ಜಿಲ್ಲೆಯ ಆಯಾಯ ತಾಲೂಕಿನ ಶಾಲಾ ಕಾಲೇಜುಗಳು ಒಂದೇ ವೇದಿಕೆಯಡಿಯಲ್ಲಿ ಸೇರಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಂತ್ತಾಗಬೇಕು, ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಇತರರಿಗೂ ಪಸರಿಸಲು ಸಹಕಾರಿಯಾಗುತ್ತದೆ ಹಾಗೂ ಸ್ವಾತಂತ್ರ್ಯ ದಿನಾಚರಣೆಗೂ ಒಂದು ಅರ್ಥ ಬರುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅಭಿಪ್ರಾಯ ಪಟ್ಟರು.
ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು “ನಿನಾದ” ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಪೊನ್ನಂಪೇಟೆ ತಾಲೂಕಿನಲ್ಲಿರುವ ಶಾಲಾ ಕಾಲೇಜುಗಳು ಬೇರೆ ಬೇರೆ ಕಾರ್ಯಕ್ರಮ ಮಾಡುವ ಬದಲು ತಾಲೂಕು ಆಡಳಿತದ ಸಹಕಾರದಲ್ಲಿ ಒಂದೆ ವೇದಿಕೆಯಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮೂಲಕ ಅದ್ದೂರಿಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ನೀಡಬೇಕಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಮ್ಮ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದರು. ಮುಂದುವರಿದು ಮಾತನಾಡಿದ ಅವರು ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ನಾವು ದುರ್ಬಳಕೆ ಮಾಡಿಕೊಳ್ಳದೆ ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನೂ ನೀಡುತ್ತಿದ್ದೇವೆ ಎಂದು ಯೋಚಿಸಿ ಹೆಜ್ಜೆ ಹಾಕಬೇಕಿದೆ. ವಿಧ್ಯಾರ್ಥಿಗಳಿಗೆ ದೇಶದ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಪರಿಚಯದ ಜೊತೆ ಜೊತೆಗೆ ಆಯಾಯ ಪ್ರದೇಶದ ಸ್ಥಳೀಯ ಹೋರಾಟಗಾರರ ಪರಿಚಯ ಮಾಡಿಕೊಡಬೇಕಾಗಿದೆ, ಕೊಡಗಿನಲ್ಲಿ ಸ್ವಾತಂತ್ರ್ಯ ಕಿಚ್ಚನ್ನು ಹಚ್ಚಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಆದರೆ ಇವರು ಯಾರು ರಾಷ್ಟ್ರ ಮಟ್ಟದಲ್ಲಿ ದಾಖಲೆಯಾಗಿ ಉಳಿಯಲಿಲ್ಲ. ಮಡಿಕೇರಿ ಕೋಟೆ ಆವರಣದಲ್ಲಿ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸ್ವಾತಂತ್ರ್ಯ ವೀರ ಮಲ್ಲೇಂಗಡ ಚೆಂಗಪ್ಪ ಮತ್ತು ಸಂಗಡಿಗರಿಗೆ ಸೇರುತ್ತದೆ. ಅಂದು ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು ನ್ಯಾಯಾಧೀಶರ ವಿರುದ್ಧವಾಗಿಯೇ ತೀರ್ಪನ್ನು ನೀಡಿದವರು ಮಲ್ಲೇಂಗಡ ಚೆಂಗಪ್ಪನವರು. ಇವರ ಸಾಹಸದ ಕಥೆಗಳು ಒಂದೇ ಎರಡೇ, ಕಲ್ಪನೆಗೆ ಸಿಗದಷ್ಟು ಸಾಹಸಗಳನ್ನು ಹೋರಾಟಗಳನ್ನು ಮಾಡಿದ್ದಾರೆ. ಹಾಗೇ ಹುಬ್ಬಳ್ಳಿ ಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಚಕ್ಕೇರ ಮೊಣ್ಣಯ್ಯನವರ ಹೆಸರು ಕೇಳಿದರೆ ಬ್ರಿಟಿಷರಿಗೆ ನಡುಕ ಪ್ರಾರಂಭವಾಗುತಿತ್ತು, ಇವರ ಹೋರಾಟದ ಕಿಚ್ಚನ್ನು ಅರಿತ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ತಮಿಳುನಾಡಿನ ಸೇಲಂ ಕಾರ್ಖಾನೆಯಲ್ಲಿ 90ರೂಪಾಯಿಗೆ ಉನ್ನತ ಹುದ್ದೆಯನ್ನು ನೀಡಿದ್ದರೂ ಅಂದು ಒಬ್ಬ ಸ್ಕೂಲ್ ಹೆಡ್ ಮಾಸ್ಟರ್’ಗೆ ಕೇವಲ 18 ರೂಪಾಯಿ ಸಂಬಳವಿತ್ತು ಆದರೆ 90 ರೂಪಾಯಿ ದುಬಾರಿ ವೇತನವನ್ನು ತಿರಸ್ಕರಿಸಿ ಹೋರಾಟಕ್ಕೆ ಧುಮುಕಿದವರು ಚಕ್ಕೇರ ಮೊಣ್ಣಯ್ಯ, ಇದರಿಂದಲೇ ಅವರನ್ನು ಸುಧೀರ್ಘ ಅವಧಿಯವರೆಗೆ ಗಡಿಪಾರು ಮಾಡಿದ್ದರು ಕೂಡ ಮಾರುವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊಣ್ಣಯ್ಯನವರ ಸಾಹಸವನ್ನು ಮೆಚ್ಚಿ ಹುಬ್ಬಳಿಯ ಜನರೇ ಹುಬ್ಬಳ್ಳಿ ಹುಲಿ ಎಂದು ಕರೆದರು ಆದರೆ ಇದ್ಯಾವುದೂ ಪಠ್ಯದಲ್ಲಿ ದಾಖಲಾಗಲಿಲ್ಲ. ಇನ್ನೂ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಕಿಚ್ಚನ್ನು ಮೈಗೂಡಿಸಿಕೊಂಡ ಕೊಳೇರ ಕಾವೇರಿಯ ಬಲಿದಾನ ಜಿಲ್ಲೆಯ ಮೊದಲ ಬಲಿದಾನ ಎಂದರೆ ತಪ್ಪಲ್ಲ. ಇಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಕಣ್ಣಿನ ಮುಂದೆ ಇದ್ದು ಹೋದರು ಅವರ ಹೆಸರು ಕೇವಲ ಕೆಲವೇ ಮಂದಿಯ ಬಾಯಿಯಲ್ಲಿ ಹಾಗೂ ಜನಾಂಗಕ್ಕೆ ಸೀಮಿತವಾಯಿತು ಹೊರತು ದಾಖಲೆಯಾಗಿ ಉಳಿಯಲಿಲ್ಲ.
ಕೊಡಗಿನಲ್ಲಿ ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪದ್ಯಂಡ ಬೆಳ್ಳಿಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಪಡೆಬೀರ ಮಾತಂಡ ಅಪ್ಪಚ್ಚು, ಅಬ್ದುಲ್ ಗಫರ್ ಖಾನ್, ಎಂ.ಎಂ ಸಿದ್ದಿಕ್, ಪಾರುವಂಗಡ ಕುಶಾಲಪ್ಪ, ಪುತ್ತಮನೆ ಗಣಪಮಯ್ಯ, ಮಂಡೀರ ಉತ್ತಯ್ಯ ಹೀಗೆ ಹೆಸರು ಹೇಳುತ್ತಾ ಹೋದರೆ ಕೊಡಗಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿಯೇ ಇತ್ತು ಎಂದರೆ ತಪ್ಪಲ್ಲ. ಆದರೆ ಇದು ಒಂದು ಜನಾಂಗಕ್ಕೆ ಹಾಗೂ ಒಂದು ಪ್ರದೇಶಕ್ಕೆ ಸೀಮಿತವಾಯಿತು ಹೊರತು ವಿದ್ಯಾರ್ಥಿಗಳಿಗೆ ಸೇರಿದಂತೆ ಇತರರಿಗೆ ಪರಿಚಯ ಮಾಡುವ ಕೆಲಸವಾಗಲಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳು ಸ್ಥಳೀಯ ಹೊರಾಟಗಾರರ ಪರಿಚಯ ಮಾಡಿಕೊಡುವ ಮೂಲಕ ಅವರಿಗೆ ಗೌರವ ನೀಡಬೇಕಿದೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಬೇಕಿದೆ ಎಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ಹೇಳಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿನಾದ ಶಾಲೆಯ ಆಡಳಿತಾಧಿಕಾರಿ ನಾಗೇಶ್ ಹಾಗೂ ಪ್ರಾಂಶುಪಾಲರಾದ ಅಮ್ಮತೀರ ಶಿಲ್ಪ ದೀಪಕ್ ಮಾತನಾಡಿದ್ದರು, ಶಿಕ್ಷಕಿ ಮತ್ರಂಡ ನೇತ್ರಾ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದ್ದರು. ಧ್ವಜಾರೋಹಣ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ದೆಶಭಕ್ತಿ ಗೀತೆ ಸೇರಿದಂತೆ ದೇಶಭಕ್ತಿಯ ವಿವಿಧ ಕಾರ್ಯಕ್ರಮಗಳು, ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಗಮನಸೆಳೆಯಿತು.