ಬೇತು ಗ್ರಾಮದಲ್ಲಿ ಗಮನ ಸೆಳೆದ ವಿವಿಧ ಕ್ರೀಡಾಕೂಟ
ನಾಪೋಕ್ಲು :ನಾಪೋಕ್ಲು ನಾಲ್ಕುನಾಡು ವ್ಯಾಪ್ತಿಯಲ್ಲಿ ಮಂಗಳವಾರ ಕೈಲ್ ಮುಹೂರ್ತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕೊಡಗಿನ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಮೊದಲ ಸ್ಥಾನ ಇದ್ದರೆ ನಂತರದ ಸ್ಥಾನ ಕೈಲ್ ಮೂಹೂರ್ತ ಹಬ್ಬಕ್ಕಿದೆ. ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ ಎಂಬ ಅರ್ಥ. ಹಬ್ಬದಂದು ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ಥಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿಸಿದ ಆಯುಧಗಳಾದ ನೇಗಿಲು, ನೊಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಎತ್ತುಗಳಿಗೆ ಪಣಿ ಪುಟ್ಟು ತಿನ್ನಿಸಿದರು. ನಂತರ ಮನೆಯಲ್ಲಿರುವ ಆಯುಧಗಳಾದ ಕೋವಿ. ಕತ್ತಿ, ಭರ್ಚಿ ಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಖಾದ್ಯವಾದ ಕಡಂಬಿಟ್ಟು, ಹಂದಿ ಮಾಂಸ ಸಾರು, ಕೋಳಿ ಮಾಂಸ ಸಾರು, ಸಾರಾಯಿ ಮುಂತಾದವುಗಳನ್ನು ದೇವರಿಗೆ ಮೀದಿ ಇಟ್ಟು ಕುಡಿದು ತಿಂದು ಹಬ್ಬವನ್ನು ಸಂಭ್ರಮಿಸಿದರು.
ಕೈಲ್ ಮೂಹೂರ್ತ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಕೊಡಗಿನಾದ್ಯಂತ 18 ನೇ ಕೈಲ್ ಮೂಹೂರ್ತ ಅಂದರೆ ಸೆಪ್ಟಂಬರ್ ತಿಂಗಳ ತಾರೀಕು 3 ರಂದು ಹಬ್ಬವನ್ನು ಆಚರಿಸಿದರೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಆಚರಿಸಲಾಯಿತು.
ಗಮನ ಸೆಳೆದ ವಿವಿಧ ಕ್ರೀಡಾ ಕೂಟ:
ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ನಾಪೋಕ್ಲು ಬಳಿಯ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಆಯೋಜಿಸಲಾದ ವಿವಿಧ ಆಟೋಟಗಳ ಸ್ಪರ್ಧೆಗಳು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಯುವಕ ಸಂಘದ ಅಧ್ಯಕ್ಷ ಕಾಳೆಯಂಡ ರಮೇಶ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಸ್ಪರ್ಧೆಗಳು ನಡೆಯಿತು.ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೊಂಡಿರ ಗಣೇಶ್ ನಾಣಯ್ಯ, ಕುಟ್ಟಂಜೆಟ್ಟೀರ ಶ್ಯಾಂ ಬೋಪಣ್ಣ ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಗೆ ಓಟದ ಸ್ಪರ್ಧೆ, ಕಪ್ಪೆ ಹಾರುವುದು,ಸೂಜಿ ನೂಲು ಓಟ ಸ್ಪರ್ಧೆಗಳು,ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು ,ನಿಂಬೆಹಣ್ಣಿನ ಓಟ,ಅದೃಷ್ಟದ ಆಟ ಸ್ಪರ್ಧೆಗಳು, ಸಾರ್ವಜನಿಕರಿಗೆ ತೆಂಗಿನಕಾಯಿ ಗುಂಡು ಹೊಡೆಯುವುದು,ಭಾರತ ಕಲ್ಲು ಎಸೆತ, 100 ಮೀಟರ್ ಓಟದ ಸ್ಪರ್ಧೆ ನಡೆದವು. ಗ್ರಾಮದ ಸಾರ್ವಜನಿಕರಿಗೆ ಹಗ್ಗ ಜಗ್ಗಾಟ್ಟ ಸ್ಪರ್ಧೆಯನ್ನು ಹಾಗೂ ಸಾಮೂಹಿಕವಾಗಿ ವಾಲಗ ತಾಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಮಕ್ಕಳಾದಿಯಾಗಿ ಎಲ್ಲರೂ ಆಟೋಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು.
ವರದಿ :ಝಕರಿಯ ನಾಪೋಕ್ಲು