ತಲಕಾವೇರಿಯೆಂಬ ಆಧ್ಯಾತ್ಮಿಕ ತೀರ್ಥಕ್ಷೇತ್ರ

Reading Time: 7 minutes

ಭಾರತೀಯ ಸಂಸ್ಕೃತಿಯಲ್ಲಿ ಪುರಾಣಪ್ರಸಿದ್ಧ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ದಕ್ಷಿಣ ಭಾರತದ ಜೀವ ನದಿಯಾಗಿರುವ ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿನ ತಲಕಾವೇರಿಯಲ್ಲಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕಾವೇರಿ ನದಿಯ ಉಗಮಸ್ಥಾನ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯನ್ನು ಪಡೆದ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ಮೇಲಿರುವ ತಲಕಾವೇರಿ ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ 48 ಕಿ. ಮಿ. ದೂರದಲ್ಲಿದೆ. ತ್ರಿವೇಣಿ ಸಂಗಮವಿರುವ ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ತಲುಪಬಹುದು.

ಸೌರಮಂಡಲದ ರಾಜನಾದ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುವ ದಿನವೇ ತುಲಾ ಸಂಕ್ರಮಣ. ಕಾವೇರಿಯ ಉಗಮಸ್ಥಳವಾದ ತಲಕಾವೇರಿಯಲ್ಲಿ ಅಕ್ಟೋಬರ್‌ ತಿಂಗಳ 17ರಂದು ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಕಾಲದಲ್ಲಿ ಕಾವೇರಿಯು ತೀರ್ಥರೂಪದಲ್ಲಿ ಉದ್ಭವವಾಗಲಿದ್ದಾಳೆ. ಈ ಸಮಯದಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಮಾಡುತ್ತಾರೆ.

ವರ್ಷಕ್ಕೊಂದು ಬಾರಿ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣ ಎಂದು ಕರೆಯುತ್ತಾರೆ. ಈ ದಿನವೇ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಹಾಗಾಗಿ ಈ ದಿನವನ್ನು ಕಾವೇರಿ ಸಂಕ್ರಮಣ, ಕಾವೇರಿ ಸಂಕ್ರಾಂತಿಯೆಂದೂ ಕರೆಯುತ್ತಾರೆ. ಈ ಸಮಯದಲ್ಲಿ ವಿಶೇಷವಾಗಿ ಕಾವೇರಿಯು ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ಬ್ರಹ್ಮಕುಂಡಿಕೆಯಿಂದ ಉಕ್ಕಿಬರುತ್ತಾಳೆ ಎಂಬ ನಂಬಿಕೆ.

ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಪಿಂಡ ಪ್ರದಾನ ಕಾರ್ಯಗಳು ನಡೆಯುತ್ತದೆ. ಪಿಂಡ ಪ್ರದಾನ ಕಾರ್ಯವನ್ನು ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ಸಂಗಮ ಸ್ಥಳದಲ್ಲಿ ಮಾಡಲಾಗುತ್ತದೆ. ನಂತರ ಸಂಗಮಸ್ಥಾನದಲ್ಲಿ ಮಿಂದು, ತಲಕಾವೇರಿಯ ಉಗಮಸ್ಥಾನಕ್ಕೆ ತೆರಳಿ, ತೀರ್ಥೋದ್ಭವ ಆದ ನಂತರ ಸ್ನಾನ ಕೊಳದಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಗತಿಸಿದಂತಹ ಹಿರಿಯರಿಗೆ ಸದ್ಗತಿಯು ದೊರೆಯುವುದು ಹಾಗೂ ಪಾಪಕರ್ಮಗಳು ಪರಿಹಾರವಾಗುವುದು ಎಂಬ ನಂಬಿಕೆಯೂ ಇದೆ.

ತೀರ್ಥೋದ್ಭವದ ಸಮಯದಲ್ಲಿ ತಲಕಾವೇರಿಯಲ್ಲಿ ಸ್ನಾನ ಮಾಡಿ, ತೀರ್ಥವನ್ನು ಸಂಗ್ರಹಿಸಿಟ್ಟರೆ ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ. ಕಾವೇರಿ ತುಲಾ ಸಂಕ್ರಮಣವು ಒಂದು ತಿಂಗಳ ಕಾಲ ನಡೆಯಲಿದ್ದು ಈ ಸಮಯದಲ್ಲಿ ಇಲ್ಲಿ ಬಂದು ಪವಿತ್ರ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ. ಪುಣ್ಯಕಾಲದಲ್ಲಿ ಉದ್ಭವವಾದ ತೀರ್ಥವನ್ನು ಕೊಡಗಿನವರು ಪುಣ್ಯ ತೀರ್ಥವಾಗಿ ಸಂಗ್ರಹಿಸುತ್ತಾರೆ. ಹುಟ್ಟುವ ಮಗುವಿಗೂ ಈ ತೀರ್ಥವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಇದೇ ತೀರ್ಥವನ್ನು ಬಳಸುತ್ತಾರೆ. ಕೊನೆಗೆ ಪ್ರಾಣತ್ಯಜಿಸುವ ಸಂದರ್ಭದಲ್ಲೂ ಬಾಯಿಗೆ ಇದೇ ತೀರ್ಥವನ್ನು ನೀಡಿ ಸ್ವರ್ಗಪ್ರಾಪ್ತಿಯಾಗಲೆಂದು ಹಾರೈಸುತ್ತಾರೆ. ಕಾವೇರಿ ತೀರ್ಥವು ಎಂದೂ ಕೆಡದ ಪುಣ್ಯ ತೀರ್ಥವಾಗಿ ಕೊಡಗಿನವರ ಮನೆಯಲ್ಲಿರುತ್ತದೆ.

ತುಲಾ ಸಂಕ್ರಮಣದಂದು ಕೊಡಗಿನ ಮನೆ ಮನೆಗಳಲ್ಲಿ ನಡೆಯುವ ವಿಶೇಷವಾದ ಪೂಜೆಯೆಂದರೆ ಕಾವೇರಿ ತಾಯಿಯ ಕಣಿ ಪೂಜೆ. ಮನೆಯ ಹಿರಿಯರು ಸೂರ್ಯೋದಕ್ಕೂ ಮುನ್ನ ವಿಶೇಷವಾಗಿ ಹಬ್ಬಕೆಂದು ತಯಾರಿಸಿದ ದೋಸೆ ಮತ್ತು ಕುಂಬಳಕಾಯಿ ಸಾರನ್ನು ಕುಡಿಬಾಳೆಯ ಎಲೆಯಲ್ಲಿಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಬಾಳೆಲೆಯ ತುದಿಗೆ ಎಣ್ಣೆ ಬತ್ತಿಯ ದೀಪ ಹಚ್ಚಿ, ತಮ್ಮ ಗದ್ದೆಯಲ್ಲಿ ವಿಶೇಷವಾಗಿ ನೆಟ್ಟ ಮೂರು ಕವಲು ಮಾಡಿದ ಒಂದು ಬಿದಿರಿನ ಮೇಲೆ ಪೂರ್ವಾಭಿಮುಕವಾಗಿ ಇಟ್ಟು ದೇವರಿಗೆ ನಮಸ್ಕರಿಸಿ ಬರುತ್ತಾರೆ.

ನಂತರ ಮನೆಯಲ್ಲಿ ಕಣಿ ಪೂಜೆ, ತರಕಾರಿಯನ್ನಿಟ್ಟು ಪೂಜೆಯನ್ನು ನಡೆಸಲಾಗುತ್ತದೆ. ಕಣಿ ಪೂಜೆಯ ನಂತರ ಮನೆಯ ಬಾವಿಯ ನೀರಿಗೆ ವೀಳ್ಯದೆಲೆ ಅರ್ಪಿಸಿ ತೆಂಗಿನಕಾಯಿ ಒಡೆದು, ಗಂಗಾ ಪೂಜೆ ಮಾಡಿ ಕಾವೇರಿ ಪುಣ್ಯ ತೀರ್ಥವನ್ನು ಬಾವಿಯಿಂದ ಎಳೆದು ತರುತ್ತಾರೆ. ತೀರ್ಥೋದ್ಭವ ಸಮಯದಲ್ಲಿ ಕೊಡಗಿನ ಎಲ್ಲಾ ಬಾವಿಗಳಲ್ಲಿ ನೀರು ಗುಳ್ಳೆಯೊಂದಿಗೆ ಉಕ್ಕುತ್ತದೆ ಎನ್ನಲಾಗುತ್ತದೆ.

ತಲಕಾವೇರಿ ತೀರ್ಥೋದ್ಭವ ಜಾತ್ರೆಗೆ ಕೊಡಗು ಅಲ್ಲದೆ ಹೆಚ್ಚಿಗೆ ಮೈಸೂರು, ಮಂಡ್ಯದ ಹಾಗೂ  ಕಾವೇರಿಕೊಳ್ಳದ ನಾಡಿನ ಜನತೆ ಭಕ್ತಿಯಿಂದ ಬರುವಂತೆ, ಕೇರಳ, ತಮಿಳುನಾಡಿನಿಂದಲೂ ಬಂದು ಪೂಜೆ ಮಾಡುತ್ತಾರೆ. ತಲಕಾವೇರಿಗೆ ತೆರಳಲಾಗದ ಕೊಡಗಿನ ಭಕ್ತರು, ಕಾವೇರಿ ನದಿ ತೀರದಲ್ಲಿರುವ ನಾಪೋಕ್ಲು ಸಮೀಪದ ಪಾಲೂರು ಹರಿಶ್ಚಂದ್ರ, ಮೂರ್ನಾಡು ಸಮೀಪದ ಬಲಮುರಿಯ ಭಗಂಡೇಶ್ವರ, ಸಿದ್ದಾಪುರ ಸಮೀಪದ ಗುಹ್ಯದ ಅಗಸ್ತೇಶ್ವರ ಮುಂತಾದ ದೇವಸ್ಥಾನಗಳಿಗೂ ಜಾತ್ರೆ ಸಮಯದಲ್ಲಿ ತೆರಳಿ ಪೂಜೆ ಮಾಡಿಸುತ್ತಾರೆ.

ಅತೀ ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದ ಜೀವನಾಡಿ ಕಾವೇರಿಯನ್ನು ಪವಿತ್ರ ನದಿಯಾಗಿಯೂ, ಜಲರೂಪಿಯಾದ ಜಗದೀಶ್ವರಿ ಕಾವೇರಿ ಮಹಾತಾಯಿಯನ್ನು ಜನಕೋಟಿ ಆರಾಧಿಸುತ್ತಾ ಬಂದಿದ್ದಾರೆ. ಉತ್ಸವ, ತೀರ್ಥಯಾತ್ರೆಗಳನ್ನು ಮಾಡಿಕೊಂಡು, ಲೌಕಿಕ, ಆಧ್ಯಾತ್ಮಿಕ, ಸುಖ ಶಾಂತಿಗಳನ್ನು ಹೊಂದಿದ್ದಾರೆ. ದೇಶದ ಭಾವೈಕ್ಯತೆಯಲ್ಲಿ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಮಹತ್ವದ ಸ್ಥಾನವನ್ನು ಪಡೆದಿದೆ.

ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಮೆಟ್ಟಲುಗಳನ್ನು ಏರಿ ಮೇಲೆ ಹೋದರೆ ಗಣಪತಿ, ಅಗಸ್ತೇಶ್ವರ ದೇವಸ್ಥಾನ. ಅದರ ಪಕ್ಕದಲ್ಲಿಯೇ “ಬ್ರಹ್ಮಗಿರಿ” ಬೆಟ್ಟ ಏರಿ ಹೋಗಲು ಮೆಟ್ಟಲುಗಳಿವೆ. 300 ಅಡಿ ಎತ್ತರದ ಬೆಟ್ಟ ಹತ್ತಿ ಮೇಲೆ ತಲುಪಿದರೆ, ತುದಿಯಲ್ಲಿ ಸುತ್ತಲೂ ಗಿರಿ ಕಾನನಗಳು ಬೆಟ್ಟಗಳ ಸಾಲು ಸಾಲು ಬೆಳ್ಳಿ ಮೋಡಗಳನ್ನು ಮುತ್ತಿಕ್ಕುವಂತೆ ಕಾಣುತ್ತದೆ. ವಾತಾವರಣ ಶುಭ್ರವಾಗಿದ್ದರೆ ನೂರಾರು ಕಿ. ಮಿ. ದೂರದಲ್ಲಿರುವ ಕೇರಳದ ಅರಬ್ಬಿ ಸಮುದ್ರವನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ಟದ ಮೇಲೆ ಪುರಾಣದಲ್ಲಿ ಉಲ್ಲೇಖವಿದ್ದಂತೆ, ಸಪ್ತ ಮಹರ್ಷಿಗಳು ಬ್ರಹ್ಮಗಿರಿ ಬೆಟ್ಟದ ತುದಿಯಲ್ಲಿ ಏಳು ಯಜ್ಞ ಕುಂಡಗಳನ್ನು ನಿರ್ಮಿಸಿ ಪಕ್ಕದಲ್ಲಿ ಸಣ್ಣ ಸಣ್ಣ ನೀರಿನ ಹೊಂಡಗಳನ್ನೂ ನಿರ್ಮಿಸಿಕೊಂಡು ಯಜ್ಞಗಳನ್ನು ಮಾಡುತಿದ್ದರು. ವರ್ಷ ಪೂರ್ತಿ ಅದರಲ್ಲಿ ನೀರು ಇರುತ್ತಿತ್ತು. ಆದರೆ ಆ ಸಣ್ಣ ನೀರಿನ ಹೊಂಡಗಳು ಇಂದು ನಾಮಾವಶೇಷವಾಗಿದೆ.  ಬ್ರಹ್ಮಗಿರಿ ಬೆಟ್ಟದ ಮೇಲಿನಿಂದ ಕೆಳಗೆ ಕಾಣುವ ಕಾವೇರಿಯ ಉಗಮ ಸ್ಥಾನ ಕಾವೇರಿ ನದಿಯಾಗಿ ಹರಿದು ಹೋಗುವಾಗ ತನ್ನ ದಿಕ್ಕನ್ನು ಕೇವಲ ಎರಡು ಅಡಿಯಷ್ಟು ಬದಲಿಸಿದ್ದರೆ ಕಾವೇರಿ ನದಿ ಪೂರ್ತಿಯಾಗಿ ಕೇರಳ ಭಾಗಕ್ಕೆ ಹೋಗುತಿತ್ತು. ಒಂದು ಸಮಯ ಆ ರೀತಿಯಾಗಿದಿದ್ದರೆ ಮೈಸೂರು, ಬೆಂಗಳೂರು, ತಮಿಳುನಾಡನ್ನು ಊಹಿಸಲು ಅಸಾಧ್ಯವಾಗುತಿತ್ತು.

ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವ. ಇದು ಕಾವೇರಿ ತುಲಾ ಸಂಕ್ರಮಣ ಉತ್ಸವ ಎಂದೇ ಜನಪ್ರಿಯ. ಕೊಡಗಿನವರಷ್ಟೇ ಅಲ್ಲದೆ ನಾಡಿನ ಹಾಗೂ ದೇಶ-ವಿದೇಶಗಳ ಜನರೆಲ್ಲಾ ಇಲ್ಲಿ ಸಂಗಮಿಸಿ ಕಾವೇರಿ ತೀರ್ಥದಲ್ಲಿ ಮುಳುಗೆದ್ದು ಪುನೀತರಾಗುವ ತುಲಾ ಸಂಕ್ರಮಣ ಉತ್ಸವವನ್ನು ನೋಡುವುದೇ ಆನಂದ. ಹಸಿರು ಕಾನನ, ಬೆಟ್ಟಗುಡ್ಡಗಳಿಂದ ಆವೃತಗೊಂಡು ಸದಾ ಮಂಜಿನ ಮುಸುಕಿನೊಂದಿಗೆ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುವ ತಲಕಾವೇರಿಯ ಪ್ರಕೃತಿಯ ತಾಣದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನು ಪುನೀತಗೊಳಿಸುತ್ತಾಳೆ.

✍️…. ಕಾನತ್ತಿಲ್‌ ರಾಣಿಅರುಣ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments