ಕುಂದತ್ ಬೊಟ್ಟ್’ಲ್ ನೇಂದಾ ಕುದುರೆ… ಪಾರಣಮಾನಿಲ್ ಅಳ್ಂಜ ಕುದುರೆ… ಎಂಬ ಬೇಡುಹಬ್ಬದ ಹಾಡಿನ ಸಾಲಿನಲ್ಲಿಯೇ ಅಡಕವಾಗಿರುವ ಇತಿಹಾಸ ಪ್ರಸಿದ್ಧದ ಬೊಟ್ಟ್’ಲಪ್ಪ (ಈಶ್ವರ) ದೇವರ ವಾರ್ಷಿಕ ಬೋಡ್ ನಮ್ಮೆ ಇದೇ ಅಕ್ಟೋಬರ್ 17 ಹಾಗೂ 18ರಂದು ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡ್ ಕುಂದ ಮುಗುಟಿಗೇರಿ ಗ್ರಾಮದಲ್ಲಿ ನಡೆಯಲಿದೆ.
ವರ್ಷಂಪ್ರತಿ ಕಾವೇರಿ ತೀರ್ಥೋದ್ಭವದ ದಿನದಂದು ನಡೆಯುವ ಬೊಟ್ಟಿಯತ್ ನಾಡ್ ಕುಂದ ಮುಗುಟಿಗೇರಿ ಗ್ರಾಮದ ಈ ಬೇಡು ಹಬ್ಬದಲ್ಲಿ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕುಂದಬೆಟ್ಟದ ಮೇಲಿರುವ ಈಶ್ವರ ದೇವರಿಗೆ ಅರ್ಪಿಸುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯುತ್ತದೆ. ಪ್ರತೀವರ್ಷ 16 ಹಾಗೂ 17ರಂದು ಅಥವಾ 17 ಹಾಗೂ 18ರಂದು ಇಲ್ಲಿ ಹಬ್ಬ ನಡೆಯಲಿದ್ದು, ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಗಳಿಗೆ ಇಲ್ಲಿನ ಹಬ್ಬವನ್ನು ನಿಶ್ಚಯ ಮಾಡುತ್ತದೆ. ತೀರ್ಥೋದ್ಭವಕ್ಕೆ ಒಂದು ದಿನ ಮುಂಚೆ ಹಾಗೂ ತೀರ್ಥೋದ್ಭವದ ಮರುದಿನ ಇಲ್ಲಿ ಹಬ್ಬ ನಡೆಯಲಿದ್ದು ಈ ಬಾರಿ ತೀರ್ಥೋದ್ಭವ ಅ-17ರ ಮಧ್ಯರಾತ್ರಿಯ ನಂತರ ಹಾಗೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಅ- 18ನೇ ತಾರೀಖಿನ ಮುಂಜಾನೆ 01-27ಕ್ಕೆ ಆಗುವುದರಿಂದ ಕುಂದ ಬೋಡ್ ನಮ್ಮೆ ಅ-17 ಹಾಗೂ 18ರಂದು ನಡೆಯಲಿದೆ ಎಂದು ಇಲ್ಲಿನ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.
ಹಬ್ಬಕ್ಕೆ ವಾರದ ಮುಂಚೆ ಅಂದರೆ ಅಕ್ಟೋಬರ್-11ರಂದು ಕುಂದ ಗ್ರಾಮದಲ್ಲಿರುವ ನಾಡ್ ದೇವಸ್ಥಾನ (ಈಶ್ವರ ದೇವಸ್ಥಾನ) ಹತ್ತಿರ ಇರುವ ಅಂಬಲದಲ್ಲಿ ಬೋಡ್ ನಮ್ಮೆ ದೋಳ್ ಇಡುವ ಮೂಲಕ ಹಬ್ಬಕ್ಕೆ ಚಾರನೆ ನೀಡಿದ್ದು, ಪ್ರತಿನಿತ್ಯ ಸಂಜೆ ಹಬ್ಬದತನಕ ಸಾಂಪ್ರದಾಯಿಕ ದೋಳ್ ಬಾರಿಸುವ ಮೂಲಕ ಹಬ್ಬದ ವಿವಿಧ ಸಾಂಪ್ರದಾಯಕ್ಕೆ ಚಾಲನೆ ದೊರೆಯುತ್ತದೆ. ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು. ಅ- 17ರಂದು ರಾತ್ರಿ ಇಲ್ಲಿನ ಅಂಬಲ ಹಾಗೂ ಈಶ್ವರ ದೇವಸ್ಥಾನದಲ್ಲಿ ಕಳಿ ಪೊರಡುವೋ ಹಾಗೂ 18ರಂದು ಬೆಳಿಗ್ಗೆ 9-00ಗಂಟೆಗೆ ಇಲ್ಲಿನ ನಾಡ್ ದೇವಸ್ಥಾನದಲ್ಲಿ ಕಾವೇರಿ ಪವಿತ್ರ ತೀರ್ಥವನ್ನು ಸಾರ್ವಜನಿಕವಾಗಿ ನೀಡಲಾಗುತ್ತದೆ. ನಂತರ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ಬಲ್ಯಮನೆಯಿಂದ ಕೃತಕವಾಗಿ ಶೃಂಗರಿಸಲಾದ ಕುದುರೆ ಹಾಗೂ ಮೊಗಗಳು ಹೊರಟು ಮಧ್ಯಾಹ್ನ 01-00ಗಂಟೆಗೆ ಅಂಬಲದಲ್ಲಿ ಸೇರಿ ನಂತರ ಕಡಿದಾದ ದಾರಿಯಲ್ಲಿ ಬೆಟ್ಟವನ್ನು ಏರಿ ಮಧ್ಯಾಹ್ನ ಸುಮಾರು 01-30ಕ್ಕೆ ಬೆಟ್ಟವನ್ನು ತಲುಪಿ ಸಂಜೆ 04-30ಗಂಟೆಯವರೆಗೆ ಕುಂದಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ.
ವರದಿ: ಚಮ್ಮಟಿರ ಪ್ರವೀಣ್ ಉತ್ತಪ್ಪ