ಶ್ರೀಮತಿ ಚಿತ್ರಾ ಬಿ. ಪಿ ಅಧ್ಯಕ್ಷರು : ಮರಗೋಡು ಗ್ರಾಮ ಪಂಚಾಯತಿ
ಮರಗೋಡು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿರುವ ಒಂದು ಗ್ರಾಮ, ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರದಿಂದ 16 ಕಿಮೀ ದೂರದಲ್ಲಿದೆ. ಮರಗೋಡು ಗ್ರಾಮ ಪಂಚಾಯತಿಯು ಕಟ್ಟೆಮಾಡು ಎಂಬ ಉಪಗ್ರಾಮವನ್ನು ಹೊಂದಿದೆ.
ಇಲ್ಲಿನ ಜನಪ್ರತಿನಿಧಿಗಳ ಪ್ರಕಾರ ಸುಮಾರು 5000 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಹೆಚ್ಚಾಗಿ ಅರೆಭಾಷಿಕ ಗೌಡ ಹಾಗೂ ಕೊಡವ ಜನಾಂಗದವರಿದ್ದು ಉಳಿದಂತೆ ಮುಗೇರ, ಬಿಲ್ಲವ, ಮಲಯಾಳಿ(ತಿಯನ್) ಮೊದಲಾದ ಸಮುದಾಯದ ಜನರಿದ್ದಾರೆ.ಗ್ರಾಮದಲ್ಲಿ ಅರೆಭಾಷೆ, ಕೊಡವ, ತುಳು, ಮಲಯಾಳಂ ಭಾಷೆಯನ್ನು ಬಳಸುತ್ತಾರೆ.
ಮರಗೋಡು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಚಿತ್ರಾ ಬಿ. ಪಿ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.
ಸರ್ಚ್ ಕೂರ್ಗ್ ಮೀಡಿಯಾ ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ, ಪ್ರಸ್ತುತ ಮರಗೋಡು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿರುವ ಶ್ರೀಮತಿ ಚಿತ್ರಾ ಬಿ. ಪಿ ರವರು “ನಾನು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ಷೇತ್ರಕ್ಕೆ ಬಂದಿದ್ದು, ಶ್ರೀ ಕಾಂಗೀರ ಸತೀಶ್(ಅಶ್ವಿ) ರವರು ರಾಜಕೀಯವಾಗಿ ತೊಡಗಿಸಿಕೊಳ್ಳಲು ಪ್ರೇರಣಾದಾಯಕರಾಗಿದ್ದಾರೆ.” ಎಂದರು. ಸುಮಾರು ಎರಡೂವರೆ ವರ್ಷದಿಂದ ಪಂಚಾಯತ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ನೂತನ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಬಡವರಿಗೆ ಗೃಹ ನಿರ್ಮಾಣ ವ್ಯವಸ್ಥೆ ಕಲ್ಪಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು ರಸ್ತೆ ಸಂಪರ್ಕ ಕಲ್ಪಿಸುವುದು ಮೊದಲಾದ ಉದ್ದೇಶವನ್ನು ಇಟ್ಟುಕೊಂಡಿದ್ದ ಇವರು ಪ್ರಸ್ತುತ 30 ಗೃಹ ನಿರ್ಮಾಣ(ನಿವೇಶನ ಸಹಿತ) ಕ್ಕೆ ಹಣಕಾಸು ಮಂಜೂರು ಮಾಡಿಸಿದ್ದು, ಪ್ರತ್ಯೇಕವಾಗಿ ಅಂಗವಿಕಲರಿಗೆ ಮನೆ ನಿರ್ಮಾಣಕ್ಕೆ ಸರ್ಕಾರದ ಯೋಜನೆಯ ಮೂಲಕ ನೆರವು ನೀಡಿದ್ದಾರೆ. ಹಾಗೆಯೇ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಪೂರ್ಣಗೊಳಿಸುವ ಕಾರ್ಯ ನಡೆಯುತ್ತಿದೆ.
ಇವರ ಅವಧಿಯಲ್ಲಿ ಉಪಗ್ರಾಮ ಕಟ್ಟೆಮಾಡುವಿನಲ್ಲಿಯೂ ಜಲ ಜೀವನ್ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು, ರಸ್ತೆ ಸಂಪರ್ಕ, ಮೋರಿ, ಚರಂಡಿ ವ್ಯವಸ್ಥೆ ಚಾಲನೆಯಲ್ಲಿದೆ.
ಇವರು ಸಾಮಾಜಿಕವಾಗಿ ಗ್ರಾಮೀಣ ಸಂಘ ವಿರಾಜಪೇಟೆಯ ಸದಸ್ಯರಾಗಿದ್ದು, ಭಾ. ಜ. ಪ. ಮಹಿಳಾ ಮೋರ್ಚಾದಲ್ಲಿ ಗುರುತಿಸಿ ಕೊಂಡಿದ್ದಾರೆ. ಶೈಕ್ಷಣಿಕವಾಗಿ ಇವರು ಸರಕಾರಿ ಪ್ರಾಥಮಿಕ ಶಾಲೆ ಮರಗೋಡುವಿಗೆ ಮುಕ್ತ ಉದ್ಯಾನವನ, ಕಾವೇರಿ ಮಾತೆಯ ಪ್ರತಿಮೆ ಮತ್ತು ಶೌಚಾಲಯ ವ್ಯವಸ್ಥೆ ಒದಗಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲು ದತ್ತಿನಿಧಿ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ.
ಧಾರ್ಮಿಕವಾಗಿ ಶ್ರೀಯುತರು ಗ್ರಾಮ ಮತ್ತು ಉಪಗ್ರಾಮದ ಎಲ್ಲಾ ದೇವಾಲಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ. ಪಂಚಾಯತಿಯು ಇನ್ನಷ್ಟು ಅಭಿವೃದ್ಧಿಗೊಳ್ಳಲು ಅನುದಾನದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ಇವರು ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ.
ಇವರ ಅವಧಿಯಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮುಕ್ತ ಉದ್ಯಾನವನದ ನಿರ್ಮಾಣಕ್ಕಾಗಿ ಅಮೃತ ಗ್ರಾಮ ಪುರಸ್ಕಾರ ದೊಂದಿಗೆ 25 ಲಕ್ಷ ಬಹುಮಾನವಾಗಿ ದೊರೆತಿದೆ.
ಇವರ ಕಾರ್ಯಗಳಿಗೆ ಪಂಚಾಯತ್ ಸದಸ್ಯರು ಉತ್ತಮ ರೀತಿಯಲ್ಲಿ ಬೆಂಬಲ ದೊರೆಯುತ್ತಿದ್ದು, ಯುವ ಶಕ್ತಿಯು ಉತ್ತಮ ಕೆಲಸದ ಮೂಲಕ ರಾಜಕೀಯ ಪ್ರವೇಶ ಮಾಡಬೇಕು ಎಂದು ಪ್ರೇರಣಾ ನುಡಿಗಳನ್ನಾಡಿದರು.
ಕುಟುಂಬ ಪರಿಚಯ:
ಇವರ ತಂದೆ ದಿವಂಗತ. ಕರಿಯಪ್ಪ ಶ್ರೀಯುತರು ಕೃಷಿಕರಾಗಿದ್ದರು. ತಾಯಿ ಕಮಲ ಗೃಹಣಿಯಾಗಿದ್ದಾರೆ. ಶ್ರೀಮತಿ ಚಿತ್ರಾ ಬಿ. ಪಿ. ರವರ ಪತಿ ಪ್ರಶಾಂತ್ ಕೃಷಿಕರಾಗಿದ್ದಾರೆ. ದಂಪತಿಗಳಿಗೆ ದರ್ಶನ್ ಬಿ. ಪಿ. ಎಂಬ ಪುತ್ರನಿದ್ದು ಕೊಡಗು ವಿದ್ಯಾಲಯದಲ್ಲಿ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 04-10-2023