ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಅಕ್ಟೋಬರ್ 15ರಿಂದ 23ರವರೆಗೆ ಪ್ರತಿನಿತ್ಯ ಸಂಜೆ 7-00ಗಂಟೆಯಿಂದ ದುರ್ಗಾ ಪೂಜೆ ನಡೆಯಲಿದ್ದು 24ರಂದು ಬೆಳಿಗ್ಗೆಯಿಂದ ವಿವಿಧ ಪೂಜೆಗಳು ಸೇರಿದಂತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಇತಿಹಾಸ ಪ್ರಸಿದ್ದದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹಳ ಹಿಂದಿನ ಕಾಲದಿಂದಲೇ ಇಲ್ಲಿ ದುರ್ಗಾ ಪೂಜೆಯನ್ನು ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದು ಅದನ್ನು “ದುರ್ಗಾ ನಮಸ್ಕಾರ” ಪೂಜೆ ಎಂದು ಕರೆಯಲಾಗುತ್ತಿದೆ. ಹಿಂದಿನ ಕಾಲಘಟ್ಟದಲ್ಲಿ ವಿಧ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಈ ಹಬ್ಬ ನಡೆಯುತ್ತಿದ್ದು, ಇದೀಗ ನವರಾತ್ರಿ ಉತ್ಸವದ ಸಮಯ ಶ್ರೇಷ್ಠ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ನವದುರ್ಗೆಯರ ಸ್ಮರಣೆ ಮಾಡುತ್ತಾ ವಿವಿಧ ಪೂಜೆಯನ್ನು ಮಾಡಲಾಗುತ್ತದೆ. ಅ-15ರಂದು ಭಾನುವಾರ ರಾತ್ರಿ 7-00ಗಂಟೆಗೆ ಶೈಲಪುತ್ರಿ ದೇವಿ ಪೂಜೆ, 16ರಂದು ಬ್ರಹ್ಮಚಾರಿಣಿ ದೇವಿ, 17ರಂದು ಚಂದ್ರಘಂಟಾ ದೇವಿ, 18ರಂದು ಕೂಶ್ಮಾಂಡ ದೇವಿ, 19ರಂದು ಸ್ಕಂದಾಮಾತ ದೇವಿ, 20ರಂದು ಕಾತ್ಯಾಯಿನಿ ದೇವಿ, 21ರಂದು ಕಾಳರಾತ್ರಿ ದೇವಿ, 22ರಂದು ಮಹಾಗೌರಿ ಅನ್ನಪೂರ್ಣೇಶ್ವರಿ ದೇವಿ, 23ರ ಆಯುಧ ಪೂಜೆಯ ದಿವಸ ಸಂಜೆ ಸಿದ್ದಿದಾತ್ರಿ ದೇವಿಗೆ ಪೂಜೆಗಳು ನಡೆಯುತ್ತವೆ, ವಿಜಯದಶಮಿಯ ಕೊನೆಯ ದಿನವಾದ 24ರಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾವಿಧಿ ವಿಧಾನಗಳು ನಡೆಯುತ್ತದೆ.
ಅಕ್ಟೋಬರ್15 ಭಾನುವಾರ ಸಂಜೆ 7-00ಗಂಟೆಗೆ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ಸಾಮೂಹಿಕ ಪೂಜೆಯ ಬಳಿಕ 16ರಿಂದ ನಿಯಮಾನುಸಾರ ಮೂಕಳೇರ, ಮಚ್ಚಿಯಂಡ, ಚೇಂದಿಮಾಡ, ಕೊಳೇರ, ಸಣ್ಣುವಂಡ, ಮನೆಯಪಂಡ ಹೀಗೆ ಊರಿನ ವಿವಿಧ ಕುಟುಂಬಗಳ ಪೂಜೆ ಇರುತ್ತದೆ. ಇದರೊಂದಿಗೆ ಹಳ್ಳಿಗಟ್ಟು ಊರು ಮಾತ್ರವಲ್ಲದೆ ಸಾರ್ವಜನಿಕರು ಯಾರು ಬೇಕಾದರೂ ಸಾಮೂಹಿಕವಾಗಿ ಪೂಜೆಯನ್ನು ಮಾಡಿಸಬಹುದಾಗಿದೆ. 15ರಿಂದ 23ರವರೆಗೆ ಸಂಜೆ 7-00 ಗಂಟೆಗೆ ಪೂಜೆ ಆರಂಭವಾಗಲಿದ್ದು ಪೂಜೆ ಮಾಡಿಸುವ ಸಾರ್ವಜನಿಕರು ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿ ಪೂಜೆಯ ಸಾಮಾಗ್ರಿಗಳ ಮಾಹಿತಿಯನ್ನು ಪಡೆದು ಪೂಜಾ ದಿನದಂದು ಸಂಜೆ 5-00ಗಂಟೆಯ ಒಳಗೆ ಪೂಜಾ ಸಾಮಗ್ರಿಗಳನ್ನು ದೇವಸ್ಥಾನದ ಅರ್ಚಕರಿಗೆ ತಲುಪಿಸಬೇಕಿದೆ. ಆಯುಧ ಪೂಜೆಯ ದಿನದಂದು ದೇವಸ್ಥಾನದಲ್ಲಿ ವಾಹನ ಪೂಜೆ ನಡೆಯಲಿದ್ದು ಅಂದು ಸಂಜೆಯ ದುರ್ಗಾ ಪೂಜೆ 5-00ಗಂಟೆಗೆ ನಡೆಯಲಿದೆ ಪ್ರತಿನಿತ್ಯ ಅನ್ನಸಂತರ್ಪಣೆ ಕಾರ್ಯಕ್ರಮ ಇರುತ್ತದೆ. ನವರಾತ್ರಿ ಉತ್ಸವದ ಕೊನೆಯ ದಿನ 24ರಂದು ಬೆಳಿಗ್ಗೆಯಿಂದ ಪೂಜೆ ಇರುತ್ತದೆ. ಬೆಳಿಗ್ಗೆ 7-00 ಗಂಟೆಗೆ ಗಣಪತಿ ಹೋಮದ ಬಳಿಕ ವಿವಿಧ ಪೂಜಾವಿಧಿ ವಿಧಾನಗಳು ನಡೆದು 11-00 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಹಾಗೂ ಭದ್ರಕಾಳಿಗೆ ಮಹಾಮಂಗಳಾರತಿ ನಡೆದು, ಬಳಿಗೆ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಾಮೂಹಿಕ ಪೂಜೆ ಮಾಡಿಸುವವರು ಹಾಗೂ ಅನ್ನಸಂತರ್ಪಣೆಗೆ ಅಕ್ಕಿ ಸೇರಿದಂತೆ ತರಕಾರಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ತಲುಪಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ದೇವಸ್ಥಾನದ ಅರ್ಚಕರನ್ನು ಬೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ಅವರು ದೇವಸ್ಥಾನದಲ್ಲಿ ಯಾವ ಸಮಯದಲ್ಲಿ ಬೇಕಾದರೂ ಲಭ್ಯ ಇರುತ್ತಾರೆ.
ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಅರ್ಚಕರು: 94499 47810, ಆಡಳಿತ ಮಂಡಳಿ: 9448301792, 94838 15430 ಸಂಪರ್ಕಿಸಬಹುದಾಗಿದೆ.