ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಸಮಾನತೆ ಮುಖ್ಯ-ಶಿಕ್ಷಕಿ ರೇಖಾ
ನಾಪೋಕ್ಲು: ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ ಮಾತ್ರ ಜೀವನದಲ್ಲಿ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಕುಂಜಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಖಾ ಅವರು ಹೇಳಿದರು.
ನಾಪೋಕ್ಲು ಬಳಿಯ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 8ನೇ ವರ್ಷದ ನಾಲ್ಕು ನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಬ್ಬ ಯೋಧ ದೇಶಕ್ಕಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡುತ್ತಾನೋ ಅದೇ ರೀತಿ ಒಬ್ಬ ಕ್ರೀಡಾಪಟು ತಾನು ಭಾಗವಹಿಸಿದ ಕ್ರೀಡೆಯಲ್ಲಿ ಸೋಲಿಗೆ ಮನಸೋಲದೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯನ್ನು ಪೂರ್ಣಗೊಳಿಸುವವನು ಮುಂದೆ ಉತ್ತಮ ಕ್ರೀಡಾಪಟುವಾಗುತ್ತಾನೆ ಎಂದರು.
ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಮಾತನಾಡಿ ಎಲ್ಲಾ ಜನಾಂಗದ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಇಂತಹ ಕ್ರೀಡಾಕೂಟದಿಂದ ಸಮಾಜದಲ್ಲಿ ಶಾಂತಿ,ಸೌಹಾರ್ದತೆ,ಸಹಬಾಳ್ವೆ ಕಾಣಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಇಂತಹ ಕ್ರೀಡೆ ಸಹಕಾರಿಯಾಗಲಿದೆ.ನಮ್ಮ ನಾಲಕ್ಕುನಾಡು ವಿಭಾಗದಿಂದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲೆ, ರಾಜ್ಯಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಕುಂಜಿಲ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಸ್ತಫ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ದಾನಿಗಳಾದ ರಶೀದ್ ವಯಕೋಲ್,ಕಕ್ಕಬ್ಬೆಯ ಬೆಳೆಗಾರರಾದ ನಂಬುಡುಮಂಡ ದಿವಿನ್,ಚೆರಿಯಪರಂಬು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಲೀಲಾವತಿ, ಪಂದ್ಯಾಟದ ಆಯೋಜಕರಾದ ಮೊಯ್ದು ಕುಂಜಿಲ,ಷರೀಫ್ ಕುಂಜಿಲ, ಸ್ಥಾಪಕರಾದ ನೌಫಲ್ ನಾಪೋಕ್ಲು,ಅಬ್ದುಲ್ ಖಾದರ್ ನಾಪೋಕ್ಲು, ಕುಂಜಿಲ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ನಾಲ್ಕುನಾಡು ವಿಭಾಗದ ವಿವಿಧ ತಂಡದ ಸದಸ್ಯರು ಮತ್ತಿತರರು ಹಾಜರಿದ್ದರು.