ಬಿದ್ದಾಟಂಡ ಎ.ರಮೇಶ್ ರವರಿಗೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ
ಕೊಂಗಂಡ ಎ. ತಿಮ್ಮಯ್ಯ, ಚಿರಿಯಪಂಡ ಕೆ.ಉತ್ತಪ್ಪ, ಎಚ್.ಎಸ್.ಸುಬ್ಬಪ್ಪ ರವರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’
ಮಣವಟ್ಟೀರ ಕಾವೇರಿಯಮ್ಮ ಪೂವಣ್ಣ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’
ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಸಲಾಗುವುದು ಎಂದು ಸಹಕಾರ ಯೂನಿಯನ್‍ನ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಹಕಾರಿ ಸಪ್ತಾಹದ ಸಂದರ್ಭ ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದ ಬಿದ್ದಾಟಂಡ ಎ.ರಮೇಶ್‍ರಿಗೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ, ಮಡಿಕೇರಿ ತಾಲ್ಲೂಕಿನ ಕೊಂಗಂಡ ಎ. ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕಿನ ಚಿರಿಯಪಂಡ ಕೆ.ಉತ್ತಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಎಚ್.ಎಸ್.ಸುಬ್ಬಪ್ಪರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’ ಮತ್ತು ಮಡಿಕೇರಿಯ ಮಣವಟ್ಟೀರ ಕಾವೇರಿಯಮ್ಮ ಪೂವಣ್ಣ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು.
ಸಹಕಾರಿ ಸಪ್ತಾಹದ ಉದ್ಘಾಟನಾ ಸಮಾರಂಭ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ನ.14 ರಂದು ಹೊದ್ದೂರು ಪ್ಯಾಕ್ಸ್ ಸಭಾಂಗಣದಲ್ಲಿ, ಎರಡನೇ ದಿನದ ಕಾರ್ಯಕ್ರಮ ನ.15 ರಂದು ನಂಜರಾಯಪಟ್ಟಣದ ಕೃಷಿ ಸಭಾಂಗಣದಲ್ಲಿ ನಡೆಯಲಿದೆ.
ನ.16 ರಂದು ಮಡಿಕೇರಿಯ ಬಾಲಭವನದಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಸಹಕಾರದೊಂದಿಗೆ ತೃತೀಯ ದಿನದ ಕಾರ್ಯಕ್ರಮ ನಡೆಯಲಿದೆ. ನ.17 ರಂದು ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ಕರಿಕೆ ಸಂಘದ ಸಭಾಂಗಣದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನ.18 ರಂದು ನಗರದ ಬಾಲಭವನದಲ್ಲಿ ನಡೆಯುವ ಸಹಕಾರಿ ಸಪ್ತಾಹದ ಐದನೇ ದಿನದ ಕಾರ್ಯಕ್ರಮದಲ್ಲಿ ಸಹಕಾರಿ ಪ್ರಶಸ್ತಿಗಳನ್ನು ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಬಿ. ದೇವಯ್ಯ ಅವರು ಪ್ರದಾನ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಹಾಸನ ಮತ್ತು ಕೊಡಗು ಜಿಲ್ಲಾ ನಿರ್ದೇಶಕರು ಹಾಗೂ ಅರಕಲಗೂಡು ಶಾಸಕ ಎ.ಮಂಜು ಉದ್ಘಾಟಿಸಲಿದ್ದಾರೆ ಎಂದರು.
ನ.19 ರಂದು ಸೋಮವಾರಪೇಟೆಯಲ್ಲಿ ತಾಲ್ಲೂಕು ಸಹಕಾರ ಒಕ್ಕೂಟದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭ ನ.20 ರಂದು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಕುಶಾಲನಗರದಲ್ಲಿ ನಡೆಯಲಿದೆ ಎಂದು ಮನು ಮುತ್ತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಪಟ್ಟಡ ಮನು ರಾಮಚಂದ್ರ, ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ನಂದಿನೆರವಂಡ ಎ.ರವಿ ಬಸಪ್ಪ, ನಿರ್ದೇಶಕರಾದ ಕೋಡಿರ ಪ್ರಸನ್ನ ಹಾಗೂ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.