ಶ್ರೀಮತಿ ಕವಿತಾ ಚಂದ್ರ ಪ್ರಕಾಶ್, ಉಪಾಧ್ಯಕ್ಷರು: ಮರಗೋಡು ಗ್ರಾಮ ಪಂಚಾಯತಿಯ
ಮರಗೋಡು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿರುವ ಒಂದು ಗ್ರಾಮ, ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರದಿಂದ 16 ಕಿಮೀ ದೂರದಲ್ಲಿದೆ. ಮರಗೋಡು ಗ್ರಾಮ ಪಂಚಾಯತಿಯು ಕಟ್ಟೆಮಾಡು ಎಂಬ ಉಪಗ್ರಾಮವನ್ನು ಹೊಂದಿದೆ.
ಇಲ್ಲಿನ ಜನಪ್ರತಿನಿಧಿಗಳ ಪ್ರಕಾರ ಸುಮಾರು 5000 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಹೆಚ್ಚಾಗಿ ಅರೆಭಾಷಿಕ ಗೌಡ ಹಾಗೂ ಕೊಡವ ಜನಾಂಗದವರಿದ್ದು, ಉಳಿದಂತೆ ಮೋಗೇರ, ಬಿಲ್ಲವ, ಮಲಯಾಳಿ(ತಿಯನ್) ಮೊದಲಾದ ಸಮುದಾಯದ ಜನರಿದ್ದಾರೆ. ಗ್ರಾಮದಲ್ಲಿ ಅರೆಭಾಷೆ, ಕೊಡವ, ತುಳು, ಮಲಯಾಳಂ ಭಾಷೆಯನ್ನು ಬಳಸುತ್ತಾರೆ.
ಮರಗೋಡು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕವಿತಾ ಚಂದ್ರ ಪ್ರಕಾಶ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.
ಸರ್ಚ್ ಕೂರ್ಗ್ ಮೀಡಿಯಾ ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ, ಪ್ರಸ್ತುತ ಮರಗೋಡು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿರುವ ಶ್ರೀಮತಿ ಕವಿತಾ ಚಂದ್ರ ಪ್ರಕಾಶ್ ರವರು “ನಾನು ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಪಂಚಾಯತ್ ನಲ್ಲಿ ಸಿಬ್ಬಂದಿಯಾಗಿದ್ದ ಸಮಯದಿಂದಲೇ ರಾಜಕೀಯವಾಗಿ ತೊಡಗಿಸಿ ಕೊಳ್ಳುವ ಹಂಬಲ ಹೊಂದಿದ್ದೆ. ರಾಜಕೀಯದ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ವಂದಿಸಬೇಕೆಂಬ ಉದ್ದೇಶವಿದೆ. ನನಗೆ ಕಾಂಗೀರ ಸತೀಶ್(ಅಶ್ವಿ) ಹಾಗೂ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ರವರು ರಾಜಕೀಯವಾಗಿ ತೊಡಗಿಸಿಕೊಳ್ಳಲು ಪ್ರೇರಣಾದಾಯಕರಾಗಿದ್ದಾರೆ.” ಎಂದರು. ಸುಮಾರು ಎರಡೂವರೆ ವರ್ಷದಿಂದ ಪಂಚಾಯತ್ ನ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು, ನೂತನ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶವಿದ್ದು, ಅದನ್ನು ಬಹುಮಟ್ಟಿಗೆ ಸಾಧಿಸಿದ್ದೇನೆ ಎಂಬ ವಿಶ್ವಾಸದ ನುಡಿಗಳನ್ನಾಡಿದರು.
ಗ್ರಾಮದ ಸ್ವಚ್ಛತೆಯ ದೃಷ್ಟಿಯಿಂದ, ವಾರಕ್ಕೆ 2 ಬಾರಿ ಕಸ ಸಂಗ್ರಹಿಸುತ್ತಿದ್ದು ನಂತರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದೇವೆ ಎಂಬ ಮಾಹಿತಿ ನೀಡಿದರು.
ಇವರ ಅವಧಿಯಲ್ಲಿ ಗ್ರಾಮದ ರಸ್ತೆ ಸಂಪರ್ಕ ಕಾರ್ಯಗಳು ನಡೆದಿದ್ದು, ಕೆಲವು ರಸ್ತೆಗಳ ಕಾರ್ಯ ಬಾಕಿ ಇದೆ. ಇದನ್ನು ಪೂರ್ಣಗೊಳಿಸುವ ಭರವಸೆ ಹೊಂದಿದ್ದಾರೆ. ಗ್ರಾಮದಲ್ಲಿ ಸೂಕ್ತ ರೀತಿಯಲ್ಲಿ ಶವ ಸಂಸ್ಕಾರ ನಡೆಸಲು ಬೇಕಾಗಿರುವ ಯಂತ್ರಗಳನ್ನು ಶೀಘ್ರವಾಗಿ ತರಿಸಬೇಕು ಮತ್ತು ಅದಕ್ಕೆ ಬೇಕಾದ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇವರು ಸಾಮಾಜಿಕ ಕ್ಷೇತ್ರದಲ್ಲಿ ಧರ್ಮಸ್ಥಳ, ಸ್ವ ಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡಿದ್ದು, ಹಿಂದೂ ಹೆಣ್ಣುಮಕ್ಕಳ ರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ಪದಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತಿದ್ದಾರೆ ಹಾಗೂ ಭಾ. ಜ. ಪ. ಮಹಿಳಾ ಮೋರ್ಚಾದಲ್ಲಿ ಗುರುತಿಸಿ ಕೊಂಡಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಕಟ್ಟೆಮಾಡು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ತರಲು ಶ್ರಮಿಸಿದ್ದು, ಫಲವಾಗಿ 23 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲು ದತ್ತಿನಿಧಿ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಯುತರು ಗ್ರಾಮ ಮತ್ತು ಉಪಗ್ರಾಮದ ಎಲ್ಲಾ ದೇವಾಲಯಗಳ ಧಾರ್ಮಿಕ ಕಾರ್ಯಗಳಿಗೆ ಧನಸಹಾಯವನ್ನು ಒದಗಿಸಿದ್ದಾರೆ . ಪಂಚಾಯತಿಯ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದು, ಅನುದಾನ ದೊರೆತ ಬಳಿಕವಷ್ಟೇ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟ ಇವರು ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ.
ಕುಟುಂಬ ಪರಿಚಯ:
ಇವರ ತಂದೆ ಸುಳ್ಯ ಮೂಲದ ದೇವರಾಜ ಹಾಗೂ ತಾಯಿ ಗಂಗಮ್ಮ.. ಶ್ರೀಮತಿ ಕವಿತಾ ರವರ ಪತಿ ಚಂದ್ರ ಪ್ರಕಾಶ್ ಕೃಷಿಕರಾಗಿದ್ದಾರೆ. ದಂಪತಿಗಳಿಗೆ ಸಾನ್ವಿ (8ನೇ ತರಗತಿ), ಜಾನ್ವಿ (5ನೇ ತರಗತಿ) ಎಂಬ ಪುತ್ರಿಯರಿದ್ದು, ಬಿ. ಜಿ. ಎಸ್. ವಿದ್ಯಾಸಂಸ್ಥೆ ಸಿದ್ದಾಪುರದ ವಿದ್ಯಾರ್ಥಿಗಳಾಗಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 04-10-2023