ಭೀರ್ಯ ಕೊಡವ ಸಿನೆಮಾಕ್ಕೆ “ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್” ಪ್ರಶಸ್ತಿಯ ಗರಿ
2022ರಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ತೀತೀರ ಶರ್ಮಿಲಿ ಅಪ್ಪಚ್ಚು ನಿರ್ಮಾಣದ “ಭೀರ್ಯ” ಕೊಡವ ಸಿನಿಮಾಕ್ಕೆ ಪ್ರತಿಷ್ಠಿತ “ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್” ಪ್ರಶಸ್ತಿ ದೊರೆತಿದೆ.
ಬುಧವಾರ ಬೆಂಗಳೂರಿನ ರಾಜಾಜಿನಗರದ ಒರಿಯನ್ ಮಹಲ್’ನ ಪಿ.ವಿ.ಆರ್ ಚಿತ್ರಮಂದಿರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ “ಭೀರ್ಯ” ಕೊಡವ ಸಿನಿಮಾದ ನಿರ್ಮಾಪಕರಾದ ತೀತೀರ ಶರ್ಮಿಲಿ ಅಪ್ಪಚ್ಚು ಅವರು ಕಾಂತಾರ ಸಿನಿಮಾ ಖ್ಯಾತಿಯ ನಿರ್ದೇಶಕ ರಿಷಭ್ ಶೆಟ್ಟಿ ಅವರಿಂದ ಪ್ರಶಸ್ತಿಯನ್ನು ಪಡೆದುಕೊಂಡರು. ತೆಲುಗು ಚಿತ್ರರಂಗದಲ್ಲಿ ಪ್ರತಿಷ್ಠಿತ “ನಂದಿ ಫಿಲ್ಮ್ ಫೇರ್ ಅವಾರ್ಡ್” ಜನಪ್ರಿಯವಾಗಿದ್ದು ಇದನ್ನು ಪಡೆದುಕೊಳ್ಳುವುದೇ ಒಂದು ಹೆಗ್ಗಳಿಕೆ ಆಗಿದೆ.
ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಸೇರಿದಂತೆ ಇತರರು ಮುತುವರ್ಜಿಯಿಂದ “ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್” ಎಂದು ನೂತನವಾಗಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕಳೆದ ಕೆಲ ತಿಂಗಳ ಹಿಂದೆ ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಕನ್ನಡ ಸಿನಿಮಾಗಳೊಂದಿಗೆ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿ, ಬ್ಯಾರಿ ಹಾಗೂ ಭಂಜಾರ ಭಾಷೆಯ ಚಲನಚಿತ್ರಗಳಿಗೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಒರಿಯನ್ ಮಹಲ್’ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಉದ್ಘಾಟನೆ ಮಾಡಿದ್ದರು. ಕಾಂತರ ಸಿನಿಮಾ ಖ್ಯಾತಿಯ ನಟ ನಿರ್ದೇಶಕ ರಿಷಭ್ ಶೆಟ್ಟಿ, ಶ್ರೀನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ, ಹರ್ಷಿತಾ, ನಂದಿತಾ ಹಾಗೂ ಆಶೋಕ್, ಸುಂದರ್ ರಾಜ್, ವಸಿಷ್ಠ ಸಿಂಹ, ಶರಣ್, ಶಿವಕುಮಾರ್, ವಿನೋದ್ ರಾಜ್, ಭವ್ಯ, ಅನುಪ್ರಭಾಕರ್, ಪ್ರೇಮಾ, ವಿಜಯಲಕ್ಷ್ಮಿ, ಹರಿಪ್ರಿಯಾ, ವನಿತಾ ವಾಸು, ಹಿನ್ನೆಲೆ ಗಾಯಕರಾದ ಬಿ.ಕೆ ಸುಮಿತ್ರಾ, ಶಮಿತಾ ಮಲೆನಾಡ್, ಗುರುಕಿರಣ್, ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಎಸ್.ಕೆ ಭಾರ್ಗವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಾಸ್ಟರ್ ಆನಂದ್ ಹಾಗೂ ಸಮೀರಾ ಜೋಡಿ ಕಾರ್ಯಕ್ರಮ ನಿರೂಪಿಸಿದರು.
ತೀತೀರ ಶರ್ಮಿಲಿ ಅಪ್ಪಚ್ಚು ನಿರ್ಮಾಣದ ಹಾಗೂ ಆರ್ಯನ್ ನಿರ್ದೇಶನದ “ಭೀರ್ಯ” ಕೊಡವ ಸಿನಿಮಾ 2022ರಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿತ್ತು. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಯ್ಯರಣಿಯಂಡ ಶಿಲಾನ್ ಚೋಂದಮ್ಮ, ಕಾಳಿಮಾಡ ವಂಶಿಕಾ, ಉಡುಪಿಯ ರಾಜ್ ಚರಣ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮಲ್ಲಾಮಾಡ ಶಾಮಲಾ ಸುನಿಲ್, ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಅಜ್ಜಮಾಡ ಅಭಿಶೇಕ್ ಬಿದ್ದಪ್ಪ, ಮತ್ರಂಡ ಶ್ಯಾಮ್ ಪೂಣಚ್ಚ, ಗುಡಿಯಂಗಡ ತಿಮ್ಮಯ್ಯ, ಪೆಮ್ಮಂಡ ರೋಶನ್ ಪೆಮ್ಮಯ್ಯ, ಅಯ್ಯೇಟೀರ ಮಿಥುನ್ ಮಾದಪ್ಪ, ಅಪ್ಪಾಡಂಡ ಧನು ದೇವಯ್ಯ, ಕಾಡ್ಯಮಾಡ ಗೌತಮ್ ಬೋಜಣ್ಣ, ಮಚ್ಚಮಾಡ ಕಾರ್ಯಪ್ಪ, ಐಮಣಿಯಂಡ ನವೀನ್, ರಾಜೇಶ್, ಪ್ರಶಾಂತ್ ಗೋಣಿಕೊಪ್ಪ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ನಟಿಸಿದ್ದರು. ಫಯಾಜ್ ಖಾನ್ ಸಾಹಸ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರೆ. ಖ್ಯಾತ ಸಂಗೀತ ನಿರ್ದೇಶಕ ಶ್ರೀ ಅವರ ಸಂಗೀತಕ್ಕೆ ಸಾಹಿತಿಗಳಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಗುಡಿಯಂಗಡ ತಿಮ್ಮಯ್ಯ ಸಾಹಿತ್ಯ ಬರೆದು ಖ್ಯಾತ ಹಿನ್ನೆಲೆ ಗಾಯಕರಾದ ಮಚ್ಚಂಡ ಶರಣ್ ಅಯ್ಯಪ್ಪ ಹಾಗೂ ಚಕ್ಕೇರ ಪಂಚಮ್ ಬೋಪಣ್ಣ ಹಾಡಿದ್ದರು. ಭೀರ್ಯ ಕೊಡವ ಚಲನಚಿತ್ರ ಸುಮಾರು ನೂರು ದಿನಗಳತ್ತ ಹೆಜ್ಜೆ ಹಾಕಿದನ್ನು ಇಲ್ಲಿ ಸ್ಮರಿಸಬಹುದು.