ಆಧುನೀಕರಣ ಪ್ರಕ್ರಿಯೆಯತ್ತ ಕೊಡಗು ಕೃಷಿ ಇಲಾಖೆ
* ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ. ಶೇಖ್ ಮಾಹಿತಿ
* ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಸಂವಾದ
ಕುಶಾಲನಗರ: ಆಧುನೀಕರಣ ಪ್ರಕ್ರಿಯೆಯತ್ತ ಕೊಡಗು ಜಿಲ್ಲಾ ಕೃಷಿ ಇಲಾಖೆ ದಾಪುಗಾಲಿಟ್ಟಿದ್ದು, ಜಿಲ್ಲೆಯ ರೈತ ಸಮುದಾಯ ಇದರ ಸದುಪಯೋಗ ಪಡೆಯುವುದರೊಂದಿಗೆ ಯಾಂತ್ರೀಕೃತ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ. ಶೇಖ್ ಕರೆ ನೀಡಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಕುಶಾಲನಗರ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಇಲ್ಲಿ ಎಲ್ಲ ರೀತಿಯ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಲು ಸಾಧ್ಯವಿಲ್ಲ. ಭತ್ತದ ಕೃಷಿಯು ಲಾಭದಾಯಕವಲ್ಲ. ವನ್ಯ ಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕೊಡಗಿನಲ್ಲಿ ಹಿನ್ನೆಡೆ ಕಂಡಿದೆ ಎಂದು ಅವರು ವಿಷಾದಿಸಿದರು.
ಒಂದು ಕಾಲದಲ್ಲಿ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಪ್ರಸ್ತುತ 28 ಸಾವಿರ ಹೆಕ್ಟೇರ್ ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬರುವಂತಹ ತಳಿಗಳನ್ನು ಉಪಯೋಗಿಸಿ ಅದರೊಂದಿಗೆ ಶೇ.90ರಷ್ಟು ಯಂತ್ರೋಪಕರಣಗಳನ್ನು ಬಳಸುವ ಮೂಲಕ ಭತ್ತದ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು ಸಾಧ್ಯವಿದೆ ಎಂದು ಅವರು ಖಚಿತವಾಗಿ ನುಡಿದರು.
ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು ಮಾತನಾಡಿ ಕೃಷಿ ಇಲಾಖೆಯು ಹೆಚ್ಚು ಆಧುನೀಕರಣದತ್ತ ಸಾಗಿದ್ದು ಇಲಾಖೆಯಲ್ಲಿ ಎಲ್ಲವೂ ಆನ್ಲೈನ್ ಪ್ರಕ್ರಿಯೆ ಮತ್ತು ಕ್ಯೂಆರ್ ಕೋಡ್ ಬಳಸಿ ವ್ಯವಹಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ಮೋಸ ಹಾಗೂ ಕಳಪೆ ಗುಣಮಟ್ಟದ ಸೇವೆಗಳನ್ನು, ವಸ್ತು ಪರಿಕರಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಓರ್ವ ರೈತನಿಗೆ ಒಂದು ಬಾರಿ ನೀಡಲಾದ ಸಬ್ಸಿಡಿ ಮತ್ತು ಇತರೆ ರಿಯಾಯಿತಿಗಳು ಷರತ್ತಿಗೆ ಒಳಪಟ್ಟಿರುವುದರಿಂದ ಕೆಲವೊಮ್ಮೆ ಗೊತ್ತಿದ್ದು, ಗೊತ್ತಿಲ್ಲದೆ ಕೃಷಿ ಇಲಾಖೆ ಮೇಲೆ ಅಪವಾಧ ಹೊರಿಸಲಾಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದರು.
ಭತ್ತದ ಕೃಷಿಗೆ ಎಕರೆಯೊಂದಕ್ಕೆ ರು.10 ಸಾವಿರ ಬೆಂಬಲ ಬೆಲೆ ಸಾಕಷ್ಟು ಸಮಯದಿಂದ ನೆನೆಗುದಿಗೆ ಬಿದ್ದಿದ್ದು, ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಪ್ರಕ್ರಿಯೆ ಆಗಿದ್ದು, ಭತ್ತದ ಕೃಷಿಯಲ್ಲಿ ಕೆಲವು ತಳಿಗಳಿಗೆ ಅಪಾರ ಬೇಡಿಕೆ ಇದ್ದು, ಅದರಲ್ಲಿ ರಾಜಮುಡಿ ತಳಿಯು ಅಗ್ರಗಣ್ಯವಾಗಿದೆ. ಯಾವುದೇ ಬೆಳೆಯನ್ನು ಬೆಳೆದಾಗ ಅದಕ್ಕೆ ಮಾರುಕಟ್ಟೆ ವ್ಯವಸ್ಥೆಯನ್ನು ಕಂಡುಕೊAಡಾಗ ಭತ್ತದ ಕೃಷಿ ಸೇರಿದಂತೆ ಯಾವುದೇ ಕೃಷಿ ಲಾಭದಾಯಕವಾಗುತ್ತದೆ ಎಂದು ತಿಳಿಸಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ ಪತ್ರಕರ್ತರ ಸಂಘ, ಅಭಿವೃದ್ಧಿ ದೃಷ್ಠಿಕೋನವನ್ನು ಇಟ್ಟುಕೊಂಡು ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಪತ್ರಕರ್ತರು ವಿವಿಧ ಇಲಾಖೆಗಳು ಮತ್ತು ಕೃಷಿಕರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿ ಈಗಾಗಲೇ ಸರಣಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ತಾಲೂಕು ಸಂಘದ ಕಾರ್ಯಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ತಾಲೂಕು ಸಂಘದ ಖಜಾಂಚಿ ಎಂ.ಎಂ. ಅಶ್ವತ್ಥ್ ಸ್ವಾಗತಿಸಿ ಸದಸ್ಯರಾದ ನವೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಭತ್ತ ಬಿತ್ತನೆ ಬೀಜ ದಾಸ್ತಾನು:
ಈಗಾಗಲೇ ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗುತ್ತಿದ್ದು, ರಾಜ್ಯ ಭತ್ತದ ಬೀಜ ನಿಗಮದಿಂದ ತನು, ಬಿಆರ್ 2655, ಐಆರ್64, ಇಂಟಾನ್, ತುಂಗಾ ಮತ್ತು ಆರ್ ಎನ್ ಆರ್ 15048 ಮತ್ತು ಅತೀರಾ ಸೇರಿ ಮಡಿಕೇರಿ ತಾಲೂಕಿಗೆ 100 ಕ್ವಿಂಟಾಲ್, ಸೋಮವಾರಪೇಟೆ ತಾಲೂಕಿನ 814 ಕ್ವಿಂಟಾಲ್ ಹಾಗೂ ವಿರಾಜಪೇಟೆ ತಾಲೂಕಿಗೆ 804 ಕ್ವಿಂಟಾಲ್ ದಾಸ್ತಾನು ಮಾಡಲಾಗಿದ್ದು, ಆಗಸ್ಟ್ ವರೆಗೂ ಬಿತ್ತನೆ ಬೀಜ ನೀಡಲಾಗುವುದು. ಮುಸುಕಿನ ಜೋಳ ಸೋಮವಾರಪೇಟೆ ತಾಲೂಕಿಗೆ 44.40 ಕ್ವಿಂಟಾಲ್ ದಾಸ್ತಾನಿದೆ ಎಂದು ಶಬಾನ ತಿಳಿಸಿದರು.
ಕೃಷಿ ಇಲಾಖೆಯಲ್ಲಿ ಶೇ.80 ರಷ್ಟು ಹುದ್ದೆ ಖಾಲಿ!:
ಕೊಡಗು ಜಿಲ್ಲಾ ಕೃಷಿ ಇಲಾಖೆಯಲ್ಲಿ ಶೇ.80ರಷ್ಟು ಹುದ್ದೆಗಳು ಖಾಲಿ ಇದ್ದು, 20ರಷ್ಟು ಸಿಬ್ಬಂದಿ ವರ್ಗದಿಂದ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ 16 ರೈತ ಸಂಪರ್ಕ ಕೇಂದ್ರವಿದೆ. ಇಲ್ಲಿ ಪೂರ್ಣ ಪ್ರಮಾಣದ ಅಧಿಕಾರಿ, ಸಿಬ್ಬಂದಿ ವರ್ಗದ ಕೊರತೆ ಇದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಶಬಾನ ಉತ್ತರಿಸಿದರು.
ಯುವಕರು ಕೃಷಿಯತ್ತ ಒಲವು ತೋರಬೇಕು:
ಆಧುನಿಕ ಬೇಸಾಯ ಪದ್ಧತಿ ಮಿಶ್ರಬೆಳೆ ಮತ್ತು ಸಮಗ್ರ ಕೃಷಿ ಪದ್ಧತಿಯಿಂದ ಯುವಕರು ಕೃಷಿ ಕ್ಷೇತ್ರವನ್ನು ತಮ್ಮ ಕ್ಷೇತ್ರವನ್ನಾಗಿ ಆಯ್ದಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಶಬಾನ ತಿಳಿಸಿದರು. ಉದಾಹರಣೆಗೆ ರಾಜಮುಡಿ ಭತ್ತದ ತಳಿಗೆ ಅಪಾರ ಬೇಡಿಕೆ ಇದ್ದು, ಆಧುನಿಕ ಬೇಸಾಯ ಪದ್ಧತಿಯ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಂಡಲ್ಲಿ ಅಪಾರ ಲಾಭ ಗಳಿಸುವ ಸಾಧ್ಯತೆಯಿದೆ ಎಂದು ಯಾದವ್ ಬಾಬು ಹೇಳಿದರಲ್ಲದೆ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಅನೇಕ ಪ್ರಗತಿಪರ ಭತ್ತದ ಕೃಷಿಕರು ಆಧುನಿಕ ಬೇಸಾಯ ಪದ್ಧತಿ ಮತ್ತು ಯಾಂತ್ರೀಕರಣ ಪದ್ಧತಿಯಿಂದ ಲಾಭದಾಯಕ ಉದ್ಯಮವನ್ನಾಗಿ ಕೃಷಿಯನ್ನು ಪರಿಗಣಿಸಿದ್ದಾರೆಂದು ಉಲ್ಲೇಖಿಸಿದರು.
ಕೃಷಿ ಸಂಬಂಧಿತ ಪರಿಹಾರ ವಿವರ:
ಕೃಷಿ ಇಲಾಖೆಯು ಸಾಲಬಾಧೆ ಅಥವಾ ಕೃಷಿ ಹಿನ್ನೆಲೆಯಲ್ಲಿ ಯಾವುದೇ ಋಣಭಾರದಿಂದ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಲ್ಲಿ ರು.5 ಲಕ್ಷ ಪರಿಹಾರ ನೀಡಲಾಗುವುದು. ಅದೃಷ್ಟವಶಾತ್ ಕೊಡಗಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಬೆರಳೆಣಿಕೆಯಷ್ಟು ಎಂದ ಅವರು, ಕೃಷಿ ಕಾರ್ಮಿಕರು ಅಥವಾ ಮಾಲೀಕರು ಕೃಷಿ ಸಂಬಂಧಿಸಿದ ಕೆಲಸಗಳಲ್ಲಿ ಆಕಸ್ಮಿಕವಾಗಿ ಮರಣಹೊಂದಿದರೆ ರು.2 ಲಕ್ಷ ಪರಿಹಾರ ದೊರಕಲಿದ್ದು, ಆಯಾ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ಎಸಿ ಅಧ್ಯಕ್ಷತೆಯಲ್ಲಿ ಇರುವ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಸಮಿತಿಗೆ ಮನವಿ ನೀಡಿದಲ್ಲಿ ಶೀಘ್ರ ಪ್ರಕರಣ ಇತ್ಯರ್ಥ ಪಡಿಸಲಾಗುವುದು ಎಂದು ಸಹಾಯಕ ನಿರ್ದೇಶಕ ಯಾದವ್ ಬಾಬು ಮಾಹಿತಿ ನೀಡಿದರು.