮಾಗಿಸಿದ ಮಾವು ಹಣ್ಣನ್ನು ಕೊಳ್ಳಬಹುದಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಹಲಸು ಬೆಳೆಗಾರರು ಆಗಮಿಸಿ ಹಲಸು ಮಾರಾಟ ಮಾಡಲಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಗ್ರಾಹಕರಿಗೆ ನೇರವಾಗಿ ಕೋಲಾರ, ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು ಭಾಗಗಳಿಂದ ಮಾವು ಬೆಳೆಗಾರರನ್ನು ಆಹ್ವಾನಿಸಿ ವಿವಿಧ 15 ರಿಂದ 20 ಮಾವಿನ ತಳಿಗಳನ್ನು ಪರಿಚಯಿಸುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜಿಸಲಾಗಿದೆ ಎಂದರು.
ಮಾವು ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸುವ ಹಣ್ಣಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೇಳವನ್ನು ಹೆಚ್ಚು ಆಕರ್ಷಣೆಗೊಳಿಸಲು ವಿವಿಧ ಹಲಸಿನ ತಳಿಗಳನ್ನು ಸಹ ಪರಿಚಯಿಸುವ ಉದ್ದೇಶವಿದೆ. ಇದರ ಜೊತೆಗೆ ಮಾವು/ ಹಲಸಿನಿಂದ ಸಂಸ್ಕರಿಸಿದ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಮತ್ತು ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಗಿಡಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ರಿಂದ 25 ಮಳಿಗೆಗಳನ್ನು ತೆರೆಯಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಹಾಯಕ ನಿರ್ದೇಶಕರಾದ ಬಿ.ಎಸ್.ಮುತ್ತಪ್ಪ ಇತರರು ಇದ್ದರು.
ಸುದ್ದಿಗೋಷ್ಠಿ ನಂತರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹಾಪ್‍ಕಾಮ್ಸ್ ಜಾಗವನ್ನು ಪರಿಶೀಲಿಸಿದರು. ಬಿದ್ದಾಟಂಡ ರಮೇಶ್ ಚಂಗಪ್ಪ ಇತರರು ಇದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮುಂಗಾರು ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಮುಂದಿನ ತಿಂಗಳು ಎನ್‍ಡಿಆರ್‍ಎಫ್ ತಂಡ ಜಿಲ್ಲೆಗೆ ಆಗಮಿಸಲಿದೆ. ಆ ಸಂದರ್ಭದಲ್ಲಿ ಆಯ್ದ ಸ್ಥಳದಲ್ಲಿ ಅಣಕು ಪ್ರದರ್ಶನ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿವರಿಸಿದರು.

0 0 votes
Article Rating
Subscribe
Notify of
guest
0 Comments
Inline Feedbacks
View all comments