ಕಾವೇರಿ ತುಲಾ ಸಂಕ್ರಮಣ – 2023 ವಿಶೇಷ ಸಂಚಿಕೆ

ಶ್ರೀ ಕಾವೇರಿ ತುಲಾ ಸಂಕ್ರಮಣ - 2023 ವಿಶೇಷ ಸಂಚಿಕೆ

(ಅಕ್ಟೋಬರ್​.17ರ ಮಧ್ಯರಾತ್ರಿ 1.27ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ.)

ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುವ ದಿನವೇ ತುಲಾ ಸಂಕ್ರಮಣ. ಈ ಬಾರಿ ಅಕ್ಟೋಬರ್‌ 18 ರಂದು ಬೆಳಗ್ಗೆ 1.27 ಗಂಟೆಗೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ವರ್ಷಕ್ಕೊಂದು ಬಾರಿ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣ ಎಂದು ಕರೆಯುತ್ತಾರೆ. ಈ ದಿನವೇ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಹಾಗಾಗಿ ಈ ದಿನವನ್ನು ಕಾವೇರಿ ಸಂಕ್ರಮಣ, ಕಾವೇರಿ ಸಂಕ್ರಾಂತಿಯೆಂದೂ ಕರೆಯುತ್ತಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗಿನ ಆರಾಧ್ಯದೈವ ಕಾವೇರಿ ತೀರ್ಥೋದ್ಭವಕ್ಕೆ ಈ ಬಾರಿಯ ಮಹೂರ್ತ ನಿಗದಿಯಾಗಿದೆ. ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಅಕ್ಟೋಬರ್‌ 17ರಂದು ಕಾವೇರಿ ತೀರ್ಥೋದ್ಭವಕ್ಕೆ ನಡೆಯಲಿದ್ದು, ಮಂಗಳವಾರ ಮಧ್ಯರಾತ್ರಿ 1:27ಕ್ಕೆ ಕರ್ಕಾಟಕ ಲಗ್ನದಲ್ಲಿ ಮಹೂರ್ತ ನಿಗದಿ ಮಾಡಲಾಗಿದೆ.

ಅ. 17 ರಂದು ಮಧ್ಯರಾತ್ರಿ ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಲಿದ್ದಾಳೆ. ಬ್ರಹ್ಮಕುಂಡಿಕೆಯಲ್ಲಿ ಜೀವ ಜಲ ಉಕ್ಕಿ ಜೀವನದಿ ಕಾವೇರಿ ದರ್ಶನವಾಗಲಿದೆ. ತೀರ್ಥೋದ್ಭವಕ್ಕೆ ಪೂರಕವಾಗಿ ವಾರ ಮೊದಲೇ ವಿವಿಧ ಕಾರ್ಯಗಳು ನೆರವೇರಲಿವೆ.

ಕೊಡಗು ಮಾತ್ರವಲ್ಲದೇ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾನಾ ಭಾಗಗಳಿಂದ ಭಕ್ತರು ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಭಕ್ತರು ತೀರ್ಥೋದ್ಭವಕ್ಕೆ ಆಗಮಿಸಿ ಸ್ನಾನ ಮಾಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಅಕ್ಟೋಬರ್‌ 17ರಂದೇ ತೀರ್ಥೋದ್ಭವ ನಡೆಯಲಿದ್ದು, ಆದರೆ ಪ್ರತಿ ವರ್ಷ ಆರು ಗಂಟೆಯ ಲೆಕ್ಕದಲ್ಲಿ ನಡೆಯುತ್ತದೆ. ಹಿಂದಿನ ವರ್ಷ ಸಂಜೆ ನಡೆದಿದ್ದರೆ, ಈ ವರ್ಷ ಮಧ್ಯರಾತ್ರಿ. ಮರು ವರ್ಷ ಬೆಳಗಿನ ಜಾವ. ನಂತರದ ವರ್ಷದಲ್ಲಿ ಮಧ್ಯಾಹ್ನ ನಡೆಯುತ್ತದೆ. ಹೀಗೆ ಪ್ರತಿ ವರ್ಷ ಆರು ಗಂಟೆಯಲ್ಲಿ ಮುಹೂರ್ತ ಬದಲಾಗುತ್ತಾ ಹೋಗುತ್ತದೆ ಎನ್ನುವುದನ್ನು ಸ್ಥಳೀಯರು ವಿವರಿಸಿದ್ದಾರೆ.

ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿ ದರ್ಶನ ನೀಡುತ್ತಾಳೆ ಎನ್ನುವುದು ಪುರಾತನ ಕಾಲದಿಂದಲೂ ಇರುವ ನಂಬಿಕೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.

ಕಾವೇರಿ ತೀರ್ಥೋದ್ಭವದ ಮಾರನೆಯ ದಿನ ಮನೆ ಮನೆಗಳಲ್ಲಿ ತೀರ್ಥವನ್ನಿಟ್ಟು ಪೂಜಿಸುತ್ತಾರೆ. ಇದಕ್ಕೆ ‘ಕಣಿ ಪೂಜೆ’ ಎಂದು ಹೇಳುತ್ತಾರೆ. ತೀರ್ಥ ರೂಪದಲ್ಲಿ ಮನೆ ಪ್ರವೇಶಿಸುವ ಕಾವೇರಿ ಭಾಗ್ಯ ತರುತ್ತಾಳೆ ಎಂದು ಹೇಳುತ್ತಾರೆ. ತೀರ್ಥೋದ್ಭವದ ನಂತರ ಹತ್ತು ದಿನಗಳ ಕಾಲ ಅತ್ಯಂತ ಪವಿತ್ರ ದಿನ. ಹತ್ತನೆ ದಿನ ಹಿರಿಯರನ್ನು ಸ್ಮರಿಸುವ ಹಾಗೂ ಅವರಿಗೆ ‘ಮೀದಿ’ (ಎಡೆ) ಇಡುವ ಕಾರ್ಯಕ್ರವೂ ಐನ್‌ಮನೆಗಳಲ್ಲಿ ನಡೆಯುತ್ತದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕಾವೇರಿ ತೀರ್ಥೋದ್ಭವ ಪವಿತ್ರ ಕ್ಷಣವಾಗಿದ್ದು, ಕುಲದೇವಿಯಾಗಿ ಪೂಜಿಸುತ್ತಾರೆ.

ಬೆಟ್ಟದ ಮೇಲ್ಭಾಗದಲ್ಲಿರುವ ಕಾವೇರಿ ತೀರ್ಥೋದ್ಭವದ ಕುಂಡಿಕೆ ಯಾವುದೇ ಕಾಲದಲ್ಲಿಯೂ ಬತ್ತದಿರುವುದು ವಿಸ್ಮಯಕಾರಿಯಾಗಿದೆ. ಎಂತಹ ಬರಗಾಲದ ಪರಿಸ್ಥಿತಿಯಲ್ಲಿಯೂ ಈ ಕುಂಡಿಕೆ ಸದಾ ತುಂಬಿರುತ್ತದೆ. ಉಳಿದ ನದಿ, ಕೊಳ್ಳಗಳು ಬೇಸಿಗೆಯಲ್ಲಿ ತಳಮಟ್ಟಕ್ಕೆ ಕುಸಿಯುತ್ತವೆ. ಆದರೆ, ಕಾವೇರಿ ಕುಂಡಿಕೆಯಲ್ಲಿ ಸದಾ ತಿರ್ಥ ಉತ್ಪತ್ತಿಯಾಗುತ್ತಿರುತ್ತದೆ. ಇಲ್ಲಿಯವರೆಗೆ ಬತ್ತಿದ ಕುಂಡಿಕೆಯನ್ನು ಯಾರೂ ನೋಡಿಲ್ಲ ಎಂದು ಹೇಳುತ್ತಾರೆ.

ವಿಶೇಷ ಎಂದರೆ ತೀರ್ಥೋದ್ಭವ ಆದ ಕ್ಷಣದಿಂದ ಸಾವಿರಾರು ಕೊಡಗಳಲ್ಲಿ ತೀರ್ಥವನ್ನು ಕುಂಡಿಕೆಯಿಂದ ತೆಗೆಯುತ್ತಾರೆ. ಭಕ್ತರಿಗೆ ಎರಚುವುದಲ್ಲದೆ ಎಲ್ಲರೂ ಬಾಟಲಿ, ಕೊಡಗಳಲ್ಲಿ ಹಾಗೂ ಡ್ರಮ್‌ಗಳಲ್ಲಿ ಕೊಂಡೊಯ್ಯುತ್ತಾರೆ. ಕಾವೇರಿಗೆ ಭೇಟಿ ನೀಡಲು ಸಾಧ್ಯ ಆಗದವರು ಕೂಡ ಬೇರೆಯವರು ತಂದುಕೊಟ್ಟ ತೀರ್ಥವನ್ನು ಸೇವಿಸುತ್ತಾರೆ. ಕಾವೇರಿ ತೀರ್ಥೋದ್ಭವದ ಮಾರನೇ ದಿನ ಕೊಡಗು ಮಾತ್ರವಲ್ಲದೆ ಬೆಂಗಳೂರು, ಮಂಡ್ಯ, ತಮಿಳುನಾಡಿನ ಹಲವು ಭಾಗಗಳಿಗೆ ಡ್ರಮ್‌ಗಳಲ್ಲಿ ತಿರ್ಥವನ್ನು ತುಂಬಿಸಿ ವಾಹನಗಳಲ್ಲಿ ಸಾಗಿಸಿ ವಿತರಣೆ ಮಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಒಂದೇ ದಿನ ತೀರ್ಥ ತೆಗೆದರೂ ಒಂದಿಂಚು ತೀರ್ಥ ಕೆಳಗೆ ಹೋಗದೆ ಸದಾ ತುಂಬಿರುತ್ತದೆ. ಹಲವರಿಗೆ ಇದು ದೇವಿಯ ಮಹಿಮೆಯಾದರೆ ಇನ್ನು ಕೆಲವರಿಗೆ ಪ್ರಕೃತಿಯ ವಿಸ್ಮಯ.

ಕಾವೇರಿ ಜಲವನ್ನು ತೀರ್ಥೋದ್ಭವದ ಸಂದರ್ಭ ಮಾತ್ರ ಸೇವಿಸದೆ ಇಡೀ ವರ್ಷ ಮನೆಗಳಲ್ಲಿ ಸಂಗ್ರಹಿಸಿಡುತ್ತಾರೆ. ದೇವರ ಕೋಣೆಯಲ್ಲಿ ಸ್ಥಾನ ಪಡೆಯುವ ಜಲ ಇಡೀ ವರ್ಷ ಇಟ್ಟರೂ ಕೆಡುವುದಿಲ್ಲ. ಇದನ್ನು ಪವಿತ್ರ ಕಾರ್ಯಗಳಿಗೆ ಬಳಸುತ್ತಾರೆ. ಕಾಯಿಲೆ ಅಥವಾ ಇನ್ನಿತರ ಸಮಸ್ಯೆ ಕಂಡು ಬಂದಾಗ ತೀರ್ಥ ಸೇವಿಸಿದರೆ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಅಲ್ಲದೆ, ಪ್ರಾಣ ಹೋಗುವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ಕುಡಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಕಾವೇರಿ ಪುರಾಣ: 

ಸ್ಕಂದ ಪುರಾಣದ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಮುನಿಯು ಏಕಾಗ್ರತೆಯಿಂದ ಸಾವಿರ ವರ್ಷಗಳವರೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ತಪಸ್ಸನ್ನು ಆಚರಿಸುವಾಗ ಆತನ ದೇಹದಿಂದ ಅದ್ಭುತವಾದ ಅಗ್ನಿಯು ಉತ್ಪನ್ನವಾಗಿ, ಆ ತಪೋಜ್ವಾಲೆಯು ಮೂರೂ ಲೋಕಗಳನ್ನು ತಲ್ಲಣಗೊಳಿಸಿತ್ತು. ಮುನಿಗಳೂ ಪಿತೃದೇವತೆಗಳೂ ಬ್ರಹ್ಮದೇವನಲ್ಲಿ ಜ್ವಾಲೆಯಿಂದ ಪಾರು ಮಾಡುವಂತೆ ಬೇಡಿಕೊಂಡರು.

ಬ್ರಹ್ಮನು ಕವೇರ ಮುನಿಯ ಬಳಿಗೆ ಬಂದು ತನ್ನ ಕೈನೀರಿನಿಂದ ಸಂಪ್ರೋಕ್ಷಣೆ ಮಾಡಿದ ನಂತರ ತಪೋಜ್ವಾಲೆಯು ಶಮನಗೊಂಡಿತು. ಬಳಿಕ ಬ್ರಹ್ಮನು ತಪಸ್ಸಿನ ಉದ್ದೇಶವೇನೆಂದು ಕೇಳಿದಾಗ ‘ಮಕ್ಕಳಿಲ್ಲದ ನನಗೆ ಸಂತಾನ ಭಾಗ್ಯವನ್ನು ಕರುಣಿಸು’ ಎಂದು ಕೇಳುತ್ತಾನೆ. ಬ್ರಹ್ಮ ದೇವನು ಕವೇರ ಮುನಿಯನ್ನು ಕುರಿತು ‘ ಹಿಂದಿನ ಜನ್ಮದಲ್ಲಿ ನೀನು ಮಾಡಿರುವುದಿಲ್ಲ. ಆದುದರಿಂದ ನಿನಗೆ ಮಕ್ಕಳ ಭಾಗ್ಯವಿಲ್ಲ, ಚಿಂತಿಸಬೇಡ ನಿನಗೆ ಲೋಪಾಮುದ್ರೆಯೆಂಬ ಕುಲೋದ್ಧಾರಕಳಾದ ಕನ್ನಿಕೆಯನ್ನು ದಯಪಾಲಿಸುತ್ತೇನೆ’ ಎಂದು ಅನುಗ್ರಹಿಸುತ್ತಾನೆ. ಸಂತುಷ್ಟನಾದ ಕವೇರನು ಪತ್ನಿಯೊಡಗೂಡಿ ಲೋಪಮುದ್ರೆಯನ್ನು ಸ್ವೀಕರಿಸುತ್ತಾನೆ.

ಜಗತ್ತಿಗೆ ಕ್ಷೇಮವಾಗುವಂತೆ ಸರ್ವ ಪ್ರಾಣಿ ಪಕ್ಷಿಗಳು ಮಾನವ ಕುಲಕ್ಕೆ ಕಲ್ಯಾಣ ಉಂಟುಮಾಡುವ ವಿಶೇಷ ತಪಃಶಕ್ತಿಯಿಂದ ನದಿಯಾಗುವಂತೆ ಬ್ರಹ್ಮದೇವನಿಂದ ಅನುಗ್ರಹಿತಳಾದ ಲೋಪಾಮುದ್ರೆ ಕವೇರಮುನಿಯ ಆಶ್ರಮದಲ್ಲಿ ‘ಕಾವೇರಿ’ ಯಾಗಿ ಬೆಳೆಯುತ್ತಿದ್ದಳು ಕವೇರ ಮುನಿಯ ಅಂತ್ಯಕಾಲ ಸಮೀಪಿಸಿ ತನ್ನ ಪತ್ನಿ ಸಮೇತ ದೇಹ ತ್ಯಾಗ ಮಾಡಿ ಬ್ರಹ್ಮಲೋಕ ಕ್ಕೆ ತೆರಳುತ್ತಾನೆ. ಲೋಪಾಮುದ್ರೆ ತನ್ನ ತಪಸ್ಸಿನಿಂದ ಪರಮೇಶ್ವರನನ್ನು ಮೆಚ್ಚಿಸಿ ನಿರ್ಮಲವಾದ ನದಿರೂಪವನ್ನು ಹೊಂದುವಂತಹ ವರವನ್ನು ಪಡೆದುಕೊಂಡಳು.

ಒಂದು ದಿನ ಅಗತ್ಯ ಮುನಿಯು ತನ್ನ ಶಿಷ್ಯನೊಂದಿಗೆ ಋಷಿ ಆಶ್ರಮ ಗಳಿಂದ ಕಂಗೊಳಿಸುತ್ತಿರುವ ಬ್ರಹ್ಮಗಿರಿಗೆ ಬಂದು ಆತಿಥ್ಯವನ್ನು ಸ್ವೀಕರಿಸುತ್ತಾನೆ. ಆಶ್ರಮದಲ್ಲಿ ಕಾವೇರಿಯನ್ನು ಕಂಡು ಸಂತತಿ ಗೋಸ್ಕರ ಕಾವೇರಿಯನ್ನು ವಿವಾಹವಾಗುವ ತನ್ನಮನದ ಇಚ್ಚೆಯನ್ನು ಕಾವೇರಿಯಲ್ಲಿ ಕೇಳಿಕೊಂಡಾಗ ಋಷಿವಚನವನ್ನು ಉಲ್ಲಂಘಿಸಬಾರದೆಂದು ನಿರ್ಧರಿಸಿ ಮುನಿಯ ಕೋರಿಕೆಯನ್ನು ಒಪ್ಪಿ ಮುನಿಯನ್ನು ವಿವಾಹವಾಗಿ ಬ್ರಹ್ಮಗಿರಿ ಯಲ್ಲಿ ವಾಸವಾಗಿದ್ದಳು

ಕಾವೇರಿ ತಾನು ನದಿಯಾಗಿ ಹರಿದು ಲೋಕಕಲ್ಯಾಣ ಮಾಡಬೇಕೆಂಬ ತನ್ನ ಮನದ ಬಯಕೆಯನ್ನು ಅಗಸ್ತ್ಯನ ಮುಂದೆ ಇಟ್ಟು ತನಗೆ ಜಲರೂಪಿಯಾಗಲು ವರವನ್ನು ನೀಡಿ ಅನುಗ್ರಹಿಸಲು ಕೇಳಿಕೊಂಡಳು. ಆದರೆ ಲೋಪಾಮುದ್ರೆ ಕೋರಿಕೆಯನ್ನು ಅಗಸ್ತ್ಯ ಮುನಿ ಪುರಸ್ಕರಿಸಲಿಲ್ಲ. ನಿನಗೆ ವರವನ್ನು ಈಗ ನೀಡಲಾರೆ. ಮುಂದೊಂದು ದಿನ ನೀಡುತ್ತೇನೆ ಎಂದು ಹೇಳಿದನು. ಇದರಿಂದ ಕೋಪಗೊಂಡ ಕಾವೇರಿಯು ‘ಎಲೆ ಅಗಸ್ತ್ಯನೇ ನೀನು ನನ್ನನ್ನು ಉಪೇಕ್ಷೆ ಮಾಡಿದ ಕ್ಷಣವೇ ನಾನು ನದಿಯಾಗಿ ಹರಿಯುತ್ತೇನೆ’ ಎಂದು ಎಚ್ಚರಿಸಿದಳು. ಇದರಿಂದ ಆತಂಕಿತನಾದ ಅಗಸ್ತ್ಯ ಮುನಿಯ ತನ್ನ ತಪಸ್ಸಿನ ಶಕ್ತಿಯಿಂದ ಕಾವೇರಿಯನ್ನು ತನ್ನ ಕಮಂಡಲುವಿನ ಒಳಗೆ ಬಂಧಿಸಿಡುತ್ತಾನೆ.

ಅಗಸ್ತ್ಯಮುನಿಯ ಕನಕಧಾರಕ್ಕೆ ಸಂಧ್ಯಾವಂದನೆಗೆ ತೆರಳುವ ಸಂದರ್ಭದಲ್ಲಿ ಕಮಂಡಲುವನ್ನು ತನ್ನ ಶಿಷ್ಯರ ಕೈಯಲ್ಲಿ ಕೊಟ್ಟು ಹೊರಟು ಹೋದನು .ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಕಾವೇರಿಯು ಕೋಪದಿಂದ ಕಣ್ಣನ್ನು ಕೆರಳಿಸುತ್ತಾ ಜಲ ರೂಪಿಯಾಗಿ ಕಮಂಡಲುವಿನಿಂದ ಜಾರಿ ಬಿದ್ದು ಜಲರೂಪಿಯಾಗಿ ಹರಿಯತೊಡಗಿದಳು ಇದನ್ನು ಕಂಡ ಶಿಷ್ಯರು ಬೆಚ್ಚಿ ಬಿದ್ದು ಆಕೆಯನ್ನು ತಡೆಯಲು ಯತ್ನಿಸಿದಾಗ ಕಾವೇರಿಯು ಕಣ್ಮರೆಯಾಗಿ ಗುಪ್ತಗಾಮಿನಿಯಾಗಿ ಹರಿಯತೊಡಗಿದಳು ಇದನ್ನು ಅರಿತ ಅಗಸ್ತ್ಯಮುನಿ ಆಗಮಿಸಿ ಕಂಡಾಗ ಕಾವೇರಿಯು ಜಲರೂಪಿಯಾಗಿಮೂರು ಯೋಜನ ದೂರ ಹರಿದು ದಾಟಿ ಹೋಗಿಯಾಗಿತ್ತು

ಅಗಸ್ತ್ಯ ಮುನಿ ಗೆ ತನ್ನ ತಪ್ಪಿನ ಅರಿವಾದಾಗ ಪತ್ನಿಯನ್ನು ಕುರಿತು ಎಲೈ ಸುಂದರಿಯೇ ಪಾವನಳೇ, ಪಾಪನಾಶಿನಿ ಕವೇರ ಕುವರಿಯೇ ನಾನು ನಿನ್ನನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ನೀನು ನಿರ್ಧರಿಸಿದಂತೆ ನದಿ ರೂಪ ತಾಳಿ ಲೋಕ ಕಲ್ಯಾಣ ಮಾಡುವಂತವಳಾಗು, ಆದರೆ ಇನ್ನೊಂದು ರೂಪದಲ್ಲಿ ನನಗೆ ಮಡದಿಯಾಗಿರುವಂತೆ ಕೇಳಿಕೊಂಡಾಗ ಕಾವೇರಿ ಸಮ್ಮತಿಸಿ ತನ್ನ ತನುವನ್ನು ಎರಡಾಗಿ ಪರಿವರ್ತಿಸಿ ಮೊದಲಿನ ಭಾಗ ಲೋಪಾಮುದ್ರೆಯಾಗಿ ಅಗಸ್ತ್ಯನ ಪತ್ನಿಯಾದಳು. ಇನ್ನೊಂದು ಭಾಗ ಕಾವೇರಿ ಎಂಬ ಹೆಸರಿನಿಂದ ನದೀರೂಪವನ್ನು ತಳೆದು ಪವಿತ್ರ ನದಿಯಾಗಿ ತನ್ನ ಸಖಿಯಾದ ಮಣಿಕರ್ಣಿಕೆಯೊಡನೆ ಸಮುದ್ರವನ್ನು ಸೇರಿದಳು.

ಇತ್ತ ಸುಯಜ್ಞನೆಂಬ ಮಕ್ಕಳಿಲ್ಲದ ವಿಷ್ಣು ಭಕ್ತ ತಪಸ್ಸನ್ನು ಆಚರಿಸಿ ವಿಷ್ಣುವನ್ನು ಒಲಿಸಿಕೊಂಡು ತನ್ನ ಕೋರಿಕೆಯಂತೆ ವರವಾಗಿ ಸುಜ್ಯೋತಿ ಎಂಬ ಕನ್ನಿಕೆಯನ್ನು ಮಗಳಾಗಿ ಪಡೆದು ನೆಲೆಸಿದ್ದನು. ಆ ಸಂದರ್ಭದಲ್ಲಿ ಇಂದ್ರನು ಆಶ್ರಮಕ್ಕೆ ಬಂದು ಸುಜ್ಯೋತಿಯನ್ನು ಕಂಡು ಮೋಹಿತನಾಗಿ ತನ್ನನ್ನು ವರಿಸುವಂತೆ ಕೇಳಿಕೊಂಡನು.ಇದನ್ನು ಒಪ್ಪದ ಸುಜ್ಯೋತಿ ತನಗೆ ನದಿ ರೂಪ ತಳುವ ಶಕ್ತಿಯನ್ನು ಪಡೆದಿದ್ದರೂ ಇಂದ್ರನ ಶಾಪಕ್ಕೆ ಗುರಿಯಾಗಿ ಜಲಶೂನ್ಯಳಾಗಿದ್ದಳು. ಶಾಪಕ್ಕೆ ಪರಿಹಾರವಾಗಿ ಕಾವೇರಿಯನ್ನು ದರ್ಶನ ಮಾಡಿದರೆ ಶಾಪ ವಿಮೋಚನೆಯಾಗುವುದು ಎಂದು ಅರಿತ ಸುಜ್ಯೋತಿ ತನ್ನ ಸಖಿಯಾದ ಕನ್ನಿಕೆಯೊಡನೆ ಬ್ರಹ್ಮಗಿರಿಯಿಂದ ಕಾವೇರಿ ನದಿರೂಪವಾಗಿ ಬರುತ್ತಿರುವಾಗ ಆಕೆಯನ್ನು ದರ್ಶನ ಮಾಡಿ ತನ್ನ ಮನದ ಬಯಕೆಯನ್ನು ಹೇಳಿಕೊಂಡು ಬಳಿಕ ಕಾವೇರಿಯ ಜೊತೆ ಹರಿದು ಸಮುದ್ರವನ್ನು ಸೇರುತ್ತಾಳೆ.

ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಶುಭ-ಅಶುಭ ಸಂದರ್ಭದಲ್ಲಿ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತುಲಾ ಮಾಸದಲ್ಲಿ ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯಳಾಗುತ್ತಾಳೆ ಎಂಬುದು ಪ್ರತೀತಿ. ಇದರಿಂದಾಗಿಯೇ ಕಾವೇರಿಯನ್ನು ದಕ್ಷಿಣದ ಗಂಗೆ ಎಂದು ಕರೆಯಲಾಗುತ್ತದೆ. ಕಾವೇರಿ ಕನ್ನಡಿಗರ ಪಾಲಿಗೆ ಜೀವನದಿ. ತಮಿಳರ ಪಾಲಿಗೆ ಭಾಗ್ಯಲಕ್ಷ್ಮಿ. ಕೊಡಗಿನವರ ಪಾಲಿಗೆ ಕುಲದೇವತೆ. ಕೇವಲ ಕರ್ನಾಟಕ, ತಮಿಳುನಾಡು ಮಾತ್ರವಲ್ಲ ಕೇರಳ, ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯ ಜನತೆ ಕೂಡ ಕಾವೇರಿ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾವೇರಿಯು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಒಟ್ಟು 765 ಕಿ.ಮೀ. ಹರಿದು 27,700 ಚದರ ಕಿ.ಮೀ. ಪ್ರದೇಶಗಳಷ್ಟು ಭೂಮಿಗೆ ನೀರುಣಿಸಿ ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತಾಳೆ. ಇಷ್ಟೇಲ್ಲ ರಾಜ್ಯಗಳಿಗೆ ಉಪಯೋಗವಾಗ ಕಾವೇರಿ ನದಿಯು, ತೀರ್ಥೋದ್ಭವ ದಿನ ದೇವತೆ ರೂಪವಾಗಿ ಭಾಕ್ತದಿಗಳಲ್ಲಿ ಕಾಣಿಸುತ್ತಾಳೆ. ನೀವು ತೀರ್ಥೋದ್ಭವದಲ್ಲಿ ಮುಳಿಗಿ ಪುಣ್ಯ ಪ್ರಾಪ್ತಿಯಾಗಬೇಕೆಂದರೇ, ಕಾವೇರಿ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಿ.

ಕಾವೇರಿಯ ಉಗಮಸ್ಥಳವಾದ ಕೊಡಗಿನಲ್ಲಿ ತುಲಾ ಸಂಕ್ರಾಂತಿಯಂದು ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರೆಯು ನಡೆಯುತ್ತದೆ. ಈ ಉತ್ಸವವು ಅಕ್ಟೋಬರ್‌ 17ರಿಂದ ನವೆಂಬರ್‌ 17ರವರೆಗೆ ನಡೆಯುತ್ತದೆ. ಕೊಡಗಿನ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇವಸ್ಥಾನದಿಂದ ಸುಮಾರು 8 ಕಿ.ಮೀ ದೂರದ ಬೃಹ್ಮಗಿರಿಯ ತಪ್ಪಲಿನಲ್ಲಿ ಕಾವೇರಿಯ ಉಗಮಸ್ಥಾನವಿದೆ. ಅದುವೇ ತಲಕಾವೇರಿ.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments