ಕ್ರೀಡೆಯಿಂದ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ – ಪಿಎಸ್ಐ ಮಂಜುನಾಥ್ ಸಲಹೆ
ನಾಪೋಕ್ಲು :ಕ್ರೀಡೆಗಳ ಆಯೋಜನೆಯೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕೆಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಚೆರಿಯ ಪರಂಬುವಿನ ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ 8ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣಮಟ್ಟದಲ್ಲಿ ದೇಶಿಯ ಕ್ರೀಡೆಗಳನ್ನು ಆಯೋಜಿಸಿ ಪ್ರೋತ್ಸಾಹಿಸುವುದರಿಂದ ಉತ್ತಮ ಕ್ರೀಡಾಪಟುಗಳಿಗೆ ಮುನ್ನುಡಿಯಾಗಿದೆ. ಆಯೋಜಿಸುವ ಎಲ್ಲಾ ಕ್ರೀಡೆಗಳಲ್ಲೂ ಅಶಾಂತಿಗೆ ಆಸ್ಪದ ಕೊಡದೆ ಸಹೋದರತೆಯನ್ನು ಕಾಪಾಡಿಕೊಳ್ಳಬೇಕೆಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಜಿಲ್ಲಾ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್,ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಹಾರಿಸ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಮ್ ಹಾರಿಸ್ ಮಾತನಾಡಿ ಕ್ರೀಡೆಯಲ್ಲಿ ಶಿಸ್ತು ಸಂಯಮ ಬಹಳ ಮುಖ್ಯ. ಕ್ರೀಡೆಯಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡು ಉತ್ತಮ ಆರೋಗ್ಯ ಹೊಂದಲು ಸಹಕಾರಿ. ಇಂತಹ ಕ್ರೀಡಾಕೂಟದಲ್ಲಿ ಅಲವು ಲೋಪದೋಷಗಳು ಉಂಟಾದರೆ ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ ಸಹನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ಮನರಂಜನೆಯನ್ನು ನೀಡುವಂತ್ತಾಗಬೇಕು.ಇಂತಹ ಕ್ರೀಡೆಯಿಂದ ಉತ್ತಮ ಕ್ರೀಡಪಟ್ಟುಗಳು ಜಿಲ್ಲಾ,ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಕ್ರೀಡಾಟಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರನ್ನು ಡೆಕ್ಕನ್ ಯೂತ್ ಕ್ಲಬ್ ನ ಪದಾಧಿಕಾರಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಜೆಡಿಎಸ್ ಮುಖಂಡ ಮನ್ಸೂರ್ ಆಲಿ, ಗ್ರಾ. ಪಂ. ಮಾಜಿ ಸದಸ್ಯ ಅಬ್ದುಲ್ ಅಝೀಝ್, ಪಿ.ಎಂ ರಶೀದ್,ಕ್ಲಬ್ಬಿನ ಅಧ್ಯಕ್ಷ ಮನ್ಸೂರ್, ಉಪಾಧ್ಯಕ್ಷ ಉಬೈದ್, ಆಯೋಜಕರಾದ ಫೈಝಲ್,ಹಿರಿಯ ಸದಸ್ಯರಾದ ಅಹಮದ್, ಅರಫಾತ್, ಇಬ್ರಾಹಿಂ, ಸತ್ತಾರ್,ಕನ್ನಡಿಯಂಡ ಹಸೈನಾರ್,ಆಸ್ಕರ್ ಸೈಟ್, ಗಫೂರ್, ಹಾರಿಸ್, ಕರೀಂ ಕಡಂಗ,ಪೊಲೀಸ್ ಸಿಬ್ಬಂದಿ ಷರೀಫ್ ಸೇರಿದಂತೆ ಡೆಕ್ಕನ್ ಯೂತ್ ಕ್ಲಬ್ಬಿನ ಸದಸ್ಯರು ಮತ್ತಿತರರು ಹಾಜರಿದ್ದರು.