ಚೆಯ್ಯಂಡಾಣೆ, ಜೂ 28: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಮುಖ್ಯ ಶಿಕ್ಷಕಿ ಮೀನಾ ರವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಮಸ್ಥರು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಕಿರು ಕಾಣಿಕೆ ನೀಡಿ ಬೀಳ್ಕೊಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ನಲಿನಿ ಶಿಕ್ಷಕರಿಗೆ ಮಕ್ಕಳ ಒಡನಾಟದಲ್ಲಿ ಇದ್ದು ಅವರ ಅಗಲಿಕೆಯ ದುಃಖ ಮಾತ್ರ ಸಹಿಸಲು ಸಾಧ್ಯವಿಲ್ಲ ಎಷ್ಟೇ ಗಟ್ಟಿ ಮನಸ್ಸಿನವರೇ ಆದರೂ ಸೇವೆಯನ್ನ, ಆ ಶಾಲೆಯನ್ನ ಅವರ ಭವಿಷ್ಯವನ್ನ ರೂಪಿಸುವಲ್ಲಿ ಅವರು ಮಾಡುವಂತಹ ಕೆಲಸ ನಂತರ ಅವರು ಬಿಟ್ಟು ಹೋಗುವುದು ಬೇಸರದಸಂಗತಿ ಎಂದರು.
ಇನ್ನೊರ್ವ ಮುಖ್ಯ ಅತಿಥಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು ಮಾತನಾಡಿ ನಾನು 2005/2006 ರಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಯಾಗಿ ಆಯ್ಕೆ ಆದ ಅಂದಿನಿಂದ ಇಂದಿನ ವರೆಗೆ ಶಿಕ್ಷಕಿ ಮೀನಾ ಅವರೊಂದಿಗಿನ ಒಡನಾಟವನ್ನು ನೆನೆದರು ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರ ನಿವೃತ್ತಿ ಜೀವನ ಸುಖಕರವಾಗಲೆಂದು ಶುಭ ಹಾರೈಸಿದರು.
ಸಿ ಆರ್ ಪಿ ಉಷಾ ಮಾತನಾಡಿ ನನ್ನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದೀರಾ ನಮಗೆ ನಿಮ್ಮ ಸೇವಾವಧಿಯಲ್ಲಿ ಉತ್ತಮ ಸಹಕಾರ ಸಿಕ್ಕಿದೆ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ವಿದಾಯದ ಭಾಷಣ ಮಾಡಿದ ಮುಖ್ಯ ಶಿಕ್ಷಕಿ ಮೀನಾರವರು ಹಳೆಯ ಕಹಿ ಹಾಗೂ ಸಿಹಿ ನೆನಪುಗಳನ್ನು ವೇದಿಕೆಯಲ್ಲೇ ಹಂಚಿಕೊಂಡರು.ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ನಮ್ಮ ಕಷ್ಟ ಸುಖ ಗಳನ್ನು ಮರೆತು ಯಾವುದೇ ಚಿಂತೆ ಇಲ್ಲದೆ ವಿದ್ಯಾರ್ಥಿ ಗಳೊಂದಿಗೆ ಸಮಯವನ್ನು ಕಳೆಯುತ್ತಿದ್ದೆ, ಇನ್ನು ಮನೆಯಲ್ಲಿ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳುವುದು ತಿಳಿಯುತ್ತಿಲ್ಲವೆಂದು ನಿವೃತ್ತಿ ಜೀವನದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭ ಆಡಳಿತ ಮಂಡಳಿ, ಗ್ರಾಮಸ್ಥರು, ಪೋಷಕರು ವಿದ್ಯಾರ್ಥಿಗಳು ಸಾಲಾಗಿ ಬಂದು ನಿವೃತ್ತಿ ಶಿಕ್ಷಕಿಗೆ ಕಿರು ಕಾಣಿಕೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರತ್ನ ವಹಿಸಿದರು. ಈ ಸಂದರ್ಭ ಸರಸ್ವತಿ, ಮಂಜುಳಾ, ರೇಖಾ, ವೀಣಾ, ಕಲ್ಪನಾ, ನಿಶಾ, ಶಿಕ್ಷಕಿ ಆರ್ಶಿಯ, ದಮಯಂತಿ ಹಾಗೂ ಪೋಷಕರು, ಸ್ಥಳೀಯ ಅರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಲೀಲಾವತಿ, ಸ್ವಾಗತವನ್ನು ನೂತನ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ನಡೆಸಿದರೆ ನಿರೂಪಣೆಯನ್ನು ಹಾಗೂ ವಂದನೆಯನ್ನು ಶಿಕ್ಷಕಿ ಜಯಪ್ರದ ನಿರ್ವಹಿಸಿದರು .
ವರದಿ: ಅಶ್ರಫ್ ಸಿ.ಎ. ಚೆಯ್ಯ0ಡಾಣೆ