ಜ್ಞಾನ – ದಾಸೋಹದ ಕಾಯಕದಲ್ಲಿ ದಿಟ್ಟ ಹೆಜ್ಜೆಯಿಡುತ್ತಿರುವ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು

ಸರ್ವಧರ್ಮೀಯರು ಸೌಹಾರ್ದತೆಯಿಂದ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ “ಸೌಹಾರ್ದಕೊಪ್ಪ” ಎಂದೇ ಜನಮಾನಸದಲ್ಲಿ ಬಿಂಬಿತವಾಗುತ್ತಿರುವ ಗ್ರಾಮಾಂತರ ಪ್ರದೇಶ ಸುಂಟಿಕೊಪ್ಪ ಗ್ರಾಮದಲ್ಲಿ ಸ್ಥಾಪಿತವಾಗಿ, ಜ್ಞಾನದಾಸೋಹ ಕಾಯಕದಲ್ಲಿ ದಿಟ್ಟ ಹೆಜ್ಜೆಯಿಡುತ್ತಿರುವ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಈವರೆಗೆ ಸಾಗಿ ಬಂದ ಪಯಣದಲ್ಲಿನ ಶೈಕ್ಷಣಿಕ ಪ್ರಗತಿಯ ಒಂದು ಕಿರುನೋಟ ಇದಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮದ ಪ್ರಮುಖ ನಾಗರೀಕರ ಹಾಗೂ ಅಂದಿನ ಶಾಸಕರ ಮತ್ತು ಇಲಾಖೆ ಬೇಡಿಕೆಯಂತೆ ಸದರಿ ಗ್ರಾಮದಲ್ಲಿ 1996-97ನೇ ಶೈಕ್ಷಣಿಕ ವರ್ಷದಲ್ಲಿ ಈ ಮೊದಲೇ ಸ್ಥಾಪಿತವಾಗಿದ್ದ ಪ್ರೌಢಶಾಲೆಯನ್ನು ಉನ್ನತೀಕರಿಸಿ, ಸರ್ಕಾರಿ ಪದವಿಪೂರ್ವ ಕಾಲೇಜನ್ನು ಕಲಾ ವಿಭಾಗ(HEPS) ದೊಂದಿಗೆ ಪ್ರೌಢಶಾಲಾ ಕಟ್ಟಡದಲ್ಲಿಯೇ ಪ್ರಾರಂಭಿಸಲಾಯಿತು. ಪಿಯುಸಿ ವ್ಯಾಸಂಗಕ್ಕಾಗಿ ದೂರದ ಸ್ಥಳಗಳಿಗೆ ತೆರಳಬೇಕಾಗಿದ್ದ ಅನೇಕ ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾದಂತಾಯಿತು ಕಾಲೇಜ್‌ನ ಪ್ರಥಮ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಶ್ರೀ ಎನ್. ಪರಮೇಶ್ವನ್‌ ಕಾಲೇಜನ್ನು ಮಾದರಿ  ಕಾಲೇಜನ್ನಾಗಿ ಮುನ್ನಡೆಸಲು ಶ್ರಮಿಸಿದರು. ಪ್ರಾಂಶುಪಾಲರು, ಉಪನ್ಯಾಸಕರುಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರುಗಳ ದೂರದೃಷ್ಟಿಯೊಂದಿಗೆ 2010 -11ನೇ ಸಾಲಿನಲ್ಲಿ ಸದರಿ ಕಾಲೇಜಿನಲ್ಲಿ PCMB ಸಂಯೋಜನೆಯೊಂದಿಗೆ ವಿಜ್ಞಾನ ವಿಭಾಗವು ಪ್ರಾರಂಭಗೊಂಡಿತು. ವಿಜ್ಞಾನ ಕಲಿಯಲು ಉತ್ಸುಕರಾಗಿದ್ದ ಅನೇಕ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಲು ಸಹಾಯವಾದಂತಾಯಿತು. (ಪ್ರಥಮ ವರ್ಷದಲ್ಲಿಯೇ ವಿಜ್ಞಾನ ವಿದ್ಯಾರ್ಥಿಯಾಗಿ ಪಿಯುಸಿ ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿ ಸಲ್ಮಾ ಮುಂದೆ MTech ಪದವಿ ಗಳಿಸಿ ಪ್ರಸ್ತುತವಾಗಿ ಪಿಡಬ್ಲ್ಯೂಡಿ ಕುಶಾಲನಗರದಲ್ಲಿ  AEE ಆಗಿ ಕೆಲಸ   ನಿರ್ವಹಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ)

ಕಾಲೇಜಿನಲ್ಲಿ ಗಣನೀಯವಾಗಿ ದಾಖಲಾತಿಯು ಹೆಚ್ಚಳವಾಗುವ ಸಂದರ್ಭವನ್ನು ಅರಿತು ಅಂದಿನ ಪ್ರಾಂಶುಪಾಲರಾಗಿದ್ದ ಡಾ.ಎಂ.ವಿ. ರಮಾ ಇವರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ವಿದ್ಯಾರ್ಥಿ ಪೋಷಕರಗಳ ಸಹಕಾರದೊಂದಿಗೆ ಮತ್ತು ಅಂದಿನ ಶಾಸಕರಾದ ಶ್ರೀ ಅಪ್ಪಚ್ಚು ರಂಜನ್ ಇವರ ಬೆಂಬಲದೊಂದಿಗೆ ಕಾಲೇಜಿಗೆ ಸ್ವಂತ ಕಟ್ಟಡವು ಆಗಬೇಕಾಗಿರುವುದರ ಅನಿವಾರ್ಯತೆಯನ್ನು ಅರಿತು ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದುದರ ಫಲ ಶೃತಿಯಾಗಿ ಸರ್ಕಾರವು ಇಲಾಖೆಯ ಬೇಡಿಕೆಯಂತೆ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಅನುಮೋದನೆ ನೀಡಿ, ನಿವೇಶನ ಗೊತ್ತು ಪಡಿಸುವಿಕೆಗಾಗಿ ನಿರ್ದೇಶನ ನೀಡಿತು. 

ಅಂದಿನ ಅವಧಿಯ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವೈ ಕರುಂಬಯ್ಯ, ಖಜಾಂಚಿಗಳಾಗಿದ್ದ ಶ್ರೀ ರಮೇಶ್ ಪಿಳ್ಳೆ ಮತ್ತು ವಿವಿಧ ಸದಸ್ಯರುಗಳು ಸರ್ಕಾರದ ಮಟ್ಟದಲ್ಲಿ ಕೆಲಸ ನಿರ್ವಹಿಸಿ ಸದರಿ ಗ್ರಾಮದಲ್ಲಿ ಶಿಥಿಲಗೊಂಡು ತೆರವಾಗಿದ್ದ ಉರ್ದು ಶಾಲೆಯ ಖಾಲಿ ನಿವೇಶನವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವುದನ್ನು ಮನಗಂಡು ಉರ್ದು ಶಾಲೆಯ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಅಧಿಕೃತವಾಗಿ ನಿವೇಶನಗಳನ್ನು ಗುರುತಿಸಲಾಯಿತು. ಅಂತೆಯೇ ಅಂದಿನ ಶಾಸಕರು 2013 – 14ನೇ ಸಾಲಿನಲ್ಲಿ ನಿವೇಶನದ ಮಣ್ಣು ಸಮತಟ್ಟುಗೊಳಿಸಲು ರೂಪಾಯಿ 3,50,000 ಅನುದಾನ ಬಿಡುಗಡೆ ಮಾಡಿ  ಕೆಲಸ ಪ್ರಾರಂಭಿದರು. ಶಾಸಕರು ರೂಪಾಯಿ  8,00,000 ಮೊತ್ತದ ಅನುದಾನದಲ್ಲಿ 6 ತರಗತಿ ಕೊಠಡಿಗಳ ಕಾಮಗಾರಿಗಾಗಿ ಭೂಮಿ ಪೂಜೆ ನಡೆಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.

2016-17ನೇ ಸಾಲಿನಲ್ಲಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕರ ನೇತೃತ್ವದಲ್ಲಿ ನೆರವೇರಿಸಿ 27-6-2016ರಂದು ಸದರಿ ಕಾಲೇಜನ್ನು ಪ್ರೌಢಶಾಲಾ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರು ಮತ್ತು ಸದಸ್ಯರುಗಳು ಮಾಡಿದ ಶ್ರಮವನ್ನು ಸ್ಮರಿಸ ಬೇಕಾಗಿರುತ್ತದೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಅಂದಿನ ಅವಧಿಯಲ್ಲಿ ಕಾಲೇಜಿನಲ್ಲಿ ಹತ್ತು ಹಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ತೊಡಕಾಗುತ್ತಿರುವುದನ್ನು ಮನಗಂಡು ಅಂದಿನ ಪ್ರಭಾರಿ ಪ್ರಾಂಶುಪಾಲಕರಾಗಿದ್ದ ಶ್ರೀ ಸೋಮಚಂದ್ರ ಇವರು ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ನಿವಾರಣೆಗಾಗಿ ನೆರವನ್ನು ಪಡೆಯಲು ಮುಂದಾದರು. ಈ ನಿಮಿತ್ತ ಸ್ಪಂದಿಸಿದ ದಾನಿಗಳು ಕೊಡುಗೆಯಾಗಿ ಈ ಕೆಲವು ಅಗತ್ಯ ಸೌಲಭ್ಯಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸುವುದು ಅಗತ್ಯವಾಗಿದೆ. 

ಕರ್ನಾಟಕ ಬ್ಯಾಂಕ್ ಸುಂಟಿಕೊಪ್ಪ ಇವರ ವತಿಯಿಂದ ರೂಪಾಯಿ 1,50,000 ಲಕ್ಷ ವೆಚ್ಚದಲ್ಲಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಗೊಂಡಿದ್ದು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ವಿ.ಎಸ್.ಎಸ್.ಎನ್. ಬ್ಯಾಂಕ್ ಸುಂಟಿಕೊಪ್ಪ ಇದರ ವತಿಯಿಂದ ಧ್ವಜ ಸ್ತಂಭದ ವ್ಯವಸ್ಥೆಯು ನಿರ್ಮಾಣಗೊಂಡಿದ್ದು, ಶ್ರೀ ಎಸ್.ಬಿ. ಜಯರಾಜ್  ಪನ್ಯ ಎಸ್ಟೇಟ್ ಸುಂಟಿಕೊಪ್ಪ ಇವರು ಇನ್ವರ್ಟರ್ ಮತ್ತು ಪ್ರಿಂಟರ್ ಇವುಗಳನ್ನು ಲಭ್ಯವಾಗಿಸಿಕೊಟ್ಟರು. ಶ್ರೀ ಬಿ.ಎಲ್. ಆನಂದ ಪೂಜಾರಿ ಸುಂಟಿಕೊಪ್ಪ ಇವರು “ಕಾಲೇಜಿನ ಸೂಚನಾ ಫಲಕ” ಇದನ್ನು ವ್ಯವಸ್ಥೆ ಮಾಡಿ ಕೊಟ್ಟಿರುತ್ತಾರೆ. ಎಚ್.ಡಿ. ಬಸವರಾಜು ವೆಂಕಟೇಶ್ವರ ಎಸ್ಟೇಟ್ ಕೊಡಗರ ಹಳ್ಳಿ ಇವರು ಗೋಡೆ ಮತ್ತು ಕಾಂಪೌಂಡ್ ಗ್ರಿಲ್ಸ್ ಅಳವಡಿಸಲು ಸಹಾಯ ಧನ ನೀಡಿದರು. ಶ್ರೀ ಸಿ.ಕೆ. ಶಿವ ಸೋಮಣ್ಣ ಅಲ್ತ್‌ಮಾಡ್ ಎಸ್ಟೇಟ್ ಹೆರೂರು ಇವರ ವತಿಯಿಂದ ಸಿ‌.ಸಿ.ಕ್ಯಾಮೆರಾ ಮತ್ತು ಶ್ರೀಮತಿ ಪಾಂಡಂಡ ಭಾರತಿ ಸುಬ್ಬಯ್ಯ ಫ್ಲಡೆಫಾ ಎಸ್ಟೇಟ್ ನಾಕೂರು ಇವರಿಂದ ಪ್ರೋಜೆಕ್ಟರ್ ಮತ್ತು ಸಿ.ಸಿ.‌ ಕ್ಯಾಮೆರಾ ಲಭ್ಯವಾಯಿತು. ಶ್ರೀಮತಿ ಪ್ರಿಮಲಾ ಗಂಗಾಧರ್ ಸುಂಟಿಕೊಪ್ಪ ಇವರು ಕುಡಿಯುವ ನೀರಿಗಾಗಿ ಎರಡು ವಾಟರ್ ಪ್ಯೂರಿಫೈಯರ್ ಒದಗಿಸಿ ಕೊಟ್ಟರು.  ಹೀಗೆ ಹತ್ತು ಹಲವು ದಾನಿಗಳ ಸಹಾಯದಿಂದ ಕಾಲೇಜಿನ ಪ್ರಗತಿಯು ತೀವ್ರ ಗತಿಯನ್ನು ಪಡೆದು ಮುಂದಣ  ಹೆಜ್ಜೆ ಇಡುತ್ತಾ ಸಾಗಿತು. 

ನಂತರದಲ್ಲಿ ವಿದ್ಯಾರ್ಥಿ ಪಾಲಕರ, ಗ್ರಾಮಸ್ಥರ ಹಾಗೂ ಸಿ.ಬಿ.ಸಿ. ಮಂಡಳಿ ಮತ್ತು ಪ್ರಾಂಶುಪಾಲರ ಬಹು ಬೇಡಿಕೆಯಂತೆ ಸದರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಆರಂಭಕ್ಕಾಗಿ ಇಲಾಖೆಯೊಡನೆ ಪತ್ರ ವ್ಯವಹಾರ ನಡೆದು, ಅಂತೆಯೇ 2018-2019ನೇ ಸಾಲಿನಲ್ಲಿ HECA ಸಂಯೋಜನೆಯೊಂದಿಗೆ ವಾಣಿಜ್ಯ ವಿಭಾಗವು ಪ್ರಾರಂಭವಾಯಿತು. ವಾಣಿಜ್ಯ ವಿಭಾಗದ ತರಗತಿಗಳನ್ನು ಚಾಲನೆಗೊಳಿಸಲು ತರಗತಿ ಕೊಠಡಿಗಳ ಕೊರತೆ ಮತ್ತು ಅರ್ಹ ಉಪನ್ಯಾಸಕರ ಅಲಭ್ಯಯಾಗುವುದನ್ನು ಅರಿತ ಅಂದಿನ ಉಪನ್ಯಾಸಕರು ಮತ್ತು ಪ್ರಸ್ತುತ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಪಿ.ಎಸ್. ಜಾನ್ ಇವರು ಇಲಾಖೆಯ ಗಮನಕ್ಕೆ ಸದರಿ ಮಾಹಿತಿಯನ್ನು ತಂದು, ವಾಣಿಜ್ಯ ವಿಭಾಗಕ್ಕೆ ಅತಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅನುಮತಿ ಪಡೆದರು.

ಪ್ರಾಂಶುಪಾಲರ ನೇತೃತ್ವದಲ್ಲಿ ದಾಖಲಾತಿ ಆಂದೋಲನ ನಡೆಸಿ ಪ್ರಥಮ ವರ್ಷದಲ್ಲಿಯೇ ವಾಣಿಜ್ಯ ವಿಭಾಗದಲ್ಲಿ ಬಹುಪಾಲು ಸಂಖ್ಯೆಯಷ್ಟು ವಿದ್ಯಾರ್ಥಿಗಳು ದಾಖಲಾದರು. ಪ್ರಾಂಶುಪಾಲರು ಹೆಚ್ಚುವರಿ ಕೊಠಡಿಗಳ ಲಭ್ಯತೆಯನ್ನಾಗಿ ಇಲಾಖೆಯೊಡನೆ ಹಾಗೂ ಶಾಸಕರೊಡನೆ ನಿರಂತರ ಸಂಪರ್ಕವಿಟ್ಟುಕೊಂಡು ಅಂತೆಯೇ RIDF ವತಿಯಿಂದ 2018-19 ನೇ ಸಾಲಿನಲ್ಲಿಯೇ 2 ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ ಮತ್ತು ಬಾಲಕಿಯರ ಎರಡು ಶೌಚಾಲಯ ನಿರ್ಮಾಣಕ್ಕಾಗಿ 49,95,000/- ರೂಪಾಯಿ ಅನುದಾನ ತರಲು ಯಶಸ್ವಿಯಾದರು ಮತ್ತು ಕಾಮಗಾರಿಯನ್ನು ಪ್ರಾರಂಭಿಸಿದರು. ಕಾಮಗಾರಿ ಎಲ್ಲಿಯೂ ಅಡಚಣೆ ಬಾರದಂತೆ ಮುತುವರ್ಜಿವಹಿಸ ನಿರಂತರವಾಗಿ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಿ, ಉದ್ದೇಶಿತ ಕಾಮಗಾರಿಯ ಪರಿಪೂರ್ಣತೆಗಾಗಿ ಪ್ರಾಂಶುಪಾಲರು ಅಹರ್ನಿಶಿ ಶ್ರಮಿಸಿದುದರ ಫಲವಾಗಿ 06-06-2019 ರಂದು ಉದ್ಘಾಟನೆಗೆ ಸಿದ್ಧವಾಯಿತು. ಹಾಗೂ ಶಾಸಕರಾದ ಶ್ರೀ ಅಪ್ಪ ಚ್ಚು ರಂಜನ್ ನೇತೃತ್ವದಲ್ಲಿ ಉದ್ಘಾಟನೆಗೊಂಡಿತ್ತು. ಪ್ರಾಂಶುಪಾಲರ ಈ ಕೆಲಸಗಳನ್ನು ಎಲ್ಲಾ ಕಾಲಕ್ಕೂ ಸ್ಮರಿಸುವುದು ಅಗತ್ಯವಾಗಿರುತ್ತದೆ. 

ಪ್ರಸ್ತುತವಾಗಿ ವಾಣಿಜ್ಯ ವಿಭಾಗಕ್ಕೆ ಖಾಯಂ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಹುದ್ದೆಯು ಖಾಲಿಯಿದ್ದು, ಈ ಸಂಬಂಧವಾಗಿ ಪ್ರಾಂಶುಪಾಲರು ಇಲಾಖೆಗೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿರುತ್ತಾರೆ. ಈ ಅವಧಿಯಲ್ಲಿ ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳನ್ನು ಸಾಂಸ್ಕೃತಿಕ ಚಟುವಟಿಕೆಗಳನ್ನು ಜರುಗಿಸಲು ಅಗತ್ಯವಾಗಿ ಬೇಕಾಗಿದ್ದ ಕಾಮಗಾರಿಯು ಅಪೂರ್ಣಗೊಂಡು ಸ್ಥಗಿತಗೊಂಡಿದ್ದ ಸಭಾಂಗಣದ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ಕಂಕಣಬದ್ಧರಾದರು. ಕಾಲೇಜು ಅಭಿವೃದ್ಧಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನಿಲ್‌ ಸುಬ್ರಮಣಿ ಇವರನ್ನು ಸಂಪರ್ಕಿಸಿ ಬಿನ್ನವತ್ತಳೆಯನ್ನು ನೀಡಿ ರೂಪಾಯಿ 2 ಲಕ್ಷದಷ್ಟು ಅನುದಾನವನ್ನು ತಂದು ಕಾಮಗಾರಿಯನ್ನು ಪ್ರಾರಂಭಿಸಿ ಸಭಾಂಗಣಕ್ಕೆ ನಾಲ್ಕು ಪಾರ್ಶ್ವಗಳಲ್ಲಿ ಆವರಣ ಗೋಡೆಗಳನ್ನು ನಿರ್ಮಿಸಲು ಯಶಸ್ವಿಯಾದರು. ಪ್ರಸ್ತುತವಾಗಿ ಆವರಣ ಗೋಡೆಗಳನ್ನು ಸಿಮೆಂಟ್ ಪ್ಲಾಸ್ಟರಿಂಗ್ ಆಗಬೇಕಾಗಿರುತ್ತದೆ. ಮತ್ತು ಒಳಭಾಗಕ್ಕೆ ಟೈಲ್ಸ್ ಅಳವಡಿಸುವ ಕಾರ್ಯವಾಗಬೇಕಾಗಿರುತ್ತದೆ. ಈ ಸಂಬಂಧವಾಗಿ ಪ್ರಾಂಶುಪಾಲರು ದಾನಿಗಳ ನೆರವನ್ನು ಬಯಸಿರುತ್ತಾರೆ. 

ಪ್ರಾಂಶುಪಾಲರದ ಶ್ರೀ ಜಾನ್ ರವರು ಕಾಲೇಜಿಗೆ ಆಧುನಿಕತೆಯ ಸ್ಪರ್ಶವನ್ನು ನೀಡಲು ಕಾಲೇಜನ್ನು ಜಿಲ್ಲೆಯಲ್ಲಿ ಮಾದರಿ ಕಾಲೇಜನ್ನಾಗಿ ಪರಿವರ್ತಿಸಲು ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರ ಸ್ನೇಹಿ, ಹಾಗೂ ಪೋಷಕರ ಸ್ನೇಹಿ ಪ್ರಾಂಶುಪಾಲರಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕಾಲೇಜಿನ ಪ್ರವೇಶ ದ್ವಾರಕ್ಕೆ ಕಮಾನು ನಾಮ ಫಲಕವನ್ನು ದಾನಿಗಳು ನೆರವಿನಿಂದ ನಿರ್ಮಿಸಿರುತ್ತಾರೆ. ಈ ಸಂದರ್ಭದಲ್ಲಿ ದಾನಿಯಾದ ಶ್ರೀ ಶ್ರೀನಿವಾಸ್ ಇವರನ್ನು ಸ್ಮರಿಸಿ ಕಾಲೇಜಿನ ಆವರಣ ಗೋಡೆಯ ಕೊರತೆ ಇದ್ದುದರಿಂದ, ದನ ಕರುಗಳಿಂದ ವಿಶೇಷವಾಗಿ ಭಾನುವಾರದ ಸಂತೆಯಂದು ಕಾಲೇಜಿನ ಆವರಣದಲ್ಲಿ ಆಗುತ್ತಿರುವ ಹಾವಳಿಯನ್ನು ತಡೆಗಟ್ಟಲು ನಿರ್ಧರಿಸಿ ಕಾಲೇಜಿನ ಆವರಣ ಕಟ್ಟಡವನ್ನು ನಿರ್ಮಿಸಲು ಆಗಿರುತ್ತಾರೆ. ಇಂದು ಕಾಲೇಜು ತನ್ನದೇ ಆದ ಆವರಣದಲ್ಲಿ ಭದ್ರತೆಯೊಂದಿಗೆ ಸಂರಕ್ಷಣೆಯಾಗಿ ನಿಂತಿರುತ್ತದೆ. 

ಪ್ರಾಂಶುಪಾಲರು ವಿಜ್ಞಾನ ವಿಭಾಗದ ಪ್ರಾಯೋಗಿಕ ತರಗತಿಗಳಿಗೆ ಹೆಚ್ಚು ಮನ್ನಣೆ ನೀಡುತ್ತಾ ರಸಾಯನಶಾಸ್ತ್ರ ಪ್ರಯೋಗಾಲಯಕ್ಕೆ ರಾಸಾಯನಿಕ ಸಂಯುಕ್ತಗಳನ್ನು ಇಡಲು ಅಗತ್ಯವಾಗಿ ಬೇಕಾಗಿದ್ದ ಅಲ್ಮೇರಾ, 4 ಪಾರ್ಶ್ವಗಳಲ್ಲಿ ಸೆಲ್‌ಗಳು, ಅಗತ್ಯ ರಾಸಾಯನಿಕ ಸಯುಕ್ತಗಳು ಗಾಜಿನ ಉಪಕರಣಗಳು ಲಭ್ಯವಾಗಿಸಿ ಕೊಟ್ಟಿರುತ್ತಾರೆ. ಹಾಗೆ ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಾಲಯಗಳಿಗೆ ಬೇಕಾಗಿರುವ ಪ್ರಾಯೋಗಿಕ ಉಪಕರಣಗಳನ್ನು ಹೊಂದಿಸಿಕೊಳ್ಳಲು ಶ್ರೀಯುತರು ನೆರವಾಗಿರುತ್ತಾರೆ. ಪ್ರತಿ ತರಗತಿಯ ಮುಂಭಾಗದ ಗೋಡೆಯ ಮೇಲೆ ಸುಭಾಷಿತ ಚಿಂತನ ಸಾಲುಗಳನ್ನು ಬರಿಸಿರುವುದು ನೋಡುಗ ಮತ್ತು ಆಸಕ್ತ ಓದುಗರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಜೀವನ ಸಂದೇಶವನ್ನು ನೀಡುವಂತಿದೆ. 

ಕಾಲೇಜಿನ ECO ಕ್ಲಬ್‌ನ ಸಂಚಾಲಕರು ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪದ್ಮಾವತಿ ಇವರಿಗೆ ಸೂಕ್ತ ಸಲಹೆ ಮತ್ತು ನೆರವನ್ನು ನೀಡುವುದರೊಂದಿಗೆ ಈ ಕಾಲೇಜಿನ ಮುಂಭಾಗದಲ್ಲಿ ಹೂದೋಟದ ನಿರ್ಮಾಣಕ್ಕೆ ಪ್ರಾಂಶುಪಾಲರು ಕಾರಣಕರ್ತರಾಗಿರುತ್ತಾರೆ. ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಸರಕಾರಿ ಕಾಲೇಜಿನ ಬೆಳವಣಿಗೆಗೆ ಪ್ರಾಂಶುಪಾಲರು ನಾಂದಿಯನ್ನಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬ್ಲೇಜರ್‌ ಧರಿಸುವುದರೊಂದಿಗೆ ಸಮವಸ್ತ್ರ ಧರಿಸುವ ಪರಿಪಾಠವನ್ನು ಕಾಲೇಜಿನಲ್ಲಿ ಚಾಲುಗೊಳಿಸಿರುತ್ತಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಕೇಂದ್ರ ಮಡಿಕೇರಿ ಇಲ್ಲಿಗೆ ತೆರಳಬೇಕಾಗಿದ್ದರಿಂದ, ಇದು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದಿರುವ ಕೆಲವು ಹಿಂದುಳಿದ ದೂರದ ಪ್ರದೇಶಗಳಿಂದ ಕಾಲೇಜಿಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಪರೀಕ್ಷೆಗೆ ಹಾಜರಾಗುವುದು ಕಷ್ಟವಾಗುತ್ತಿತ್ತು. ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಪ್ರಾಂಶುಪಾಲರು ಅರಿತು ಸದರಿ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಇಲಾಖೆಯನ್ನು ಎಡತಾಕಿ, ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟು ಈ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವನ್ನು ತೆರೆಯುವಲ್ಲಿ ಯಶಸ್ವಿಯಾಗಿರುವುದು ಪ್ರಾಶುಂಪಾಲರ ಕಾರ್ಯವೈಖರಿಯ ಹೆಗ್ಗಳಿಕೆಗೆ ಕಾರಣವಾಗಿದೆ. 2022-23ನೇ ಸಾಲಿನಿಂದ ದ್ವಿತೀಯ ಪಿಯುಸಿ ಈ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಆಸುಪಾಸಿನ ಸುಮಾರು ಮೂರು ಕಾಲೇಜಿನ ವಿದ್ಯಾರ್ಥಿಗಳು ಅಂದರೆ ಸಂತಮೇರಿ ಪಿಯು ಕಾಲೇಜು, ಗರಗಂದೂರು ಮೊರಾರ್ಜಿ ಪಿಯು ಕಾಲೇಜು ಹಾಗೂ ಮಾದಾಪುರದ ಡಿ. ಚೆನ್ನಮ್ಮ ಕಾಲೇಜುಗಳು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿರುತ್ತಾರೆ. 

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಕೊಡಿಸಬೇಕೆಂಬ ಮಹಾದಾಸೆಯನ್ನು ಹೊಂದಿರುವ ಪ್ರಾಂಶುಪಾಲರು ವಿಜ್ಞಾನ ವಿಭಾಗಕ್ಕೆ PCMC ಸಂಯೋಜನೆಯನ್ನು ತರುವ ನಿಟ್ಟಿನಲ್ಲಿ ತಮ್ಮ ಹಂತದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳ ಚಾಲನೆಗೆ ಮುನ್ನುಡಿಯನ್ನು ಬರೆದಿರುತ್ತಾರೆ. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ PCMC ಸಂಯೋಜನೆಗೊಂಡು ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. 

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಕಾಲೇಜಿನಲ್ಲಿ ಪಠ್ಯ ಬೋಧನೆ ಯೊಂದಿಗೆ, ಪಠ್ಯೇತರ ಚಟುವಟಿಕೆಗಳ ಅನುಷ್ಠಾನಕ್ಕೆ ಪ್ರಾಂಶುಪಾಲರು ಆಸ್ಪದ ಕೊಟ್ಟಿರುತ್ತಾರೆ. ಎಲ್ಲ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾ ಕಾಲೇಜಿನಲ್ಲಿ ವಾರಕೊಮ್ಮೆ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಪ್ರತಿ ಶನಿವಾರದಂದು ನಡೆಸುತ್ತಾ ಬಂದಿರುತ್ತಾರೆ. ಕ್ರೀಡೆಗೆ ಹೆಚ್ಚು ಪ್ರಾಶಸ್ತ್ಯವನ್ನು ಪ್ರಾಂಶುಪಾಲರು ನೀಡಿ, ವಿದ್ಯಾರ್ಥಿಗಳ ವಲಯ ಮಟ್ಟದ, ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಹೀಗೆ ಎಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕಾಲೇಜಿನ ಹಿರಿಮೆ ಇಮ್ಮಡಿಗೊಳಿಸಲು ಪ್ರಾಂಶುಪಾಲರು ಕಾರಣಕರ್ತರಾಗಿರುತ್ತಾರೆ. ಈ ರೀತಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವ ಈ ಕಾಲೇಜಿನಲ್ಲಿ ಪ್ರಸ್ತುತವಾಗಿ ಕಾಲೇಜಿನಲ್ಲಿ ಪ್ರತಿಭಾನ್ವಿತ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. TALP ತರಬೇತಿಯನ್ನು ಪಡೆದಿರುವ ಶ್ರೀಮತಿ ಸುಚಿತ್ರ ಕೆ.ಪಿ. ಇವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ರಾಸಾಯನ ಶಾಸ್ತ್ರದ ಉಪನ್ಯಾಸಕರಾದ ಶ್ರೀ ಎಸ್.ಎಚ್. ಈಶ ಇವರು ಪ್ರಥಮ ಮತ್ತು ದ್ವಿತೀಯ ಪಿಯುಸಿ ಆಂಗ್ಲ ಮಾಧ್ಯಮ NCRT ಪಠ್ಯಪುಸ್ತಕಗಳನ್ನು ಕನ್ನಡ ಮಾಧ್ಯಮಕ್ಕೆ ಭಾಷಾಂತರಿಸುವ ರಾಜ್ಯಮಟ್ಟದ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ನುರಿತ ಉಪನ್ಯಾಶಕ ಬಳಗವೇ ಕಾಲೇಜಿನಲ್ಲಿದ್ದು, ಅವರುಗಳ ಪರಿಣಾಮಕಾರಿ ಬೋಧನೆಯಿಂದಾಗಿ ಪ್ರತಿ ವರ್ಷವೂ ಕಾಲೇಜಿನಲ್ಲಿ 10 ರಿಂದ 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹೊಂದಿ ಕಾಲೇಜಿಗೆ ಕೀರ್ತಿಯನ್ನು ತರುತ್ತಿರುವುದು ಶ್ಲಾಘನೀಯ ವಿಷಯವಾಗಿದೆ.

ಒಟ್ಟಿನಲ್ಲಿ ನೋಡುಗರಿಗೆ ಈ ಕಾಲೇಜು ಒಂದು ದೊಡ್ಡ ಅವಿಭಕ್ತ ಕುಟುಂಬದಂತೆ ಗೋಚರಿಸುವುದು ಪ್ರಾಂಶುಪಾಲರ ಆಡಳಿತ ಚಾಕಚಕ್ಯತೆಗೆ ಸಾಕ್ಷಿಯಂತಿದೆ. ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಈ ಕಾಲೇಜಿನಲ್ಲಿ ಆಗ ಬೇಕಾಗಿರುವ ಇನ್ನಷ್ಟು ಮೂಲಭೂತ ಸೌಕರ್ಯಗಳೂ ಬಾಕಿ ಉಳಿದಿದೆ. ಅವುಗಳೆಂದರೆ,

1.ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ಕೊಠಡಿಗಳು.

2. ಸುಸಜ್ಜಿತ ಗ್ರಂಥಾಲಯ.

3. ಆವರಣ ಗೋಡೆ.

4. ಹೆಚ್ಚುವರಿ ಪೀಠೋಪಕರಣಗಳು.

5. “ಡಿ” ಗ್ರೂಪ್ ನೌಕರರ ಹುದ್ದೆ ಮಂಜೂರು ಮತ್ತು ನೇಮಕಾತಿ.

6. ಕಚೇರಿ ಗುಮಾಸ್ತರ ಹುದ್ದೆ ಮಂಜೂರು ಮತ್ತು ನೇಮಕಾತಿ.

7. ವಾಣಿಜ್ಯ ವಿಭಾಗದ ಖಾಯಂ ಉಪನ್ಯಾಸಕರ ಹುದ್ದೆ ಮಂಜೂರು ಮತ್ತು ನೇಮಕಾತಿ.

8. ಮಾರ್ಚ್ ಫಾಸ್ಟ್ ಗಾಗಿ ಹಿನ್ನೆಲೆ ವಾದಿಗೋಷ್ಠಿ ಪರಿಕರಗಳು.

9. ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್‌ ಮರುಪೂರಣ. 

ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ ಆಡಳಿತ ಮಂಡಳಿ ಭಗೀರಥ ಪ್ರಯತ್ನ ಮಾಡುತ್ತಾ ದಾನಿಗಳ ನೆರವನ್ನು ನಿರೀಕ್ಷಿಸುತ್ತಿರುತ್ತಾರೆ. ಆಶಕ್ತ ದಾನಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿರುತ್ತದೆ.

ಮೊ: 9035366225, 9845413151

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments