ಮೂರ್ನಾಡು: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 15ನೇ ವರ್ಷದ ಓಣಂ ಹಬ್ಬಾಚರಣೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬಾಚರಣೆಯ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ತಮ್ಮ ಮನೆಯಲ್ಲಿಯೆ ಓಣಂ ಹಬ್ಬವನ್ನು ಆಚರಿಸಿಕೊಂಡರೂ, ಸಮಾಜ ಬಾಂಧವರೆಲ್ಲರೂ ಕೂಡಿ ಸಂಘದ ಮುಖಾಂತರ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸಮಾಜದ ಒಗ್ಗಟ್ಟನ್ನು ಎತ್ತಿಹಿಡಿಯುತ್ತದೆಯಲ್ಲದೆ, ತಮ್ಮ ಸಮಾಜದ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಹಿಂದೂಗಳಾದ ನಾವು ತಮ್ಮ ಸಂಸ್ಕೃತಿಗಳನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಹಿಂದೂ ಸಮಾಜ ಗಟ್ಟಿಗೊಳ್ಳುತ್ತದೆ. ಹೀಗೆ ತಮ್ಮ ಆಚಾರ-ವಿಚಾರ ಪಾಲನೆಗಳಿಂದ ಸಮಾಜ ಒಳಿತು ಕಂಡುಕೊಂಡಾಗ ದೇಶವು ಸಹ ಅಭಿವೃದ್ಧಿ ಹೊಂದುತ್ತದೆ. ಸಮಾಜಿಕ ಉತ್ಸವಗಳಿಂದ ಮಾತ್ರ ಒಗ್ಗಾಟ್ಟಾಗಿ ಸೇರಲು ಸಾಧ್ಯವಾಗುತ್ತದೆ. ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣಕ್ಕೆ ಹೆಚ್ಚು ಒತ್ತಾಸೆ ನೀಡಲೇಬೇಕು. ಕೇಂದ್ರ ಸರ್ಕಾರದಿಂದ ಹತ್ತು ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು ಎಂದ ಅವರು ನಮ್ಮ ಶಿಸ್ತುಬದ್ದ ಜೀವನ ಬೇರೆಯವರು ಅನುಕರಣೆ ಮಾಡುವಂತಿರಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಎಂ. ವಿಜಯನ್, ಜಿಲ್ಲಾ ಸಮಿತಿಯ ಮುಖ್ಯ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತ ಹಾಗೂ ಮಡಿಕೇರಿ ತಾಲೂಕು ಎಸ್‌ಎನ್‌ಡಿಪಿಯ ಅಧ್ಯಕ್ಷ ವಾಸುದೇವನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ. ಸುಧೀರ್ ಮತ್ತು ಹಿಂದೂ ಮಲಯಾಳಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೂರ್ನಾಡು ಹಿಂದೂ ಮಲಯಾಳಿಸಂಘದ ಅಧ್ಯಕ್ಷ ಕೆ. ಬಾಬು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ರಂಗೋಲಿ(ಪೂಕಳಂ) ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಯಿತು. ಪ್ರತಿ ವರ್ಷ ತಿರುವಾದಿರ ನೃತ್ಯವನ್ನು ತರಬೇತಿ ನೀಡುವ ಸುಜಾತ ಗೋಪಿ ಮತ್ತು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ಅವರನ್ನು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಸಂಘದವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮುಂಚೆ ಮೂರ್ನಾಡಿನ ಮುಖ್ಯ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ಮಹನೀಯರು, ಚೆಂಡೆ ಮೇಳದವರು, ಮಾವೇಲಿ ಪಾತ್ರಧಾರಿಗಳು ಪಾಲ್ಗೊಂಡು ನೋಡುಗರ ಗಮನ ಸೆಳೆದರು.
ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ. ಸುಧೀರ್ ಸ್ವಾಗತಿಸಿದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಕಾರ್ಯದರ್ಶಿ ಟಿ.ಕೆ. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಓಣಂ ಭಕ್ಷ್ಯ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಚಿತ್ರ-ವರದಿ: ಟಿ.ಸಿ. ನಾಗರಾಜ್, ಮೂರ್ನಾಡು