ನಾಪೋಕ್ಲು: ನಾಪೋಕ್ಲು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದ ವನಜಾಕ್ಷಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕುಲ್ಲೇಟಿರ ಹೇಮಾವತಿ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.
ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಅಧಿಕಾರ ವಹಿಸಿ ಮಾತನಾಡಿದ ನೂತನ ಅಧ್ಯಕ್ಷೆ ವನಜಾಕ್ಷಿ ನಾನು ಈ ಹಿಂದೆ ನಾಪೋಕ್ಲು ಪಟ್ಟಣ ಹಾಗೂ ಬೇತು ಗ್ರಾಮದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಈ ಸ್ಥಾನ ಅಲಂಕರಿಸಿದ್ದೇನೆ. ಎರಡು ಗ್ರಾಮದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.ಮುಂದೆ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕುಂದುಕೊರತೆಗಳಿಲ್ಲದೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಉಪಾಧ್ಯಕ್ಷೆ ಹೇಮಾವತಿ ಮಾತನಾಡಿ ನಾನು ಕೊಳಕೇರಿ ಗ್ರಾಮದಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿ ಸದಸ್ಯೆಯಾಗಿದ್ದೆ.ಇಂದು ಎಲ್ಲರ ಸಹಕಾರದಿಂದ ಉಪಾಧ್ಯಕ್ಷೆಯಾಗಿದ್ದೇನೆ. ಮುಂದೆ ಅಧ್ಯಕ್ಷರು ಹಗೂ ಸದಸ್ಯರನ್ನು ಒಗ್ಗೂಡಿಸಿ ಗ್ರಾಮವನ್ನು ಅಭಿವೃದ್ದಿಪಡಿಸಲು ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭ ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಮಹಮ್ಮದ್ ಖುರೇಶಿ, ಕುಲ್ಲೇಟಿರ ಅರುಣ್ ಬೇಬ, ಗಂಗಮ್ಮ, ಶಶಿ ಮಂದಣ್ಣ, ಕೋಟೆರ ನೀಲಮ್ಮ,ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ಝಕರಿಯ ನಾಪೋಕ್ಲು